Sunday, January 5, 2025

ಕೋಡ್ಲುಯಜ್ಞಯ್ಯರವರ `ಸತ್ಯಕ್ಕೆ ಸಾವಿಲ್ಲ' ಪುಸ್ತಕ ಬಿಡುಗಡೆ

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಶಾಖೆ ವತಿಯಿಂದ ಭದ್ರಾವತಿ ನ್ಯೂಟೌನ್ ರೋಟರಿಕ್ಲಬ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ದತ್ತಿ ಹಾಗು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಪ್ರಾಧ್ಯಾಪಕ ಡಾ. ಮೇಟಿ ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಕೋಡ್ಲುಯಜ್ಞಯ್ಯರವರ `ಸತ್ಯಕ್ಕೆ ಸಾವಿಲ್ಲ' ಪುಸ್ತಕ ಬಿಡುಗಡೆಗೊಳಿಸಿದರು. 
    ಭದ್ರಾವತಿ : ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಶಾಖೆ ವತಿಯಿಂದ ನ್ಯೂಟೌನ್ ರೋಟರಿಕ್ಲಬ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ದತ್ತಿ ಹಾಗು ಪುಸ್ತಕ ಬಿಡುಗಡೆ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಉದ್ಘಾಟಿಸಿದರು. 
    ಕೆ.ಬಿ ತಮ್ಮಯ್ಯಗೌಡ ಮತ್ತು ಅಕ್ಕಾಣಿಯಮ್ಮ ದತ್ತಿ ಕಾರ್ಯಕ್ರಮದಲ್ಲಿ `ಕುವೆಂಪು ಸಾಹಿತ್ಯದಲ್ಲಿ ವೈಜಾರಿಕತೆ' ವಿಷಯ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಸಾಹಿತಿ, ಪ್ರಾಧ್ಯಾಪಕ ಡಾ. ಮೇಟಿ ಮಲ್ಲಿಕಾರ್ಜುನ ಉಪನ್ಯಾಸ ನೀಡಿದರು. 
    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ, ದತ್ತಿ ದಾನಿಗಳಾದ ಕೋಡ್ಲುಯಜ್ಞಯ್ಯರವರು ರಚಿಸಿರುವ `ಸತ್ಯಕ್ಕೆ ಸಾವಿಲ್ಲ' ಕಥಾ ಸಂಕಲನ ಪುಸ್ತಕ ಕುರಿತು ನಗರದ ನ್ಯೂಟೌನ್ ಎಸ್‌ಎವಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ಮಾತನಾಡಿದರು.   ಲೋಕಾರ್ಪಣೆಗೊಳ್ಳಲಿದೆ.  
    ಪತ್ರ ಸಂಸ್ಕೃತಿ ಸಂಸ್ಥಾಪಕ ಹೊಸಹಳ್ಳಿ ದಾಳೇಗೌಡ, ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಮೋಹನ್ ಕುಮಾರ್ ಸ್ವಾಗತಿಸಿ, ಟಿ. ತಿಮ್ಮಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಮಲ ಕುಮಾರಿ ತಂಡದವರು ಪ್ರಾರ್ಥಿಸಿದರು.

ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಟೈಲರ್‌ಗಳಿಗೂ ದೊರೆಯುವಂತಾಗಲಿ : ಕೆ ಸುಂದರ್ ಬಾಬು

