ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಟೈಲರ್‍ಸ್ ವೃತ್ತಿ ಬಾಂಧವರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ' ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಕೆ. ಸುಂದರ್ ಬಾಬು ಉದ್ಘಾಟಿಸಿದರು.
ಭದ್ರಾವತಿ: ಟೈಲರ್ ಗಳಿಗೂ ಕಟ್ಟಡ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳು ದೊರಕಿ ಉತ್ತಮ ಜೀವನ ನಡೆಸುವಂತಾಗಬೇಕೆಂದು ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಕೆ. ಸುಂದರ್ ಬಾಬು ಹೇಳಿದರು.
ಅವರು ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಟೈಲರ್‍ಸ್ ವೃತ್ತಿ ಬಾಂಧವರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ' ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸಂಘದಲ್ಲಿ ಹೆಸರು ನೋಂದಾಯಿಸಿ ಕೊಳ್ಳುವುದು ಎಷ್ಟು ಮುಖ್ಯವೋ, ಪ್ರತಿ ವರ್ಷ ಸಂಘದ ಸದಸ್ಯತ್ವ ಅಗತ್ಯ ದಾಖಲೆಗಳೊಂದಿಗೆ ನವೀಕರಣ ಮಾಡಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದು ತಿಳಿಸುವ ಜೊತೆಗೆ ಸ್ಮಾರ್ಟ್ ಕಾರ್ಡ್ ಪಡೆಯುವ ಬಗ್ಗೆ ಮತ್ತು ಟೈಲರ್‍ಸ್ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತಾಲೂಕು ಟೈಲರ್‍ಸ್ ಸಂಘದ ಅಧ್ಯಕ್ಷ ಎ.ಎಸ್ ಸುಂದರ್ ಮಾತನಾಡಿ, ಕೋವಿಡ್ ಮಹಾಮಾರಿಯ ಆರ್ಭಟದಿಂದ ಸಾಕಷ್ಟು ಜನ ಟೈಲರ್ ವೃತ್ತಿ ಬಾಂಧವರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಬಡವರ ಬದುಕು ಹಾಳಾಗಿದ್ದು, ಇಂತಹ ಸಂದರ್ಭದಲ್ಲಿ ಸಹಾಯ ಹಸ್ತ ಅನಿವಾರ್ಯವಾಗಿರುವುದನ್ನು ಮನಗಂಡು ತಾಲೂಕು ಟೈಲರ್‍ಸ್ ಸಂಘದಿಂದ ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ಕೋವಿಡ್ ತಡೆಗಟ್ಟಲು ವ್ಯಾಕ್ಸಿನೇಷನ್ ಕೊಡಿಸಿದ್ದೇವೆ. ಸಂಘದ ನೋಂದಾಯಿತ ಸದಸ್ಯರಿಗೆ ಈ-ಶ್ರಮ್ ಕಾರ್ಡ್ ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಕಾರ್ಡ್ ವಿತರಿಸಲಾಗಿದೆ ಎಂದರು.
ತಾಲೂಕಿನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದು, ಇನ್ನೂ ಸಂಘದಲ್ಲಿ ಹೆಸರು ನೋಂದಾಯಿಸಿಕೊಳ್ಳದ ವೃತ್ತಿ ಬಾಂಧವರು ತಾಲೂಕು ಟೈಲರ್‍ಸ್ ಸಂಘ, ಬಸವ ಕಾಂಪ್ಲೆಕ್ಸ್, ಚನ್ನಗಿರಿ (ಡಾ. ರಾಜ್ ಕುಮಾರ್) ರಸ್ತೆ, ಭದ್ರಾವತಿ. ಮೊಬೈಲ್ ಸಂಖ್ಯೆ ೯೮೮೦೯೦೭೯೧೦ ಈ ವಿಳಾಸದಲ್ಲಿ ಸಂಪರ್ಕಿಸಿ, ಹೆಸರು ನೋಂದಾಯಿಸಿ ಕೊಳ್ಳಬೇಕೆಂದು ಸುಂದರ್ ವೃತ್ತಿ ಬಾಂಧವರಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ರಾಘವೇಂದ್ರರಾವ್, ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಎನ್. ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment