Wednesday, March 2, 2022

ಮಾದಪ್ಪನ ಸನ್ನಿಧಿಗೆ ಹರಿದ ಬಂದ ಭಕ್ತ ಸಮೂಹ : ವೈಭವದ ಶಿವರಾತ್ರಿ ಆಚರಣೆ

ಬೆಳಿಗ್ಗೆಯಿಂದ ಸಂಜೆವರೆಗೂ ಸಾವಿರಾರು ಭಕ್ತರಿಗೆ ಅನ್ನದಾಸೋಹ

ಭದ್ರಾವತಿ ನಗರಸಭೆ ವಾರ್ಡ್ ೩೧ರ ಜಿಂಕ್‌ಲೈನ್ ವ್ಯಾಪ್ತಿಯ ವೀರಾಪುರ ರಸ್ತೆಯಲ್ಲಿರುವ ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ಹಿನ್ನಲೆಯಲ್ಲಿ ಬುಧವಾರ ಸಹ ಸ್ವಾಮಿಯ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿರುವ ಭಕ್ತರು.
    ಭದ್ರಾವತಿ, ಫೆ. ೨: ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ವಾರ್ಡ್ ೩೧ರ ಜಿಂಕ್‌ಲೈನ್ ವ್ಯಾಪ್ತಿಯ ವೀರಾಪುರ ರಸ್ತೆಯಲ್ಲಿರುವ ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ಜರುಗಿತು.
    ಶ್ರೀ ಶಿವಶಂಕರ ಗುರೂಜಿಯವರ ದಿವ್ಯ ಸಾನಿಧ್ಯದಲ್ಲಿ  ಗಂಗಾ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಹೋಮ-ಹವನ, ಹಾಲರವಿ ಉತ್ಸವ, ಕೆಂಡೋತ್ಸವ, ರಾಜಬೀದಿ ಉತ್ಸವ, ಜಾಗರಣೆ, ಭಜನೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನದಾಸೋಹ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಎರಡು ದಿನಗಳ ಕಾಲ ಜರುಗಿದ ಧಾರ್ಮಿಕ ಆಚರಣೆಗಳಲ್ಲಿ ನಗರ ಹಾಗು ಗ್ರಾಮಾಂತರ ಪ್ರದೇಶಗಳಿಂದ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು. ನಗರದ ಬೈಪಾಸ್ ರಸ್ತೆಯ ಸಮೀಪದಲ್ಲಿ ಅಡಕೆ, ತೆಂಗು ತೋಟ ಹಾಗು ಕಬ್ಬು, ಭತ್ತ ಜಮೀನುಗಳ ನಡುವೆ ಸುಂದರ ಪರಿಸರದಲ್ಲಿ ಈ ದೇವಸ್ಥಾನ ನೆಲೆ ನಿಂತಿದೆ. ಹಬ್ಬ ಹರಿದಿನಗಳಂದು ಸಾವಿರಾರು ಭಕ್ತಾಧಿಗಳು ಈ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದಾರೆ. ಅಲ್ಲದೆ ಸಣ್ಣ ಪ್ರಮಾಣದಲ್ಲಿ ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳು ಸಹ ಜರುಗುತ್ತಿವೆ.
    ಮೈಸೂರು ಚಾಮರಾಜನಗರದ ಮಲೆ ಮಹಾದೇಶ್ವರ ಬೆಟ್ಟದಲ್ಲಿರುವ ದೇವಸ್ಥಾನಕ್ಕೆ ಹೋಗುವ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಯೇ ಬಂದು ಹೋಗುವುದು ವಾಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ಈ ದೇವಸ್ಥಾನಕ್ಕೆ ಇನ್ನೂ ಹೆಚ್ಚಿನ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಅವಶ್ಯಕವಾಗಿದೆ ಎಂಬುದು ಭಕ್ತರ ಬೇಡಿಕೆಯಾಗಿದೆ.


ನಗರಸಭೆ ವಾರ್ಡ್ ೩೧ರ ಜಿಂಕ್‌ಲೈನ್ ವ್ಯಾಪ್ತಿಯ ವೀರಾಪುರ ರಸ್ತೆಯಲ್ಲಿರುವ ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ಹಿನ್ನಲೆಯಲ್ಲಿ ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿದೆ.

