Monday, November 9, 2020

ನೀರಿನಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರ ಕುಟುಂಬಗಳಿಗೆ ತಲಾ ೫ ಲಕ್ಷ ರು. ಪರಿಹಾರ

ಇತ್ತೀಚೆಗೆ ಭದ್ರಾವತಿಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು, ನಗರದ ಜನ್ನಾಪುರ ನಿವಾಸಿಗಳಾದ ರಾಜೇಶ್ ಹಾಗೂ ಮನೋಜ್ ಕುಟುಂಬಗಳಿಗೆ ಸಂಸದ ಬಿ.ವೈ ರಾಘವೇಂದ್ರ ತಲಾ ೫ ಲಕ್ಷ ರು. ಪರಿಹಾರ ಧನ ವಿತರಿಸಿದರು
ದ್ರಾವತಿ, ನ. ೯: ಇತ್ತೀಚೆಗೆ ನೀರಿನಲ್ಲಿ ಮುಳುಗಿ ಮೃತಪಟ್ಟ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು, ನಗರದ ಜನ್ನಾಪುರ ನಿವಾಸಿಗಳಾದ ರಾಜೇಶ್ ಹಾಗೂ ಮನೋಜ್ ಕುಟುಂಬಗಳಿಗೆ ಸಂಸದ ಬಿ.ವೈ ರಾಘವೇಂದ್ರ ತಲಾ ೫ ಲಕ್ಷ ರು. ಪರಿಹಾರ ಧನ ವಿತರಿಸಿದರು.
ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ರಾಕೇಶ್‌ರವರ ಸಹೋದರ ರಾಜೇಶ್ ಹಾಗೂ ೧೦ನೇ ತರಗತಿ ವಿದ್ಯಾರ್ಥಿಯಾಗಿರುವ ಮನೋಜ್ ಕುಟುಂಬಕ್ಕೆ ಚೆಕ್ ವಿತರಿಸಿದ ಸಂಸದರು ಸಾಂತ್ವನ ಹೇಳಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯರಾದ ಪಟ್ಟಭಿ ಜೀ , ಬಿಜೆಪಿ ಜಿಲ್ಲಾ ಪ್ರ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ,  ತಾಲೂಕು ಮಂಡಲ ಮಾಜಿ ಅಧ್ಯಕ್ಷರಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ತಾಲೂಕು ಪಂಚಾಯತ್ ಸದಸ್ಯ ಕೆ. ಮಂಜುನಾಥ್ ಕದಿರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಒಳಚರಂಡಿ ಮಂಡಳಿ ನಾಮನಿರ್ದೇಶಿತ ಸದಸ್ಯರಾಗಿ ಮಂಗೋಟೆ ರುದ್ರೇಶ್ ನೇಮಕ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವ ಭದ್ರಾವತಿ ಮಂಗೋಟೆ ರುದ್ರೇಶ್‌ರವರಿಗೆ ತಾಲೂಕು ಪದಾಧಿಕಾರಿಗಳು ಸನ್ಮಾನಿಸುವ ಮೂಲಕ ಅಭಿನಂದಿಸಿದರು.
