Wednesday, February 5, 2025

ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೈಯದ್ ರಿಯಾಜ್

ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ೩೦ನೇ ವಾರ್ಡ್ ಸದಸ್ಯರಾದ ಸೈಯದ್ ರಿಯಾಜ್ ಬುಧವಾರ ಅಧಿಕಾರ ಸ್ವೀಕರಿಸಿದರು. 
    ಭದ್ರಾವತಿ : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ೩೦ನೇ ವಾರ್ಡ್ ಸದಸ್ಯರಾದ ಸೈಯದ್ ರಿಯಾಜ್ ಬುಧವಾರ ಅಧಿಕಾರ ಸ್ವೀಕರಿಸಿದರು. 
    ನಗರಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಪಕ್ಷ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಅದರಂತೆ ೧ ವರ್ಷದ ಅವಧಿಗೆ ವಾರ್ಡ್ ನಂ.೨೮ರ ಸದಸ್ಯರಾದ ಕಾಂತರಾಜ್‌ರವರು ಅಧಿಕಾರ ನಿರ್ವಹಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತೆರವಾಗಿದ್ದ ಸ್ಥಾನಕ್ಕೆ ಇದೀಗ ಸೈಯದ್ ರಿಯಾಜ್ ಆಯ್ಕೆಯಾಗುವ ಮೂಲಕ ಅಧಿಕಾರ ವಹಿಸಿಕೊಂಡಿದ್ದಾರೆ. 
    ನಗರಸಭೆ ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾದ ಸೈಯದ್ ರಿಯಾಜ್‌ರನ್ನು ಅಭಿನಂದಿಸಿದ್ದಾರೆ. 

ಫೆ.೭ರಂದು `ಬೆಂಗಳೂರು ಚಲೋ ಹೋರಾಟ' ಎನ್‌ಪಿಎಸ್ ನೌಕರರಿಂದ ಪತ್ರ ಚಳುವಳಿ

ಬೆಂಗಳೂರಿನಲ್ಲಿ ಫೆ.೭ರಂದು ನಡೆಯಲಿರುವ `ಬೆಂಗಳೂರು ಚಲೋ ಹೋರಾಟ'ದ ಅಂಗವಾಗಿ ಭದ್ರಾವತಿಯಲ್ಲಿ ಎನ್‌ಪಿಎಸ್ ತೊಲಗಿಸಿ ಓಪಿಎಸ್‌ಗಾಗಿ ಪತ್ರ ಚಳುವಳಿ ನಡೆಸಲಾಯಿತು. 
    ಭದ್ರಾವತಿ: ಬೆಂಗಳೂರಿನಲ್ಲಿ ಫೆ.೭ರಂದು ನಡೆಯಲಿರುವ `ಬೆಂಗಳೂರು ಚಲೋ ಹೋರಾಟ'ದ ಅಂಗವಾಗಿ ಎನ್‌ಪಿಎಸ್ ತೊಲಗಿಸಿ ಓಪಿಎಸ್‌ಗಾಗಿ ಪತ್ರ ಚಳುವಳಿ ನಡೆಸಲಾಯಿತು. 
    ನಗರದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಮಂಗಳವಾರ ಸಂಜೆ ಸಭೆ ನಡೆಸಿದ ಎನ್‌ಪಿಎಸ್ ನೌಕರರು ಪತ್ರ ಚಳುವಳಿ ಮೂಲಕ ತಾಲೂಕಿನ ಎಲ್ಲಾ ನೌಕರರು `ಬೆಂಗಳೂರು ಚಲೋ ಹೋರಾಟ'ದಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಕೋರಿದರು. 
    ಸಭೆಯಲ್ಲಿ ಪಾಲ್ಗೊಂಡ ನೌಕರರು ನಿವೃತ್ತಿ ನಂತರ ನೆಮ್ಮದಿ ಜೀವನಕ್ಕೆ ಎನ್‌ಪಿಎಸ್ ಯಾವುದೇ ರೀತಿ ನೆರವಾಗುವುದಿಲ್ಲ. ನೆಮ್ಮದಿ ಬದುಕಿಗೆ ಪಿಂಚಣಿ ಬೇಕೇ ಬೇಕು ಇಲ್ಲದಿದ್ದರೆ ನಮ್ಮ ಮುಂದಿನ ಬದುಕು ದುಸ್ತರವಾಗುತ್ತದೆ ಎಂದು ತಮ್ಮ ಅಳಲನ್ನು ತೋರ್ಪಡಿಸಿಕೊಂಡರು. 

ರಥಸಪ್ತಮಿ ಅಂಗವಾಗಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಉತ್ಸವ ಮೆರವಣಿಗೆ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಥಸಪ್ತಮಿ ಅಂಗವಾಗಿ ಸ್ವಾಮಿಯ ಉತ್ಸವ ಜರುಗಿತು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಥಸಪ್ತಮಿ ಅಂಗವಾಗಿ ಸ್ವಾಮಿಯ ಉತ್ಸವ ಜರುಗಿತು. 
    ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥ ಶರ್ಮರವರ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಸ್ವಾಮಿಯ ಉತ್ಸವ ಮೆರವಣಿಗೆ ನಡೆಯಿತು. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಕುಂಭಮೇಳದ ಗಂಗಾ ಜಲ ವಿತರಣೆ ನಡೆಯಿತು. ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಿ. ರಮಾಕಾಂತ್, ನರಸಿಂಹಚಾರ್, ಕೃಷ್ಣಪ್ಪ, ಶಂಕರಪ್ಪ, ರವಿ ಮಾಸ್ಟರ್, ಶರತ್, ಶ್ರೀಕಾಂತ್, ಪ್ರದೀಪ್, ಶೇಷಗಿರಿ ಮಾಸ್ಟರ್, ಡೆಕೋರೇಟ್ ಸಂಜು, ವಿವಿಧ ಭಜನಾ ತಂಡದ ಮಹಿಳೆಯರು, ವೇದ ಪಾಠ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು. 
    ರಥಬೀದಿ ರಸ್ತೆ ದುರಸ್ತಿಗೊಳಿಸಿ : 
    ದೇವಸ್ಥಾನ ಮುಂಭಾಗದ ರಥಬೀದಿ ರಸ್ತೆ ಹಲವಾರು ವರ್ಷಗಳಿಂದ ಹಾಳಾಗಿದ್ದು, ಇದರಿಂದಾಗಿ ರಥೋತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗಮನ ಹರಿಸಿ ಮುಂದಿನ ಮಹಾರಥೋತ್ಸವದೊಳಗಾಗಿ ಹಾಳಾದ ರಸ್ತೆ ದುರಸ್ತಿಗೊಳಿಸಿ ಡಾಬರೀಕರಣ ಕೈಗೊಂಡು ಅನುಕೂಲ ಮಾಡಿಕೊಡುವಂತೆ ಸ್ಥಳೀಯ ಭಕ್ತರು ಕೋರಿದ್ದಾರೆ. 

ಫೆ.೮ರಂದು ಲಯನ್ಸ್ ಪ್ರಾಂತೀಯ ಸಮ್ಮೇಳನ `ಸ್ನೇಹ ಚಂದ್ರಮ'

ಭದ್ರಾವತಿ ಲಯನ್ಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತೀಯ ಅಧ್ಯಕ್ಷ ಬಿ.ಎಸ್ ಮಹೇಶ್ ಕುಮಾರ್ ಮಾತನಾಡಿದರು.
    ಭದ್ರಾವತಿ : ಲಯನ್ಸ್ ಇಂಟರ್‌ನ್ಯಾಷನಲ್ ವಲಯ-೭, ಜಿಲ್ಲೆ-೩೧೭ಸಿ ಪ್ರಾಂತೀಯ ಸಮ್ಮೇಳನ `ಸ್ನೇಹ ಚಂದ್ರಮ' ಫೆ.೮ರಂದು ಮಧ್ಯಾಹ್ನ ೩ ಗಂಟೆಗೆ ನಗರದ ನ್ಯೂಟೌನ್ ಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತೀಯ ಅಧ್ಯಕ್ಷ ಬಿ.ಎಸ್ ಮಹೇಶ್ ಕುಮಾರ್ ಹೇಳಿದರು. 
    ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ನಮ್ಮ ಪ್ರಾಂತೀಯ ವ್ಯಾಪ್ತಿಯಲ್ಲಿ ೪ ವಲಯಗಳು ಬರಲಿದ್ದು, ಪ್ರಾಂತೀಯ ಅಧ್ಯಕ್ಷರ ಜವಾಬ್ದಾರಿ ಹೆಚ್ಚಿನದ್ದಾಗಿದೆ. ಸಾಮಾಜಿಕವಾಗಿ ನಮ್ಮಲ್ಲಿನ ಬದ್ಧತೆ, ಸೇವಾ ಮನೋಭಾವನೆ ಇಲ್ಲಿ ಬಹುಮುಖ್ಯವಾಗಿವೆ. ನಮ್ಮನ್ನು ಹೆಚ್ಚಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. 