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಟೈಲರ್‍ಸ್ ವೃತ್ತಿ ಬಾಂಧವರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ' ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಕೆ. ಸುಂದರ್ ಬಾಬು ಉದ್ಘಾಟಿಸಿದರು. 
    ಭದ್ರಾವತಿ: ಟೈಲರ್ ಗಳಿಗೂ ಕಟ್ಟಡ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳು ದೊರಕಿ ಉತ್ತಮ ಜೀವನ ನಡೆಸುವಂತಾಗಬೇಕೆಂದು ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಕೆ. ಸುಂದರ್ ಬಾಬು ಹೇಳಿದರು. 
    ಅವರು ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಟೈಲರ್‍ಸ್ ವೃತ್ತಿ ಬಾಂಧವರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ' ಉದ್ಘಾಟಿಸಿ ಮಾತನಾಡಿದರು. 
    ಯಾವುದೇ ಸಂಘದಲ್ಲಿ ಹೆಸರು ನೋಂದಾಯಿಸಿ ಕೊಳ್ಳುವುದು ಎಷ್ಟು ಮುಖ್ಯವೋ, ಪ್ರತಿ ವರ್ಷ ಸಂಘದ ಸದಸ್ಯತ್ವ ಅಗತ್ಯ ದಾಖಲೆಗಳೊಂದಿಗೆ ನವೀಕರಣ ಮಾಡಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದು ತಿಳಿಸುವ ಜೊತೆಗೆ ಸ್ಮಾರ್ಟ್ ಕಾರ್ಡ್ ಪಡೆಯುವ ಬಗ್ಗೆ ಮತ್ತು ಟೈಲರ್‍ಸ್ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಮಾಹಿತಿ ನೀಡಿದರು. 
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತಾಲೂಕು ಟೈಲರ್‍ಸ್ ಸಂಘದ ಅಧ್ಯಕ್ಷ ಎ.ಎಸ್ ಸುಂದರ್ ಮಾತನಾಡಿ, ಕೋವಿಡ್ ಮಹಾಮಾರಿಯ ಆರ್ಭಟದಿಂದ ಸಾಕಷ್ಟು ಜನ ಟೈಲರ್ ವೃತ್ತಿ ಬಾಂಧವರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಬಡವರ ಬದುಕು ಹಾಳಾಗಿದ್ದು, ಇಂತಹ ಸಂದರ್ಭದಲ್ಲಿ ಸಹಾಯ ಹಸ್ತ ಅನಿವಾರ್ಯವಾಗಿರುವುದನ್ನು ಮನಗಂಡು ತಾಲೂಕು ಟೈಲರ್‍ಸ್ ಸಂಘದಿಂದ ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ಕೋವಿಡ್ ತಡೆಗಟ್ಟಲು ವ್ಯಾಕ್ಸಿನೇಷನ್ ಕೊಡಿಸಿದ್ದೇವೆ. ಸಂಘದ ನೋಂದಾಯಿತ ಸದಸ್ಯರಿಗೆ ಈ-ಶ್ರಮ್ ಕಾರ್ಡ್ ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಕಾರ್ಡ್ ವಿತರಿಸಲಾಗಿದೆ ಎಂದರು.
    ತಾಲೂಕಿನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದು, ಇನ್ನೂ ಸಂಘದಲ್ಲಿ ಹೆಸರು ನೋಂದಾಯಿಸಿಕೊಳ್ಳದ ವೃತ್ತಿ ಬಾಂಧವರು ತಾಲೂಕು ಟೈಲರ್‍ಸ್ ಸಂಘ, ಬಸವ ಕಾಂಪ್ಲೆಕ್ಸ್, ಚನ್ನಗಿರಿ (ಡಾ. ರಾಜ್ ಕುಮಾರ್) ರಸ್ತೆ, ಭದ್ರಾವತಿ. ಮೊಬೈಲ್ ಸಂಖ್ಯೆ ೯೮೮೦೯೦೭೯೧೦ ಈ ವಿಳಾಸದಲ್ಲಿ ಸಂಪರ್ಕಿಸಿ, ಹೆಸರು ನೋಂದಾಯಿಸಿ ಕೊಳ್ಳಬೇಕೆಂದು ಸುಂದರ್ ವೃತ್ತಿ ಬಾಂಧವರಿಗೆ ಕರೆ ನೀಡಿದರು. 
    ವೇದಿಕೆಯಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ರಾಘವೇಂದ್ರರಾವ್, ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಎನ್. ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಉಚಿತ ಆರೋಗ್ಯ ಸೌಲಭ್ಯ ನೋಂದಣಿ ಅಭಿಯಾನಕ್ಕೆ ಬಿಳಿಕಿ ಶ್ರೀ ಚಾಲನೆ

ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷದ ತಾಲೂಕು ಮಂಡಲದ ಮಾಜಿ ಅಧ್ಯಕ್ಷರಾದ ಜಿ. ಆನಂದಕುಮಾರ್(ನಗರ ಘಟಕ) ಮತ್ತು ಮಂಗೋಟೆ ರುದ್ರೇಶ್(ಗ್ರಾಮಾಂತರ ಘಟಕ) ನೇತೃತ್ವದಲ್ಲಿ  ಭಾನುವಾರ ಹಮ್ಮಿಕೊಳ್ಳಲಾಗಿದ್ದ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಆರೋಗ್ಯ ಸೌಲಭ್ಯ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಬಿಳಿಕಿ ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. 
    ಭದ್ರಾವತಿ: ಭಾರತೀಯ ಜನತಾ ಪಕ್ಷದ ತಾಲೂಕು ಮಂಡಲದ ಮಾಜಿ ಅಧ್ಯಕ್ಷರಾದ ಜಿ. ಆನಂದಕುಮಾರ್(ನಗರ ಘಟಕ) ಮತ್ತು ಮಂಗೋಟೆ ರುದ್ರೇಶ್(ಗ್ರಾಮಾಂತರ ಘಟಕ) ನೇತೃತ್ವದಲ್ಲಿ  ಭಾನುವಾರ ಹಮ್ಮಿಕೊಳ್ಳಲಾಗಿದ್ದ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಆರೋಗ್ಯ ಸೌಲಭ್ಯ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಬಿಳಿಕಿ ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. 
    ನಗರದ ಹೊಸಮನೆ ಮುಖ್ಯ ರಸ್ತೆ(ಸಂತೆ ಮೈದಾನದ ಎದುರು) ಜಿ. ಆನಂದಕುಮಾರ್‌ರವರ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು, ಈ ಯೋಜನೆಯಡಿ ೭೦ ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ ೫ ಲಕ್ಷ ರು.ಗಳವರೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೌಲಭ್ಯ ಒದಗಿಸುವುದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಲಾಯಿತು. 
    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಮಧುಕರ್ ಕಾನಿಟ್ಕರ್,  ಪಕ್ಷದ ಮುಖಂಡರಾದ ಮೈಲಾರಪ್ಪ, ಉದಯ ಕುಮಾರ್, ಶಿವಕುಮಾರ್(ಪೆಟ್ರೋಲ್ ಬಂಕ್), ಸುಬ್ರಮಣ್ಯ, ಮಂಜುಳ, ಶಕುಂತಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಜರುಗಿದ ಅಭಿಯಾನದಲ್ಲಿ ನೂರಾರು ಮಂದಿ ಪಾಲ್ಗೊಂಡು ಸದುಪಯೋಗಪಡೆದುಕೊಂಡರು. ಅಭಿಯಾನ ಯಶಸ್ವಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್ ಕೃತಜ್ಞತೆ ಸಲ್ಲಿಸಿದ್ದಾರೆ. 

Saturday, January 4, 2025

ಸಾವಿತ್ರಿಬಾಯಿಪುಲೆ ಸಾಮಾಜಿಕ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ : ಡಾ. ಎಸ್.ಪಿ ರಾಕೇಶ್

