Friday, December 27, 2024

ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗ ಪಡೆದುಕೊಂಡು ಮುಂದೆ ಬನ್ನಿ : ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ಭದ್ರಾವತಿ ಹೊಸಸಿದ್ಧಾಪುರ ಎನ್‌ಟಿಬಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಹ್ಯಾದ್ರಿ ಪಬ್ಲಿಕ್ ಸ್ಕೂಲ್ ಕಟ್ಟಡ  ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಆಧುನಿಕ ಯುಗದಲ್ಲಿ ಬೆಳವಣಿಗೆ ಹೊಂದಲು ವಿಫುಲವಾದ ಅವಕಾಶಗಳು ಮುಕ್ತವಾಗಿದ್ದು, ವಿದ್ಯಾರ್ಥಿಗಳು ತಮಗೆ ಲಭ್ಯವಾಗುವ ಅವಕಾಶಗಳ ಸದುಪಯೋಗ ಪಡೆದುಕೊಂಡು ಮುಂದೆ ಬರಬೇಕೆಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. 
    ಅವರು ಹೊಸಸಿದ್ಧಾಪುರ ಎನ್‌ಟಿಬಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಹ್ಯಾದ್ರಿ ಪಬ್ಲಿಕ್ ಸ್ಕೂಲ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
    ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದ್ದು, ಕೇವಲ ಅಕ್ಷರಾಭ್ಯಾಸ, ಅಂಕಗಳಿಕೆಯ ಸ್ಪರ್ಧೆಗೆ ಮಾತ್ರ ಮಕ್ಕಳನ್ನು ಮೀಸಲುಗೊಳಿಸಲು ಸಜ್ಜುಗೊಳಿಸುವ ಬದಲು ಕ್ರಿಯಾತ್ಮಕವಾಗಿ ರೂಪಿಸಬೇಕಾಗಿದೆ. ಪೋಷಕರ ಪಾತ್ರ ಈ ನಿಟ್ಟಿನಲ್ಲಿ ಪ್ರಮುಖವಾಗಿದೆ ಎಂದರು.
    ಶಿಕ್ಷಣ ಸಂಸ್ಥೆಯ ಪ್ರಮುಖರಾದ ಟ್ರಸ್ಟ್ ಕಾರ್ಯದರ್ಶಿ ಕಾಳೇಗೌಡರವರ ರಾಜೀರಹಿತ ತತ್ವ, ಸಿದ್ಧಾಂತ, ನಿಷ್ಟುರ ಸ್ವಭಾವ, ಕಾರ್ಮಿಕ ರಂಗದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಅವರ ಬದ್ಧತೆ ಮಾದರಿಯಾಗಿದೆ ಎಂದು ಸ್ವಾಮೀಜಿಯವರು ಬಣ್ಣಿಸಿದರು. 
    ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿದ್ದ ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ-ಸಂಸ್ಕಾರ ಕಲಿಸಿದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದರು.
    ಹತ್ತು ಹಲವು ಸವಾಲು ಹಾಗೂ ಸಂಕಷ್ಟಗಳ ನಡುವೆಯೂ ಛಲಬಿಡದ ತ್ರಿವಿಕ್ರಮನಂತೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿಬೆಳೆಸಿರುವ ಕಾರ್ಯದರ್ಶಿ ಕಾಳೇಗೌಡರವರ ಕಾರ್ಯವೈಖರಿ ಅನುಕರಣೀಯ ಎಂದು ಶ್ಲಾಘಿಸಿದರು.
    ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಡಾ. ಡಿ. ಪ್ರಭಾಕರ ಬೀರಯ್ಯ ಮತನಾಡಿ, ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.
    ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ ಮಾತನಾಡಿ, ವಿದ್ಯಾವಂತರ ಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಜನೆಮಾಡಿದಾಗ ಮಾತ್ರ ದೇಶ ಪ್ರಗತಿಪಥದತ್ತ ಸಾಗಲು ಸಾಧ್ಯ ಎಂದರು.
    ಕಾರ್ಯದರ್ಶಿ ಕಾಳೇಗೌಡ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಣ ಸಂಸ್ಥೆ ಬೆಳೆದುಬಂದ ದಾರಿ ಹಾಗೂ ಸಿದ್ಧಾಪುರ ಬಡಾವಣೆಯ ಪೋಷಕರು ನೀಡಿದ ಸಹಕಾರ ಸ್ಮರಿಸಿದರು. 
    ಟ್ರಸ್ಟ್ ಅಧ್ಯಕ್ಷ ಪಿ.ದೊರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ಆರ್. ನಾಗರತ್ನ ಅನಿಲ್ ಕುಮಾರ್, ಟ್ರಸ್ಟಿ ಉಷಾ ಕಾಳೇಗೌಡ, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್, ಶಿವಲಿಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.  ಟ್ರಸ್ಟಿ ರವಿಕುಮಾರ್ ವಂದಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

No comments:

Post a Comment