Thursday, February 13, 2025

ಶಾಸಕರ ಮೇಲಿನ ಆಪಾದನೆ ಸತ್ಯಕ್ಕೆ ದೂರವಾದದು : ಚನ್ನಪ್ಪ

ಚನ್ನಪ್ಪ 
    ಭದ್ರಾವತಿ :  ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನಬೆಂಬಲ ಸಹಿಸಿಕೊಳ್ಳಲು ಸಾಧ್ಯವಾಗದೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ವಿನಾಕಾರಣ ಮಾದ್ಯಮಗಳ ಮೂಲಕ ಅವರ ವಿರುದ್ಧ ತಪ್ಪು ಸಂದೇಶ ನೀಡುತ್ತಿದ್ದಾರೆಂದು ನಗರಸಭೆ ಸದಸ್ಯ ಚನ್ನಪ್ಪ ಆರೋಪಿಸಿದ್ದಾರೆ. 
    ಶಾಸಕರ ಅಭಿವೃದ್ಧಿಯನ್ನು ಗುರುತಿಸಿ ಕ್ಷೇತ್ರದ ಜನತೆ ಅವರನ್ನು ೪ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಸಜ್ಜನ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಪ್ರತಿ ದಿನ ಜನ ಸೇವೆ ಮಾಡುವುದರ ಜೊತೆಗೆ ಅವರ ಕುಟುಂಬದ ಎಲ್ಲಾ ಸದಸ್ಯರು ಸೇವೆ ಮಾಡುತ್ತಿದ್ದಾರೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿಲ್ಲ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ತಿಳಿಸಿದ್ದಾರೆ. 
    ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಇಸ್ಪೀಟ್ ಜೂಜು ನಡೆಸಿದವರು ಯಾರು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಜೆಡಿಎಸ್ ಶಾಸಕರು ಅಧಿಕಾರದಲ್ಲಿದ್ದಾಗ ಅತಿ ಹೆಚ್ಚು ಅಕ್ರಮ ಚಟುವಟಿಕೆ, ಮರಳು ದಂಧೆ, ಇಸ್ಪೀಟ್ ದಂಧೆ ನಡೆಯುತ್ತಿತ್ತು. ಅದು ಈಗಲೂ ಮುಂದುವರೆಯುವುದು ಬೇಡ ಎಂದು ಶಾಸಕರು ಪೊಲೀಸ್ ಇಲಾಖೆಗೆ ಸ್ಪಷ್ಟ ಸಂದೇಶವನ್ನು ನೀಡಿರುತ್ತಾರೆ. ಅಲ್ಲದೆ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚು ಅನುದಾನ ತರುವ ಮೂಲಕ ರಸ್ತೆ, ಚರಂಡಿ ಸಮುದಾಯ ಭವನಗಳ ನಿರ್ಮಾಣ ಹಾಗೂ ಎಲ್ಲಾ ದೇವಸ್ಥಾನದ ಅಭಿವೃದ್ಧಿಗೂ ಹಾಗು ಎಲ್ಲಾ ಸಮಾಜದ ಅಭಿವೃದ್ಧಿಗೂ ಶ್ರಮಿಸಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ .
    ಕೆಲವು ದಿನಗಳ ಹಿಂದೆ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ದಾಳಿ ನಡೆಸಿದ ಸಂದರ್ಭದಲ್ಲಿ ಯಾರೋ ಶಾಸಕರ ಏಳಿಗೆಯನ್ನು ಸಹಿಸದ ರಾಜಕೀಯ ಶತೃಗಳು ಶಾಸಕರ ಪುತ್ರ  ಬಿ.ಎಸ್ ಬಸವೇಶ್‌ರವರ ಧ್ವನಿಯನ್ನು ತಿರುಚಿ ಮಹಿಳಾ ಅಧಿಕಾರಿಗೆ ಅವ್ಯಾಚ್ಯ ಶಬ್ದದಿಂದ ನಿಂದಿಸಿದ್ದು, ಇದು ಬಸವೇಶ್‌ರವರು ಎಂದು ಮಾದ್ಯಮದಲ್ಲಿ ಹೇಳಿರುವುದು ಸತ್ಯಕ್ಕೆ ದೂರವಾದ ವಿಚಾರ. ಸ್ವತಃ ಆ ಮಹಿಳಾ ಅಧಿಕಾರಿಯೇ ನನಗೆ ನಿಂದಿಸಿ ಮಾತನಾಡಿರುವುದು ಯಾರು ಎಂಬುದು ಗೊತ್ತಿಲ್ಲಾ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ. ಶಾಸಕರ ಅವದಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ಇಸ್ಪೀಟ್, ಓ.ಸಿ ನಡೆದಿಲ್ಲ. ಇದು ಸುಳ್ಳು ಸುದ್ದಿಯನ್ನು ಹಬ್ಬಿಸಲು, ಶಾಸಕರಿಗೆ ಕೆಟ್ಟ ಹಸರು ಬರಲಿ ಎಂದು ಈ ರೀತಿಯ ಕೃತ್ಯ ನಡೆಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

No comments:

Post a Comment