ಭದ್ರಾವತಿ, ನ. ೯: ಭಾರತೀಯ ಜನತಾ ಪಕ್ಷದ ಯುವ ಮುಖಂಡ, ನಗರದ ನಿವಾಸಿ ಮಂಗೋಟೆ ರುದ್ರೇಶ್‌ರವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಮನಿರ್ದೇಶಿತ ಸದಸ್ಯರನ್ನಾಗಿ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.
    ಮೂಲತಃ ನ್ಯಾಯವಾದಿಗಳಾಗಿರುವ ಮಂಗೋಟೆ ರುದ್ರೇಶ್‌ರವರು ವಿದ್ಯಾರ್ಥಿ ಪರಿಷತ್ ಹೋರಾಟಗಳಲ್ಲಿ ತೊಡಗಿಸಿಕೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡವರು. ಯುವ ಮೋರ್ಚಾ, ನಂತರ ತಾಲೂಕು ಮಂಡಲ ಗ್ರಾಮಾಂತರ ಅಧ್ಯಕ್ಷರಾಗಿ ಹುದ್ದೆಗಳನ್ನು ಅಲಂಕರಿಸಿದ್ದರು. ಇವರ ಪಕ್ಷ ನಿಷ್ಠೆಯನ್ನು ಗುರುತಿಸಿ ಇದೀಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.
    ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರಿಗೆ, ಪಕ್ಷದ ಜಿಲ್ಲಾ ಹಾಗು ತಾಲೂಕು ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಮಂಗೋಟೆ ರುದ್ರೇಶ್ ಕೃತಜ್ಞತೆ ಸಲ್ಲಿಸಿದ್ದಾರೆ.
         ತಾಲೂಕು ಪದಾಧಿಕಾರಿಗಳಿಂದ ಅಭಿನಂದನೆ:
   ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವ ಮಂಗೋಟೆ ರುದ್ರೇಶ್‌ರವರಿಗೆ ತಾಲೂಕು ಪದಾಧಿಕಾರಿಗಳು ಸನ್ಮಾನಿಸುವ ಮೂಲಕ ಅಭಿನಂದಿಸಿದರು.
    ಮುಖಂಡರಾದ ಜಿ. ಧರ್ಮಪ್ರಸಾದ್, ಜಿ. ಆನಂದಕುಮಾರ್, ಸುನಿಲ್‌ಗಾಯಕ್‌ವಾಡ್, ರೇವಣಕರ್, ಎಂ. ಮಂಜುನಾಥ್, ಬಿ.ಎಸ್ ಶ್ರೀನಾಥ್ ಆಚಾರ್, ಬಿ.ಕೆ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಹುದೊಡ್ಡ ಸೇವಾ ಸಂಸ್ಥೆ : ಬಿ.ಕೆ ಸಂಗಮೇಶ್ವರ್

ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಜ್ಞಾನತಾಣ ನೂತನ ಕಾರ್ಯಕ್ರಮಕ್ಕೆ ಚಾಲನೆ

ಭದ್ರಾವತಿ ಹಳೇನಗರದಲ್ಲಿರುವ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಛೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಅಂತರ್ಜಾಲ ಶಿಕ್ಷಣ ವ್ಯವಸ್ಥೆ ಜ್ಞಾನತಾಣ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
ಭದ್ರಾವತಿ, ನ. ೯: ಮಾನವ ಸಮುದಾಯದ ಏಳಿಗಾಗಿ ಹಲವಾರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಸ್ತುತ ಲಕ್ಷಾಂತರ ಜನರ ಬದುಕಿನ ಆಧಾರವಾಗಿ ಬಹು ದೊಡ್ಡ ಸೇವಾ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕೊರೋನಾ ಸಂಕಷ್ಟದ ಸಮಯದಲ್ಲೂ ಸಹ ಸೇವಾ ಕಾರ್ಯವನ್ನು ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.
   ಅವರು ಸೋಮವಾರ ಹಳೇನಗರದಲ್ಲಿರುವ ಯೋಜನೆಯ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಅಂತರ್ಜಾಲ ಶಿಕ್ಷಣ ವ್ಯವಸ್ಥೆ ಜ್ಞಾನತಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ನಿರುದ್ಯೋಗ ನಿರ್ಮೂಲನೆ, ಪಶುಸಂಗೋಪನೆ, ಹೈನುಗಾರಿಕೆ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ, ಆರೋಗ್ಯ ಸುಧಾರಣೆ,  ಆರ್ಥಿಕ ವ್ಯವಸ್ಥೆ ಬಲವರ್ಧನೆ, ಮಹಿಳಾ ಸಬಲೀಕರಣ, ಪರಿಸರ ರಕ್ಷಣೆ ಮತ್ತು ಶಿಕ್ಷಣ ವ್ಯವಸ್ಥೆ ಸುಧಾರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಭಿನ್ನ ರೀತಿಯ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಏಕೈಕ ಸಂಸ್ಥೆಯಾಗಿದೆ ಎಂದರು.
    ಕೊರೋನಾ ಪರಿಣಾಮದಿಂದಾಗಿ ಪ್ರಸ್ತುತ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದು, ಅದರಲ್ಲೂ ಗ್ರಾಮೀಣ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಹಿನ್ನಲೆಯಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಿಕೊಂಡು ಕಲಿಕೆಗೆ ಸಹಕಾರಿಯಾಗುತ್ತಿರುವುದು ಒಳ್ಳೆಯ ಬೆಳೆವಣಿಗೆಯಾಗಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.
   ತಾಲೂಕು ಯೋಜನಾಧಿಕಾರಿ ಕೆ. ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಜ್ಞಾನತಾಣ ಕಾರ್ಯಕ್ರಮದ ಉದ್ದೇಶ ಹಾಗೂ ರೂಪುರೇಷೆಗಳನ್ನು ವಿವರಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್, ಸದಸ್ಯರಾದ ಆರ್. ಕರುಣಾಮೂರ್ತಿ, ಪಾಲಾಕ್ಷಪ್ಪ, ಹಳೇನಗರದ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
  ಜ್ಞಾನತಾಣ ಕಾರ್ಯಕ್ರಮಕ್ಕೆ ಸಹಕಾರಿಯಾಗುವಂತೆ ಆರ್ಥಿಕ ಸಹಾಯಧನದೊಂದಿಗೆ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಟ್ಯಾಪ್‌ಗಳನ್ನು ವಿತರಿಸಲಾಯಿತು.

ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿ, ಕಟ್ಟುನಿಟ್ಟಾಗಿ ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿ ಅನುಸರಿಸಿ

ತಹಸೀಲ್ದಾರ್, ನಗರಸಭೆ ಪೌರಾಯುಕ್ತರಿಗೆ ಜನತಾದಳ(ಸಂಯುಕ್ತ) ವತಿಯಿಂದ ಮನವಿ

ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿಯಂತೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಸೋಮವಾರ ಭದ್ರಾವತಿಯಲ್ಲಿ ಜನತಾದಳ(ಸಂಯುಕ್ತ) ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ತಹಸೀಲ್ದಾರ್ ಮತ್ತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಭದ್ರಾವತಿ, ನ. ೯: ವಿಶ್ವದಾದ್ಯಂತ ಕಳೆದ ಸುಮಾರು ೮ ತಿಂಗಳಿನಿಂದ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುವ ಮೂಲಕ ಸಾಕಷ್ಟು ಸಂಕಷ್ಟವನ್ನುಂಟು ಮಾಡಿದ್ದು, ಈ ನಡುವೆ ದೀಪಾವಳಿ ಹಬ್ಬ ಎದುರಾಗಿದೆ. ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುವ ಜೊತೆಗೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಈ ಹಿನ್ನಲೆಯಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿಯಂತೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಜನತಾದಳ(ಸಂಯುಕ್ತ) ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೋಮವಾರ ತಹಸೀಲ್ದಾರ್ ಮತ್ತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
    ಕೊರೋನಾ ಸೋಂಕಿನಿಂದ ಈಗಾಗಲೇ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಪಟಾಕಿ ಸಿಡಿಸುವುದರಿಂದ ಸೋಂಕು ಮತ್ತಷ್ಟು ಹೆಚ್ಚುವ ಆತಂಕ ಕಂಡು ಬರುತ್ತಿದೆ. ಅಲ್ಲದೆ ಪರಿಸರಕ್ಕೆ ಹಾನಿಯಾಗಿ ಮಾಯು ಮಾಲಿನ್ಯದಿಂದ ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾದವರು ಹಾಗು ಮಕ್ಕಳು ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಈಗಾಗಲೇ ಸರ್ವೋಚ್ಛ ನ್ಯಾಯಾಲಯ ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ೧೨ ಅಂಶಗಳ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಂತೆ ಪರಿಸರಕ್ಕೆ ಹಾನಿ ಮಾಡದ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
    ನಗರದ ನ್ಯೂಟೌನ್ ಭಾಗದಲ್ಲಿ ವಿಐಎಸ್‌ಎಲ್ ಚರ್ಚ್ ಮೈದಾನದಲ್ಲಿ ಹಾಗು ಹಳೇನಗರದ ಕನಕಮಂಟಪ ಮೈದಾನದಲ್ಲಿ ಪ್ರತಿವರ್ಷ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಬಾರಿ ಪ್ರತಿಯೊಂದು ಮಳಿಗೆಗಳ ನಡುವೆ ಸುಮಾರು ೧೮ ಅಡಿ ಅಂತರವಿರುವಂತೆ ನೋಡಿಕೊಳ್ಳಬೇಕು. ಸ್ಯಾನಿಟೈಜರ್, ಥರ್ಮಲ್ ಸ್ಕ್ರೀನಿಂಗ್ ಮತ್ತು ಮಾಸ್ಕ್ ಬಳಕೆ ಕಡ್ಡಾಯಗೊಳಿಸಬೇಕು.  ಪ್ರತಿ ಮಳಿಗೆಗೆ ಭೇಟಿ ನೀಡಿ ಹಸಿರು ಪಟಾಕಿ ಮಾರಾಟ ಮಾಡಲಾಗುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಪರಿಸರಕ್ಕೆ ಹಾನಿಯಾಗುವ ಪಟಾಕಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪಕ್ಷದ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
   ಮನವಿ ಸಲ್ಲಿಸುವ ಸಂದರ್ಭದಲ್ಲಿ ಜೆಡಿಯು ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್, ತಾಲೂಕು ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣನಾಯ್ಕ, ರಾಜ ನಾಯ್ಕ ಮತ್ತು ನಾಗ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, November 8, 2020

