Monday, March 29, 2021

ಮಾ.೩೦ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಭದ್ರಾವತಿ, ಮಾ. ೨೯: ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಮಾ.೩೦ರಂದು ಮಧ್ಯಾಹ್ನ ೩.೩೦ಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ನಗರಸಭೆ ಪೌರಾಯುಕ್ತ ಮನೋಹರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಮೊಗ್ಗ ಉಷಾ ನರ್ಸಿಂಗ್ ಹೋಂ ತಜ್ಞೆ ರಕ್ಷಾ ಯು. ರಾವ್ ಉಪನ್ಯಾಸ ನೀಡಲಿದ್ದು, ವಸುಧಾ ಮುಕುಂದ್, ರಾಧ ಕೆ. ಭಟ್, ಪುಷ್ಪ ಕೃಷ್ಣಮೂರ್ತಿ, ಶೋಭಾ ಗಂಗರಾಜ್ ಮತ್ತು ಜಯಂತಿ ಶೇಟ್ ಉಪಸ್ಥಿತರಿರುವರು.

ಎರಡು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ : ಶೇ.೮೪.೨೯ರಷ್ಟು ಮತದಾನ

ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಯೊಂದರ ಸೋಮವಾರ ಮತದಾನದ ವೇಳೆ ಜನಸಂದಣಿ ಉಂಟಾಗದಂತೆ ಪೊಲೀಸರು ಎಚ್ಚರ ವಹಿಸುತ್ತಿರುವುದು.  

   ಭದ್ರಾವತಿ, ಮಾ. ೨೯: ತಾಲೂಕಿನ ಕೊಮಾರನಹಳ್ಳಿ ಮತ್ತು ವೀರಾಪುರ ಗ್ರಾಮ ಪಂಚಾಯಿತಿಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ.೮೪.೨೯ರಷ್ಟು ಮತದಾನ ನಡೆದಿದೆ.
    ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು ೬ ಮತಗಟ್ಟೆಗಳಲ್ಲಿ ಹಾಗು ವೀರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ೪ ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ಒಟ್ಟು ೭೧೧೬ ಮತದಾರರ ಪೈಕಿ ೫೯೯೮ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
   ಕೊಮಾರನಹಳ್ಳಿ ಮತಗಟ್ಟೆ ೯೨ರಲ್ಲಿ ಒಟ್ಟು ೯೬೧ ಮತದಾರರ ಪೈಕಿ ಒಟ್ಟು ೭೫೪ ಮತದಾರರು ಹಕ್ಕು ಚಲಾಯಿಸಿದ್ದು, ಅತಿ ಕಡಿಮೆ ಮತದಾನವಾದ ಮತಗಟ್ಟೆ ಇದಾಗಿದೆ. ಮತಗಟ್ಟೆ ೯೫ರಲ್ಲಿ ಒಟ್ಟು ೨೫೧ ಮತದಾರರ ಪೈಕಿ ೨೩೧ ಮತದಾರರು ಹಕ್ಕು ಚಲಾಯಿಸಿದ್ದು, ಅತಿ ಹೆಚ್ಚು ಮತದಾನವಾದ ಮತಗಟ್ಟೆ ಇದಾಗಿದೆ.
    ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ಒಟ್ಟು ೧೩ ಸ್ಥಾನಗಳಿಗೆ ೪೩ ಮಂದಿ ಹಾಗು ವೀರಾಪುರ ಗ್ರಾಮ ಪಂಚಾಯಿತಿ ಒಟ್ಟು ೧೧ ಸ್ಥಾನಗಳಿಗೆ ೩೦ ಮಂದಿ ಸ್ಪರ್ಧಿಸಿದ್ದಾರೆ. ಈ ಎರಡು ಗ್ರಾಮ ಪಂಚಾಯಿತಿಗಳ ಅವಧಿ ಮುಕ್ತಾಯಗೊಳ್ಳದ ಕಾರಣ ಈ ಹಿಂದೆ ಚುನಾವಣೆ ನಡೆದಿರಲಿಲ್ಲ.
   ಮತಗಟ್ಟೆ ಬಳಿ ಜನಸಂದಣಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಲಾಗಿತ್ತು. ಕೋವಿಡ್-೧೯ರ ಹಿನ್ನಲೆಯಲ್ಲಿ ಎಲ್ಲಾ ಮತದಾರರಿಗೆ ಥರ್ಮಲ್ ಸ್ಕೀನಿಂಗ್ ನಡೆಸಲಾಯಿತು. ಜೊತೆಗೆ ಕಡ್ಡಾಯವಾಗಿ ಸ್ಯಾನಿಟೈಜರ್ ಹಾಗು ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮತದಾರರಿಗೆ ಸೂಚಿಸಲಾಯಿತು.  