    `ಸ್ನೇಹ ಚಂದ್ರಮ' ಪ್ರಾಂತೀಯ ಸಮ್ಮೇಳನದಲ್ಲಿ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಕ್ಲಬ್‌ನ ಪ್ರಮುಖರು ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಕೆ ಸಂಗಮೇಶ್ವರ್, ಕುವೆಂಪು ವಿ.ವಿ ಕುಲಪತಿ ಡಾ. ಶರತ್ ಅನಂತಮೂರ್ತಿ, ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಕೆ.ಪಿ ಪುತ್ತುರಾಯ, ವಿಡಿಜಿ-೧ ಸಪ್ನ ಸುರೇಶ್, ವಿಡಿಜಿ-೨ ರಾಜೀವ್ ಕೊಟ್ಯಾನ್ ಮತ್ತು ವಲಯ ಸಲಹೆಗಾರ ಬಿ. ದಿವಾಕರ ಶೆಟ್ಟಿ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ ಎಂದರು. 
    ವಲಯ ಕಾರ್ಯದರ್ಶಿ ಪರಮೇಶ್ವರಪ್ಪ, ಸಮ್ಮೇಳನ ಅಧ್ಯಕ್ಷ ಜಿ.ಡಿ ಪ್ರಭುದೇವ, ಸಂಚಾಲಕ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ಹೆಬ್ಬಂಡಿ ನಾಗರಾಜ್, ಖಜಾಂಚಿ ಕೆ.ಎಚ್ ರವಿಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನಾಯ್ಡು, ಕಾರ್ಯದರ್ಶಿ ಎನ್. ಶಿವಕುಮಾರ್ ಹಾಗು ಖಜಾಂಚಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Tuesday, February 4, 2025

ಖಾಸಗಿ ಶಾಲೆಗಳು ಶುಲ್ಕ ವಸೂಲಾತಿ, ದಾಖಲಾತಿ ಮಾಹಿತಿ ಕಡ್ಡಾಯವಾಗಿ ಪ್ರಕಟಿಸಲು ಸೂಚನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಹಲವು ಕಾರ್ಯತಂತ್ರ : ಎ.ಕೆ ನಾಗೇಂದ್ರಪ್ಪ 

ಭದ್ರಾವತಿ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿದರು. 
    ಭದ್ರಾವತಿ: ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ೨೦೨೫-೨೬ನೇ ಸಾಲಿನ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಶುಲ್ಕ ವಸೂಲಾತಿ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೂಚಿಸಿದ್ದಾರೆ. 
    ಅವರು ಮಂಗಳವಾರ ಈ ಕುರಿತು ಮಾಹಿತಿ ನೀಡಿ, ಶಿಕ್ಷಣ ಹಕ್ಕು ಕಾಯಿದೆ-೨೦೦೯ರ ಸೆಕ್ಷನ್-೨(ಬಿ)ರಂತೆ ಎಲ್ಲಾ ಖಾಸಗಿ ಶಾಲೆಗಳು ತಮ್ಮ ಅಧಿಸೂಚಿತ ಶುಲ್ಕವನ್ನು ತಮ್ಮ ಶಾಲಾ ಜಾಲತಾಣದಲ್ಲಿ, ಶಾಲಾ ಸೂಚನಾ ಫಲಕದಲ್ಲಿ ಮತ್ತು ಇಲಾಖಾ ಜಾಲತಾಣದಲ್ಲಿ ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಿಸುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಶುಲ್ಕ ವಸೂಲಾತಿ ಮತ್ತು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಕ್ಷನ್-೧೩ರ ಅಂಶಗಳನ್ನು ಸಹ ಕಡ್ಡಾಯವಾಗಿ ಮಾರ್ಚ್ ೩೧ರೊಳಗಾಗಿ ಪ್ರಕಟಿಸಬೇಕೆಂದರು. 
    ಶಿಕ್ಷಣ ಹಕ್ಕು ಕಾಯಿದೆ -೨೦೦೯ರ ಪ್ರಕಾರ ಆರ್.ಟಿ.ಇ ಮಕ್ಕಳ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಇದರಿಂದ ಆಡಳಿತ ಮಂಡಳಿಯವರು ಯಾವುದೇ ರೀತಿಯ ದಾಖಲಾತಿ/ಬೋದನಾ ಶುಲ್ಕವನ್ನು ವಿದ್ಯಾರ್ಥಿಯ ಪೋಷಕರುಗಳಿಂದ ಪಡೆಯುವಂತಿಲ್ಲ ಎಂದರು. 
    ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ಕಾರ್ಯತಂತ್ರಗಳು:  
    ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಹಲವಾರು ಕಾರ್ಯತಂತ್ರಗಳನ್ನು ಕೈಗೊಳ್ಳಲಾಗಿದ್ದು, ಮಕ್ಕಳು ಪರೀಕ್ಷೆ ಸಮರ್ಥವಾಗಿ ಎದುರಿಸುವ ಮೂಲಕ ಉತ್ತಮ ಫಲಿತಾಂಶ ಕಂಡುಕೊಳ್ಳುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ವಿಶ್ಲೇಷಣೆ ಮತ್ತು ೨೦೨೪-೨೫ನೇ ಸಾಲಿನ ಫಲಿತಾಂಶ ಸುಧಾರಣೆಗೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮುಖ್ಯಶಿಕ್ಷಕರೊಂದಿಗೆ ಚರ್ಚೆ ನಡೆಸಲಾಗಿದೆ. ೮ನೇ ತರಗತಿಯಿಂದಲೇ ಮಕ್ಕಳ ಕಲಿಕೆಗೆ ಒತ್ತು ನೀಡಲು ಮುಖ್ಯ ಶಿಕ್ಷಕರಿಗೆ ಬ್ಲಾಕ್ ಮಟ್ಟದಲ್ಲಿ ಸಭೆ. ಮಕ್ಕಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿ ಕಲಿಕಾ ಸಾಮರ್ಥಗಳಿಗೆ ಅನುಗುಣವಾಗಿ ಗುಂಪುಗಳಾಗಿ ವಿಂಗಡನೆ. ಎಲ್ಲಾ ಶಾಲೆಗಳಲ್ಲಿ ಪೋಷಕರ ಮತ್ತು ತಾಯಂದಿರ ಸಭೆ. ಪ್ರತಿ ತಿಂಗಳು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು. 
    ಪ್ರತಿ ವಿಷಯದಲ್ಲೂ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣತೆಗೆ ಬೇಕಾದ ಕನಿಷ್ಠ ಅಂಕಗಳನ್ನು ಗಳಿಸುವಂತೆ ಶಿಕ್ಷಕರೊಂದಿಗೆ ವಿಷಯ ವೇದಿಕೆ ಸಭೆಗಳಲ್ಲಿ ಚರ್ಚೆ.  ಪ್ರತಿ ವಿಷಯಗಳಲ್ಲಿ ಪ್ರತಿ ಘಟಕಕ್ಕೂ ಘಟಕ ಪರೀಕ್ಷೆ, ವಿಶ್ಲೇಷಣೆ. ನಿರಂತರ ಗೈರಾಗುವ ವಿದ್ಯಾರ್ಥಿಗಳ ಮನೆ ಭೇಟಿ ಮಾಡಿ ಮಕ್ಕಳ ಮನವೊಲಿಸುವಿಕೆ. ಏಕರೂಪದ ವೇಳಾಪಟ್ಟಿ ತಯಾರಿಕೆ. ವಿದ್ಯಾರ್ಥಿಗಳಿಗೆ ವೇಕ್ ಅಪ್ ಕಾಲ್, ಪೀರ್ ಗ್ರೂಪ್ಪಳ ರಚನೆ. ಜಿಲ್ಲಾ ಹಂತದಿಂದ ಕಿರುಪರೀಕ್ಷೆಗಳು, ತಯಾರಿ ಪರೀಕ್ಷೆಗಳ ನಿರ್ವಹಣೆ ಮತ್ತು ತಾಲ್ಲೂಕು/ಜಿಲ್ಲಾ ಹಂತದಲ್ಲಿ ವಿಶ್ಲೇಷಣೆ. ಪ್ರತಿ ತಾಲೂಕಿನ ಜಿಲ್ಲಾ ಕಛೇರಿಯ ವಿಷಯ ಪರಿವೀಕ್ಷಕರುಗಳ ನೇತೃತ್ವದಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ವಿಷಯಾಧಾರಿತ ವೇದಿಕೆಗಳಲ್ಲಿ ಚರ್ಚೆ. ಶಾಲಾ ಹಂತದಲ್ಲಿ ವರ್ಷದಲ್ಲಿ ಮೂರು ಬಾರಿ ಅಂದರೆ ತ್ರೈಮಾಸಿಕವಾಗಿ ಎಸ್.ಎಸ್.ಎಲ್.ಸಿ ಓದುತ್ತಿರುವ ಪ್ರತಿ ಮಗುವನ್ನು ಕೌನ್ಸಿಲಿಂಗ್‌ಗೆ ಒಳಪಡಿಸುವಿಕೆ ಹಾಗೂ ಆಪ್ತ ಸಮಾಲೋಚನೆಗೆ ಮುಖ್ಯಶಿಕ್ಷಕರಿಗೆ ಸೂಚನೆ. ಪ್ರತಿ ವಿಷಯದಲ್ಲೂ ಪ್ರತಿವಾರ ಒಂದು ವಿಚಾರ ಸಂಕಿರಣ ಮಾಡಿ ವಿಭಿನ್ನ ರೀತಿ ಚಟುವಟಿಕೆಗಳನ್ನು ಮಾಡಿ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಶಾಲಾ ಹಂತದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು. 
    ಪ್ರತಿದಿನ ಒಂದು ಗಂಟೆ ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉಳಿದು ಹೆಚ್ಚುವರಿ ಅಧ್ಯಯನ ಮಾಡಿಸುವುದು.  ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲೂ ತೇರ್ಗಡೆಯಾಗಲು ಕಲಿಯಬೇಕಾದ ಅಂಶಗಳನ್ನು ಮುಖ್ಯಾಂಶಗಳಲ್ಲಿ ಗುರುತಿಸಿ ಅವುಗಳನ್ನು ಪದೇಪದೇ ಅಭ್ಯಾಸ ಮಾಡಿಸಲು ಕ್ರಮ. ಕಲಿಕೆಯಲ್ಲಿ ೫೦ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಿಗೆ ಪ್ರತ್ಯೇಕ ಕ್ರಿಯಾ ಯೋಜನೆ ತಯಾರಿಸಿ ಅನುಪಾಲನೆ. ಸರಣಿ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ವಿಶ್ಲೇಷಿಸಿ ಮಕ್ಕಳು ಮತ್ತು ಪೋಷಕರ ಗಮನಕ್ಕೆ ತರುವಲ್ಲಿ ಕ್ರಮ.  ಮಧ್ಯಂತರ ಅವಧಿಯ ಸಮಯ ಸದ್ಬಳಕೆ ಮಾಡಿಕೊಂಡು ನಿರಂತರ ಕಲಿಕೆಗೆ ಮಕ್ಕಳನ್ನು ಸಜ್ಜುಗೊಳಿಸುವುದು.  ಪರಿಶಿಷ್ಟ ಜಾತಿ/ಪಂಗಡ/ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಂದ ಬರುವ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯಗಳಿಗೆ ಭೇಟಿನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ.  ಮಕ್ಕಳಿಗೆ ಪರೀಕ್ಷೆಯ ಭಯ ಹೋಗಲಾಡಿಸಲು ಬ್ಲಾಕ್ ಮಟ್ಟದಲ್ಲಿ ತಜ್ಞರಿಂದ ವಿಶೇಷ ಕಾರ್ಯಾಗಾರ.  ಶಾಲಾ ಹಂತದಲ್ಲಿ ಕಳೆದ ೩ ವರ್ಷಗಳ ಪ್ರಶ್ನೆಪತ್ರಿಕೆಗಳಿಗೆ ವಿದ್ಯಾರ್ಥಿಗಳಿಂದ ಉತ್ತರ ಬರೆಸುವಲ್ಲಿ ಕ್ರಮ. ತಾಲೂಕು ಮಟ್ಟದ ಅಧಿಕಾರಿಗಳಿಗೆ ತಲಾ ೨ ಶಾಲೆಗಳ ಉಸ್ತುವಾರಿ ನೀಡಿ ಫಲಿತಾಂಶ ಸುಧಾರಣೆಗೆ ಸೂಕ್ತ ಸಲಹೆ-ಮಾರ್ಗದರ್ಶನ. ಶೇಕಡಾ ೧೦೦ಕ್ಕೆ ೧೦೦ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸನ್ಮಾನ ಹಾಗು ಕಳೆದ ಸಾಲಿನಲ್ಲಿ ಆಯಾ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಪ್ರಸ್ತುತ ಸಾಲಿನ ವಿದ್ಯಾರ್ಥಿಗಳಿಗೆ ಯಶೋಗಾಥೆಗಳ ಹಂಚಿಕೆ ನಡೆಸಲಾಗಿದೆ ಎಂದರು. 
    ತಹಸೀಲ್ದಾರ್ ಪರುಸಪ್ಪ ಕುರುಬರ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಜಿ. ಧರ್ಮಪ್ರಸಾದ್ ೩ನೇ ಅವಧಿಗೆ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಆಯ್ಕೆ

ಮುಖಂಡರು, ಕಾರ್ಯಕರ್ತರಿಂದ ಸಂಭ್ರಮಾಚರಣೆ 

ಮೂರನೇ ಅವಧಿಗೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲದ ಅಧ್ಯಕ್ಷರಾಗಿ ಆಯ್ಕೆಯಾದ ಯುವ ಮುಖಂಡ, ಸಂಘಟಕ ಜಿ. ಧರ್ಮಪ್ರಸಾದ್ ಅವರನ್ನು ಮಹಾಶಕ್ತಿ ಕೇಂದ್ರದ ವತಿಯಿಂದ ಅಭಿನಂದಿಸಲಾಯಿತು.
    ಭದ್ರಾವತಿ : ಮೂರನೇ ಅವಧಿಗೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲದ ಅಧ್ಯಕ್ಷರಾಗಿ ಆಯ್ಕೆಯಾದ ಯುವ ಮುಖಂಡ, ಸಂಘಟಕ ಜಿ. ಧರ್ಮಪ್ರಸಾದ್ ಅವರನ್ನು ಮಹಾಶಕ್ತಿ ಕೇಂದ್ರದ ವತಿಯಿಂದ ಅಭಿನಂದಿಸಲಾಯಿತು.