ಪ್ರತಿಯೊಬ್ಬರು ಸೈನಿಕರಂತೆ ಶಿಸ್ತು, ಸಂಯಮ, ನಿಸ್ವಾರ್ಥ ಮನೋಭಾವ, ದೇಶ ಭಕ್ತಿ ಬೆಳೆಸಿಕೊಳ್ಳಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ, ನ. ೮: ದೇಶಕ್ಕೆ ಮಾಜಿ ಸೈನಿಕರ ಕೊಡುಗೆ ಅಪಾರವಾಗಿದ್ದು, ಸೈನಿಕರಲ್ಲಿನ ಶಿಸ್ತು, ಸಂಯಮ, ನಿಸ್ವಾರ್ಥ ಮನೋಭಾವ, ದೇಶ ಭಕ್ತಿ ಸಮಾಜದ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
      ಅವರು ಭಾನುವಾರ ನ್ಯೂಟೌನ್ ಬಂಟರ ಭವನದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ಪ್ರಥಮ ವರ್ಷದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಾಜಿ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸ್ವಾರ್ಥವಿಲ್ಲದೆ ದೇಶ ರಕ್ಷಣೆ ಮನೋಭಾವದೊಂದಿಗೆ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಇಂದಿನ ಯುವ ಸಮೂಹ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ನಿವೃತ್ತ ಸೈನಿಕರು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಕಳೆದ ೧ ವರ್ಷಗಳಿಂದ ಹಲವು ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ಸಂಘಟನೆ ಪ್ರಮುಖ ಪಾತ್ರವಹಿಸಿರುವುದು ಶ್ಲಾಘನೀಯ ಎಂದರು.
      ಇದೀಗ ಮಹಿಳಾ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಸಂಘಟನೆ ಸಹ ಹೆಚ್ಚು ಕ್ರಿಯಾಶೀಲವಾಗಿ ಮುನ್ನಡೆಯುವಂತಾಗಲಿ. ಮಾಜಿ ಸೈನಿಕರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಿಕೊಡುವುದಾಗಿ ಭರವಸೆ ನೀಡಿದರು.  
      ಪ್ರಾಸ್ತಾವಿಕವಾಗಿ ಮಾತನಾಡಿದ ಮೇಜರ್ ಡಾ. ವಿಕ್ರಮ್ ಕೆದಿಲಾಯ ಮಾತನಾಡಿ, ಎಲ್ಲರೂ ಎಲ್ಲಾ ವಿಚಾರಗಳಲ್ಲೂ ಸರಿ ಸಮಾನವಾಗಿ ಇರುವುದಿಲ್ಲ. ಆದರೆ ಸಂಘಟನೆ ವಿಚಾರದಲ್ಲಿ ಎಲ್ಲರೂ ಸಹ ಸರಿ ಸಮಾನವಾಗಿ ನಡೆದುಕೊಳ್ಳುವುದು ಅನಿವಾರ್ಯವಾಗುತ್ತಿದೆ. ಇದನ್ನು ಪ್ರತಿಯೊಬ್ಬ ಸದಸ್ಯರು ಅರಿತುಕೊಂಡಾಗ ಸಂಘಟನೆ ಮತ್ತಷ್ಟು ಬಲಗೊಳ್ಳಲು ಸಾಧ್ಯ. ಸಂಘಟನೆ ಕಳೆದ ೧ ವರ್ಷದಿಂದ ವಿಭಿನ್ನ ಚಟುವಟಿಕೆಗಳೊಂದಿಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದೆ. ಸಂಘಟನೆ ಕಾರ್ಯ ತೃಪ್ತಿ ತಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಿಯಾಶೀಲತೆ ಸಂಘಟನೆ ಹೊಂದಬೇಕಾಗಿದೆ ಎಂದರು.
     ನಗರಸಭೆ ಪೌರಾಯುಕ್ತ ಮನೋಹರ್, ಹಿರಿಯ ವ್ಯದ್ಯರಾದ ಡಾ. ರವೀಂದ್ರನಾಥ ಕೋಠಿ, ಡಾ. ನಂದ ಆರ್. ಕೋಠಿ, ಡಾ. ವೀಣಾಭಟ್, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಸಹಾಯಕ ಉಪ ವಲಯ ಅರಣ್ಯಧಿಕಾರಿ ದಿನೇಶ್‌ಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ನೂತನ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸುಪ್ರಿಯ, ಖಜಾಂಚಿ ಆಶಾ, ಕಾರ್ಯದರ್ಶಿ ಕಲಾವತಿ, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವಿನೋದ್ ಪೂಜಾರಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮೊದಲು ರಕ್ತದಾನ ಶಿಬಿರ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Saturday, November 7, 2020

ಸಮರ್ಪಕವಾಗಿ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪೌರಾಯುಕ್ತರಿಗೆ ಮನವಿ

