Tuesday, June 6, 2023

ಎಂಪಿಎಂ ಪ್ರಾರಂಭ ಕುರಿತು ಚರ್ಚಿಸಲು ಸಭೆ ನಿಗದಿಗೆ ಮುಖ್ಯಮಂತ್ರಿಗೆ ಮನವಿ

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಜೂ. ೬: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಗರದ ಮೈಸೂರು ಕಾಗದ ಕಾರ್ಖಾನೆ ಪ್ರಾರಂಭಿಸಲು ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಖಾಸಗಿ ಉದ್ಯಮಿಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲು, ಚರ್ಚಿಸಲು ದಿನಾಂಕ ಹಾಗೂ ಸಮಯ ನಿಗದಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದ್ದಾರೆ.  
    ಖಾಸಗಿ ಉದ್ಯಮಿಗಳು ಕಾರ್ಖಾನೆಯನ್ನು ಮುನ್ನಡೆಸಲು ಇಚ್ಚಿಸಿರುವುದರಿಂದ ಹಾಗೂ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುವುದರಿಂದ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಖಾಸಗಿ ಉದ್ಯಮಿಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲು, ಚರ್ಚಿಸಲು ದಿನಾಂಕ ಹಾಗೂ ಸಮಯ ನಿಗದಿಪಡಿಸುವಂತೆ ಕೋರಿದ್ದಾರೆ.  

Monday, June 5, 2023

ಸ್ವಚ್ಛತೆ ಕಾಪಾಡಲು ಆರ್‌ಆರ್‌ಆರ್ ಕೇಂದ್ರಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಪರಿಸರ ದಿನಾಚರಣೆ, ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದಲ್ಲಿ ಪೌರಾಯುಕ್ತ ಮನುಕುಮಾರ್

ಭದ್ರಾವತಿ ನಗರಸಭೆ ವತಿಯಿಂದ ಸೋಮವಾರ ಲೈಫ್ ನನ್ನ ಸ್ವಚ್ಛ ನಗರ ಹಾಗು ವಿಶ್ವ ಪರಿಸರ ದಿನಾಚರಣೆ  ಕಾರ್ಯಕ್ರಮದ ಅಂಗವಾಗಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಇಂದಿರಾ ಕ್ಯಾಂಟೀನ್ ಬಳಿ ಮಾಜಿ ಸೈನಿಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
    ಭದ್ರಾವತಿ, ಜೂ. ೫ : ನಗರದಲ್ಲಿ ಸ್ವಚ್ಛತೆ ಕಾಪಾಡಲು ಮರುಬಳಕೆ ಮಾಡಿಕೊಳ್ಳಬಹುದಾದ ತ್ಯಾಜ್ಯ ವಸ್ತುಗಳನ್ನು ನಗರಸಭೆ ವತಿಯಿಂದ ಸಂಗ್ರಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ನಗರದ ೫ ಭಾಗಗಳಲ್ಲಿ ಆರ್‌ಆರ್‌ಆರ್ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಪೌರಾಯುಕ್ತ ಮನುಕುಮಾರ್ ಹೇಳಿದರು.
    ಅವರು ಸೋಮವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಲೈಫ್ ನನ್ನ ಸ್ವಚ್ಛ ನಗರ ಹಾಗು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮರುಬಳಕೆ ಮಾಡಿಕೊಳ್ಳಬಹುದಾದ ಬಟ್ಟೆ, ದಿನಪತ್ರಿಕೆ, ಪುಸ್ತಕ, ಆಟಿಕೆ ಸಾಮಗ್ರಿಗಳು ಮತ್ತು ಪ್ಲಾಸ್ಟಿಕ್ ಕವರ್‌ಗಳು ಸೇರಿದಂತೆ ೬ ಬಗೆಯ ತ್ಯಾಜ್ಯಗಳನ್ನು ನಗರಸಭೆ ವತಿಯಿಂದ ಸಂಗ್ರಹಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ಸಾರ್ವಜನಿಕರು ಹೆಚ್ಚು ಹೆಚ್ಚು ಮರುಬಳಕೆ ಮಾಡಿಕೊಳ್ಳಬಹುದಾದ ತ್ಯಾಜ್ಯ ನೀಡಿದ್ದಲ್ಲಿ ಅಂತಹವರಿಗೆ ಪ್ರೋತ್ಸಾಹಕವಾಗಿ ನಗರಸಭೆ ವತಿಯಿಂದ ತಯಾರಿಸಲಾಗುತ್ತಿರುವ ೧ ಕೆ.ಜಿ ಗೊಬ್ಬರ ಉಚಿತವಾಗಿ ನೀಡಲಾಗುವುದು ಎಂದರು.
    ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಇಂದಿರಾ ಕ್ಯಾಂಟೀನ್ ಬಳಿ ಮಾಜಿ ಸೈನಿಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಇದಕ್ಕೂ ಮೊದಲು ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಸಹಿ ಅಭಿಯಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಸಸಿಗಳನ್ನು ನೆಟ್ಟು ಪೋಷಿಸುವಂತೆ ಕರೆ ನೀಡಲಾಯಿತು.
    ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಸದಸ್ಯರಾದ ಲತಾ ಚಂದ್ರಶೇಖರ್, ಚನ್ನಪ್ಪ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದರು.