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಭದ್ರಾವತಿ ಸಿದ್ಧಾರೂಢ ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಸಾವಿತ್ರಿಬಾಯಿಫುಲೆರವರ ೧೯೪ನೇ ಜನ್ಮದಿನೋತ್ಸವ ಆಚರಿಸಲಾಯಿತು. 
    ಭದ್ರಾವತಿ: ಸಾವಿತ್ರಿಬಾಯಿಪುಲೆಯವರು ದೇಶದ ಮೊಟ್ಟಮೊದಲ ಶಿಕ್ಷಕಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಸಿದ್ಧಾರೂಢ ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್ ಹೇಳಿದರು. 
    ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸಾವಿತ್ರಿಬಾಯಿಫುಲೆರವರ ೧೯೪ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
     ಸಾವಿತ್ರಿಬಾಯಿಫುಲೆರವರು ಒಬ್ಬ ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ, ದೇಶದ ಮೊಟ್ಟಮೊದಲ ಶಿಕ್ಷಕಿ, ಧಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿ ಎಂದು ಬಣ್ಣಿಸಿದರು. 
    ಹತ್ತನೇ ತರಗತಿ ವಿದ್ಯಾರ್ಥಿನಿ ಭುವನ ಸಾವಿತ್ರಿಬಾಯಿ ಫುಲೆ ಅವರ ಜೀವನ ಮತ್ತು ಸಾಧನೆ ಕುರಿತಂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
      ದೈಹಿಕ ಶಿಕ್ಷಣ ಶಿಕ್ಷಕ ಶಿವಲಿಂಗೇಗೌಡ, ಎಲ್ಲಾ ವಿಭಾಗದ ಮುಖ್ಯೋಪಾಧ್ಯಾಯರು, ಶಿಕ್ಷಕರುಗಳು, ಬಿ. ಇಡಿ.ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

೪೩ನೇ ರಾಷ್ಟೀಯ ಯೋಗಾಸನ ಸ್ಪರ್ಧೆಯಲ್ಲಿ ಡಿ. ನಾಗರಾಜ್‌ಗೆ ಬೆಳ್ಳಿ ಪದಕ

ಇಂಡಿಯನ್ ಯೋಗ ಫೆಡರೇಷನ್ ಮತ್ತು ಯೋಗ ಜಾರ್ಖಂಡ್ ವತಿಯಿಂದ ಕ್ರೀಡೋ ವರ್ಲ್ಡ್ ಸ್ಕೂಲ್, ಧಾನ್‌ಬಾದ್, ಜಾರ್ಖಂಡ್‌ನಲ್ಲಿ ಆಯೋಜಿಸಲಾಗಿದ್ದ ೪೩ನೇ ರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭದ್ರಾವತಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್‌ನ ಡಿ. ನಾಗರಾಜ್‌ರವರು ಭಾಗವಹಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.  
    ಭದ್ರಾವತಿ : ಇಂಡಿಯನ್ ಯೋಗ ಫೆಡರೇಷನ್ ಮತ್ತು ಯೋಗ ಜಾರ್ಖಂಡ್ ವತಿಯಿಂದ ಕ್ರೀಡೋ ವರ್ಲ್ಡ್ ಸ್ಕೂಲ್, ಧಾನ್‌ಬಾದ್, ಜಾರ್ಖಂಡ್‌ನಲ್ಲಿ ಆಯೋಜಿಸಲಾಗಿದ್ದ ೪೩ನೇ ರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್‌ನ ಡಿ. ನಾಗರಾಜ್‌ರವರು ಭಾಗವಹಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.  
    ನಾಗರಾಜ್‌ರವರು ೬೦ ವರ್ಷ ಮೇಲ್ಪಟ್ಟ ವಯೋಮಾನದವರ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದು, ಇವರು ಈಗಾಗಲೇ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು ಹಾಗು ವಿವಿಧ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. 
    ಇಂಡಿಯನ್ ಯೋಗ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷನ್ ಪುರೋಹಿತ್, ಮೃನಾಲ್ ಚಕ್ರಬರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಾಗರಾಜ್ ರವರನ್ನು ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಡಾ. ರಾಮಮೂರ್ತಿ ಮತ್ತು ಕಾರ್ಯದರ್ಶಿ ಡಿ. ಪುಟ್ಟೇಗೌಡ ಅಭಿನಂದಿಸಿದ್ದಾರೆ. 

