Sunday, November 8, 2020

ಪ್ರತಿಯೊಬ್ಬರು ಸೈನಿಕರಂತೆ ಶಿಸ್ತು, ಸಂಯಮ, ನಿಸ್ವಾರ್ಥ ಮನೋಭಾವ, ದೇಶ ಭಕ್ತಿ ಬೆಳೆಸಿಕೊಳ್ಳಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ, ನ. ೮: ದೇಶಕ್ಕೆ ಮಾಜಿ ಸೈನಿಕರ ಕೊಡುಗೆ ಅಪಾರವಾಗಿದ್ದು, ಸೈನಿಕರಲ್ಲಿನ ಶಿಸ್ತು, ಸಂಯಮ, ನಿಸ್ವಾರ್ಥ ಮನೋಭಾವ, ದೇಶ ಭಕ್ತಿ ಸಮಾಜದ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
      ಅವರು ಭಾನುವಾರ ನ್ಯೂಟೌನ್ ಬಂಟರ ಭವನದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ಪ್ರಥಮ ವರ್ಷದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಾಜಿ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸ್ವಾರ್ಥವಿಲ್ಲದೆ ದೇಶ ರಕ್ಷಣೆ ಮನೋಭಾವದೊಂದಿಗೆ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಇಂದಿನ ಯುವ ಸಮೂಹ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ನಿವೃತ್ತ ಸೈನಿಕರು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಕಳೆದ ೧ ವರ್ಷಗಳಿಂದ ಹಲವು ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ಸಂಘಟನೆ ಪ್ರಮುಖ ಪಾತ್ರವಹಿಸಿರುವುದು ಶ್ಲಾಘನೀಯ ಎಂದರು.
      ಇದೀಗ ಮಹಿಳಾ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಸಂಘಟನೆ ಸಹ ಹೆಚ್ಚು ಕ್ರಿಯಾಶೀಲವಾಗಿ ಮುನ್ನಡೆಯುವಂತಾಗಲಿ. ಮಾಜಿ ಸೈನಿಕರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಿಕೊಡುವುದಾಗಿ ಭರವಸೆ ನೀಡಿದರು.  
      ಪ್ರಾಸ್ತಾವಿಕವಾಗಿ ಮಾತನಾಡಿದ ಮೇಜರ್ ಡಾ. ವಿಕ್ರಮ್ ಕೆದಿಲಾಯ ಮಾತನಾಡಿ, ಎಲ್ಲರೂ ಎಲ್ಲಾ ವಿಚಾರಗಳಲ್ಲೂ ಸರಿ ಸಮಾನವಾಗಿ ಇರುವುದಿಲ್ಲ. ಆದರೆ ಸಂಘಟನೆ ವಿಚಾರದಲ್ಲಿ ಎಲ್ಲರೂ ಸಹ ಸರಿ ಸಮಾನವಾಗಿ ನಡೆದುಕೊಳ್ಳುವುದು ಅನಿವಾರ್ಯವಾಗುತ್ತಿದೆ. ಇದನ್ನು ಪ್ರತಿಯೊಬ್ಬ ಸದಸ್ಯರು ಅರಿತುಕೊಂಡಾಗ ಸಂಘಟನೆ ಮತ್ತಷ್ಟು ಬಲಗೊಳ್ಳಲು ಸಾಧ್ಯ. ಸಂಘಟನೆ ಕಳೆದ ೧ ವರ್ಷದಿಂದ ವಿಭಿನ್ನ ಚಟುವಟಿಕೆಗಳೊಂದಿಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದೆ. ಸಂಘಟನೆ ಕಾರ್ಯ ತೃಪ್ತಿ ತಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಿಯಾಶೀಲತೆ ಸಂಘಟನೆ ಹೊಂದಬೇಕಾಗಿದೆ ಎಂದರು.
     ನಗರಸಭೆ ಪೌರಾಯುಕ್ತ ಮನೋಹರ್, ಹಿರಿಯ ವ್ಯದ್ಯರಾದ ಡಾ. ರವೀಂದ್ರನಾಥ ಕೋಠಿ, ಡಾ. ನಂದ ಆರ್. ಕೋಠಿ, ಡಾ. ವೀಣಾಭಟ್, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಸಹಾಯಕ ಉಪ ವಲಯ ಅರಣ್ಯಧಿಕಾರಿ ದಿನೇಶ್‌ಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ನೂತನ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸುಪ್ರಿಯ, ಖಜಾಂಚಿ ಆಶಾ, ಕಾರ್ಯದರ್ಶಿ ಕಲಾವತಿ, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವಿನೋದ್ ಪೂಜಾರಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮೊದಲು ರಕ್ತದಾನ ಶಿಬಿರ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

No comments:

Post a Comment