Tuesday, September 13, 2022

ಸರ್ಕಾರಿ ಶಾಲೆ ಗೋಡೆ ಕುಸಿತ : ಹೊಸ ಶಾಲೆ ಮಂಜೂರಾತಿಗೆ ಆಗ್ರಹಿಸಿ ಪ್ರತಿಭಟನೆ

ಕಳೆದ ೨ ದಿನಗಳ ಹಿಂದೆ ಮಳೆ ಸುರಿದ ಪರಿಣಾಮ ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮದ ಸರ್ಕಾರಿ ಶಾಲೆಯೊಂದರ ಗೋಡೆ ಕುಸಿದು ಬಿದ್ದಿದ್ದು, ಹೊಸ ಶಾಲೆ ಮಂಜೂರಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

    ಭದ್ರಾವತಿ, ಸೆ. ೧೩ : ಹೆಚ್ಚಿನ ಮಳೆ ಸುರಿದ ಪರಿಣಾಮ ಕಳೆದ ೨ ದಿನಗಳ ಹಿಂದೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮದ ಸರ್ಕಾರಿ ಶಾಲೆಯೊಂದರ ಗೋಡೆ ಕುಸಿದು ಬಿದ್ದಿದ್ದು, ತುರ್ತು ಕ್ರಮ ಕೈಗೊಳ್ಳುವ ಮೂಲಕ ಹೊಸ ಶಾಲೆಯನ್ನು ಮಂಜೂರು ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
    ಶಾಲೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ ಗ್ರಾಮದ ನಿವಾಸಿ, ತಾಲೂಕು ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣನಾಯ್ಕ ಹಾಗು ಪೋಷಕರು ಮಾತನಾಡಿ, ಸರ್ಕಾರ ಬಜೆಟ್ ಮಂಡನೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಅನುದಾನ ಮೀಸಲಿಡುತ್ತಿದೆ. ಅಲ್ಲದೆ ಸರ್ಕಾರ ಮುನ್ನಡೆಸುವವರು, ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಅದರಲ್ಲೂ ಕನ್ನಡ ಶಾಲೆ ಉಳಿಸಬೇಕೆಂಬ ಮಾತುಗಳನ್ನಾಡುತ್ತಾರೆ. ಆದರೆ ರಾಜ್ಯದೆಲ್ಲೆಡೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಈ ಶಾಲೆ ತುಂಬಾ ಹಳೇಯದಾದ ಹಿನ್ನಲೆಯಲ್ಲಿ ಶಿಥಿಲಗೊಂಡಿದೆ. ಗೋಡೆ ಕುಸಿದಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಮಕ್ಕಳ ಸುರಕ್ಷತೆ ಹಿನ್ನಲೆಯಲ್ಲಿ ತಕ್ಷಣ ಹೊಸ ಶಾಲೆಯನ್ನು ಮಂಜೂರಾತಿ ಮಾಡಬೇಕು. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಛೇರಿ ಮುಂಭಾಗ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಹಳೇ ದ್ವೇಷದ ಹಿನ್ನಲೆಯಲ್ಲಿ ಚಾಕು ಇರಿತ : ಓರ್ವನ ಬಂಧನ

ಭದ್ರಾವತಿ, ಸೆ. ೧೩: ಗಣಪತಿ ವಿಸರ್ಜಣೆ ವೇಳೆ ಇಬ್ಬರು ಯುವಕರ ನಡುವೆ ಹಳೇ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕಳೆದ ೨ ದಿನಗಳ ಹಿಂದೆ ಜಗಳ ನಡೆದಿದ್ದು, ಈ ನಡುವೆ ಓರ್ವನಿಗೆ ಚಾಕುವಿನಿಂದ ಇರಿಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
    ನಗರದ ಹೊರವಲಯದ ಬೈಪಾಸ್ ರಸ್ತೆ ಸಮೀಪದಲ್ಲಿರುವ ಶಿವರಾಮ ನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ರಾತ್ರಿ ಮಂಜುನಾಥ್ ಮತ್ತು ಮನು ಎಂಬ ಇಬ್ಬರು ಯುವಕರ ನಡುವೆ ಹಳೇ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಜಗಳ ನಡೆದಿದ್ದು, ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥ್‌ಗೆ ಮನು ಅಲಿಯಾಸ್ ಮನೋಜ್ ಚಾಕುವಿನಿಂದ ಇರಿದು ಪರಾರಿಯಾಗಿದ್ದನು ಎನ್ನಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೆ.೧೫ರಂದು ಸರ್.ಎಂ.ವಿ ೧೬೨ನೇ ಜನ್ಮದಿನ

    ಭದ್ರಾವತಿ, ಸೆ. ೧೩ : ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ೧೬೨ನೇ ಜನ್ಮದಿನಾಚರಣೆ ಸೆ.೧೫ರಂದು ಬೆಳಿಗ್ಗೆ ೧೦೩೦ಕ್ಕೆ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ.
    ಸಂಸದ ಬಿ.ವೈ  ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್, ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಸೆ.೧೬ರಂದು ಸಾಮಾನ್ಯ ಸಭೆ

    ಭದ್ರಾವತಿ, ಸೆ. ೧೩ : ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಸೆ.೧೬ರಂದು ಬೆಳಿಗ್ಗೆ ೧೧ ಗಂಟೆಗೆ ಸಾಮಾನ್ಯ ಸಭೆ ನಡೆಯಲಿದೆ.
    ಸದಸ್ಯರು ಸಭೆಗೆ ಆಗಮಿಸಿ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ. ಚನ್ನಪ್ಪ ಅವರು ಪ್ರಭಾರ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ವಾರ್ಡ್ ನಂ.೨ರ ಕಾಂಗ್ರೆಸ್ ಸದಸ್ಯೆ ಗೀತಾರಾಜ್‌ಕುಮಾರ್ ಅವರು ಒಪ್ಪಂದದಂತೆ ಮೊದಲ ೧೦ ತಿಂಗಳ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಉಪಾಧ್ಯಕ್ಷ ಚನ್ನಪ್ಪ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಾರೆ.

Monday, September 12, 2022

ಸಾವಯವ ಕೃಷಿ, ಸಾವಯವ ಪ್ರಮಾಣೀಕರಣ, ಮೌಲ್ಯವರ್ಧನೆ ಕುರಿತು ತರಬೇತಿ


ಭದ್ರಾವತಿಯಲ್ಲಿ ಕೃಷಿ ಇಲಾಖೆ ವತಿಯಿಂದ ಬೆಂಗಳೂರಿನ ಧರ್ಮ ಚಕ್ರ ಸಂಸ್ಥೆ ಸಹಯೋಗದೊಂದಿಗೆ 'ಸಾವಯವ ಸಿರಿ' ಯೋಜನೆಯಡಿ ರೈತರಿಗೆ ಸಾವಯವ ಕೃಷಿ , ಸಾವಯವ ಪ್ರಮಾಣೀಕರಣ ಹಾಗೂ ಮೌಲ್ಯವರ್ಧನೆ ಬಗ್ಗೆ ತರಬೇತಿ ಆಯೋಜಿಸಲಾಗಿತ್ತು.

    ಭದ್ರಾವತಿ, ಸೆ. ೧೨ : ಕೃಷಿ ಇಲಾಖೆ ವತಿಯಿಂದ ಬೆಂಗಳೂರಿನ ಧರ್ಮ ಚಕ್ರ ಸಂಸ್ಥೆ ಸಹಯೋಗದೊಂದಿಗೆ 'ಸಾವಯವ ಸಿರಿ' ಯೋಜನೆಯಡಿ ರೈತರಿಗೆ ಸಾವಯವ ಕೃಷಿ , ಸಾವಯವ ಪ್ರಮಾಣೀಕರಣ ಹಾಗೂ ಮೌಲ್ಯವರ್ಧನೆ ಬಗ್ಗೆ ತರಬೇತಿ ಆಯೋಜಿಸಲಾಗಿತ್ತು.
    ಕೃಷಿ ವಿಜ್ಞಾನ ಕೇಂದ್ರದ ಆಹಾರ ತಜ್ಞೆ ಜ್ಯೋತಿ ರಾಥೋಡ್ ಮಾತನಾಡಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಿದರು. ಸಾವಯವ ಪ್ರಮಾಣೀಕರಣ ಕುರಿತು ನಯನ ಮಾಹಿತಿ ನೀಡಿದರು.
    ಸಹಾಯಕ ಕೃಷಿ ನಿರ್ದೇಶಕ ಬಿ.ಸಿ ಶಶಿಧರ್ ಮಾತನಾಡಿ, ರೈತ ಬಾಂಧವರು ಪಿ.ಎಂ ಕಿಸಾನ್ ಯೋಜನೆಯಡಿ ತಮ್ಮ ೧೨ನೇ ಕಂತಿನ ಸಹಾಯಧನ ಪಡೆಯಬೇಕಾದಲ್ಲಿ ಸೆ. ೧೪ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಕೋರಿದರು.
    ಕೃಷಿ ಅಧಿಕಾರಿ ಸುನಿತಾ,  ಸಂದೀಪ್ ಕುಮಾರ್, ತಾಲೂಕು ವ್ಯವಸ್ಥಾಪಕ ಬಿ. ರಾಕೇಶ್ ಹಾಗೂ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕುಡಿಯುವ ನೀರಿನ ಟೆಂಡರ್ ಪ್ರಕ್ರಿಯೆ ತುರ್ತಾಗಿ ಮುಗಿಸಿ, ಕಾಮಗಾರಿ ಆರಂಭಿಸಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಅಭಿಯಂತರರಿಗೆ ಮನವಿ

ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗಳ ಟೆಂಡರ್ ಪ್ರಕ್ರಿಯೆ ತುರ್ತಾಗಿ ಮುಗಿಸಿ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್ , ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಅವರಿಗೆ ಮನವಿ ಸಲ್ಲಿಸಲಾಗಿದೆ.  

    ಭದ್ರಾವತಿ, ಸೆ. ೧೨: ಕುಡಿಯುವ ನೀರಿನ ಯೋಜನೆಗಳ ಟೆಂಡರ್ ಪ್ರಕ್ರಿಯೆ ತುರ್ತಾಗಿ ಮುಗಿಸಿ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್ , ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಅವರಿಗೆ ಮನವಿ ಸಲ್ಲಿಸಲಾಗಿದೆ.
    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮ ಪಂಚಾಯಿತಿಗಳ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿರುವುದನ್ನು ಮನಗಂಡು ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಿವಮೊಗ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತ ನೈರ್ಮಲ್ಯ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ೨೦೨೩ರ ಜನವರಿ ತಿಂಗಳಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಹಾಗು ರಾಜ್ಯ ನಾಯಕರು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಸುಮಾರು ೪೮ ಕೋ. ರು. ವೆಚ್ಚದ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ಉಂಬ್ಳೆಬೈಲು, ಕಲ್ಲಹಳ್ಳಿ ಮತ್ತು ೨೮ ಗ್ರಾಮಗಳ ೮.೨೪ ಕೋ. ರು. ವೆಚ್ಚದ ದೊಣಬಘಟ್ಟ, ೪.೯೮ ಕೋ. ರು. ವೆಚ್ಚದ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ, ೩ ಕೋ. ರು. ವೆಚ್ಚದ ಕಂಬದಾಳ್ ಹೊಸೂರು ಮತ್ತು ೨೧ ಹಳ್ಳಿಗಳಲ್ಲಿ, ೨೬.೯೩ ಕೋ. ರು. ವೆಚ್ಚದ ಮಾರಶೆಟ್ಟಿ ಹಳ್ಳಿ ಮತ್ತು ೨೩ ಹಳ್ಳಿಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಟೆಂಡರ್ ಪ್ರಕ್ರಿಯೆ ತುರ್ತಾಗಿ ಮುಗಿಸಿ ಕಾಮಗಾರಿ ಆರಂಭಿಸಬೇಕೆಂದು ಕೋರಲಾಗಿದೆ.
    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜನರ ಸಂಕಷ್ಟಗಳಿಗೆ ತುರ್ತಾಗಿ ಸ್ಪಂದಿಸುತ್ತಿದ್ದು, ಇಲಾಖೆಯಲ್ಲಿನ ಕಡತಗಳು ವೇಗ ಪಡೆದುಕೊಂಡಿವೆ. ಈ ಹಿನ್ನಲೆಯಲ್ಲಿ ತುರ್ತಾಗಿ ಕಾಮಗಾರಿ ಆರಂಭಿಸುವಂತೆ ವೇದಿಕೆ ಅಧ್ಯಕ್ಷ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ ಮಾಡುವ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Sunday, September 11, 2022

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಒಮ್ಮತ ವ್ಯಕ್ತಪಡಿಸಿ : ಮನವಿ

ಕರ್ನಾಟಕ ಕಾನೂನು ಆಯೋಗ ಸಿದ್ಧಪಡಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಒಮ್ಮತ ವ್ಯಕ್ತಪಡಿಸುವಂತೆ ಆಗ್ರಹಿಸಿ ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಸೆ. ೧೧: ಕರ್ನಾಟಕ ಕಾನೂನು ಆಯೋಗ ಸಿದ್ಧಪಡಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಒಮ್ಮತ ವ್ಯಕ್ತಪಡಿಸುವಂತೆ ಆಗ್ರಹಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.  
    ಕನ್ನಡ ಭಾಷೆ, ನಾಡು-ನುಡಿ ಬಗ್ಗೆ ಹೆಚ್ಚಿನ ಅಭಿಮಾನ ಹೊಂದುವ ಜೊತೆಗೆ ಪರಿಷತ್ ಕಾರ್ಯ ಚಟುವಟಿಕೆಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿರುವ ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿಧೇಯಕ ಅಂಗೀಕಾರದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಕೋರಲಾಯಿತು.
ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್. ತಿಮ್ಮಪ್ಪ, ಕೋಶಾಧ್ಯಕ್ಷ ಕೆ.ಟಿ ಪ್ರಸನ್ನ, ಸಂಘಟನಾ ಕಾರ್ಯದರ್ಶಿ ನಾಗೋಜಿರಾವ್ ಹಾಗೂ ಸದಸ್ಯ ಪ್ರಕಾಶ್ ಉಪಸ್ಥಿತರಿದ್ದರು.