![](https://blogger.googleusercontent.com/img/a/AVvXsEgwIsWL8AOdJ8o3CLGF5zdEf4vPO0qmgCfstfrPAcaLX-zg_9DMIycXC05Safyb9jwQjdovS2G5xPoBdpsbKWrkYJp1axePpWfMPLfwpzI_f7TZiUsHF6rY66I93AD2eYYHu8RDBm9mgrBixs3ET62ruZ3-r13e8G36SEsrrYH_ktbsx65smCVcEMQfbg=w400-h400-rw)
ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಮೇ. ೧೨ : ಈ ಬಾರಿ ವಿಧಾನಸಭಾ ಚುನಾವಣೆ ಮತದಾನ ಮುಕ್ತಾಯಗೊಂಡ ತಕ್ಷಣ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಯಾರು ಎಂಬ ಕುತೂಹಲ ಹೆಚ್ಚಾಗುತ್ತಿದ್ದು, ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್ ಈ ಬಾರಿ ಸುಮಾರು ೩೦ ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಹೇಳಿಕೆ ನೀಡುತ್ತಿದ್ದವರು ಸಹ ಇದೀಗ ಮೌನಕ್ಕೆ ಶರಣಾಗಿದ್ದಾರೆ. ಮತ್ತೊಂದೆಡೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಗೆಲುವು ಸಾಧಿಸುದ್ದಾರೆಂದು ಆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ವಿಶ್ವಾಸವಾಗಿದೆ.
ಬಿ.ಕೆ ಸಂಗಮೇಶ್ವರ್ ಮತ್ತು ಶಾರದ ಅಪ್ಪಾಜಿ ನಡುವೆಯೇ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಈ ಹಿಂದೆ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಪೈಪೋಟಿ ನೀಡಲು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಶಾರದ ಅಪ್ಪಾಜಿ ಅಭ್ಯರ್ಥಿಯಾದ್ದಲ್ಲಿ ಪ್ರಚಾರ ನಡೆಸದೇ ಮನೆಯಲ್ಲಿಯೇ ಇದ್ದು ಶಾಸಕರು ಗೆಲ್ಲುತ್ತಾರೆಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದೀಗ ಶಾರದ ಅಪ್ಪಾಜಿ ಪ್ರಬಲ ಎದುರಾಳಿಯಾಗಿರುವುದು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಗೆಲ್ಲುವ ಅಭ್ಯರ್ಥಿ ಯಾರು ಎಂಬ ಕುತೂಹಲ ಹೆಚ್ಚಾಗುತ್ತಿದೆ.
ಶಾರದ ಅಪ್ಪಾಜಿ
ಉಳಿದಂತೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ಹಾಗು ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದ ಅಭ್ಯರ್ಥಿ ಆನಂದ್ ಮೆಡಿಕಲ್‌ರವರು ಪಡೆಯುವ ಮತಗಳ ಮೇಲೂ ಕುತೂಹಲ ಹೆಚ್ಚಾಗಿದೆ. ಈ ಇಬ್ಬರು ಪಡೆಯುವ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಫಲಿತಾಂಶದ ಮೇಲೆ ಪರಿಣಾಮ ಬೀಳಲಿದೆ ಎನ್ನಲಾಗಿದೆ.
ಸಂಗಮೇಶ್ವರ್ ಅತಿ ಕಡಿಮೆ ಅಂತರದಲ್ಲಿ ಗೆಲುವು :
೨೦೦೮ರ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ವಿರುದ್ಧ ಅತಿ ಕಡಿಮೆ ಮತದಲ್ಲಿ ಗೆಲುವು ಸಾಧಿಸಿದ್ದರು. ಚಲಾವಣೆಯಾದ ಒಟ್ಟು ೧,೨೫,೩೦೦ ಮತಗಳ ಪೈಕಿ ಸಂಗಮೇಶ್ವರ್ ೫೩,೨೫೭ ಮತಗಳು ಶೇ.೪೨.೫ರಷ್ಟು ಹಾಗು ಅಪ್ಪಾಜಿ ೫೨,೭೭೦ ಮತಗಳು ಶೇ.೪೨.೧೧ರಷ್ಟು ಮತಗಳನ್ನು ಪಡೆದುಕೊಂಡಿದ್ದರು. ಸಂಗಮೇಶ್ವರ್ ಕೇವಲ ೪೮೭ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಅಪ್ಪಾಜಿ ಅತಿ ಹೆಚ್ಚು ಅಂತರದಲ್ಲಿ ಗೆಲುವು :
೨೦೧೩ರ ಚುನಾವಣೆಯಲ್ಲಿ ಅಪ್ಪಾಜಿ ಜಿಲ್ಲೆಯಲ್ಲಿಯೇ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಚಲಾವಣೆಯಾದ ಒಟ್ಟು ೧,೪೩,೫೫೬ ಮತಗಳ ಪೈಕಿ ಅಪ್ಪಾಜಿ ೭೮,೩೭೦ ಮತಗಳು ಶೇ.೫೪.೫೯ರಷ್ಟು ಹಾಗು ಸಂಗಮೇಶ್ವರ್ ೩೪,೨೭೧ ಮತಗಳು ಶೇ.೨೩.೮೭ರಷ್ಟು ಪಡೆದುಕೊಂಡಿದ್ದರು. ಅಪ್ಪಾಜಿ ಅತಿ ಹೆಚ್ಚು ೪೪,೦೯೯ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಮೇ.೧೩ರ ಫಲಿತಾಂಶಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದು, ಸಂಗಮೇಶ್ವರ್ ಪುನಃ ಆಯ್ಕೆಯಾಗಿ ಮಂತ್ರಿಯಾಗುವ ಕನಸು ಕನಸಾಗುವುದೇ ಅಥವಾ ಅಪ್ಪಾಜಿಯವರ ವರ್ಚಸ್ಸು, ಅನುಕಂಪದ ಅಲೆ ಶಾರದ ಅಪ್ಪಾಜಿ ಕೈ ಹಿಡಿದಿದೆಯೇ ಎಂಬುದು ತಿಳಿದು ಬರಲಿದೆ.