Friday, February 14, 2025

ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣ

ಜೆಡಿಎಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ : ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ 

ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣ ಖಂಡಿಸಿ ಭದ್ರಾವತಿಯಲ್ಲಿ  ಶುಕ್ರವಾರ ಜಾತ್ಯತೀತ ಜನತಾದಳ ವತಿಯಿಂದ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪ್ರಕರಣ ಖಂಡಿಸಿ ಶುಕ್ರವಾರ ಜಾತ್ಯತೀತ ಜನತಾದಳ ವತಿಯಿಂದ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. 
    ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಭ್ರಷ್ಟಾಚಾರ, ಅಕ್ರಮ ದಂಧೆಗಳು, ಕಾನೂನು ಬಾಹಿರ ಕೃತ್ಯಗಳು, ದೌರ್ಜನ್ಯ-ದಬ್ಬಾಳಿಕೆ-ಸ್ವೇಚ್ಛಾಚಾರ-ಗೂಂಡಾ ಪ್ರವೃತ್ತಿಯ ಆಡಳಿತದ ಮೂಲಕ ಭದ್ರಾವತಿ ಮತ್ತೊಮ್ಮೆ `ಬೆಂಕಿಪುರ'ವನ್ನಾಗಿಸುವ ಪ್ರಯತ್ನ ನಡೆದಿದೆ. ಸ್ಥಳೀಯ ಶಾಸಕರ ಕುಟುಂಬದ ಪೋಷಣೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಪಾಸಣೆಗೆ ಬಂದ ಹಿಂದುಳಿದ ವರ್ಗದ ದಕ್ಷ ಮಹಿಳಾ ಅಧಿಕಾರಿಗೆ ಬಾಯಿಗೆ ಬಂದಂತೆ ಮೂರನೇ ದರ್ಜೆಯ ಅವಾಚ್ಯ ಶಬ್ದ ಬಳಸಿ ನಿಂದಿಸಿ, ಬೆದರಿಕೆ ಹಾಕಿರುವ, ರಾಜ್ಯವ್ಯಾಪಿ ಸುದ್ದಿಯಾಗಿರುವ ಇಲ್ಲಿನ ಆಡಳಿತ ವೈಖರಿಗೆ ತಾಜಾ ಉದಾಹರಣೆಯಾಗಿದೆ ಎಂದು ಮನವಿಯಲ್ಲಿ ಕ್ಷೇತ್ರದ ಇಂದಿನ ಸ್ಥಿತಿಯನ್ನು ಮನವಿಯಲ್ಲಿ ತಿಳಿಸಲಾಗಿದೆ. 
    ಮಹಿಳಾ ಅಧಿಕಾರಿಗೆ ಬಾಯಿಗೆ ಬಂದಂತೆ ಮೂರನೇ ದರ್ಜೆಯ ಅವಾಚ್ಯ ಶಬ್ದ ಬಳಸಿ ನಿಂದಿಸಿ, ಬೆದರಿಕೆ ಹಾಕಿರುವ ಪ್ರಕರಣದಲ್ಲಿ  ಸ್ಥಳೀಯ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್ ಪ್ರಮುಖ ಆರೋಪಿಯಾಗಿದ್ದು, ಪೊಲೀಸರು ಇದುವರೆಗೂ ಬಂಧಿಸದಿರುವುದು ಅಚ್ಚರಿಯ ಸಂಗತಿಯಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಇದರಿಂದಾಗಿ ಪ್ರಾಮಾಣಿಕ ಅಧಿಕಾರಿಗಳು ದಕ್ಷತೆಯಿಂದ ಕೆಲಸು ಮಾಡುವುದು ಅಸಾಧ್ಯವಾಗಿದೆ. ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಕ್ರಮ ದಂಧೆಗಳ ತಾಣವಾಗಿ ಮಾರ್ಪಟ್ಟಿದೆ ಮನವಿಯಲ್ಲಿ ಆರೋಪಿಸಲಾಗಿದೆ. 
    ಪ್ರಜಾತಂತ್ರ-ಸಂವಿಧಾನ-ಮೌಲ್ಯಾಧಾರಿತ ರಾಜಕಾರಣದ ಆಶಯ ಹೊಂದಿರುವ ಮುಖ್ಯಮಂತ್ರಿಗಳು ತಕ್ಷಣ ಗಮನಹರಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗು ಸಂಪೂರ್ಣ ಹದಗೆಟ್ಟಿರುವ ಆಡಳಿತ ವ್ಯವಸ್ಥೆಯನ್ನು ತಹಬದಿಗೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.  
    ಚಲನಚಿತ್ರ ನಟ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಜೆಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ತಾಲೂಕು ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ಅಧ್ಯಕ್ಷ ಅಧ್ಯಕ್ಷ ಎಂ.ಎ ಅಜಿತ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಟಿ. ಚಂದ್ರೇಗೌಡ ಸೇರಿದಂತೆ ಎರಡು ಪಕ್ಷಗಳ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. 

No comments:

Post a Comment