Tuesday, March 1, 2022

ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ವಿಶಿಷ್ಟವಾಗಿ ಮಹಾಶಿವರಾತ್ರಿ ಆಚರಣೆ

ಭಕ್ತರಿಗೆ ಹೊಲೋಗ್ರಾಫಿಕ್ ಮೂಲಕ ೧೩ ಮಾದರಿ ಶಿವಲಿಂಗ ದರ್ಶನ, ರಸ್ತೆ ಸುರಕ್ಷಾ ಮೋಟಾರ್ ಸೈಕಲ್ ಯಾತ್ರೆ

ಭದ್ರಾವತಿ ನ್ಯೂಟೌನ್ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಭಕ್ತರಿಗೆ ಹೊಲೋಗ್ರಾಫಿಕ್ ತಂತ್ರಜ್ಞಾನದ ಮೂಲಕ ಶಿವಲಿಂಗ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು.
    ಭದ್ರಾವತಿ, ಮಾ. ೧: ಮಹಾಶಿವರಾತ್ರಿ ಈ ಬಾರಿ ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.
    ನೂತನವಾಗಿ ನವೀಕರಣಗೊಂಡಿರುವ ವಿಶ್ವ ವಿದ್ಯಾಲಯದಲ್ಲಿ ಭಕ್ತರಿಗೆ ಹೊಲೋಗ್ರಾಫಿಕ್ ತಂತ್ರಜ್ಞಾನದ ಮೂಲಕ ಶಿವಲಿಂಗ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿವಲಿಂಗ ೧೩ ವಿಭಿನ್ನ ಮಾದರಿಯಲ್ಲಿ ಆಕರ್ಷಕವಾಗಿ ಕಂಡು ಬರುವ ಮೂಲಕ ಭಕ್ತರ ಮನಸೂರೆಗೊಳ್ಳುತ್ತಿದೆ. ಅಲ್ಲದೆ ಆವರಣದಲ್ಲಿ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು. ವಿಶ್ವ ವಿದ್ಯಾಲಯದ ಸಂಪನ್ಮೂಲ ಪರಿಣಿತರಿಂದ ಆಧ್ಯಾತ್ಮಿಕ ವಿಚಾರಧಾರೆಗಳನ್ನು ಭಕ್ತರಿಗೆ ತಿಳಿಸಿಕೊಡಲಾಯಿತು.

ಭದ್ರಾವತಿ ನ್ಯೂಟೌನ್ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.
    ಆವರಣದಲ್ಲಿ ನಿರ್ಮಿಸಲಾಗಿರುವ ಶಿವಲಿಂಗಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ವಿದ್ಯುತ್ ದೀಪಗಳಿಂದ ವಿಶ್ವ ವಿದ್ಯಾಲಯ ಕಂಗೊಳಿಸುತ್ತಿತ್ತು.
    ಈ ಬಾರಿ ಮತ್ತೊಂದು ವಿಶೇಷತೆ ಎಂದರೆ ಸ್ವತಂತ್ರ ಭಾರತದ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದೆಡೆಗೆ ಸುರಕ್ಷಿತ ಭಾರತ ಎಂಬ ಧ್ಯೇಯ ಘೋಷದೊಂದಿಗೆ ರಸ್ತೆ ಸುರಕ್ಷಾ ಮೋಟಾರ್ ಸೈಕಲ್ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.


ಭದ್ರಾವತಿ ನ್ಯೂಟೌನ್ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಶಿವಲಿಂಗಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.

ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಾಗೇಂದ್ರಪ್ಪ ಅಧಿಕಾರ ಸ್ವೀಕಾರ

ಭದ್ರಾವತಿ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಾಗೇಂದ್ರಪ್ಪ ಸೋಮವಾರ ಅಧಿಕಾರ ವಹಿಸಿಕೊಂಡರು.
    ಭದ್ರಾವತಿ, ಮಾ. ೧: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಾಗೇಂದ್ರಪ್ಪ ಸೋಮವಾರ ಅಧಿಕಾರ ವಹಿಸಿಕೊಂಡರು.
    ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಎನ್ ಸೋಮಶೇಖರಯ್ಯ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಉಡುಪಿ ಜಿಲ್ಲೆಯ ಅಕ್ಷರ ದಾಸೋಹ ಕಾರ್ಯಕ್ರಮದ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರಪ್ಪರವರನ್ನು ಶಿಕ್ಷಣ ಇಲಾಖೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು.
    ಈ ಹಿನ್ನಲೆಯಲ್ಲಿ ನಾಗೇಂದ್ರಪ್ಪರವರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಟಿ.ಎನ್ ಸೋಮಶೇಖರಪ್ಪರವರಿಂದ ಅಧಿಕಾರ ವಹಿಸಿಕೊಂಡರು. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್, ನವೀದ್ ಪರ್ವೀಜ್ ಅಹಮದ್, ಶಿಕ್ಷಣ ಸಂಯೋಜಕ ರವಿಕುಮಾರ್, ಸಿಆರ್‌ಪಿ ಚನ್ನಪ್ಪ, ಶಿಕ್ಷಕರಾದ ಯು. ಮಹಾದೇವಪ್ಪ, ಅರಳೇಹಳ್ಳಿ ಅಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಎಂ.ಆರ್ ರೇವಣಪ್ಪ ಅವಿರೋಧ ಆಯ್ಕೆ

ಎಂ.ಆರ್ ರೇವಣಪ್ಪ
    ಭದ್ರಾವತಿ, ಮಾ. ೧: ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಮಂಡಳಿ ಚುನಾವಣೆಗೆ ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಅಂತರಾಷ್ಟ್ರೀಯ ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
ರೇವಣಪ್ಪರವರು ಮಹಾಬಲೇಶ್ವರ ಹೆಗಡೆ ತಂಡದಿಂದ ಸಂಘದ ನಿರ್ದೇಶಕ ಮಂಡಳಿಯ ೫ ವರ್ಷಗಳ ಅವಧಿಗೆ ಹಿಂದುಳಿದ ವರ್ಗ ‘ಎ’ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ರೇವಣಪ್ಪರವರು ಶಾಲೆಯ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಜೊತೆಗೆ ಕೈಜೋಡಿಸುವ ಜೊತೆಗೆ ವೈಯಕ್ತಿಕವಾಗಿ ಸಹ ತಮ್ಮದೇ ಆದೆ ಕೊಡುಗೆಯನ್ನು ಶಾಲೆಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. 
ಇದೀಗ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಕರ್ನಾಟಕ ರಾಜ್ಯ ತಾಲೂಕು ಸರ್ಕಾರಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಶಾಲಾಭಿವೃದ್ಧಿ ಸಮಿತಿ ಹಾಗು ಶಾಲೆಯ ಶಿಕ್ಷಕ ವೃಂದದವರು ಸೇರಿದಂತೆ ಇನ್ನಿತರರು ಇವರನ್ನು ಅಭಿನಂದಿಸಿದ್ದಾರೆ. 

ಭದ್ರಾ ನದಿ ಸಂಗಮೇಶ್ವರ ಸನ್ನಿಧಿಗೆ ಹರಿದು ಬಂದ ಭಕ್ತ ಸಮೂಹ..!