ಅದ್ದೂರಿಯಾಗಿ ಜರುಗಿದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು.

   ಭದ್ರಾವತಿ, ಮಾ. ೨೯: ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು.
   ಪ್ರತಿವರ್ಷದಂತೆ ಈ ಬಾರಿ ಸಹ ವೈಭವಯುತವಾಗಿ ಸ್ವಾಮಿಯ ರಥೋತ್ಸವ ಆರಂಭಗೊಂಡಿದ್ದು, ಭಕ್ತಾಧಿಗಳು ಸ್ವಾಮಿಗೆ ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು. ಭಜನಾ ತಂಡಗಳಿಂದ ಭಜನೆ ನಡೆಯಿತು.
   ಮಧ್ಯಾಹ್ನ ಸುಮಾರು ೧೨ ಗಂಟೆಗೆ ದೇವಸ್ಥಾನ ಆವರಣದಿಂದ ಆರಂಭಗೊಂಡ ರಥೋತ್ಸವ ಅಗಸೆ ಬಾಗಿಲಿನವರೆಗೂ ಸಾಗಿತು. ಭಕ್ತಾಧಿಗಳಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು.
ದೇವಸ್ಥಾನದಲ್ಲಿ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ, ಅಲಂಕಾರ ಕೈಗೊಳ್ಳಲಾಗಿತ್ತು. ಕೋವಿಡ್-೧೯ ಭೀತಿ ನಡುವೆಯೂ ನಗರ ಹಾಗು ಗ್ರಾಮಾಂತರ ಭಾಗಗಳಿಂದ ಭಕ್ತಾಧಿಗಳು ಆಗಮಿಸಿದ್ದರು.

ಸುಮಾರು ೨ ವರ್ಷಗಳ ನಂತರ ನಗರಸಭೆಗೆ ಚುನಾವಣೆ

ಏ.೮ರಿಂದ ನಾಮಪತ್ರ ಸಲ್ಲಿಕೆ, ಏ.೨೭ರಂದು ಮತದಾನ

   ಭದ್ರಾವತಿ, ಮಾ. ೨೯: ಕೊನೆಗೂ ಸುಮಾರು ೨ ವರ್ಷಗಳ ನಂತರ ಇಲ್ಲಿನ ನಗರಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಒಟ್ಟು ೩೫ ವಾರ್ಡ್‌ಗಳಿಗೆ ಏ.೨೭ರಂದು ಚುನಾವಣೆ ನಡೆಯಲಿದೆ.
ಏ.೮ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏ.೧೫ ಕೊನೆಯ ದಿನವಾಗಿದೆ. ಏ.೧೬ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.೧೯ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.
    ಏ.೨೭ರಂದು ಮತದಾನ ನಡೆಯಲಿದ್ದು, ಏ.೩೦ರಂದು ಮತ ಎಣಿಕೆ ನಡೆಯಲಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗ ಸೋಮವಾರ ಆದೇಶ ಹೊರಡಿಸಿದ್ದು, ರಾಜ್ಯದ ೭ ನಗರಸಭೆ, ೩ ಪುರಸಭೆ ಹಾಗು ೨ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆಗೆ ಘೋಷಿಸಿದೆ.  
     ಮೀಸಲಾತಿಗೊಂದಲದಿಂದ ಚುನಾವಣೆ ವಿಳಂಬ:
  ನಗರಸಭೆ ೩೫ ವಾರ್ಡ್‌ಗಳ ಮೀಸಲಾತಿ ಸಂಬಂಧ ಹಲವು ಬಾರಿ ತಕರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ವಿಚಾರಣೆ ನಡೆದು ಅಂತಿಮ ತೀರ್ಪು ಪ್ರಕಟವಾಗಿ ಸರ್ಕಾರ ಪುನಃ ಹೊಸದಾಗಿ ಮಿಸಲಾತಿ ನಿಗದಿಪಡಿಸಿದ ಹಿನ್ನಲೆಯಲ್ಲಿ ಚುನಾವಣೆ ಸುಮಾರು ೨ ವರ್ಷ ವಿಳಂಬವಾಗಿದೆ. ಹಲವು ಮಂದಿ ನಗರಸಭೆ ಚುನಾವಣೆ ಸ್ಪರ್ಧಿಸಲು ಎದುರು ನೋಡುತ್ತಿದ್ದು, ಇದೀಗ ಪ್ರಮುಖ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಚಿನ್ನದ ಮೇಲೆ ಸಾಲ ನೀಡುವ ಸಂಸ್ಥೆಗಳಿಂದ ಗ್ರಾಹಕರಿಗೆ ವಂಚನೆ : ಸೂಕ್ತ ಕಾನೂನು ಕ್ರಮ ಕೈಗೊಳ್ಳಿ