ಭದ್ರಾವತಿ ನಗರಸಭೆ ವತಿಯಿಂದ ಸೋಮವಾರ ಲೈಫ್ ನನ್ನ ಸ್ವಚ್ಛ ನಗರ ಹಾಗು ವಿಶ್ವ ಪರಿಸರ ದಿನಾಚರಣೆ  ಕಾರ್ಯಕ್ರಮದ ಅಂಗವಾಗಿ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು. 

Sunday, June 4, 2023

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದರ್ಶನ ಪಡೆದ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಭದ್ರಾವತಿ ಕ್ಷೇತ್ರ ಪಾಲಕ, ಪುರಾಣ ಪ್ರಸಿದ್ದ ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಭಾನುವಾರ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ದರ್ಶನ ಪಡೆದರು.
    ಭದ್ರಾವತಿ, ಜೂ. ೪ : ಕ್ಷೇತ್ರ ಪಾಲಕ, ಪುರಾಣ ಪ್ರಸಿದ್ದ ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಭಾನುವಾರ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ದರ್ಶನ ಪಡೆದರು.
    ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನೂತನ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಶನಿವಾರ ಸಂಜೆ ನಗರಕ್ಕೆ ಆಗಮಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಬೆಳಿಗ್ಗೆ ದೇವರ ದರ್ಶನ ಪಡೆದು ನಂತರ ನಗರದ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
    ದೇವಸ್ಥಾನ ಪ್ರಧಾನ ಅರ್ಚಕ ವೇದಬ್ರಹ್ಮ ರಂಗನಾಥಶರ್ಮ, ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರರು, ಕುಟುಂಬ ವರ್ಗದವರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಜೂ.೫ ರಿಂದ ಎನ್‌ಎಸ್‌ಎಸ್ ಶಿಬಿರ

    ಭದ್ರಾವತಿ, ಜೂ. ೪ : ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ೨ರ ವಾರ್ಷಿಕ ವಿಶೇಷ ಶಿಬಿರ ಜೂ.೫ರಿಂದ ೧೧ರವರೆಗೆ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.
    ಜೂ.೫ರ ಸಂಜೆ ೬ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಂ ನಾಸಿರ್‌ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಓಂಪ್ರಕಾಶ್ ರಾಜೋಳೆ, ಕುವೆಂಪು ವಿಶ್ವ ವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷೆ ಲತಾ, ಸದಸ್ಯರಾದ ಸೂರ್ಯನಾಯ್ಕ, ಶಿವಕುಮಾರ್, ಎಸ್. ಉತ್ತರೇಶ, ಭಾಗ್ಯಮ್ಮ, ತಿಪ್ಪಮ್ಮ, ಬಿ. ಸುರೇಶ್, ದೀಪ, ಲಕ್ಷ್ಮೀಬಾಯಿ, ಬಿ. ರಾಜು, ಕಾವೇರಿಬಾಯಿ, ಕೆ. ರಘುಪ್ರಸಾದ್, ಯಶೋಧಬಾಯಿ, ಪಿಡಿಓ ರಾಜಪ್ಪ, ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ರವಿಕುಮಾರ್, ಮುಖ್ಯ ಶಿಕ್ಷಕ ಕೆ.ಎನ್ ಮಂಜುನಾಥ್, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶೈಲಜಾ ಸಿದ್ದಪ್ಪ ಹೊಸಳ್ಳೆರ, ಉಷಾದೇವಿ, ವ್ಯಾಸನಾಯ್ಕ, ಡಾ. ಟಿ.ಜಿ ಉಮಾ, ಬಿ. ಗುರುಪ್ರಸಾದ್, ಆರ್. ವೆಂಕಟೇಶ್, ಡಾ. ಆರ್. ಸೀಮಾ, ಪತ್ರಕರ್ತರಾದ ಬಸವರಾಜ್ ಮತ್ತು ಅನಂತಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ನಗರಸಭೆಯಿಂದ ಜೂ.೫ರಂದು ಪರಿಸರ ದಿನಾಚರಣೆ

