![](https://blogger.googleusercontent.com/img/a/AVvXsEhS4BUTTSr6Ch0Oue1VugzEZRJR_dL4IlUJF0-elbphE1hPscCfq1Dj92vPDfh7lS9IzXlKpJ6K3Qzr9LlZkOD4nzo5ThhsVs-WhSNhK_LxPhuRkQiFrSU8hKJBsV77hS9-ZSBmXy6sMtALLkhKeXLBNkVDjp0TVD7dDOngmfIy38zI2Bmna-uefus4_zxq=w400-h149-rw)
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ಹಬ್ಬದ ಅಂಗವಾಗಿ ಭದ್ರಾವತಿಯಲ್ಲಿ ಪಥ ಸಂಚಲನ ನಡೆಯಿತು.
ಭದ್ರಾವತಿ: ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಹಬ್ಬ, ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳ ವಾಹಕವಾಗಿದ್ದು, ವಿಜಯದಶಮಿ ಹಬ್ಬ ಸಹ ದುಷ್ಟ ಶಕ್ತಿಗಳ ಸಂಹಾರ ಹಾಗು ವಿಜಯದ ಸಂಕೇತವಾಗಿದೆ ಎಂದು ಆರ್‌ಎಸ್‌ಎಸ್ ಶಿವಮೊಗ್ಗ ವಿಭಾಗದ ಬೌಧ್ದಿಕ್ ಪ್ರಮುಖ್ ರಾಮಚಂದ್ರ ಭರಣಿ ಹೇಳಿದರು.
ಅವರು ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಥ ಸಂಚಲನದಲ್ಲಿ ಪಾಲ್ಗೊಂಡು ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಸಂಘಟನೆ ಬಲ ಇದ್ದಲ್ಲಿ ಭಯ ಎಂಬುದು ಇರುವುದಿಲ್ಲ. ಬಲ ವಿರೋಧಿಗಳ ವಿರುಧ್ಧ ಶಕ್ತಿ ಪ್ರದರ್ಶನವೂ ಅಲ್ಲ. ಆಕ್ರಮಣಣದ ಉದ್ದೇಶವೂ ಅಲ್ಲ. ಆದರೆ ಯಾರೆ ಆಗಲಿ ಅಥವಾ ಶತ್ರುಗಳು ನಮ್ಮ ಮೇಲೆ ದಾಳಿ ಮಾಡಬಾರದು ಎಂಬ ಉದ್ದೇಶವಾಗಿದೆ ಎಂದರು.
ದುಷ್ಟ ಶಕ್ತಿಗಳ ಉಪಟಳ ಎಲ್ಲಾ ಕಾಲದಲ್ಲೂ ಇದ್ದು, ಹಿಂದೆಯೂ ಇತು, ಇಂದೂ ಇದೆ, ಮುಂದೆಯೂ ಇರುತ್ತದೆ. ಇದರ ಜೊತೆಯಲ್ಲಿ ಈಗ ನಮ್ಮೊಳಗೆ ಇದೆ. ದುಷ್ಟ ಶಕ್ತಿ ಶಿಷ್ಟ ಶಕ್ತಿಯನ್ನು ತನ್ನ ಹಿಡಿತದೊಳಗೆ ತೆಗೆದುಕೊಳ್ಳಬೇಕು ಎಂದು ಹವಣಿಕೆ ಮಾಡುತ್ತಿದೆ. ದೈವ ಶಕ್ತಿಯನ್ನು ನಿರ್ನಾಮ ಮಾಡಲು ಪ್ರಯತ್ನಿಸುತ್ತಿದೆ. ಇದರ ಕಾರಣ ನಾವು ಯಾವಾಗಲೂ ಶಿಷ್ಟ ಶಕ್ತಿಗಳ ಆರಾಧಕರಾಗಿರಬೇಕು ಅವುಗಳು ನಮ್ಮನ್ನು ಕಾಪಾಡುತ್ತವೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾರಂಭ ಆಗಿದ್ದು ಕೇವಲ ಕಾಕತಾಳಿಯ ಅಲ್ಲ. ಅಥವಾ ಹತ್ತಾರು ಸಂಘದ ಜೊತೆ ಇದು ಒಂದು ಎಂಬ ಭಾವನೆಯಿಂದ ಅಲ್ಲ. ಇದರ ಪ್ರಾರಂಭದ ಮೊದಲು ಸುಮಾರು ೮-೧೦ ವರ್ಷಗಳ ಸುರ್ದೀಘ ಚರ್ಚೆಗಳು ನಡೆದು ದೈತ್ಯ ಶಕ್ತಿಯ ಸಂಘಟನೆ ಪ್ರಾರಂಭವಾಯಿತು. ಇಂದು ಈ ಸಂಘಟನೆ ವಿಶ್ವದ ಅತ್ಯಂತ ಬಲಿಷ್ಟ ಸಂಘಟನೆಯಾಗಿ ಬೆಳೆದಿದೆ ಎಂದರು.
ಆನಂದ್ ಅಧ್ಯಕ್ಷತೆ ವಹಿಸಿದ್ದರು. ಗಣವೇಷಧಾರಿ ಸ್ವಯಂ ಸೇವಕರ ಆಕರ್ಷಕ ಪಥ ಸಂಚಲನ ಬಿ.ಹೆಚ್ ರಸ್ತೆ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗಿ ಹಾಲಪ್ಪ ಸರ್ಕಲ್, ಅಂಬೇಡ್ಕರ್ ವೃತ್ತ, ಹೊಸ ಸೇತುವೆ ರಸ್ತೆ, ಕೋಟೆ ಏರಿಯಾ, ದೊಡ್ಡ ಕುರುಬರ ಬೀದಿ, ಹಳದಮ್ಮ ಬೀದಿ, ಪೇಟೆ ಬೀದಿ, ಎನ್‌ಎಸ್‌ಟಿ ರಸ್ತೆ, ಸಿಎನ್ ರಸ್ತೆ, ಶ್ರೀ ಬಸವೇಶ್ವರ ವೃತ್ತ ಮುಖಾಂತರ ಕನಕ ಮಂಟಪ ಮೈದಾನ ತಲುಪಿತು.