Friday, December 18, 2020

ಮತದಾರರ ದಿನಾಚರಣೆ ಅಂಗವಾಗಿ ಡಿ.೧೯ರಂದು ಪ್ರೌಢ ಶಾಲಾ ಮಕ್ಕಳಿಗೆ ಸ್ಪರ್ಧಾತ್ಮಕ ಚಟುವಟಿಕೆ

ಭದ್ರಾವತಿ, ಡಿ. ೧೮: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತಾಲೂಕಿನ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರೌಢ ಶಾಲಾ ಮಕ್ಕಳಿಗೆ ತಾಲೂಕು ಹಂತದ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಡಿ.೧೯ರಂದು ಬೆಳಿಗ್ಗೆ ೯.೧೫ ಹಳೇನಗರದ ಬಿಆರ್‌ಸಿ ಕಚೇರಿಯಲ್ಲಿ ಪ್ರಬಂಧ ಸ್ಪರ್ಧೆ(ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ), ಪೋಸ್ಟರ್ ಮತ್ತು ಕೋಲಾಜ್ ಮೇಕಿಂಗ್ ಹಾಗು ರಸಪ್ರಶ್ನೆ ಒಟ್ಟು ೪ ಸ್ಪರ್ಧೆಗಳು ನಡೆಯಲಿವೆ.
ಶಾಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಮತದಾರರ ಸಾಕ್ಷರತಾ ಸಂಘಗಳ ತಾಲೂಕು ಅಧಿಕಾರಿಯಾದ ನವೀದ್ ಅಹ್ಮದ್ ಪರ್ವೀಜ್, ಮೊ: ೯೮೮೬೨೧೪೧೬೦ ರವರಿಗೆ ಸಂಪರ್ಕಿಸುವಂತೆ ಕೋರಲಾಗಿದೆ.


ಡಿ.೧೯ರಂದು ೪ನೇ ವರ್ಷದ ದೀಪೋತ್ಸವ

ಭದ್ರಾವತಿ, ಡಿ. ೧೮: ನಗರದ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ.೧೯ರಂದು ೪ನೇ ವರ್ಷದ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.
    ಈ ಸಂಬಂಧ ಬೆಳಿಗ್ಗೆ ೫.೩೦ಕ್ಕೆ ಅಭಿಷೇಕ, ೯.೩೦ಕ್ಕೆ ಹೋಮ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ, ಸಂಜೆ ಪಲ್ಲಕ್ಕಿ ಉತ್ಸವ ದೀಪಾರಾಧನೆ,ರಾತ್ರಿ ೮.೩೦ಕ್ಕೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.  

‘ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್’ : ವಿಐಎಸ್‌ಎಲ್ ಕಾರ್ಖಾನೆ ಸಂತಸ


 'ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್' ಪ್ರಶಸ್ತಿ ಪತ್ರ ಮತ್ತು ಆವಾರ್ಡ್
ಭದ್ರಾವತಿ, ಡಿ. ೧೮: ಹಿರಿಯ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಒಂದು ವ್ಯಾಪಾರಿ ಕಂಪನಿಯಾಗಿರುವ ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ 'ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್' ಈ ಬಾರಿ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಲಭಿಸಿದ್ದು, ಈ ಹಿನ್ನಲೆಯಲ್ಲಿ ಉಕ್ಕು ಪ್ರಾಧಿಕಾರದ ಅಧೀನದಲ್ಲಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂತಸ ವ್ಯಕ್ತಪಡಿಸಿದೆ.
    ಈ ನಡುವೆ ಪ್ರಶಸ್ತಿ ಲಭಿಸಿರುವ ಸಂಭ್ರಮ ಪತ್ರಿಕೆಗಳೊಂದಿಗೆ ಹಂಚಿಕೊಂಡಿರುವ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿ, ಪ್ರಾಧಿಕಾರ ನಿರಂತರವಾಗಿ ಪರಿಸರ ರಕ್ಷಣೆಗೆ ಹೆಚ್ಚಿನ ಕಾಳಜಿವಹಿಸಿರುವ ಪರಿಣಾಮ ಈ ಪ್ರಶಸ್ತಿ ಲಭಿಸಿದೆ. ಪ್ರಾಧಿಕಾರದ ಅಧೀನದಲ್ಲಿರುವ ಕಾರ್ಖಾನೆಗಳಲ್ಲಿ ಸಾಧ್ಯವಾದಷ್ಟು ಎಲ್ಲಾ ರೀತಿಯಲ್ಲೂ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಉನ್ನತಮಟ್ಟದ ವ್ಯವಸ್ಥೆಗಳೊಂದಿಗೆ ವ್ಯರ್ಥವಾಗುವ ನೀರಿನ ಸಮರ್ಪಕ ನಿರ್ವಹಣೆ ಹಾಗು ಮರುಬಳಕೆ, ಇನ್ನಿತರ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ. ಕಾರ್ಖಾನೆಯಲ್ಲಿ ಮಾತ್ರವಲ್ಲದೆ ನಗರಾಡಳಿತದಲ್ಲೂ ಈ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಎಲ್ಲಾ ಕ್ರಮಗಳಿಂದಾಗಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಮುನ್ನಡೆಯಲ್ಲಿ ಸಾಗಿದೆ ಎಂದು ತಿಳಿಸಿದ್ದಾರೆ.
   ಪ್ರಶಸ್ತಿಯನ್ನು ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ ಕಂಪನಿ ಅಧ್ಯಕ್ಷರು ಹಾಗು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾ. ಎಂ.ಎನ್ ವೆಂಕಟಚಲಯ್ಯ ನೀಡಿ ಗೌರವಿಸಿದರು.  

ಬಿಡಾಡಿ ದನಗಳ ರಸ್ತೆ ಅಪಘಾತ ತಪ್ಪಿಸಲು ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್

ಭದ್ರಾವತಿಯಲ್ಲಿ ಜೀವಾಮೃತ ಚಾರಿಟೇಬಲ್ ಸೇವಾ ಟ್ರೆಸ್ಟ್ ವತಿಯಿಂದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯ ಕಳೆದ ೨ ದಿನಗಳಿಂದ ರಾತ್ರಿ ವೇಳೆ ನಡೆಯುತ್ತಿದೆ.
ಭದ್ರಾವತಿ, ಡಿ. ೧೮ : ಇತ್ತೀಚೆಗೆ ಬಿಡಾಡಿ ದನಗಳು ರಸ್ತೆ ಅಪಘಾತಕ್ಕೆ ಒಳಗಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಜೀವಾಮೃತ ಚಾರಿಟೇಬಲ್ ಸೇವಾ ಟ್ರೆಸ್ಟ್ ವತಿಯಿಂದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯ ಕಳೆದ ೨ ದಿನಗಳಿಂದ ರಾತ್ರಿ ವೇಳೆ ನಡೆಯುತ್ತಿದೆ.
ರಾತ್ರಿ ವೇಳೆ ವಾಹನಗಳ ಚಾಲಕರಿಗೆ ರಸ್ತೆಯಲ್ಲಿರುವ ಬಿಡಾಡಿ ದನಗಳು ತಕ್ಷಣ ಗೋಚರಿಸುವಂತಾಗಬೇಕು. ಇದರಿಂದ ಅಪಘಾತಗಳ ಪ್ರಮಾಣ ಕಡಿಮೆಯಾಗುವ ಮೂಲಕ ಬಿಡಾಡಿ ದನಗಳ ರಕ್ಷಣೆ ಮಾಡಿದಂತಾಗುತ್ತದೆ ಎಂಬ ಕಾಳಜಿಯೊಂದಿಗೆ ಟ್ರಸ್ಟ್ ವತಿಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ.  ಹಳೇನಗರದ ಶ್ರೀ ಬಸವೆಶ್ವರ ವೃತ್ತ, ಚನ್ನಗಿರಿ ರಸ್ತೆ, ಬಿ.ಎಚ್ ರಸ್ತೆ ಮತ್ತು ಬೈಪಾಸ್ ರಸ್ತೆಯಲ್ಲಿದ್ದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಈ ಕಾರ್ಯದಲ್ಲಿ ಟ್ರಸ್ಟ್ ಪ್ರಮುಖರು ಪಾಲ್ಗೊಂಡಿದ್ದರು.

Thursday, December 17, 2020

ಸರ್ಕಾರಿ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯ ಕುರಿತು ಅವಹೇಳನಕಾರಿ ವಾಕ್ಯ

ತಕ್ಷಣ ತೆಗೆದುಹಾಕಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ಬ್ರಾಹ್ಮಣ ಸಮುದಾಯ ಕುರಿತು ರಾಜ್ಯ ಸರ್ಕಾರ ಮುದ್ರಿಸಿರುವ ೬ ಮತ್ತು ೯ನೇ ತರಗತಿ ಪಠ್ಯ ಪುಸ್ತಕದಲ್ಲಿನ ಅವಹೇಳನಕಾರಿ ವಾಕ್ಯಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ಶುಕ್ರವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧೮: ಬ್ರಾಹ್ಮಣ ಸಮುದಾಯ ಕುರಿತು ರಾಜ್ಯ ಸರ್ಕಾರ ಮುದ್ರಿಸಿರುವ ೬ ಮತ್ತು ೯ನೇ ತರಗತಿ ಪಠ್ಯ ಪುಸ್ತಕದಲ್ಲಿನ ಅವಹೇಳನಕಾರಿ ವಾಕ್ಯಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ಶುಕ್ರವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಶಾಲಾ ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ವಿಷಯವನ್ನು ಸೇರಿಸಿರುವುದು ಬಹಳ ಅಘಾತಕಾರಿಯಾಗಿದೆ. ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ. ವೇದಗಳ ಕಾಲದಲ್ಲಿ ಆಚರಿಸುತ್ತಿದ್ದ ಯಜ್ಞ ಮತ್ತು ಯಾಗಗಳಲ್ಲಿ ಆಹಾರ ಧಾನ್ಯ, ಹಾಲು, ತುಪ್ಪವನ್ನು ಹವಿಸ್ಸು ಎಂದು ದಹಿಸುತ್ತಿದ್ದರಿಂದ ಆಹಾರದ ಅಭಾವ ಸೃಷ್ಟಿಯಾಯಿತು ಎಂದು ಕಪೋಲಕಲ್ಪಿತವಾಗಿ ಉಲ್ಲೇಖಿಸಿ ಸನಾತನ ಸಂಪ್ರದಾಯ ಆಚರಣೆಗೆ ಅವಮಾನ ಮಾಡಿರುತ್ತಾರೆ. ಅಲ್ಲದೆ ಇದೆಲ್ಲವನ್ನು ಬ್ರಾಹ್ಮಣರೇ ಮಾಡುತ್ತಿದ್ದರೆಂದು ತಪ್ಪು ಅಭಿಪ್ರಾಯ ಮೂಡುವಂತೆ ನಮೂದಿಸಿರುತ್ತಾರೆ. ಇದು ನಮ್ಮ ಸನಾತನ ಧರ್ಮ ಹಾಗು ಸಂಪ್ರದಾಯಕ್ಕೆ ಘೋರ ಅಪರಾಧ, ಅಪಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆಯಾಯಿತು ಎಂಬ ಸತ್ಯಕ್ಕೆ ದೂರವಾದ ಅಂಶಗಳನ್ನು ಪಠ್ಯದಲ್ಲಿ ಉಲ್ಲೇಖಿಸಿರುವುದು ವಿಷಾದನೀಯ. ಇದು ಬ್ರಾಹ್ಮಣ ಸಮಾಜವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಪ್ರತಿಬಿಂಬಿಸುವ ಹಾಗು ನಾಡಿನ ಯುವ ಜನತೆಗೆ ತಪ್ಪು ಸಂದೇಶ ನೀಡುವ ಹೇಯ ಕೆಲಸವಾಗಿದೆ. ಈ ಹಿನ್ನಲೆಯಲ್ಲಿ ಸತ್ಯಕ್ಕೆ ದೂರವಾದ ವಾಕ್ಯಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿದರು.
    ಬ್ರಾಹ್ಮಣ ಸಭಾ ತಾಲೂಕು ಅಧ್ಯಕ್ಷ ಎಂ.ಎಸ್ ಜನರ್ಧನ ಅಯ್ಯಂಗಾರ್, ಉಪಾಧ್ಯಕ್ಷರಾದ ಡಿ. ಸತ್ಯನಾರಾಯಣರಾವ್, ಜಿ. ರಮಾಕಾಂತ್, ಪ್ರಧಾನ ಕಾರ್ಯದರ್ಶಿ ಜಿ. ರಮೇಶ್, ಖಜಾಂಚಿ ಕೆ. ಮಂಜುನಾಥ್, ಪ್ರಮುಖರಾದ ಸುರೇಶ್, ರಾಘವೇಂದ್ರಚಾರ್, ಸ್ವರ್ಣ ನಾಗರಾಜ್, ಕೇಶವಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾನೂನು ಬಾಹಿರವಾಗಿ ತಂಬಾಕು ಮಾರಾಟ : ದಾಳಿ

ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.
    ಭದ್ರಾವತಿ, ಡಿ. ೧೭: ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.
     ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಮಂಡಳಿ ಕಾರ್ಯಕ್ರಮ ಅಧಿಕಾರಿ ಡಾ. ಬಿ.ಎಫ್ ಶಂಕರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ಜಿಲ್ಲಾ ಸಲಹೆಗಾರ ಹೇಮಂತ್ ರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಜಿ.ಮಂಜುನಾಥ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಫರ್ನಾಂಡಿಸ್, ಪಿಎಸ್‌ಐ ಎಂ.ಮೋಹನ್, ರಾಜಸ್ವ ನಿರೀಕ್ಷಕ ವೆಂಕಟಾಚಲ, ತಾಲೂಕು ಹಿರಿಯ ಆರೋಗ್ಯ ಸಹಾಯಕ ನೀಲೇಶ್ ರಾಜ್ ಇನ್ನಿತರರು ಪಾಲ್ಗೊಂಡಿದ್ದರು.

ಡಿ.೨೭ರಂದು ಪ್ರೊ ಕಬಡ್ಡಿ ಪಂದ್ಯಾವಳಿಗೆ ಕ್ರೀಡಾಪಟುಗಳ ಆಯ್ಕೆ

ಭದ್ರಾವತಿ, ಡಿ. ೧೭: ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಇದರ ಅಂಗವಾಗಿ ಡಿ.೨೭ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ.
   ಆಯ್ಕೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕ್ರೀಡಾಪಟುಗಳು ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿಯೊಂದಿಗೆ ಬೆಳಿಗ್ಗೆ ೯ ಗಂಟೆಗೆ ಹಾಜರಾಗತಕ್ಕದ್ದು. ಪ್ರತಿ ತಂಡಕ್ಕೆ ೧೦ ಕ್ರೀಡಾಪಟುಗಳು ಒಳಗೊಂಡಂತೆ ಒಟ್ಟು ೮ ತಂಡಗಳ ಆಯ್ಕೆ ನಡೆಯಲಿದೆ.
   ಹೆಚ್ಚಿನ ಮಾಹಿತಿಗೆ ಕಬಡ್ಡಿ ತರಬೇತಿದಾರ ಎಚ್.ಆರ್ ರಂಗನಾಥ್, ಮೊ: ೮೯೭೧೨೫೯೫೯೧, ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಎಚ್.ಎನ್ ಕೃಷ್ಣೇಗೌಡ, ಮೊ: ೯೯೦೨೨೧೦೩೫೫, ತೀರ್ಪುಗಾರ ಎಂ.ಬಿ ಬಸವರಾಜ್, ಮೊ: ೯೪೪೯೪೭೨೮೬೩ ಮತ್ತು ಅಂತರಾಷ್ಟ್ರೀಯ ತೀರ್ಪುಗಾರ ಎಸ್.ಎನ್ ಸಿದ್ದಯ್ಯ, ಮೊ: ೯೧೬೪೦೪೭೭೭೭ ಸಂಖ್ಯೆಗೆ ಕರೆ ಮಾಡಬಹುದಾಗಿದೆ.