    ಭದ್ರಾವತಿ, ಜೂ. ೪: ನಗರಸಭೆ ವತಿಯಿಂದ ಲೈಫ್ ನನ್ನ ಸ್ವಚ್ಛ ನಗರ ಹಾಗು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ.೫ರಂದು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಇಂದಿರಾ ಕ್ಯಾಂಟೀನ್ ಬಳಿ ಬೆಳಿಗ್ಗೆ ೭.೩೦ಕ್ಕೆ ಸ್ವಚ್ಛತಾ ಕಾರ್ಯಕ್ಕೆ ಹಾಗು ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಬೆಳಿಗ್ಗೆ ೯ ಗಂಟೆಗೆ ವಿಶ್ವ ಪರಿಸರ ದಿನಾಚರಣೆಗೆ ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.

ಎಂಪಿಎಂ ಪುನರ್ ಆರಂಭಿಸಿ, ಬಾಕಿ ಹಣ ಕೊಡಿಸಿ :

ನೊಂದ ನಿವೃತ್ತ ಕಾರ್ಮಿಕರಿಂದ ನೂತನ ಸಚಿವೆಗೆ ಮನವಿ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವುದು ಹಾಗು ನಿವೃತ ಕಾರ್ಮಿಕರಿಗೆ ನ್ಯಾಯಯುತವಾಗಿ ಬರಬೇಕಾದ ಬಾಕಿ ಹಣ ಕೊಡಿಸುವಂತೆ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಭಾನುವಾರ ಮನವಿ ಸಲ್ಲಿಸಿದೆ.  
    ಭದ್ರಾವತಿ, ಜೂ. ೪ : ನಗರದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವುದು ಹಾಗು ನಿವೃತ ಕಾರ್ಮಿಕರಿಗೆ ನ್ಯಾಯಯುತವಾಗಿ ಬರಬೇಕಾದ ಬಾಕಿ ಹಣ ಕೊಡಿಸುವಂತೆ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಭಾನುವಾರ ಮನವಿ ಸಲ್ಲಿಸಿದೆ.  
    ದೇಶದ ಎರಡನೇ ಅತಿದೊಡ್ಡ ಕಾಗದ ಕಾರ್ಖಾನೆಯಾಗಿ ಗುರುತಿಸಿಕೊಂಡಿದ್ದ ಕ್ಷೇತ್ರದ ಹೆಮ್ಮೆಯ ಪ್ರತೀಕವಾದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ವೈಭವ ಇದೀಗ ಇತಿಹಾಸವಾಗಿ ಉಳಿದು ಬಿಟ್ಟಿದ್ದು, ಈ ಕಾರ್ಖಾನೆ ಪುನರ್ ಆರಂಭಿಸಿ ಗತ ವೈಭವ ಮರಳಬೇಕು.  ಈ ಹಿಂದೆ ಚುನಾವಣೆಗೂ ಮೊದಲು ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಅಂದು ಎಂಪಿಎಂ ಕಾರ್ಖಾನೆ ಮನರ್ ಆರಂಭಿಸುವುದಾಗಿ ವಾಗ್ದಾನ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ತಾವು ಸಹ ಪಾಲ್ಗೊಂಡಿದ್ದು, ಇದೀಗ ತಾವು ಸರ್ಕಾರದಲ್ಲಿ ಸಚಿವರಾಗಿರುವುದು ಹೆಮ್ಮೆಯ ವಿಚಾರವಾಗಿದೆ. ತಕ್ಷಣ ಸಚಿವ ಸಂಪುಟ ಸಭೆಯಲ್ಲಿ ಕಾರ್ಖಾನೆ ಪುನರ್ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಕಾರ್ಖಾನೆಯಲ್ಲಿ ಸುಮಾರು ೩೦ ರಿಂದ ೪೦ ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿ ನಿವೃತ್ತಿ/ಸ್ವಯಂ ನಿವೃತ್ತಿ ಹೊಂದಿರುವ ನಮಗೆ ಕಾರ್ಖಾನೆಯಿಂದ ನ್ಯಾಯುತವಾಗಿ ಹಲವು ಬಾಕಿ ಹಣ ಬರಬೇಕಾಗಿದ್ದು, ತಕ್ಷಣ ಬಾಕಿ ಹಣ ವಿತರಲು ಸಂಬಂಧಿಸಿದವರಿಗೆ ಆದೇಶಿಸಬೇಕೆಂದು ಒತ್ತಾಯಿಸಲಾಗಿದೆ.
    ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೪ ಬಾರಿ ಶಾಸಕರಾಗಿರುವ ಸಂಗಮೇಶ್ವರ್‌ಗೂ ಭವಿಷ್ಯದಲ್ಲಿ ಸಚಿವರಾಗುವ ಯೋಗ

ಸನ್ಮಾನ ಸ್ವೀಕರಿಸಿ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ

ಭದ್ರವತಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿಕರಾದ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಗಾಂಧಿನಗರದ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಭದ್ರಾವತಿ, ಜೂ. ೪ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ಆದರ್ಶ ವ್ಯಕ್ತಿಯಾಗಿದ್ದು, ಮುಂದಿನ ಅವಧಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿಕರಾದ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ  ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಗಾಂಧಿನಗರದ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.      ಒಬ್ಬ ವ್ಯಕ್ತಿ ಒಂದು ಬಾರಿ ಶಾಸಕರಾಗುವುದೇ ಹೆಚ್ಚು ಇಲ್ಲಿನ ಕ್ಷೇತ್ರದ ಜನರು ಸಂಗಮೇಶ್ವರ್ ಅವರನ್ನು ೪ ಬಾರಿ ಆಯ್ಕೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ೧೩೫ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗುವ ಮೂಲಕ ಅಭೂತಪೂರ್ವ ಇತಿಹಾಸ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ಆದರ್ಶ ವ್ಯಕ್ತಿಯಾಗಿದ್ದು, ಸಂಗಮೇಶ್ವರ್ ಅವರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಸಂಗಮೇಶ್ವರ್ ಅವರಿಗೂ ಸಚಿವರಾಗುವ ಯೋಗವಿದ್ದು, ಸ್ವಲ್ಪ ವಿಳಂಬವಾಗಬಹುದು. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ೭೫ ವರ್ಷಗಳ ಕನಸು ನನಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಕ್ಷೇತ್ರದ ಮತದಾರರು ಚಿಂತೆ ಮಾಡುವ ಅಗತ್ಯವಿಲ್ಲ. ಈ ಕ್ಷೇತ್ರದ ಶಾಸಕರ ಕುಟುಂಬ ಸಂಬಂಧಿಯಾಗಿರುವ ನಾನು ನಿಮ್ಮ ಪರವಾಗಿದ್ದೇನೆ. ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ನಾನು ಸಹ ಕೈ ಜೋಡಿಸುತ್ತೇನೆ. ನೀವುಗಳು ನಮ್ಮ ಮೇಲೆ ಹೊಂದಿರುವ ಅಭಿಮಾನ, ವಿಶ್ವಾಸಕ್ಕೆ ಚಿರಋಣಿಯಾಗಿರುತ್ತೇನೆ ಎಂದರು.
    ವೈದ್ಯೆಯಾಗುವ ಕನಸು ಸೊಸೆಯಿಂದ ಈಡೇರಿದೆ, ಅದೃಷ್ಟದ ಮೊಮ್ಮಗಳು :