    ಭದ್ರಾವತಿ, ಮಾ. ೧: ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ನಗರದಲ್ಲಿ ಕಳೆದ ೩ ವರ್ಷಗಳಿಂದ ವಿಜೃಂಭಣೆ ಕಳೆದುಕೊಂಡಿದ್ದ ಮಹಾಶಿವರಾತ್ರಿ ಹಬ್ಬ ಈ ಬಾರಿ ಎಲ್ಲೆಡೆ ವೈಭವಯುತವಾಗಿ ಜರುಗಿತು. ಅದರಲ್ಲೂ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಸ್ವಾಮಿಯ ದರ್ಶನ ಪಡೆಯಲು ಮಂಗಳವಾರ ಬೆಳಿಗ್ಗೆಯಿಂದಲೇ ಭಕ್ತಾಧಿಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ವೀರಶೈವ ಸೇವಾ ಸಮಿತಿವತಿಯಿಂದ ಧಾರ್ಮಿಕ ಆಚರಣೆಗಳು ಜರುಗಿದವು. ಸೋಮವಾರ ಸಂಜೆ ಗಣಹೋಮ, ರುದ್ರಹೋಮ, ನವಗ್ರಹ ಪೂಜೆ ಜರುಗಿದವು. ಮಂಗಳವಾರ ಬೆಳಿಗ್ಗೆ  ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ, ಶ್ರೀ ಸಂಗಮೇಶ್ವರಸ್ವಾಮಿ, ನಂದಿ, ನಾಗದೇವತೆ ದೇವರುಗಳಿಗೆ ರುದ್ರಾಭಿಷೇಕ ನೆರವೇರಿತು.
ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ವೇದಬ್ರಹ್ಮ ಸಿ.ಎಂ ಮಹೇಶ್ವರಮೂರ್ತಿ ಶಾಸ್ತ್ರಿಗಳು, ಚಿನ್ನಯ್ಯ ಶಾಸ್ತ್ರಿ, ಎಸ್.ಆರ್ ವಿಶ್ವನಾಥಯ್ಯ, ವಾಗೀಶಯ್ಯ, ರುದ್ರಸ್ವಾಮಿ ಶಾಸ್ತ್ರಿ, ಎಂ.ಬಿ ಕಿರಣ್ ಶಾಸ್ತ್ರಿ ಮತ್ತು ಶಂಕರಯ್ಯ ಹಿರೇಮಠ್ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಟ್ಟರು. ವೀರಶೈವ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಿವರಾತ್ರಿ ಆಚರಣಾ ಉಸ್ತುವಾರಿ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಸ್ವಾಮಿಯ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿರುವ ಭಕ್ತರು.
    ದೇವಸ್ಥಾನದ ಸಮೀಪ ಸೇವಾಕರ್ತರಿಂದ ಭಕ್ತರಿಗೆ ಕಲ್ಲಂಗಡಿ ಹಣ್ಣು, ಕೋಸಂಬರಿ, ಪಾನಕ ವಿತರಣೆ ನೆರವೇರಿತು. ಸ್ಥಳೀಯ ಸಂಘ-ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ಚಿನ್ನಬೆಳ್ಳಿ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.

Monday, February 28, 2022

ರಾಜ್ಯದ ರೈತರು ಬೆಲೆದಿರುವ ರಾಗಿ ರು.೪ ಸಾವಿರ ಬೆಂಬಲ ಬೆಲೆಯೊಂದಿಗೆ ಖರೀದಿಸಿ

ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡರಿಂದ ಪ್ರಧಾನಿಗೆ ಮನವಿ


ರಾಜ್ಯದಲ್ಲಿ ರೈತರು ಬೆಳೆದಿರುವ ರಾಗಿ ಬೆಳೆಗೆ ಕೇಂದ್ರ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡುವ ಮೂಲಕ ಖರೀದಿಸುವಂತೆ ಒತ್ತಾಯಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.
    ಭದ್ರಾವತಿ, ಫೆ. ೨೮: ರಾಜ್ಯದಲ್ಲಿ ರೈತರು ಬೆಳೆದಿರುವ ರಾಗಿ ಬೆಳೆಗೆ ಕೇಂದ್ರ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡುವ ಮೂಲಕ ಖರೀದಿಸುವಂತೆ ಒತ್ತಾಯಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಸೋಮವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
    ಕೇಂದ್ರ ಸರ್ಕಾರ ಕಳೆದ ಬಾರಿ ೪.೧೦ ಲಕ್ಷ ಟನ್ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿತ್ತು. ಅಲ್ಲದೆ ಸಿರಿ ಧಾನ್ಯಗಳ ಸಾಲಿನಲ್ಲಿ ರಾಗಿಯನ್ನು ಸೇರಿಸುವ ಜೊತೆಗೆ ಪಡಿತರ ವಿತರಣೆಗೂ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯದ ಹಳೇ ಮೈಸೂರ ಭಾಗದ ಬಯಲು ಸೀಮೆಯಲ್ಲಿ ಈ ಬಾರಿ ಅತಿ ಹೆಚ್ಚು ರಾಗಿ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಇದೀಗ ಕೇಂದ್ರ ಸರ್ಕಾರ ಕೇವಲ ೨.೧೦ ಲಕ್ಷ ಟನ್ ರಾಗಿ ಮಾತ್ರ ಬೆಂಬಲ ಬೆಲೆಯಲ್ಲಿ ಖರೀದಿಸುವುದಾಗಿ ತಿಳಿಸಿದೆ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆಂದು ಮನವಿಯಲ್ಲಿ ಅಳಲು ವ್ಯಕ್ತಪಡಿಸಲಾಗಿದೆ.
    ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ೧೫.೭ ಲಕ್ಷ ಟನ್ ರಾಗಿ ಬೆಳೆ ಬೆಳೆಯಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ರೈತರು ಬೆಳೆದಿರುವ ರಾಗಿಗೆ ಕ್ವಿಂಟಾಲ್‌ಗೆ  ರು. ೨ ಸಾವಿರ ಇದ್ದು, ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕ್ವಿಂಟಾಲ್‌ಗೆ ರು.೪೦೦೦ ಬೆಂಬಲ ಬೆಲೆ ನಿಗದಿಪಡಿಸಿ ರೈತರು ಬೆಳೆದಿರುವ ೧೫.೭ ಲಕ್ಷ ಟನ್ ರಾಗಿ ಖರೀದಿಸುವ ಮೂಲಕ ನೆರವಿಗೆ ಬರುವಂತೆ ಮನವಿ ಮಾಡಲಾಗಿದೆ.
    ಸಾಮಾಜಿಕ ಹೋರಾಟಗಾರ ಉಕ್ಕುಂದ ಶಿವಕುಮಾರ್, ಕರುನಾಡ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ನಾಗರಾಜ ನಾಯ್ಕ ಮತ್ತು ಜಿಟೋಜಿ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಒತ್ತಡಗಳ ನಡುವೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುವುದು ಸವಾಲಿನ ಕೆಲಸ : ಸಿ.ಎಸ್ ಷಡಾಕ್ಷರಿ