ಭದ್ರಾವತಿ ನಗರಸಭೆ ೩೨ನೇ ವಾರ್ಡ್ ವ್ಯಾಪ್ತಿಯ ವೇಲೂರ್ ಶೆಡ್, ಫಿಲ್ಟರ್ ಶೆಡ್ ಮತ್ತು ಕುರುಬರ ಬೀದಿಯಲ್ಲಿ  ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಒತ್ತಾಯಿಸಿ ಶನಿವಾರ ನಗರಸಭೆ  ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೭:  ನಗರಸಭೆ ೩೨ನೇ ವಾರ್ಡ್ ವ್ಯಾಪ್ತಿಯ ವೇಲೂರ್ ಶೆಡ್, ಫಿಲ್ಟರ್ ಶೆಡ್ ಮತ್ತು ಕುರುಬರ ಬೀದಿಯಲ್ಲಿ  ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಒತ್ತಾಯಿಸಿ ಶನಿವಾರ ನಗರಸಭೆ  ಪೌರಾಯುಕ್ತರಿ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
   ಈ ಭಾಗದಲ್ಲಿ ಮೂಲ ಸೌಲಭ್ಯಗಳು ಸಮರ್ಪಕವಾಗಿ ಇಲ್ಲದ ಕಾರಣ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ಖುದ್ದಾಗಿ ಪರಿಶೀಲನೆ ನಡೆಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಕರ್ನಾಟಕ ಜನ್ಯ ಸೈನ್ಯ ಜಿಲ್ಲಾ ಗೌರವಾಧ್ಯಕ್ಷ ಅನಿಲ್, ಅಧ್ಯಕ್ಷ ಕೆ. ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.  
    ಮನವಿ ಸ್ವೀಕರಿಸಿದ ಪೌರಾಯುಕ್ತರು ನ.೯ರ  ಸೋಮವಾರ ಖುದ್ದಾಗಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ವರದಿ : ಸೈಲ್ ಶೇ.೨೦ರಷ್ಟು ಪ್ರಗತಿ

ಭದ್ರಾವತಿ, ನ. ೭: ಭಾರತೀಯ ಉಕ್ಕು ಪ್ರಾಧಿಕಾರ(ಸೈಲ್)ದ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ವರದಿಯಂತೆ ಒಟ್ಟಾರೆ ವ್ಯವಹಾರದ ಶೇ.೨೦ರಷ್ಟು ಪ್ರಗತಿ ಸಾಧಿಸಿದೆ ಎಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.
      ಪ್ರಾಧಿಕಾರದ ಅಧೀನಕ್ಕೆ ಒಳಪಟ್ಟ ಕಂಪನಿಗಳ ಒಟ್ಟಾರೆ ವ್ಯವಹಾರದಲ್ಲಿ ಪಿಬಿಟಿ ಲಾಭ ರು. ೬೧೦.೩೨ ಕೋ. ಮತ್ತು ಪಿಎಟಿ ಲಾಭ ರು. ೩೯೩.೩೨ ಕೋ. ಗಳಾಗಿದ್ದು, ಇದೆ ರೀತಿ ಪಿಬಿಟಿ ನಷ್ಟ ರು.೫೨೩.೦೩ ಕೋ. ಮತ್ತು ಪಿಎಟಿ ನಷ್ಟ ರು. ೩೪೨.೮೪ ಕೋ. ಗಳಾಗಿದೆ. ಕಳೆದ ಹಣಕಾಸಿನ ವರ್ಷಕ್ಕೆ ಹೋಲಿಕೆ ಮಾಡಿದ್ದಲ್ಲಿ ಈ ಬಾರಿ ಗಣನೀಯ ಸುಧಾರಣೆ ಕಂಡು ಬಂದಿದ್ದು, ಉಕ್ಕು ಪ್ರಾಧಿಕಾರ ಲಾಭದ ಕಡೆಗೆ ಮುಖಮಾಡಿದೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
   ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿ ವರದಿಗೆ ಪ್ರತಿಕ್ರಿಯಿಸಿ, 'ಕೋವಿಡ್-೧೯ರ ಸಂದಭದಲ್ಲಿ ಶೇ.೨೦ರಷ್ಟು ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಉತ್ಪಾದನೆ ಮತ್ತು ಮಾರಾಟದಲ್ಲಿ ಹೆಚ್ಚಳವಾಗಿರುವುದು ಉತ್ತಮ ಅರ್ಥ ವ್ಯವಸ್ಥೆಗೆ ತಮ್ಮ ಕೊಡುಗೆ ತೋರಿಸುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.