ಮುಖ್ಯಮಂತ್ರಿಗಳಿಗೆ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಮನವಿ


ಚಿನ್ನದ ಮೇಲೆ ಸಾಲ ನೀಡುವ ಸಂಸ್ಥೆಗಳಿಂದ ರಾಜ್ಯದ ಬಡ ಗ್ರಾಹಕರಿಗೆ ವಂಚನೆಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು  ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಸೋಮವಾರ ಭದ್ರಾವತಿಯಲ್ಲಿ ಏಕಾಂಗಿ ಹೋರಾಟದೊಂದಿಗೆ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.
   ಭದ್ರಾವತಿ, ಮಾ. ೨೯: ಚಿನ್ನದ ಮೇಲೆ ಸಾಲ ನೀಡುವ ಸಂಸ್ಥೆಗಳಿಂದ ರಾಜ್ಯದ ಬಡ ಗ್ರಾಹಕರಿಗೆ ವಂಚನೆಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು  ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಸೋಮವಾರ ಏಕಾಂಗಿ ಹೋರಾಟದೊಂದಿಗೆ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.
    ಚಿನ್ನದ ಮೇಲೆ ಸಾಲ ನೀಡುವ ಸಂಸ್ಥೆಗಳು ಪ್ರತಿ ತಾಲೂಕಿಗೆ ೪ರಂತೆ ರಾಜ್ಯಾದ್ಯಂತ ಸುಮಾರು ೧ ಸಾವಿರಕ್ಕೂ ಅಧಿಕ ಸಂಸ್ಥೆಗಳಿದ್ದು, ಪ್ರಮುಖವಾಗಿ ಮಣಪುರಂ ಗೋಲ್ಡ್, ಮುತ್ತೂಟ್, ಐ.ಐ.ಎಫ್.ಎಲ್ ಸೇರಿದಂತೆ ಇನ್ನಿತರ ಖಾಸಗಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಂಸ್ಥೆಗಳಲ್ಲಿ ಚಿನ್ನದ ಮೇಲೆ ಸಾಲ ಪಡೆದ ಗ್ರಾಹಕರಿಂದ ಹೆಚ್ಚುವರಿಯಾಗಿ ೧೦ ರಿಂದ ೧೫ ರು. ಗ್ರಾಹಕರ ಗಮನಕ್ಕೆ ಬಾರದಂತೆ ಹಣ ಪಡೆಯಲಾಗುತ್ತಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಮಾರ್ಚ್ ೨೦೨೦ರ ರಿಂದ ಸೆಪ್ಟಂಬರ್ ವರೆಗೂ ಕೇಂದ್ರ ಸರ್ಕಾರ ಎಲ್ಲಾ ತರಹದ ಸಾಲದ ಕಂತುಗಳಿಗೆ ಚಕ್ರ ಬಡ್ಡಿ ಹಾಕದಂತೆ ಸೂಚಿಸಿದೆ. ಆದರೂ ಸಹ ಈ ಸಂಸ್ಥೆಗಳು ಬಡ ಗ್ರಾಹಕರಿಗೆ ಚಕ್ರ ಬಡ್ಡಿ ಪಾವತಿಸುವಂತೆ ಒತ್ತಾಯಿಸುತ್ತಿವೆ. ಅಲ್ಲದೆ ಚಕ್ರ ಬಡ್ಡಿ ಪಾವತಿಸಲು ನಿರಾಕರಿಸುವ ಗ್ರಾಹಕರಿಗೆ ಯಾವುದೇ ನೋಟಿಸ್ ನೀಡದೆ ಚಿನ್ನವನ್ನು ಹರಾಜು ಹಾಕಲಾಗುತ್ತಿದೆ ಎಂದು ಆರೋಪಿಸಿದರು.
   ಈ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲು ತನಿಖಾ ಸಂಸ್ಥೆಗಳ ಮುಖ್ಯಸ್ಥರಿಗೆ ಆದೇಶಿಸುವ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬಡ ಗ್ರಾಹಕರ ಹಿತ ಕಾಪಾಡಬೇಕೆಂದು ಮನವಿ ಮಾಡಿದರು.

ತಾಲೂಕು ಕಚೇರಿ ಮುಂಭಾಗ ಪುನಃ ನಿಲ್ದಾಣ ನಿರ್ಮಿಸಿ : ಕರವೇ ಮನವಿ

ಈ ಹಿಂದೆ ಭದ್ರಾವತಿ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿದ್ದ ಬಸ್ ನಿಲ್ದಾಣವನ್ನು ಪುನಃ ನಿರ್ಮಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್ ಶೆಟ್ಟಿ ಬಣ)ವತಿಯಿಂದ ಸೋಮವಾರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.

   ಭದ್ರಾವತಿ, ಮಾ. ೨೯:  ಈ ಹಿಂದೆ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿದ್ದ ಬಸ್ ನಿಲ್ದಾಣವನ್ನು ಪುನಃ ನಿರ್ಮಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್ ಶೆಟ್ಟಿ ಬಣ)ವತಿಯಿಂದ ಸೋಮವಾರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
   ತಹಸೀಲ್ದಾರ್ ಗ್ರೇಡ್-೨ ರಂಗಮ್ಮರಿಗೆ ಮನವಿ ಸಲ್ಲಿಸಿದ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ತಾಲೂಕು ಕಚೇರಿ ರಸ್ತೆಯಲ್ಲಿ ಪ್ರತಿದಿನ ನಗರ ಹಾಗು ಗ್ರಾಮಾಂತರ ಭಾಗಗಳಿಂದ ಜನರು ಬಂದು ಹೋಗುತ್ತಾರೆ. ಈ ಹಿಂದೆ ನಿರ್ಮಿಸಲಾಗಿದ್ದ ಬಸ್ ನಿಲ್ದಾಣವನ್ನು ರಸ್ತೆ ಅಗಲೀಕರಣಕ್ಕಾಗಿ ನೆಲಸಮಗೊಳಿಸಲಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಸದಾ ಕಾಲ ಗಾಳಿ, ನೆರಳು ನೀಡುತ್ತಿದ್ದ ಹಳೇಯದಾದ ಬೃಹತ್ ಗಾತ್ರದ ಮರಗಳನ್ನು ಸಹ ಕಡಿತಲೆ ಮಾಡಲಾಗಿದೆ. ಇದೀಗ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಪುನಃ ಬಸ್ ನಿಲ್ದಾಣ ನಿರ್ಮಿಸಿಲ್ಲ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ತಕ್ಷಣ ಬಸ್ ನಿಲ್ದಾಣ ನಿರ್ಮಿಸಬೇಕು. ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
     ಸಾಮಾಜಿಕ ಹೋರಾಟಗಾರ ಶಿವಕುಮಾರ್, ಹಿರಿಯ ಮುಖಂಡ ಸುಬ್ಬೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, March 28, 2021

