ಅಪೇಕ್ಷ ಮಂಜುನಾಥ್
ಭದ್ರಾವತಿ: ಜ್ಯೂನಿಯರ್ ವಿಷ್ಣವರ್ಧನ್ ಎಂದೇ ಗುರುತಿಸಿಕೊಂಡಿರುವ ಕಾಗದನಗರ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಅಪೇಕ್ಷ ಮಂಜುನಾಥ್ ೩೫ ವರ್ಷಗಳ ವೃತ್ತಿ ಕರ್ತವ್ಯದಿಂದ ನಿವೃತ್ತಿ ಹೊಂದುತ್ತಿದ್ದು, ಈ ಹಿನ್ನಲೆಯಲ್ಲಿ ಜ.೪ರಂದು `ಸಾರ್ಥಕ ಸೇವೆಯ ಸವಿನೆನಪಿನ ಕ್ಷಣದ' ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಪೇಕ್ಷ ಕಲಾ ನೃತ್ಯ ವೃಂದ ಹಾಗು ಸ್ನೇಹ ಬಳಗದ ವತಿಯಿಂದ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಮಧ್ಯಾಹ್ನ ೩ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸ್ನೇಹ ಬಳಗದವರು, ಅಭಿಮಾನಿಗಳು, ಶಿಕ್ಷಕರು, ಕಲಾವಿದರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
ಅಪೇಕ್ಷ ಮಂಜುನಾಥ್ :
ಅಪೇಕ್ಷ ಮಂಜುನಾಥ್‌ರವರು ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ವೃತ್ತಿ ಜೊತೆಯಲ್ಲಿ ನೃತ್ಯ ಕಲಾವಿದರಾಗಿ ಬೆಳೆದು ಅಪೇಕ್ಷ ಕಲಾ ನೃತ್ಯ ವೃಂದ ಆರಂಭಿಸಿ ಆ ಮೂಲಕ ನೂರಾರು ಯುವ ಕಲಾ ಪ್ರತಿಭೆಗಳನ್ನು ಪ್ರೋತ್ಸಾಯಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಕಾರಣಕರ್ತರಾಗಿದ್ದಾರೆ. ಅಲ್ಲದೆ ಮಂಜುನಾಥ್‌ರವರು ಹಿರಿಯ ನಟ, ದಿವಂಗತ ಡಾ. ವಿಷ್ಣುವರ್ಧನ್‌ರವರ ಅಭಿಮಾನಿಯಾಗಿದ್ದು, ಅವರ ಅಭಿನಯದ ಮೂಲಕ ಜ್ಯೂನಿಯರ್ ವಿಷ್ಣುವರ್ಧನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್ಯದ ವಿವಿಧೆಡೆ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಅಭಿನಯ ಪ್ರದರ್ಶಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಪ್ರತಿವರ್ಷ ವಿಷ್ಣುವರ್ಧನ್‌ರವರ ಜನ್ಮದಿನ ಹಾಗು ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ವಿಷ್ಣುವರ್ಧನ್‌ರವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಸಹ ನೀಡುತ್ತಿದ್ದಾರೆ. ಅಲ್ಲದೆ ಅಪೇಕ್ಷ ಕಲಾ ನೃತ್ಯ ವೃಂದ ಮೂಲಕ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ. ಇವರಿಗೆ ಜಿಲ್ಲಾ ಹಾಗು ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ.
No comments:
Post a Comment