Thursday, September 1, 2022

ಗೌರಿ-ಗಣೇಶ ಹಬ್ಬ ಶಾಂತಿಯುತವಾಗಿ ವಿಜೃಂಭಣೆಯಿಂದ ಆಚರಣೆ

ಭದ್ರಾವತಿ ಹೊಸಮನೆ ವ್ಯಾಪ್ತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಯಶಸ್ವಿಯಾಗಿ ನಡೆಯಿತು.
    ಭದ್ರಾವತಿ, ಸೆ. ೧ : ತಾಲೂಕಿನಾದ್ಯಂತ ಗೌರಿ-ಗಣೇಶ ಹಬ್ಬ ಶಾಂತಿಯುತವಾಗಿ ವಿಜೃಂಭಣೆಯಿಂದ ಜರುಗಿತು. ನಗರ ವ್ಯಾಪ್ತಿಯ ಪ್ರಮುಖ ಸಂಘಟನೆಗಳು ಬುಧವಾರ ಸಂಜೆ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದವು.
    ಹೊಸಮನೆ ವ್ಯಾಪ್ತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ, ಶಿವಾಜಿ ವೃತ್ತದಲ್ಲಿರುವ ಓಂ ಹಿಂದೂ ಕೋಟೆ, ಮಾಧವಚಾರ್ ವೃತ್ತದಲ್ಲಿ ಶ್ರೀ ವರಸಿದ್ದಿ ವಿನಾಯಕ ಭಕ್ತ ಮಂಡಳಿ, ಹಾಲಪ್ಪ ವೃತ್ತದಲ್ಲಿ ಗಣಪತಿ ದೇವಸ್ಥಾನ, ಜನ್ನಾಪುರ ವ್ಯಾಪ್ತಿಯಲ್ಲಿ ಶ್ರೀರಾಮರಾಜ್ಯ ನ್ಯೂಟೌನ್ ವಿಐಎಸ್‌ಎಲ್  ಆಸ್ಪತ್ರೆ ಬಳಿ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಪಕ್ಕ ಶ್ರೀ ಸಿದ್ದಿ ವಿನಾಯಕ ಗೆಳೆಯರ ಬಳಗ ಸೇರಿದಂತೆ ವಿವಿಧ ಸಂಘಟನೆಗಳು ಸಂಜೆ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದವು.
     ತಾಲೂಕು ಕಛೇರಿ ರಸ್ತೆ ಕಂಚಿಬಾಗಿಲು ವೃತ್ತ ದುರ್ಗಾಂಬ ದೇವಸ್ಥಾನದ ಬಳಿ ಅಂಬೇಡ್ಕರ್ ಗೆಳೆಯರ ಬಳಗ, ಹೊಸಮನೆ ಮುಖ್ಯ ರಸ್ತೆ ಭೋವಿ ಕಾಲೋನಿ ಶ್ರೀ ವಿನಾಯಕ ಸೇವಾ ಸಮಿತಿ, ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿ  ಡಾ. ರಾಜ್‌ಕುಮಾರ್ ಅಭಿಮಾನಿಗಳು ಹಾಗು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಖಾಸಗಿ ಬಸ್ ನಿಲ್ದಾಣದ ಬಳಿ ಕುವೆಂಪು ಪ್ರವಾಸಿ ವಾಹನ ಚಾಲಕರ ಹಾಗು ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಮಧ್ಯಾಹ್ನದ ವೇಳೆಗೆ ವಿನಾಯಕ ಪ್ರತಿಷ್ಠಾಪನೆ ನೆರವೇರಿಸಿದವು.


ಭದ್ರಾವತಿ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿ ಡಾ. ರಾಜ್‌ಕುಮಾರ್ ಅಭಿಮಾನಿಗಳು ಹಾಗು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿರುವುದು. ವಾರ್ಡ್ ನಗರಸಭಾ ಸದಸ್ಯ ಜಾರ್ಜ್ ಹಾಗು ಸಂಘದ ಪ್ರಮುಖರು ಉಪಸ್ಥಿತರಿದ್ದರು.
    ಹಳೇನಗರದ ಕುಂಬಾರರ ಬೀದಿಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಿನಾಯಕ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಕೊಂಡೊಯ್ಯಲು ಯುವಕರ ದಂಡು ಕಂಡು ಬಂದಿದ್ದು, ಇದೆ ರೀತಿ ಬಿ.ಎಚ್ ರಸ್ತೆ ಹಾಲಪ್ಪ ವೃತ್ತ ಬಳಿ ಮಾರುಕಟ್ಟೆಯಲ್ಲಿ ವಿನಾಯಕ ಮೂರ್ತಿಗಳ ಖರೀದಿಗೆ ಯುವಕರ ದಂಡು ಕಂಡು ಬಂದಿತು. ಕೆಲವು ಸಂಘಟನೆಗಳು ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದವು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದವರು ಹಾಗು ಸಣ್ಣ ಪುಟ್ಟ ಸಂಘಟನೆಗಳು ಬುಧವಾರ ಸಂಜೆಯೇ ಮೂರ್ತಿ ವಿಸರ್ಜನೆ ನಡೆಸಿದವು.
ಈ ಬಾರಿ ಬಹುತೇಕ ಕಡೆ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ವಿಶೇಷ ಎಂದರೆ ಈ ಬಾರಿ ಯಾವುದೇ ಪಕ್ಷದ, ಜನಪ್ರತಿನಿಧಿಗಳ ಫ್ಲೆಕ್ಸ್, ಬ್ಯಾನರ್‌ಗಳು ಕಂಡು ಬಂದಿಲ್ಲ. ಬದಲಿಗೆ ದೇಶ ಭಕ್ತರು, ಸ್ವಾತಂತ್ರ್ಯ ಹೋರಾಟಗಾರರು, ವೀರಾಸೇನಾನಿಗಳ ಭಾವಚಿತ್ರಗಳು ರಾರಾಜಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಚಲನಚಿತ್ರ ನಟ, ಕರ್ನಾಟಕ ರತ್ನ ದಿವಂಗತ ಪುನೀತ್‌ರಾಜ್‌ಕುಮಾರ್ ಅವರ ಬೃಹತ್ ಫ್ಲೆಕ್ಸ್‌ಗಳು ಬಹುತೇಕ ಕಂಡು ಬರುತ್ತಿವೆ.    


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್  ಆಸ್ಪತ್ರೆ ಬಳಿ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಪಕ್ಕ ಶ್ರೀ ಸಿದ್ದಿ ವಿನಾಯಕ ಗೆಳೆಯರ ಬಳಗದ ವತಿಯಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿರುವುದು.

No comments:

Post a Comment