Friday, January 3, 2025

೭೦ ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಸೌಲಭ್ಯ ನೋಂದಣಿ


    ಭದ್ರಾವತಿ: ಭಾರತೀಯ ಜನತಾ ಪಕ್ಷದ ತಾಲೂಕು ಮಂಡಲದ ಮಾಜಿ ಅಧ್ಯಕ್ಷರಾದ ಜಿ. ಆನಂದಕುಮಾರ್(ನಗರ ಘಟಕ) ಮತ್ತು ಮಂಗೋಟೆ ರುದ್ರೇಶ್(ಗ್ರಾಮಾಂತರ ಘಟಕ) ನೇತೃತ್ವದಲ್ಲಿ ಜ.೫ರ ಭಾನುವಾರ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಆರೋಗ್ಯ ಸೌಲಭ್ಯ ನೋಂದಣಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು, ಈ ಯೋಜನೆಯಡಿ ೭೦ ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ ೫ ಲಕ್ಷ ರು.ಗಳವರೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೌಲಭ್ಯ ಒದಗಿಸಲಾಗುವುದು. 
    ಈ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸುವ ಉದ್ದೇಶದಿಂದ ಸಂಸದ ಬಿ.ವೈ ರಾಘವೇಂದ್ರರವರು ಜಿಲ್ಲೆಯಾದ್ಯಂತ ಅಭಿಯಾನ ಕೈಗೊಂಡಿದ್ದು, ಇದಕ್ಕೆ ಪೂರಕವಾಗುವಂತೆ ನಗರದಲ್ಲಿ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರ ನೇತೃತ್ವದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹೊಸಮನೆ ಮುಖ್ಯ ರಸ್ತೆ(ಸಂತೆ ಮೈದಾನದ ಎದುರು) ಜಿ. ಆನಂದಕುಮಾರ್‌ರವರ ಬಿಜೆಪಿ ಕಛೇರಿಯಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಅಭಿಯಾನ ನಡೆಯಲಿದೆ. 
    ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ ಹೊಂದಿರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಮೊ: ಸಂಖ್ಯೆ ೯೮೪೫೭೯೧೯೯೪ ಅಥವಾ ೯೦೧೯೫೬೪೧೮೮ ಕರೆ ಮಾಡಬಹುದಾಗಿದೆ. 

ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭ : ಶಿಕ್ಷಕರಿಗೆ ಪರಿಪೂರ್ಣತೆ ಅಗತ್ಯ

ಭದ್ರಾವತಿ ನಗರದ ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಗರಸಭೆ ವಾರ್ಡ್ ನಂ.೯ರ ಭದ್ರಾ ಕಾಲೋನಿ ಭದ್ರಾ ಪ್ರೌಢಶಾಲೆಯಲ್ಲಿ ನಡೆಯಿತು.
    ಭದ್ರಾವತಿ : ನಗರದ ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಗರಸಭೆ ವಾರ್ಡ್ ನಂ.೯ರ ಭದ್ರಾ ಕಾಲೋನಿ ಭದ್ರಾ ಪ್ರೌಢಶಾಲೆಯಲ್ಲಿ ನಡೆಯಿತು.
     ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್ ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕ ಶಿವ್ಯಾನಾಯ್ಕ ಮಾತನಾಡಿ, ಜೀವನದಲ್ಲಿ ಶಿಕ್ಷಕರು ಶಿಸ್ತನ್ನು ಕಾಪಾಡಿಕೊಳ್ಳಬೇಕು ಸಮಯ ಪಾಲನೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಒಂದು ಗಂಟೆ ಬೋಧಿಸಲು ನಾವು ಮೂರು ಗಂಟೆಗಳ ಕಲಿಕೆ ಮಾಡಬೇಕಾದ ಅಗತ್ಯತೆ ಇದೆ. ಎಲ್ಲಾ ವಿಷಯಗಳಲ್ಲೂ ಪರಿಪೂರ್ಣತೆ ಹೊಂದಬೇಕು. ಆಗ ಮಾತ್ರ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯ ಎಂದರು. 
    ಶಿಕ್ಷಕ ಶ್ರೀನಿವಾಸ್ ಜಾಜೂರ್ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ  ಹೊಸ ವರುಷದಲ್ಲಿ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಜೀವನದ ಗುರಿ ಮುಟ್ಟುವ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾಗಿದೆ ಎಂದರು. 
    ಶಿವಕುಮಾರ್ ಹೊನ್ನತ್ತಿ, ಶಶಿಕುಮಾರ್, ಬಾಲು ಹಾಗು ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.