Wednesday, December 8, 2021

ಅಮಲೋದ್ಭವಿ ಮಾತೆಯ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವಕ್ಕೆ ತೆರೆ


ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವದಲ್ಲಿ ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ.೮: ನಗರದ ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವ ಬುಧವಾರ ಆಡಂಬರದ ಬಲಿ ಪೂಜೆ, ವಿಶೇಷ ದಾನಿಗಳ ಸರಣೆ ಮತ್ತು ಸನ್ಮಾನ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.
    ಜಗದ್ಗುರು ಪೋಪ್‌ರವರ ಕರೆಯೋಲೆಯಂತೆ ೨೦೨೩ರಲ್ಲಿ ನಡೆಯುವ ವಿಶ್ವ ಸಿನೋದ್ ಸಭೆಯ ಸಿದ್ದತಾ ಪ್ರಕ್ರಿಯೆಗಳಿಗೆ ಪೂರಕವಾಗಿರುವಂತೆ  'ಅಮಲೋದ್ಭವಿ ಮಾತೆಯೊಡನೆ ಅನ್ಯೋನ್ಯತೆ, ಸಹಭಾಗಿತ್ವ ಮತ್ತು ಸುವಾರ್ತಾ ಸೇವೆಯೆಡೆಗೆ ಜೊತೆಯಾಗಿ ನಮ್ಮ ಪಯಣ' ಎಂಬ ಶೀರ್ಷಿಕೆಯೊಂದಿಗೆ ನ.೨೮ ಆರಂಭಗೊಂಡಿದ್ದ ವಾರ್ಷಿಕೋತ್ಸವದಲ್ಲಿ ಪ್ರತಿದಿನ ಸಂಜೆ ಜಪಸರ ಪ್ರಾರ್ಥನೆ, ಪೂಜೆ ಮತ್ತು ಪ್ರಬೋಧನೆಗಳು ಜರುಗಿದವು.
    ಶಿವಮೊಗ್ಗ ಗುಡ್ ಶೆಪರ್ಡ್ ಧರ್ಮಕೇಂದ್ರದ ಗುರು ಫಾದರ್ ವಿರೇಶ್ ಮೋರಾಸ್, ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸಮ್ಮನವರ ಸುವಾರ್ತ ಕೇಂದ್ರದ ಧರ್ಮಗುರು ಫಾದರ್ ವೀನಸ್ ಪ್ರವೀಣ್, ಶಿವಮೊಗ್ಗ ಸೇಕೆರ್ಡ್ ಆರ್ಟ್ ಶಾಲೆ ಪ್ರಾಂಶುಪಾಲ ಫಾದರ್ ಲಾರೆನ್ಸ್, ಹಿರಿಯೂರು ವಿಯಾನ್ನಿ ಪ್ರೇಷಿತರ ಗೃಹದ ನಿರ್ದೇಶಕ ಫಾದರ್ ಸಂತೋಷ್, ಕಾಗದನಗರ ಸಂತ ಜೋಸೆಫ್‌ರ ದೇವಾಲಯದ ಎಸ್‌ಡಿಬಿ ಫಾದರ್ ಡೋಮಿನಿಕ್, ಉಜ್ಜನಿಪುರ ಡಾನ್ ಬೋಸ್ಕೋ ಐಟಿಐ ನಿರ್ದೇಶಕ ಎಸ್‌ಡಿಬಿ ಫಾದರ್ ಆರೋಗ್ಯರಾಜ್ ಮತ್ತು ಹಿರಿಯೂರು ಸ್ವರ್ಗ ಸ್ವೀಕೃತ ಮಾತೆಯ ದೇವಾಲಯದ ಧರ್ಮಗುರು ಫಾದರ್ ಫ್ರಾಂಕ್ಲಿನ್ ಡಿಸೋಜ ಮಾತನಾಡಲಿದ್ದಾರೆ. ಜೇಡಿಕಟ್ಟೆ ಆಶಾಕಿರಣ ನಿರ್ದೇಶಕ ಫಾದರ್ ಪ್ರಕಾಶ್, ಕಡೂರಿನ ನಿತ್ಯಾಧಾರ ಮಾತೆ ದೇವಾಲಯದ ಧರ್ಮಗುರು ಫಾದರ್ ರಾಜೇಂದ್ರ, ಹಾಸನ ಸಂತ ಅಂತೋಣಿಯವರ ದೇವಾಲಯದ ಧರ್ಮಗುರು ಫಾದರ್ ಜೋನಾಸ್ ಪ್ಯಾಟ್ರಿಕ್ ರಾವ್ ಸೇರಿದಂತೆ ಇನ್ನಿತರ ಧರ್ಮಗುರುಗಳು ಭಾಗವಹಿಸಿದ್ದರು.
    ವಾರ್ಷಿಕೋತ್ಸವದ ಅಂಗವಾಗಿ ರೋಗಿಗಳಿಗೆ ವಿಶೇಷ ಪ್ರಾರ್ಥನೆ, ಅಲೋದ್ಭವಿ ಮಾತೆಯ ಭವ್ಯ ತೇರಿನ ಮೆರವಣಿಗೆ, ಭಕ್ತರಿಗೆ ಆಶೀರ್ವಾದ ಹಾಗು ಅನ್ನಸಂತರ್ಪಣೆ, ಆಡಂಬರದ ಬಲಿ ಪೂಜೆ, ವಿಶೇಷ ದಾನಿಗಳ ಸರಣೆ ಮತ್ತು ಸನ್ಮಾನ ಕಾರ್ಯಕ್ರಮಗಳು ಜರುಗಿದವು.
    ದಾನಿಗಳಾದ ಉದ್ಯಮಿ ಎ. ಮಾಧು, ನಗರಸಭಾ ಸದಸ್ಯ ಜಾರ್ಜ್, ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.  ಪಾಲನ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್ ವಂದಿಸಿದರು. ನಗರದ ವಿವಿಧೆಡೆ ಭಕ್ತಾಧಿಗಳು ಪಾಲ್ಗೊಂಡಿದ್ದರು.

No comments:

Post a Comment