ಭದ್ರಾವತಿ ಸಿದ್ದರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯನವರ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಫೆ. ೨೮: ಹಲವಾರು ಒತ್ತಡಗಳ ನಡುವೆಯೂ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯನವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೇಳಿದರು.
    ಅವರು ಸೋಮವಾರ ಸಿದ್ದರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಗ್ರಂಥ ಬಿಡುಗಡೆಯೊಂದಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ ಸೂಕ್ಷ್ಮ ಸ್ಥಳವಾಗಿದ್ದು, ಇಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡು ಕರ್ತವ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಅದರಲ್ಲೂ ಪ್ರತಿ ದಿನ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸಬೇಕಾದ ಇಂದಿನ ದಿನಗಳಲ್ಲಿ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ವಿಯಾಗಿ ಮುನ್ನಡೆಯುವುದು ಬಹಳ ಕಷ್ಟದ ಕೆಲಸವಾಗಿದೆ. ಸೋಮಶೇಖರಯ್ಯನವರು ತಮದೇ ಆದ ವ್ಯಕ್ತಿತ್ವ ಮತ್ತು ವೃತ್ತಿ ಅನುಭವದೊಂದಿಗೆ ಎಲ್ಲವನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಗಳಿಸಿಕೊಂಡಿದ್ದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಕ್ಷತೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯನವರನ್ನು ಅಭಿನಂದನಾ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಕ್ಷೇತ್ರದಲ್ಲಿ ೩ ಬಾರಿ ಒಟ್ಟು ೬ ವರ್ಷ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದು ತೃಪ್ತಿ ತಂದುಕೊಟ್ಟಿದೆ. ವೃತ್ತಿ ಬದುಕಿನಲ್ಲಿ ಸಲಹೆ, ಸಹಕಾರ ನೀಡಿದ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೂ, ತಾಲೂಕಿನ ಶಿಕ್ಷಕ ವೃಂದದವರು, ಸಂಘ-ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.  
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ವಿಭಾಗದ ಜಿಲ್ಲಾ ಉಪನಿರ್ದೇಶಕ ಎನ್.ಎಂ ರಮೇಶ್, ಅಭಿವೃದ್ಧಿ ವಿಭಾಗದ ಜಿಲ್ಲಾ ಉಪನಿರ್ದೇಶಕ ಬಿ.ಆರ್ ಬಸವರಾಜಪ್ಪ, ಚಿಕ್ಕಮಗಳೂರು ಜಿಲ್ಲಾ ಉಪನಿರ್ದೇಶಕ ಮಲ್ಲೇಶಪ್ಪ, ಚಿತ್ರದುರ್ಗ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎಚ್. ಮಂಜುನಾಥ್, ಶಂಕರಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಡಿ. ಪ್ರಭಾಕರ ಬೀರಯ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  
    ಅಭಿನಂದನಾ ಗ್ರಂಥದ ಸಂಪಾದಕ, ಸಾಹಿತಿ ಅರಳೇಹಳ್ಳಿ ಅಣ್ಣಪ್ಪ ಪುಸ್ತಕ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕ ವೃಂದದವರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.