ಕಲ್ಮಶ ತುಂಬಿದ ಪರಿಸರದಲ್ಲಿ ಪರಿಶುದ್ಧರಾಗಲು ವಚನಗಳು ಸಹಕಾರಿ : ಡಾ. ವೀಣಾ ಎಸ್. ಭಟ್

ಭದ್ರಾವತಿಯಲ್ಲಿ ಭಾನುವಾರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೬ನೇ  ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ವೀಣಾ ಎಸ್ ಭಟ್‌ರವರಿಗೆ ಶಿವಮೊಗ್ಗ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ಸಮ್ಮೇಳನದ ಧ್ವಜ ಹಸ್ತಾಂತರಿಸಿದರು.  
  ಭದ್ರಾವತಿ, ಮಾ. ೨೮: ಪ್ರಸ್ತುತ ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲೂ ಕಲ್ಮಶ ತುಂಬಿಕೊಂಡಿದ್ದು, ಇವುಗಳಿಂದ ಪರಿಶುದ್ಧರಾಗಲು ವಚನಗಳು ಸಹಕಾರಿಯಾಗಿವೆ ಎಂದು ನಗರದ ಸ್ತ್ರೀರೋಗ ತಜ್ಞೆ, ವೈದ್ಯ ಸಾಹಿತಿ ಡಾ. ವೀಣಾ ಎಸ್. ಭಟ್ ಹೇಳಿದರು.
   ಭಾನುವಾರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೬ನೇ  ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ  ಮಾತನಾಡಿದರು.
   ವಚನಗಳು ದೈನಂದಿನ ಬದುಕಿನ ಭಾಗವಾಗಬೇಕು, ಬಸವಾದಿ ಶರಣರ ಚಾರಿತ್ರಿಕ ಪಾತ್ರಗಳನ್ನು ಕೇವಲ ನೆನಪು ಮಾಡಿಕೊಂಡರೆ ಸಾಲದು ಅವರು ಹಾಕಿಕೊಟ್ಟ ಹಾದಿಯಲ್ಲಿ ಕೆಲವು ಹೆಜ್ಜೆಗಳನ್ನಾದರೂ ಇಡಬೇಕು. ಕಾಯಕ, ದಾಸೋಹದ ಪರಿಕಲ್ಪನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಆಗ ಮಾತ್ರ ಬದುಕಿನ ಸಾರ್ಥಕತೆ ಸಾಧ್ಯ ಎಂದರು.
   ಜಗಜ್ಯೋತಿ ಬಸವಣ್ಣನವರ ಆಶಯದಂತೆ ನಮ್ಮ ನಡೆ-ನುಡಿ ಒಂದೇ ದಿಕ್ಕಿನಲ್ಲಿ ಸಾಗಬೇಕು. ಸಮಾನತೆ ಪರಿಕಲ್ಪನೆಯೊಂದಿಗೆ ಪರಿಶುದ್ಧ ಮನಸ್ಸು ಹೊಂದುವ ಮೂಲಕ ಬದುಕು ರೂಪಿಸಿಕೊಳ್ಳಬೇಕು. ಪರಿಶುದ್ಧ ಆಲೋಚನೆಗಳಿಂದ ನಮ್ಮ ದೇಹದ ಆರೋಗ್ಯ ವೃದ್ಧಿಸುವ ಜೊತೆಗೆ ಕೊರೋನಾದಂತಹ ಮಹಾಮಾರಿಯನ್ನೂ ಸಹ ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಹೊಂದಬಹುದು. ಈ ನಿಟ್ಟಿನಲ್ಲಿ ಅಂತರಂಗ ಬಹಿರಂಗದ ಶುದ್ದಿ ವೈದ್ಯಲೋಕಕ್ಕೂ ಕೂಡ ಸವಾಲಾಗಿ ಪರಿಣಮಿಸುತ್ತದೆ ಎಂದರು.
  ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡಿ, ಶರಣರ ಬದುಕು ಜಾತಿ, ಧರ್ಮ ಸೇರಿದಂತೆ ಯಾವುದೇ ಬೇಧಭಾವವಿಲ್ಲದ ಸರ್ವಸಮಾನತೆಯ ಬದುಕಾಗಿದೆ. ಇದು ಕೇವಲ ೧೨ನೇ ಶತಮಾನಕ್ಕೆ ಮಾತ್ರ ಸೀಮಿತವಾಗಿಲ್ಲ ಇಂದಿಗೂ ಪ್ರಸ್ತುತವಾಗಿದೆ. ಶರಣರ ಆಶಯದಂತೆ ನಮ್ಮ ಬದುಕು ರೂಪುಗೊಳ್ಳಬೇಕು ಎಂದರು.
   ಪ್ರಸ್ತುತ ಕ್ಷೇತ್ರದಲ್ಲಿ ಕೆಲವರು ಜಾತಿ, ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತಿ ರಾಜಕಾರಣ ಮಾಡಲು ಯತ್ನಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳು ಸಾಮಾನ್ಯ ಅದನ್ನು ಎದುರಿಸುವ ಶಕ್ತಿ ದೇವರು ನನಗೆ ಕರುಣಿಸಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಮತದಾರರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆಂದು ಇತ್ತೀಚೆಗೆ ಕ್ಷೇತ್ರದಲ್ಲಿ ಉಂಟಾಗಿರುವ ಅಹಿತಕರ ಬೆಳವಣಿಗೆಗಳ ಕುರಿತು ಸಂಗಮೇಶ್ವರ್ ಮಾರ್ಮಿಕವಾಗಿ ನುಡಿದರು.