Tuesday, December 21, 2021

ಶ್ರೀ ಅಂತರಘಟ್ಟಮ್ಮ, ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ

ಭದ್ರಾವತಿ ತಾಲೂಕಿನ ಹಾತಿಕಟ್ಟೆ ಗ್ರಾಮದ ಶ್ರೀ ಅಂತರಘಟ್ಟಮ್ಮ ದೇವಿ ಹಾಗೂ ಶ್ರೀ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ ಹಾಗು ಗೋಪುರ ಕಳಸಾರೋಹಣ ಮಂಗಳವಾರ ವಿಜೃಂಭಣೆಯಿಂದ ಜರುಗಿತು.  ಈ ಸಂದರ್ಭದಲ್ಲಿ ಬಿಳಿಕಿ ಶ್ರೀಗಳಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೧:  ತಾಲೂಕಿನ ಹಾತಿಕಟ್ಟೆ ಗ್ರಾಮದ ಶ್ರೀ ಅಂತರಘಟ್ಟಮ್ಮ ದೇವಿ ಹಾಗೂ ಶ್ರೀ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ ಹಾಗು ಗೋಪುರ ಕಳಸಾರೋಹಣ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಉದ್ಯಮಿ ಬಿ.ಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಬಿಜೆಪಿ ಮುಖಂಡ ಸಂಜಯ್ ಹಾಗು ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮದ ಮುಖಂಡರು ಮತ್ತು ಹಾತಿಕಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಭಕ್ತಾಧಿಗಳು ಪಾಲ್ಗೊಂಡಿದ್ದರು.    

