ಸಂಗಮೇಶ್ವರ್ ರಾಜೀನಾಮೆ ನೀಡಲಿ, ಬಸವೇಶ್ ಬಂಧಿಸಿ : ಡಿ.ಎಸ್ ಅರುಣ್
ಭದ್ರಾವತಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್ ಮಾತನಾಡಿದರು.
ಭದ್ರಾವತಿ : ಅಕ್ರಮ ಮರಳುಗಾರಿಕೆ ದಂಧೆಗೆ ಕಡಿವಾಣ ಹಾಕಲು ಮುಂದಾದ ಮಹಿಳಾ ಅಧಿಕಾರಿಯೊಬ್ಬರನ್ನು ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಹಾಗು ಜೀವ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಆಕ್ರೋಶ ವ್ಯಕ್ತಪಡಿಸುವ ಮೂಲಕ ತಕ್ಷಣ ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಸ್ಥಾನ ರಾಜೀನಾಮೆ ನೀಡಬೇಕು ಹಾಗು ಅವರ ಪುತ್ರ ಬಸವೇಶ್‌ನನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಸಮಾಜದಲ್ಲಿ ಜನಪ್ರತಿನಿಧಿಗಳು ಹಾಗು ಅವರ ಕುಟುಂಬ ವರ್ಗದವರಲ್ಲಿ ಸಭ್ಯತೆ ಬಹಳ ಮುಖ್ಯ. ಎಲ್ಲರೊಂದಿಗೂ ಸಭ್ಯತೆಯಿಂದ ನಡೆದುಕೊಳ್ಳಬೇಕು. ಮಹಿಳಾ ಅಧಿಕಾರಿಯೊಂದಿಗೆ ದುರ್ನಡತೆಯಿಂದ ನಡೆದುಕೊಳ್ಳುವುದು ಸರಿಯಲ್ಲ. ಈ ಘಟನೆಯನ್ನು ಪ್ರತಿಯೊಬ್ಬರು ಖಂಡಿಸಬೇಕು ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪೊಲೀಸರು ಈಗಾಗಲೇ ೩ ಜನರನ್ನು ಬಂಧಿಸಿದ್ದಾರೆ. ಆದರೆ ದೂರಿನಲ್ಲಿ ಬಸವೇಶ್ ಹೆಸರು ಇಲ್ಲ. ದೂರಿನಲ್ಲಿ ಬಸವೇಶ್ ಹೆಸರು ಸೇರಿಸಿ ತಕ್ಷಣ ಬಂಧಿಸಬೇಕು. ಅಲ್ಲದೆ ಸಂಗಮೇಶ್ವರ್‌ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ಕ್ಷೇತ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಮಿತಿಮೀರಿವೆ. ಇದಕ್ಕೆ ಕಾರಣ ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ದುರಾಡಳಿ ಎಂದು ಆರೋಪಿಸಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನಿರೀಕ್ಷಿಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ವಿಧಾನಪರಿಷತ್‌ನಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾ, ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಕಾ.ರಾ ನಾಗರಾಜ್, ಬಿ.ಜಿ ರಾಮಲಿಂಗಯ್ಯ, ಎಂ.ಎಸ್ ಸುರೇಶಪ್ಪ, ಚನ್ನೇಶ್, ಸುಲೋಚನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment