Friday, February 26, 2021

ಆಮ್ ಆದ್ಮಿ ಪಾರ್ಟಿಯಿಂದ ದೇಶದಲ್ಲಿ ಹೊಸ ಬದಲಾವಣೆ, ಹೊಸ ರಾಜಕೀಯ ಸ್ವರೂಪ

೭ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮ


ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಆಮ್ ಆದ್ಮಿ ಪಾರ್ಟಿ ತಾಲೂಕು ಘಟಕದ ವತಿಯಿಂದ ೭ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಫೆ. ೨೬: ಆಮ್ ಆಮ್ ಆದ್ಮಿ ಪಾರ್ಟಿ ದೇಶದಲ್ಲಿ ಹೊಸ ಬದಲಾವಣೆ ತರಬೇಕು. ರಾಜಕೀಯ ಸ್ವರೂಪ ಬದಲಾಗಬೇಕೆಂಬ ಉದ್ದೇಶದಿಂದ ಜನ್ಮತಾಳಿದ ಪಕ್ಷವಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮ ತಿಳಿಸಿದರು.
   ಅವರು ನಗರದ ಮಿಲ್ಟ್ರಿಕ್ಯಾಂಪ್‌ನ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಆಮ್ ಆದ್ಮಿ ಪಾರ್ಟಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಪಕ್ಷದ ಹೋರಾಟ ಬಿಜೆಪಿ, ಕಾಂಗ್ರೆಸ್ ವಿರುದ್ದವಲ್ಲ ಬದಲಾಗಿ ಹಣ, ಜಾತಿ, ಧರ್ಮ ರಾಜಕಾರಣದ ವಿರುದ್ಧ ಹಾಗು ಶೀಲಕೆಟ್ಟ, ನೀತಿಕೆಟ್ಟ ರಾಜಕಾರಣ ವಿರುದ್ಧವಾಗಿದೆ. ಇವುಗಳನ್ನು ಸೋಲಿಸುವ ಮೂಲಕ ದೇಶದ ಜನರು ಆಮ್ ಆದ್ಮಿ ಪಾರ್ಟಿ ಬೆಂಬಲಿಸುತ್ತಿದ್ದಾರೆ ಎಂದರು.
   ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ದೆಹಲಿ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಪ್ರತಿಯೊಂದರಲ್ಲೂ ಪಾರದರ್ಶಕತೆ, ಆಡಳಿತ ವ್ಯವಸ್ಥೆ ಪ್ರತಿಯೊಬ್ಬರ ಮನೆ ಬಾಗಿಲಿಗೆ ಬಂದು ತಲುಪಿದೆ. ಸರ್ಕಾರಿ ಶಾಲಾ-ಕಾಲೇಜುಗಳು, ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳು ಸಾಕಷ್ಟು ಬದಲಾವಣೆಗಳಾಗಿವೆ. ಈ ಮಾದರಿ ವ್ಯವಸ್ಥೆಯನ್ನು ದೇಶಾದ್ಯಂತ ತರಬೇಕೆಂಬುದು ಪಕ್ಷದ ಆಶಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನವಣೆಗಳು ಸೇರಿದಂತೆ ಸಾರ್ವಜನಿಕ ಚುನಾವಣೆಗಳಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧೆ ನಡೆಸಲಿದೆ ಎಂದರು.
   ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಮಾತನಾಡಿ, ಇಂದು ದೇಶದಲ್ಲಿ ರಾಜಕೀಯ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಜನಸಾಮಾನ್ಯರ ವಿರುದ್ಧ ಹಲವಾರು ಕಾಯ್ದೆಗಳನ್ನು ರೂಪಿಸುವ ಮೂಲಕ ಶೋಷಿಸಲಾಗುತ್ತಿದೆ. ರೈತರು, ಕಾರ್ಮಿಕರ ವಿರುದ್ಧ ಮಾರಕವಾದ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ. ಎಲ್ಲಾ ಸರ್ಕಾರಿ ಉದ್ಯಮಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ದೇಶದ ಜನರಲ್ಲಿ ಸಮಾನತೆ ಪರಿಕಲ್ಪನೆ ಆಧಾರ ಮೇಲೆ ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವ ಆಲೋಚನೆ ಬಿತ್ತುವ ಬದಲು ಜಾತಿ, ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
    ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವಿನಾಶದ ಅಂಚಿಗೆ ಸಾಗಿದೆ. ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ಇದೀಗ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕಾಗಿದೆ ಎಂದರು.
   ಪಕ್ಷದ ರಾಜ್ಯ ಸಂಘಟನಾ ಸಂಯೋಜಕ ಗೋಪಾಲ್, ರಾಜ್ಯ ಜಂಟಿ ಕಾರ್ಯದರ್ಶಿ ಎಂ.ಪಿ ದರ್ಶನ್ ಜೈನ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
   ಎಂಪಿಎಂ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಎಸ್ ಚಂದ್ರಶೇಖರ್, ಉದ್ಯಮಿ ಶ್ರೀನಿವಾಸ್, ಪಕ್ಷದ ಮುಖಂಡರಾದ ಪರಮೇಶ್ವರಚಾರ್, ಮುಳ್ಕೆರೆ ಲೋಕೇಶ್, ಇಬ್ರಾಹಿಂ ಖಾನ್, ಜಾವಿದ್, ಪೀಟರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೋಸೆಫ್ ನಿರೂಪಿಸಿದರು. ಬಿ.ಕೆ ರಮೇಶ್ ಸ್ವಾಗತಿಸಿದರು. ಎನ್.ಪಿ ಜೋಸೆಫ್ ವಂದಿಸಿದರು. ವಿಶೇಷವಾಗಿ ಮಕ್ಕಳಿಂದ ಪಕ್ಷದ ೭ನೇ ವರ್ಷದ ಸಂಸ್ಥಾಪನಾ ದಿನಕ್ಕೆ ಚಾಲನೆ ನೀಡಲಾಯಿತು.

No comments:

Post a Comment