    ದೂರದ ಬೆಳಗಾವಿಗೂ ಭದ್ರಾವತಿಗೂ ನಂಟು ಬೆಳೆಯುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಶಾಸಕ ಬಿ.ಕೆ ಸಂಗಮೇಶ್ವರ್‌ರವರು ನನ್ನ ಬಳಿ ಬಂದು ನಿಮ್ಮ ಮಗನಿಗೆ ಹೆಣ್ಣು ಹುಡುಕುತ್ತಿದ್ದೀರಾ ಎಂಬ ಮಾಹಿತಿ ಕೇಳಿ ಬಂತು. ನನ್ನ ಸಹೋದರನ ಮಗಳು ವೈದ್ಯೆಯಾಗಿದ್ದು, ಒಂದು ಸಲ ಬಂದು ನೋಡಿ ಎಂದು ಹೇಳಿದರು. ನಾನು ವೈದ್ಯೆಯಾಗಬೇಕು ಎಂಬ ಆಸೆ ಹೊಂದಿದ್ದೆ. ಆದರೆ ವೈದ್ಯೆಯಾಗಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ನಾನು ಇಲ್ಲಿಗೆ ಬರಲು ತೀರ್ಮಾನಿಸಿದೆ.  ಮೊದಲ ಸಲವೇ ಸಂಬಂಧ ಕೂಡಿ ಬಂತು. ಸೊಸೆ ಬಂದ ನಂತರ ನನ್ನ ತಮ್ಮ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದು, ನಾನು ೨ನೇ ಬಾರಿಗೆ ಶಾಸಕಿಯಾಗಿದ್ದೇನೆ. ಇದೀಗ ನನ್ನ ಮೊಮ್ಮಗಳು ಜನಿಸಿದ ಮರುದಿನ ಸಚಿವೆಯಾಗಿದ್ದೇನೆ. ಸೊಸೆ ಮತ್ತು ಮೊಮ್ಮಗಳು ಇಬ್ಬರು ನಮ್ಮ ಕುಟುಂಬಕ್ಕೆ ಅದೃಷ್ಟ ತಂದಿದ್ದಾರೆ ಎಂದರು.
    ಇಲಾಖೆ ಬಗ್ಗೆ ಅಭಿಮಾನ :
    ನನಗೆ ನೀಡಿರುವ ಇಲಾಖೆ ಬಗ್ಗೆ ಅಭಿಮಾನಿವಿದ್ದು, ಹುಟ್ಟು ಮಕ್ಕಳಿಂದ ಹಿಡಿದು ಗರ್ಭಿಣಿ ಮಹಿಳೆ, ಅಂಗವಿಕಲರ ಹಾಗು ಸಾಯುವವರೆಗಿನ ವಯೋವೃದ್ಧರ ಸೇವೆ ಸಲ್ಲಿಸುವ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯವಾಗಿದೆ. ಭದ್ರಾವತಿ ಕ್ಷೇತ್ರ ಸೇರಿದಂತೆ ನಾಡಿನಾದ್ಯಂತ ಇಲಾಖೆ ಕೆಲಸ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
    ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಅಲ್ಪ ಸಂಖ್ಯಾತ ಸಮುದಾಯದ ಫೀರ್‌ಷರೀಫ್, ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಸೇರಿದಂತೆ ಇನ್ನಿತರರು ಅಭಿನಂದನಾ ನುಡಿಗಳನ್ನಾಡಿದರು.
    ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಮುರುಗೇಶ್ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರರಾದ ಬಿ.ಕೆ ಜಗನ್ನಾಥ್, ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್ ಹಾಗು ಮಕ್ಕಳು, ಕುಟುಂಬ ವರ್ಗದವರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ನಗರಸಭೆ, ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.


ಭದ್ರವತಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿಕರಾದ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಗಾಂಧಿನಗರದ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದರು.