ಶಾಸಕರ ಪುತ್ರನ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಬಂಧಿಸಿ, ತನಿಖೆ ಕೈಗೊಳ್ಳಿ : ನಿಖಿಲ್ ಕುಮಾರಸ್ವಾಮಿ
ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣ ಖಂಡಿಸಿ ತಕ್ಷಣ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹಾಗು ಶಾಸಕರ ಪುತ್ರನನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಜಾತ್ಯತೀತ ಜನತಾ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಚಲನಚಿತ್ರ ನಟ, ಜಾತ್ಯತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ : ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರಿಗೆ ಒಂದು ಕಾನೂನು, ಕಾಂಗ್ರೆಸ್ ಪಕ್ಷದವರಿಗೆ ಮತ್ತೊಂದು ಕಾನೂನು ಎಂಬಂತಾಗಿದೆ. ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಸ್ಥಳೀಯ ಶಾಸಕರ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವ ಮೂಲಕ ಮೊಬೈಲ್ ಸಂಭಾಷಣೆಯ ಧ್ವನಿಯನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಬೇಕೆಂದು ಚಲನಚಿತ್ರ ನಟ, ಜಾತ್ಯತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣ ಖಂಡಿಸಿ ತಕ್ಷಣ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹಾಗು ಶಾಸಕರ ಪುತ್ರನನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಜಾತ್ಯತೀತ ಜನತಾ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಇಲ್ಲಿನ ಶಾಸಕರ ದೌರ್ಜನ್ಯ ಮತ್ತು ದಬ್ಬಾಳಿಕೆ ಬಹಳ ದಿನ ನಡೆಯುವುದಿಲ್ಲ. ಶಾಸಕರಿಗೆ ಮತ ಹಾಕಿ ಅವರ ಇಡೀ ಕುಟುಂಬಕ್ಕೆ ತಲೆತಗ್ಗಿಸುವ ಪರಿಸ್ಥಿತಿ ಪ್ರಸ್ತುತ ಇಲ್ಲಿನ ನಾಗರೀಕರಿಗೆ ಬಂದಿದೆ. ಈ ಹಿಂದೆ ಅವರ ಸುಪುತ್ರರ ಬಗ್ಗೆ ಕೇಳಿದ್ದೆ, ತಿಳಿದುಕೊಂಡಿದ್ದೆ. ಆದರೆ ಈ ಘಟನೆಯಿಂದಾಗಿ ಮಾಧ್ಯಮದ ಮೂಲಕ ಅವರ ಪದ ಬಳಕೆ ಕೇಳಿದ್ದೇನೆ. ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದರು.
ವಿಧಾನ ಪರಿಷತ್‌ನಲ್ಲಿ ಪ್ರಭಾವಿ ಸಚಿವೆಯೊಬ್ಬರಿಗೆ ಅವಾಚ್ಯ ಶಬ್ದ ಬಳಕೆ ಮಾಡಲಾಗಿದೆ ಎಂದು ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯರೊಬ್ಬರನ್ನು ಬಂಧಿಸಿ ಠಾಣೆಯಿಂದ ಠಾಣೆಗೆ ಶಿಫ್ಟ್ ಮಾಡಿ ನಂತರ ಅವರ ಆಡಿಯೋ, ವಿಡಿಯೋ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಅಲ್ಲಿದ್ದ ಧಮ್ಮು, ತಾಕತ್ತು ಇಲ್ಲಿನ ಶಾಸಕರ ಪುತ್ರನ ವಿರುದ್ಧ ಯಾಕಿಲ್ಲ. ಇವರ ಆಡಿಯೋ ಮತ್ತು ವಿಡಿಯೋ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿ ಕೊಟ್ಟಿಲ್ಲ. ರಾಮನಗರದಲ್ಲಿ ನಿಂತು ಅಬ್ಬರಿಸುವ ಡಿಸಿಎಂ ಇಲ್ಲಿನ ಶಾಸಕರ ಪುತ್ರನ ವಿರುದ್ಧ ಯಾಕೆ ಮಾತಾಡುತ್ತಿಲ್ಲ. ರಾಜ್ಯದಲ್ಲಿ ಕಾನೂನು ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬೇರೆ ಬೇರೆ ಇದೆಯಾ ಎಂದು ಪ್ರಶ್ನಿಸಿದರು.
ನಮ್ಮ ತಂದೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಯಾವತ್ತು ಅಧಿಕಾರ ಬಳಸಿಕೊಂಡು ನಾನು ಕೆಲಸ ಮಾಡಿಲ್ಲ. ಆದರೆ ಇಲ್ಲಿನ ಶಾಸಕರ ಪುತ್ರರು ಹಾಗು ಕುಟುಂಬಸ್ಥರಿಗೆ ಅಧಿಕಾರ ಕೊಟ್ಟವರು ಯಾರು. ನಾನು ಈಗ ರಾಜಕೀಯ ಜೀವನ ಆರಂಭಿಸಿದ್ದೇನೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ಕಂಡು ಬಂದರೆ ಸಾರ್ವಜನಿಕ ಬದುಕನ್ನು ಈಗಲೇ ಬಿಟ್ಟು ಹೋಗುವೆ ಎಂದರು.
ಇಲ್ಲಿ ಓ.ಸಿ, ಮಟ್ಕಾ, ಇಸ್ಪೀಟ್ ಸೇರಿದಂತೆ ಇನ್ನಿತರ ಜೂಜಾಟ, ಅಕ್ರಮವಾಗಿ ಮರಗಳ ಕಡಿತಲೆ, ಮರಳು ದಂಧೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಮತದಾರರು ಮುಂದಿನ ಚುನಾವಣೆಯಲ್ಲಿ ಇವುಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಮಾತನಾಡಿ, ಈ ಹಿಂದೆ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಶಿಫ್ಟ್ ಆಧಾರದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ ಇದೀಗ ಕ್ಷೇತ್ರದಲ್ಲಿ ಶಿಫ್ಟ್ ಆಧಾರದಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದು ಇಲ್ಲಿನ ಇಸ್ಪೀಟ್ ಜೂಜಾಟ ಆಡಿಕೊಂಡು ಹೋಗುತ್ತಿದ್ದಾರೆ. ಇಸ್ಪೀಟ್ ಆಟಕ್ಕೆ ಇದೀಗ ಕ್ಷೇತ್ರ ಪ್ರಸಿದ್ದಿಯಾಗಿದೆ. ಅಲ್ಲದೆ ನಗರದಲ್ಲಿ ಪ್ರತಿ ಎರಡು ಅಂಗಡಿಗೆ ಒಂದು ಅಂಗಡಿಯಂತೆ ಓಸಿ ಬರೆಯುತ್ತಾರೆ. ಅದಕ್ಕೆ ಶಾಸಕರ ಬೆಂಬಲಿಗರಿದ್ದಾರೆ. ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ. ಮರಗಳನ್ನು ಕಡಿದು ಲೂಟಿ ಮಾಡಲಾಗುತ್ತಿದ್ದು, ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಕ್ಷೇತ್ರದಲ್ಲಿ ಶಾಸಕರು ಇಲ್ಲ. ದೇವರು ಅವರಿಗೆ ಇನ್ನೂ ಹೆಚ್ಚಿನ ಆಯಸ್ಸು ಕೊಡಲಿ. ಅಭಿವೃದ್ಧಿ ಆಗಿದ್ದು ಬಿಟ್ಟರೆ, ಈಗ ಅಭಿವೃದ್ಧಿ ಇಲ್ಲ. ಅಭಿವೃದ್ಧಿ ಇದ್ದರೆ ನನಗೆ ಕಾಣಿಸುತ್ತಿಲ್ಲ. ಇಂತಹ ರಾಜಕೀಯ ನಾಯಕರು ಈ ಕ್ಷೇತ್ರದ ಜನರಿಗೆ ಬೇಕಿಲ್ಲ. ಕ್ಷೇತ್ರದಲ್ಲಿ ಅಕ್ರಮ ದಂಧೆಗಳು, ಲೂಟಿ ಹೆಚ್ಚಾಗುವ ಜೊತೆಗೆ ಅವರ ಪಾಪದ ಕೊಡ ಸಹ ತುಂಬಿದೆ. ಅಧಿಕಾರದ ಮದದಲ್ಲಿ ಅವರಿಗೆ ಕಣ್ಣು, ಕಿವಿ ಕೇಳಿಸುತ್ತಿಲ್ಲ. ಮಕ್ಕಳು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳದ ಶಾಸಕರು ಮುಂದಿನ ದಿನಗಳಲ್ಲಿ ಇವರು ನನ್ನ ಮಕ್ಕಳು ಅಲ್ಲ ಎಂದರೂ ಎನ್ನಬಹುದು. ಮತದಾರರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಜೆಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ತಾಲೂಕು ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ಅಧ್ಯಕ್ಷ ಅಧ್ಯಕ್ಷ ಎಂ.ಎ ಅಜಿತ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಟಿ. ಚಂದ್ರೇಗೌಡ ಸೇರಿದಂತೆ ಎರಡು ಪಕ್ಷಗಳ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
No comments:
Post a Comment