ಹೋರಾಟಗಾರನ ಹುಟ್ಟುಹಬ್ಬಕ್ಕೆ ಕೈಗಡಿಯಾರದ ಉಡುಗೊರೆ

೩ ದಶಕಗಳಿಗೂ ಹೆಚ್ಚು ಕಾಲ ಹೋರಾಟದಲ್ಲಿ ತೊಡಗಿರುವ ಆರ್. ವೇಣುಗೋಪಾಲ್


ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗು ರಾಮಕೃಷ್ಣ ಹೆಗಡೆಯವರ ಅಭಿಮಾನಿಯಾಗಿ ಕಳೆದ ೩ ದಶಕಗಳಿಗೂ ಹೆಚ್ಚು ಕಾಲ ಹೋರಾಟದಲ್ಲಿ ತಮ್ಮ ಜೀವನದ ಅರ್ಧ ಬದುಕು ಸಾಗಿಸಿರುವ ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರ ೬೪ನೇ ಹುಟ್ಟುಹಬ್ಬ ಮಂಗಳವಾರ ಹೋರಾಟದ ಮೂಲಕ ವಿಶಿಷ್ಟವಾಗಿ ಆಚರಿಸಿಕೊಳ್ಳಲಾಯಿತು. ಮಹಿಳೆಯರು ಹುಟ್ಟುಹಬ್ಬದ ಅಂಗವಾಗಿ ಕೈಗಡಿಯಾರ ಉಡುಗೊರೆಯಾಗಿ ನೀಡಿದರು. 
    ಭದ್ರಾವತಿ, ಡಿ. ೨೧: ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗು ರಾಮಕೃಷ್ಣ ಹೆಗಡೆಯವರ ಅಭಿಮಾನಿಯಾಗಿ ಕಳೆದ ೩ ದಶಕಗಳಿಗೂ ಹೆಚ್ಚು ಕಾಲ ಹೋರಾಟದಲ್ಲಿ ತಮ್ಮ ಜೀವನದ ಅರ್ಧ ಬದುಕು ಸಾಗಿಸಿರುವ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರ ೬೪ನೇ ಹುಟ್ಟುಹಬ್ಬ ಮಂಗಳವಾರ ಹೋರಾಟದ ಮೂಲಕ ವಿಶಿಷ್ಟವಾಗಿ ಆಚರಿಸಿಕೊಳ್ಳಲಾಯಿತು.
    ಜನ್ನಾಪುರ ನಿವಾಸಿಯಾಗಿರುವ ಆರ್. ವೇಣುಗೋಪಾಲ್‌ರವರು ಕೊಳಚೆ ಪ್ರದೇಶಗಳ ಅಭಿವೃದ್ಧಿಗಾಗಿ, ನಗರ ಹಾಗು ಗ್ರಾಮಾಂತರ ಭಾಗಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಗಾಗಿ ಹೋರಾಟ ನಡೆಸಿಕೊಂಡು ಬಂದವರು. ಇವುಗಳ ಜೊತೆಗೆ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿ, ಕೆರೆ ಹಾಗು ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಇನ್ನೂ ಹಲವಾರು ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದಾರೆ.
ಹೋರಾಟದ ಜೊತೆ ಜೊತೆಗೆ ಎರಡು ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ವಾರ್ಡ್ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಗಮನ ಸೆಳೆದಿದ್ದಾರೆ. ಇವರ ಹೋರಾಟಕ್ಕೆ ಸ್ಥಳೀಯ ಮಹಿಳೆಯರು ಹೆಚ್ಚಿನ ಸಹಕಾರ ನೀಡುತ್ತಿದ್ದು, ಈಗಲೂ ಸಹ ಮಹಿಳೆಯರು ಹೋರಾಟಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ.
    ಹೋರಾಟಗಾರನ ೬೪ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹಿಳೆಯರು ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ಇಲಾಖೆಯ ಬಿಆರ್‌ಎಲ್‌ಬಿಸಿ ಇಂಜಿನಿಯರ್‌ಗೆ ಮನವಿ ಸಲ್ಲಿಸಿ ನಂತರ ಆರ್. ವೇಣುಗೋಪಾಲ್‌ರವರಿಗೆ ಕೈಗಡಿಯಾರ(ವಾಚ್) ಉಡುಗೊರೆಯಾಗಿ ನೀಡುವ ಮೂಲಕ ಹೋರಾಟಕ್ಕೆ ಮತ್ತಷ್ಟು ಬಲ ತಂದುಕೊಡುವ ನಿಟ್ಟಿನಲ್ಲಿ ಮುನ್ನುಡಿ ಬರೆದರು.
    ಮಹಿಳಾ ಪ್ರಮುಖರಾದ ರಮಾ ವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾ ನಾಗರಾಜ್, ಶೈಲ, ಮುರುಗನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಮಸಿ : ಸೂಕ್ತ ಕ್ರಮಕ್ಕೆ ಮನವಿ

ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಸಮಾನ, ಸಮತೆಯ ಸಮಾಜ ನಿರ್ಮಾಣದ ಹರಿಕಾರ, ಮಹಾ ಮಾನವತಾವಾದಿ, ವಿಶ್ವ ಗುರು, ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳೆದು ಅವಮಾನಿಸಿರುವ ಘಟನೆಯನ್ನು ಖಂಡಿಸಿ ಮಂಗಳವಾರ ಭದ್ರಾವತಿಯಲ್ಲಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಅಖಿಲ ಭಾರತ ವೀರಶೈವ ಮಹಾಸಭಾ, ಯುವ ಘಟಕ ಹಾಗು ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೧: ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಸಮಾನ, ಸಮತೆಯ ಸಮಾಜ ನಿರ್ಮಾಣದ ಹರಿಕಾರ, ಮಹಾ ಮಾನವತಾವಾದಿ, ವಿಶ್ವ ಗುರು, ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳೆದು ಅವಮಾನಿಸಿರುವ ಘಟನೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಅಖಿಲ ಭಾರತ ವೀರಶೈವ ಮಹಾಸಭಾ, ಯುವ ಘಟಕ ಹಾಗು ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳೆದು ಅವಮಾನಿಸಿರುವುದು ಖಂಡನೀಯ. ತಕ್ಷಣ ಅವಮಾನಗೊಳಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ ನೇತೃತ್ವ ವಹಿಸಿದ್ದರು. ತಹಸೀಲ್ದಾರ್ ಆರ್. ಪ್ರದೀಪ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್, ಯುವಕ ಘಟಕದ ಅಧ್ಯಕ್ಷ ಮಂಜುನಾಥ್, ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್  ಅಧ್ಯಕ್ಷ ಸಿದ್ದಲಿಂಗಯ್ಯ, ಮಹಾಸಭಾ ಉಪಾಧ್ಯಕ್ಷ ವಾಗೀಶ್, ಪ್ರಧಾನ ಕಾರ್ಯದರ್ಶಿ ಬಿ.ಎಸ್ ಮಹೇಶ್‌ಕುಮಾರ್, ಸಹ ಕಾರ್ಯದರ್ಶಿ ಬಾರಂದೂರು ಮಂಜುನಾಥ್, ನಿರ್ದೇಶಕ ಜಗದೀಶ್ ಪಾಟೀಲ್, ಮಹಿಳಾ ಘಟಕದ ಉಪಾಧ್ಯಕ್ಷೆ ಶೋಭಾ ಪಾಟೀಲ್, ಕಾರ್ಯದರ್ಶಿ ಕವಿತಾ ಸುರೇಶ್, ಯುವ ಘಟಕದ ಉಪಾಧ್ಯಕ್ಷರಾದ ರುದ್ರೇಶ್, ಮಹಾದೇವ, ಕಾರ್ಯದರ್ಶಿ ಆನಂದ್, ಸಹ ಕಾರ್ಯದರ್ಶಿ ಚೇತನ್, ಖಜಾಂಚಿ ರಮೇಶ್, ಜಿಲ್ಲಾ ನಿರ್ದೇಶಕಿ ಎಸ್. ಪೂರ್ಣಿಮಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, December 20, 2021

ಡಿ.೨೨ರಂದು ಬಿ.ಆರ್ ಪ್ರಾಜೆಕ್ಟ್‌ನಲ್ಲಿ ಉಚಿತ ನೇತ್ರ ತಪಾಸಣಾ, ಶಸ್ತ್ರಚಿಕಿತ್ಸೆ ಶಿಬಿರ

    ಭದ್ರಾವತಿ, ಡಿ. ೨೦: ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ, ಬಿ.ಆರ್ ಪ್ರಾಜೆಕ್ಟ್, ಶಿವಮೊಗ್ಗ ಶಂಕರ ಕಣ್ಣಿ ಆಸ್ಪತ್ರೆ ವತಿಯಿಂದ  ಚಲನಚಿತ್ರ ನಟ, ಸಮಾಜ ಸೇವಕ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಉಚಿತ ನೇತ್ರ ತಪಾಸಣಾ, ನೇತ್ರ ಶಸ್ತ್ರ ಚಿಕಿತ್ಸೆ, ಮಸೂರ ಅಳವಡಿಕೆ ಮತ್ತು ನೇತ್ರದಾನ ಶಿಬಿರ ಡಿ.೨೨ರಂದು ಹಮ್ಮಿಕೊಳ್ಳಲಾಗಿದೆ.
    ಸಿಂಗನಮನೆ ಮತ್ತು ತಾವರಘಟ್ಟ ಗ್ರಾಮ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮತ್ತು ಸರ್ಕಾರಿ ಸಂಯುಕ್ತ ಆಸ್ಪತ್ರೆ, ಸಿಂಗನಮನೆ ಇವುಗಳ ಸಹಯೋಗದೊಂದಿಗೆ ಶಿಬಿರ ನಡೆಯುತ್ತಿದ್ದು, ಬೆಳಿಗ್ಗೆ ೯ ಗಂಟೆಗೆ ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಸಂಯುಕ್ತ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ. ಕೋವಿಡ್ ನಿಯಮ ಪಾಲನೆಗಳೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಳ್ಳುವ ಜೊತೆಗೆ ಯಶಸ್ವಿಗೊಳಿಸುವಂತೆ ಸ್ವರೂಪ್ ಜೈನ್ ಕೋರಿದ್ದಾರೆ.

ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ, ಸಂಘಟನೆ ನಿಷೇಧಿಸಿ : ಆಗ್ರಹ

ತಾಲೂಕು ಕುರುಬರ ಸಂಘದಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ


ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಎಂಇಎಸ್ ಪುಂಡರ ಮೇಲೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ತಕ್ಷಣ ಗಡಿಪಾರು ಮಾಡುವಂತೆ ಹಾಗು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಸೋಮವಾರ ಭದ್ರಾವತಿಯಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೦: ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಎಂಇಎಸ್ ಪುಂಡರ ಮೇಲೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ತಕ್ಷಣ ಗಡಿಪಾರು ಮಾಡುವಂತೆ ಹಾಗು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಕುರುಬರ ಸಂಘದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿ ಪ್ರಮುಖರು, ರಾಜ್ಯದಲ್ಲಿ ಎಂಇಎಸ್ ಪುಂಡರು ಮನಬಂದಂತೆ ವರ್ತಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಾಡಧ್ವಜ ಸುಟ್ಟು ಹಾಕಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಲ್ಲದೆ ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿ ದೇಶ ಭಕ್ತನನ್ನು ಅವಮಾನಗೊಳಿಸಿದ್ದಾರೆ. ಅದರಲ್ಲೂ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಭಯವಿಲ್ಲದೆ ಪುಂಡಾಟಿಕೆ ಮಾಡುತ್ತಿದ್ದಾರೆ. ಪ್ರತಿ ಬಾರಿ ನಾಡು, ನುಡಿ  ವಿಷಯದಲ್ಲಿ ಕನ್ನಡಿಗರನ್ನು ಅವಮಾನಿಸಿ ಹಾಗು ನಾಡಿನ ಮಹಾನ್ ವ್ಯಕ್ತಿಗಳನ್ನು ಅಡ್ಡತಂದು ಅಶಾಂತಿ ವಾತಾವರಣ ನಿರ್ಮಿಸುತ್ತಿದ್ದಾರೆಂದು ಆರೋಪಿಸಿದರು.
    ತಕ್ಷಣ ಆಶಾಂತಿ ವಾತಾವರಣ ನಿರ್ಮಾಣಗೊಳ್ಳಲು ಕಾರಣಕರ್ತರಾಗಿರುವ ಪುಂಡರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಎಂಇಎಸ್ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದರು.
    ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭಾ ಸದಸ್ಯರಾದ ಕಾಂತರಾಜ್, ಶ್ರೇಯಸ್, ಮಹಿಳಾ ಪ್ರಮುಖರಾದ ಶಾರದಮ್ಮ, ಹೇಮಾವತಿ ಶಿವಾನಂದ್, ಸಂಘದ ಪ್ರಮುಖರಾದ ಕಾರ್ಯದರ್ಶಿ ಬಿ.ಎ ರಾಜೇಶ್, ಸಹ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕರಾದ ಬಿ.ಎಚ್ ರಾಜಪ್ಪ, ಚಂದ್ರಪ್ಪ, ಬಿ.ಎಸ್ ಮಂಜುನಾಥ್, ಎನ್.ಸತೀಶ್, ವಸಂತ್, ಮಾಜಿ ಅಧ್ಯಕ್ಷ ತಿಮ್ಮಣ್ಣ, ಕೆ.ಎನ್ ನಾಗರಾಜ್, ನಾಗಭೂಷಣ್, ಸಣ್ಣಯ್ಯ, ನಗರಸಭೆ ಮಾಜಿ ಸದಸ್ಯ ಸುಬ್ಬಣ್ಣ,  ಆಮ್‌ ಆದ್ಮಿ ಪಾರ್ಟಿಯ ಎಚ್.‌ ರವಿಕುಮಾರ್‌, ಕೇಸರಿ ಪಡೆ ಅಧ್ಯಕ್ಷ ಕೆ.ಪಿ ಗಿರೀಶ್‌, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಿನೋದ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಎನ್ವಿರಾನ್ಮೆಂಟ್ ಮ್ಯಾನೇಜ್‌ಮೆಂಟ್ ಪ್ರಶಸ್ತಿ

 ಭದ್ರಾವತಿ, ಡಿ. ೨೦ : ಉಕ್ಕು ವಲಯಕ್ಕೆ ನೀಡುವ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಎನ್ವಿರಾನ್ಮೆಂಟ್ ಮ್ಯಾನೇಜ್‌ಮೆಂಟ್ ಪ್ರಶಸ್ತಿಯನ್ನು ಈ ಬಾರಿ ಸಹ ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್) ಪಡೆದುಕೊಂಡಿದೆ.
    ಸತತವಾಗಿ ೩ ವರ್ಷಗಳಿಂದ ಈ ಪ್ರಶಸ್ತಿಯನ್ನು ಸೈಲ್ ತನ್ನದಾಗಿಸಿಕೊಂಡು ಬಂದಿದೆ. ಸುಸ್ಥಿರ ಮತ್ತು ಜವಾಬ್ದಾರಿಯುತ ಪರಿಸರ ಉಕ್ಕಿನ ತಯಾರಿಕೆಗಾಗಿ ಕಂಪನಿಯು ಮಾಡಿದ ಪ್ರಯತ್ನಗಳಿಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.
    ಹವಾಮಾನ ಬದಲಾವಣೆಯ ಬಗೆಯಿರುವ ಜಾಗತಿಕ ಕಾಳಜಿಗೆ ಸೈಲ್ ಸಂವೇದನಾಶೀಲವಾಗಿದೆ. ಕಾರ್ಬನ್ ಹೆಜ್ಜೆ ಗುರುತಿನ ಕಡಿತವು ಕಂಪನಿಯ ಕಾರ್ಪೊರೇಟ್ ನೀತಿಗಳು ಮತ್ತು ಕಾರ್ಯಾಚರಣೆಗಳ ಅವಿಭಾಜ್ಯ ಅಂಗವಾಗಿದೆ. ಅತ್ಯಾಧುನಿಕ ಪರಿಸರ ಸ್ನೇಹಿ ತಂತ್ರಜ್ಞಾನದ ನಿಯೋಜನೆ, ಸಂಪನ್ಮೂಲ ದಕ್ಷತೆಗಾಗಿ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಆರ್ ಮತ್ತು ಡಿ ಉಪಕ್ರಮಗಳು, ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಬನ್ ಸಿಂಕ್‌ಗಳ ರಚನೆ, ಎಲ್.ಇ.ಡಿ ದೀಪಗಳಿಗೆ ಕ್ರಮೇಣ ಬದಲಾವಣೆ, ನವೀಕರಿಸಬಹುದಾದ ಇಂಧನಗಳ ಪಾಲನ್ನು ಹೆಚ್ಚಿಸುವುದು ಸೇರಿದಂತೆ ಇತ್ಯಾದಿ ಪ್ರಮುಖ ಉಪಕ್ರಮಗಳನ್ನು ಸೈಲ್ ರೂಪಿಸಿಕೊಂಡಿದೆ.



    ಮಾಲಿನ್ಯ ನಿಯಂತ್ರಣ ಸೌಲಭ್ಯಗಳನ್ನು ನವೀಕರಿಸುವುದು, ಶೂನ್ಯ ದ್ರವ ವಿಸರ್ಜನೆಯನ್ನು ಸಾಧಿಸುವ ಗುರಿಯೊಂದಿಗೆ ನೀರಿನ ಸಂರಕ್ಷಣೆಯ ಪ್ರಯತ್ನಗಳು ಕಂಪನಿಯ ಪರಿಸರ ಸಂರಕ್ಷಣಾ ಕ್ರಮಗಳಾಗಿವೆ. ವಿವಿಧ ಘನತಾಜ್ಯಗಳ ಸಮರ್ಥ ನಿರ್ವಹಣೆ (ಅಂದರೆ ಪ್ರಕ್ರಿಯೆ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಕ್ಯಾಂಟೀನ್/ ನಗರಪ್ರದೇಶದ ತ್ಯಾಜ್ಯ) ಸೇರಿದಂತೆ ವಿವಿಧ ಪರಿಸರ ಸಂರಕ್ಷಣ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿವೆ. ಅರಣ್ಯೀಕರಣದ ಮೂಲಕ ಇಂಗಾಲದ ವಶಪಡಿಸಿಕೊಳ್ಳುವಿಕೆ, ಗಣಿಗಾರಿಕೆಯಿಂದ ಹೊರಗಿರುವ ಪ್ರದೇಶದ ಪರಿಸರ ಮರುಸ್ಥಾಪನೆ ಇತ್ಯಾದಿ ಗುರಿ ಹೊಂದಿದೆ.
    ಇತ್ತೀಚೆಗೆ ನಡೆದ ವರ್ಚುಯಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸೈಲ್ ಸ್ವೀಕರಿಸಿದೆ. ಸತತವಾಗಿ ೩ ಬಾರಿ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೈಲ್‌ ಆಡಳಿತ ಮಂಡಳಿಗೆ ನಗರ ವಿಐಎಸ್‌ಎಲ್‌ ಕಾರ್ಖಾನೆಯ ಸಮುದಾಯ ಅಭಿನಂದನೆ ಸಲ್ಲಿಸಿದೆ.  

Sunday, December 19, 2021

ಭದ್ರಾವತಿಯಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ

 ಖಾಸಗಿ ಆಸ್ಪತ್ರೆ ನರ್ಸಿಂಗ್ ವಿದ್ಯಾರ್ಥಿನಿಯಲ್ಲಿ ಸೋಂಕು


ಭದ್ರಾವತಿ: ನಗರದಲ್ಲಿ ಮೊದಲ ಬಾರಿಗೆ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಈ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.     

    ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಯ ಒಟ್ಟು  27 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 20 ವರ್ಷದ ಓರ್ವ ವಿದ್ಯಾರ್ಥಿನಿಯಲ್ಲಿ ರೂಪಾಂತರಿ ವೈರಸ್ ಒಮಿಕ್ರಾನ್ ಪತ್ತೆಯಾಗಿದೆ.  ಶಿವಮೊಗ್ಗದಲ್ಲಿ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ ತಪಾಸಣೆ ಪಡಿಸಲಾಗಿತ್ತು. ಈ ಸಂದರ್ಭದಲ್ಲಿ 27 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು.    

     ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸೀಲ್ ಡೌನ್  ಮಾಡಿ ಆಸ್ಪತ್ರೆಯಲ್ಲಿ ಇರುವವರ ಮೇಲೆ ನಿಗಾ ವಹಿಸಲಾಗಿತ್ತು. ಈ ನಡುವೆ ಸೋಂಕಿತರ  ಮಾದರಿಯನ್ನು ಹೆಚ್ಚಿನ ತಪಾಸಣೆಗೆ  ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ರವಾನೆ ಮಾಡಲಾಗಿತ್ತು.  ಇದರ ಫಲಿತಾಂಶ ಭಾನುವಾರ  ಹೊರಬಿದ್ದಿದ್ದು   ಈ ಪೈಕಿ ಓರ್ವ ವಿದ್ಯಾರ್ಥಿನಿಯಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ.   ಈ   ವಿದ್ಯಾರ್ಥಿನಿಗೆ  ಹೆಚ್ಚಿನ ಚಿಕಿತ್ಸೆ  ಮುಂದುವರಿಸಲು ಸೂಚಿಸಲಾಗಿದೆ.