Monday, December 20, 2021

ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ, ಸಂಘಟನೆ ನಿಷೇಧಿಸಿ : ಆಗ್ರಹ

ತಾಲೂಕು ಕುರುಬರ ಸಂಘದಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ


ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಎಂಇಎಸ್ ಪುಂಡರ ಮೇಲೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ತಕ್ಷಣ ಗಡಿಪಾರು ಮಾಡುವಂತೆ ಹಾಗು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಸೋಮವಾರ ಭದ್ರಾವತಿಯಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೦: ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಎಂಇಎಸ್ ಪುಂಡರ ಮೇಲೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ತಕ್ಷಣ ಗಡಿಪಾರು ಮಾಡುವಂತೆ ಹಾಗು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಕುರುಬರ ಸಂಘದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿ ಪ್ರಮುಖರು, ರಾಜ್ಯದಲ್ಲಿ ಎಂಇಎಸ್ ಪುಂಡರು ಮನಬಂದಂತೆ ವರ್ತಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಾಡಧ್ವಜ ಸುಟ್ಟು ಹಾಕಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಲ್ಲದೆ ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿ ದೇಶ ಭಕ್ತನನ್ನು ಅವಮಾನಗೊಳಿಸಿದ್ದಾರೆ. ಅದರಲ್ಲೂ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಭಯವಿಲ್ಲದೆ ಪುಂಡಾಟಿಕೆ ಮಾಡುತ್ತಿದ್ದಾರೆ. ಪ್ರತಿ ಬಾರಿ ನಾಡು, ನುಡಿ  ವಿಷಯದಲ್ಲಿ ಕನ್ನಡಿಗರನ್ನು ಅವಮಾನಿಸಿ ಹಾಗು ನಾಡಿನ ಮಹಾನ್ ವ್ಯಕ್ತಿಗಳನ್ನು ಅಡ್ಡತಂದು ಅಶಾಂತಿ ವಾತಾವರಣ ನಿರ್ಮಿಸುತ್ತಿದ್ದಾರೆಂದು ಆರೋಪಿಸಿದರು.
    ತಕ್ಷಣ ಆಶಾಂತಿ ವಾತಾವರಣ ನಿರ್ಮಾಣಗೊಳ್ಳಲು ಕಾರಣಕರ್ತರಾಗಿರುವ ಪುಂಡರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಎಂಇಎಸ್ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದರು.
    ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭಾ ಸದಸ್ಯರಾದ ಕಾಂತರಾಜ್, ಶ್ರೇಯಸ್, ಮಹಿಳಾ ಪ್ರಮುಖರಾದ ಶಾರದಮ್ಮ, ಹೇಮಾವತಿ ಶಿವಾನಂದ್, ಸಂಘದ ಪ್ರಮುಖರಾದ ಕಾರ್ಯದರ್ಶಿ ಬಿ.ಎ ರಾಜೇಶ್, ಸಹ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕರಾದ ಬಿ.ಎಚ್ ರಾಜಪ್ಪ, ಚಂದ್ರಪ್ಪ, ಬಿ.ಎಸ್ ಮಂಜುನಾಥ್, ಎನ್.ಸತೀಶ್, ವಸಂತ್, ಮಾಜಿ ಅಧ್ಯಕ್ಷ ತಿಮ್ಮಣ್ಣ, ಕೆ.ಎನ್ ನಾಗರಾಜ್, ನಾಗಭೂಷಣ್, ಸಣ್ಣಯ್ಯ, ನಗರಸಭೆ ಮಾಜಿ ಸದಸ್ಯ ಸುಬ್ಬಣ್ಣ,  ಆಮ್‌ ಆದ್ಮಿ ಪಾರ್ಟಿಯ ಎಚ್.‌ ರವಿಕುಮಾರ್‌, ಕೇಸರಿ ಪಡೆ ಅಧ್ಯಕ್ಷ ಕೆ.ಪಿ ಗಿರೀಶ್‌, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಿನೋದ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


No comments:

Post a Comment