   ಮಂಗಳವಾರ ಸಂಜೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು  ಧರ್ಮಪ್ರಸಾದ್‌ರವರ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸುವ ಮೂಲಕ ಪಕ್ಷದ ನಾಯಕರು ಹಿಂದಿನ ೨ ಅವಧಿಯ ಸಮರ್ಥ ನಾಯಕತ್ವ ಗುರುತಿಸಿ ೩ನೇ ಅವಧಿಗೆ ಆಯ್ಕೆ ಮಾಡಿರುವುದು ತುಂಬ ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿ ಜೀವನದಿಂದಲೇ ಸಂಘಟನೆ ಹಾಗು ನಾಯಕತ್ವ ಗುಣ ಬೆಳೆಸಿಕೊಂಡು ಬರುವ ಜೊತೆಗೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿರುವ ಧರ್ಮಪ್ರಸಾದ್‌ರವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸ್ಥಾನಮಾನಗಳು ಲಭಿಸುವಂತಾಗಲಿ ಎಂದು ಸಂಭ್ರಮ ಹಂಚಿಕೊಂಡರು. 
  ಪಕ್ಷದ ಪ್ರಮುಖರಾದ ತೀರ್ಥಯ್ಯ, ಕೆ.ಎನ್ ಶ್ರೀಹರ್ಷ, ಎಚ್.ಎಲ್ ವಿಶ್ವನಾಥ್, ಮೊಸರಳ್ಳಿ ಅಣ್ಣಪ್ಪ, ಚನ್ನೇಶ್, ಕಾ.ರಾ ನಾಗರಾಜ್, ರಾಜಶೇಖರ್ ಉಪ್ಪಾರ ಮತ್ತು ನಂಜಪ್ಪ ಸೇರಿದಂತೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗು ವಿವಿಧ ಮೋರ್ಚಾಗಳ ಅಧ್ಯಕ್ಷರು, ಮಹಿಳಾ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿ, ಮೈಕ್ರೋ ಫೈನಾನ್ಸ್‌ನವರ ಕಿರುಕುಳ ತಪ್ಪಿಸಿ

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಿರಿಯ ರೈತ ಮುಖಂಡ ಕೆ.ಟಿ ಗಂಗಾಧರ್ ಆಗ್ರಹ

ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್‌ನವರ ಕಿರುಕುಳಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಭದ್ರಾವತಿ: ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್‌ನವರ ಕಿರುಕುಳಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಹಿರಿಯ ರೈತ ಮುಖಂಡ ಕೆ.ಟಿ ಗಂಗಾಧರ್ ಆಗ್ರಹಿಸಿದರು. 
    ವಿಶ್ವ ರೈತ ಚೇತನ ಪ್ರೊ. ಎಂ.ಡಿ ನಂಜುಂಡಸ್ವಾಮಿಯವರ ೨೧ನೇ ಸಂಸ್ಮರಣೆ ಅಂಗವಾಗಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಅವರು ಮಾತನಾಡಿದರು. 
    ತಾಲೂಕಿನಾದ್ಯಂತ ರೈತರು ಹಾಗೂ ಬಡವರು ಸುಮಾರು ೫೦ ವರ್ಷಗಳಿಂದಲೂ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಸಾಗುವಳಿ ಭೂಮಿಯಿಂದ ಅವರ ಕುಟುಂಬಕ್ಕೆ ಆಹಾರ, ದುಡಿಯುವ ಕೈಗಳಿಗೆ ಕೆಲಸ ಮಾತ್ರವಲ್ಲದೇ ದೇಶದ ಆಹಾರ ಭದ್ರತೆಗೂ ಕೊಡುಗೆ ನೀಡಿರುತ್ತಾರೆ. ಈ ರೀತಿ ಸಾಗುವಳಿ ಮಾಡಿಕೊಂಡು ಬಂದ ಭೂಮಿಯ ಹಕ್ಕನ್ನು ರೈತರಿಗೆ ಮಾನ್ಯ ಮಾಡುವ ಸಲುವಾಗಿ ಸರ್ಕಾರಗಳು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ರೈತರು ಭೂಮಿಯ ಹಕ್ಕು ಮಂಜೂರು ಮಾಡುವಂತೆ ನಮೂನೆ ೫೦, ನಮೂನೆ ೫೩ ಹಾಗೂ ನಮೂನೆ ೫೭ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಈ ಅರ್ಜಿಗಳನ್ನು ಪರಿಶೀಲಿಸಿ ಹಕ್ಕು ನೀಡಬೇಕಾದ ಸರ್ಕಾರಗಳು ಇಂದಿಗೂ ರೈತರಿಗೆ ಭೂಮಿಯ ಹಕ್ಕನ್ನು ನೀಡದೇ, ರೈತರನ್ನು ಹೈರಾಣಗೊಳಿಸಿವೆ ಎಂದು ಆಕ್ರೋಶ ವ್ಯಕ್ತಪಡಿದರು. 
    ಭೂಮಿಯ ಹಕ್ಕು ಪಡೆಯಲು ರೈತರು ದಿನನಿತ್ಯವು ತಾಲೂಕು ಕಛೇರಿಗೆ ಅಲೆದಾಡುತ್ತಿದ್ದು, ಕಂದಾಯ ಇಲಾಖೆಯ ಸಿಬ್ಬಂದಿಗಳು ಕ್ರಮಬದ್ಧವಾಗಿ ಕೆಲಸ ಮಾಡದೇ ರೈತರನ್ನು ಅಲೆದಾಡಿಸುತ್ತಿದ್ದಾರೆ. ಸರ್ಕಾರದ ಕಂದಾಯ ಮಂತ್ರಿಗಳೇ ಹಲವು ಬಾರಿ ತಾಕೀತು ಮಾಡಿದರೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಇದರ ದುರ್ಲಾಭ ಪಡೆದ ಅರಣ್ಯ ಇಲಾಖೆ ರೈತರು ಹಿಂದಿನಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಯನ್ನು ಕಾನೂನು ಬಾಹಿರವಾಗಿ ಕಿತ್ತುಕೊಳ್ಳಲು ಯತ್ನಿಸುತ್ತಿದ್ದು, ರೈತರು ಮತ್ತು ಅರಣ್ಯ ಇಲಾಖೆಯ ಮಧ್ಯೆ ಪ್ರತಿದಿನವೂ ಸಂಘರ್ಷಕ್ಕೆ ದಾರಿಯಾಗಿದೆ. ಅರಣ್ಯ ಇಲಾಖೆಯು ಯಾವುದೇ ಜಂಟಿ ಸರ್ವೇ ಕಾರ್ಯ ಕೈಗೊಳ್ಳದೇ ತಹಸೀಲ್ದಾರರು ಹಾಗೂ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ರೈತರ ವಿರುದ್ಧ ದಾವೆಗಳನ್ನು ಹೂಡಿ ರೈತರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು. 
    ತಹಸೀಲ್ದಾರರ ನ್ಯಾಯಾಲಯ ಹಾಗೂ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆಗಳು ವಿಚಾರಣೆಯಲ್ಲಿರುವಾಗಲೇ ರೈತರ ಸಾಗುವಳಿ ಜಮೀನುಗಳಿಗೆ ಅಕ್ರಮವಾಗಿ ನುಗ್ಗಿ ರೈತರ ಬೆಳೆದ ಬೆಳೆಗಳನ್ನು ನಾಶಪಡಿಸುವ ಜೊತೆಗೆ ರೈತರನ್ನು ಸಾಗುವಳಿ ಭೂಮಿಯಿಂದ ಒಕ್ಕಲೆಬ್ಬಿಸುವಕಾರ್ಯ ಮಾಡುತ್ತಿದ್ದಾರೆ. ತಾಲೂಕು ಆಡಳಿತ ಇದನ್ನೆಲ್ಲ ನೋಡಿಕೊಂಡು ರೈತರ ಹಿತರಕ್ಷಣೆಗೆ ಬಾರದೇ ಕಣ್ಣು ಮುಚ್ಚಿಕೊಂಡು ಕುಳಿತಿರುತ್ತದೆ. ತಾಲೂಕು ಆಡಳಿತದ ಈ ಬೇಜವಾಬ್ದಾರಿ ನಡೆಯನ್ನು ರೈತಸಂಘ ಖಂಡಿಸುವ ಜೊತೆಗೆ  ಕೂಡಲೇ ರೈತರಿಗೆ ಬಗರ್ ಹುಕುಂ ಭೂಮಿಯ ಹಕ್ಕನ್ನು ನೀಡುವಂತೆ ಒತ್ತಾಯಿಸುತ್ತದೆ ಎಂದರು. 
    ರೈತರು, ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮೀಣ ಪ್ರದೇಶವಾಸಿಗಳು ವ್ಯವಸಾಯ ಹಾಗೂ ವ್ಯವಸಾಯೇತರ ಕಾರಣಕ್ಕಾಗಿ ಖಾಸಗಿ ಫೈನಾನ್ಸ್‌ಗಳಿಂದ ಸಾಲ ಪಡೆದಿರುತ್ತಾರೆ. ಈ ಸಾಲದ ಕಂತುಗಳ ವಸೂಲಿಗಾಗಿ ಖಾಸಗಿ ಫೈನಾನ್ಸ್‌ಗಳು ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಬಾಹಿರವಾಗಿ ಇನ್ನಿಲ್ಲದ ಕಿರುಕುಳ ನೀಡುತ್ತಿವೆ ಎಂದು ದೂರಿದರು. 
    ಹಲವೆಡೆ ರೈತರ ಕೃಷಿ ಉಪಕರಣಗಳ ಜಪ್ತಿ, ಮೋಟಾರ್ ಸೈಕಲ್‌ಗಳ ಜಿಪ್ತಿ, ರೈತರ ಮನೆ ಜಪ್ತಿ ಸೇರಿದಂತೆ ರೈತರ ಮನೆಯ ಬಾಗಿಲಿಗೆ ಸಾಲಗಾರರು ಎಂದು ಫಲಕ ತೂಗು ಹಾಕುವುದು, ಮನೆಯ ಬಾಗಿಲು ಹಾಗೂ ಗೋಡೆ ಮೇಲೆ ಸಾಲಗಾರರು ಎಂದು ಬರೆದು ಸಾಮಾಜಿಕವಾಗಿ ಗ್ರಾಮೀಣ ಜನರ ಮರ್ಯಾದೆಯನ್ನು ಹರಾಜು ಮಾಡುವುದರ ಜೊತೆಗೆ ಕಾನೂನಬಾಹಿರವಾಗಿ ಸಾಲ ವಸೂಲಿ ಕ್ರಮಗಳನ್ನು ಅನುಸರಿಸಿ ಗೂಂಡಾಗಿರಿ ನಡೆಸುತ್ತಿರುವುದನ್ನು ರೈತಸಂಘ ಖಂಡಿಸುತ್ತದೆ. ತಕ್ಷಣ ತಾಲೂಕು ಆಡಳಿತ ಸೂಕ್ತ ಕ್ರಮಗಳನ್ನು ಕೈಗೊಂಡು ಖಾಸಗಿ ಫೈನಾನ್ಸ್‌ಗಳು ಗ್ರಾಮೀಣ ಪ್ರದೇಶದ ಜನರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಆಗ್ರಹಿದರು. 
    ರೈತರು ವ್ಯವಸಾಯ ಭೂಮಿಗೆ ನೀರಾವರಿ ಸೌಲಭ್ಯ ಹೊಂದಲು ಕೊಳವೆ ಬಾವಿಗಳನ್ನು ಕೊರೆಸಿ ವಿದ್ಯುತ್ ಸಂಪರ್ಕ ಪಡೆಯಲು ಅಕ್ರಮ-ಸಕ್ರಮದ ಅಡಿಯಲ್ಲಿ ಹಣ ಪಾವತಿಸಿ ವರ್ಷಗಳೇ ಕಳೆದರೂ ಇದುವರೆವಿಗೂ ಸರ್ಕಾರ ಸಕ್ರಮ ಮಾಡಿರುವುದಿಲ್ಲ. ಅಲ್ಲದೇ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಲು ರೈತರೇ ಸಂಪೂರ್ಣ ವೆಚ್ಚವನ್ನು ಭರಿಸಬೇಕೆಂಬ ಅವೈಜ್ಞಾನಿಕ ನಿಯಮವನ್ನು ರೂಪಿಸಿದ್ದು, ರೈತರು ವಿದ್ಯುತ್ ಸಂಪರ್ಕ ಪಡೆಯಲು ಲಕ್ಷಾಂತರ ರೂಪಾಯಿ ಸಾಲ-ಸೂಲ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಸರ್ಕಾರ ಈ ಹಿಂದಿನಂತೆ ನಿಯಮ ರೂಪಿಸಿ ರೈತರಿಗೆ ವಿದ್ಯುತ್ ಸಂಪರ್ಕ ನೀಡಬೇಕು ಹಾಗೂ ಅಕ್ರಮ-ಸಕ್ರಮ ಅರ್ಜಿಗಳನ್ನು ತುರ್ತಾಗಿ ಮುಕ್ತಾಯಗೊಳಿಸಬೇಕೆಂದು ಆಗ್ರಹಿಸಿದರು. 
     ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಹಾಲೇಶಪ್ಪಗೌಡ್ರು, ಜಿಲ್ಲಾ ಗೌರವಾಧ್ಯಕ್ಷ ಈರಪ್ಪ ಪ್ಯಾಟಿ, ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ತಾಲೂಕು ಅಧ್ಯಕ್ಷ ಹಿರಣಯ್ಯ, ಯುವ ರೈತ ಮುಖಂಡ ಡಿ.ವಿ ವೀರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್ ಮಂಜುನಾಥೇಶ್ವರ ಮತ್ತು ಮೋಹನ್ ಕೂಡ್ಲಿಗೆರೆ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಸೇರಿದಂತೆ ಇನ್ನಿತರ ಪ್ರಮುಖರು, ರೈತರು ಪಾಲ್ಗೊಂಡಿದ್ದರು. 

ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್‌ನವರ ಕಿರುಕುಳಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹಕ್ಕೂ  ಮೊದಲು ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.