ಭದ್ರಾವತಿ, ಮಾ. ೧: ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ನಗರದಲ್ಲಿ ಕಳೆದ ೩ ವರ್ಷಗಳಿಂದ ವಿಜೃಂಭಣೆ ಕಳೆದುಕೊಂಡಿದ್ದ ಮಹಾಶಿವರಾತ್ರಿ ಹಬ್ಬ ಈ ಬಾರಿ ಎಲ್ಲೆಡೆ ವೈಭವಯುತವಾಗಿ ಜರುಗಿತು. ಅದರಲ್ಲೂ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಸ್ವಾಮಿಯ ದರ್ಶನ ಪಡೆಯಲು ಮಂಗಳವಾರ ಬೆಳಿಗ್ಗೆಯಿಂದಲೇ ಭಕ್ತಾಧಿಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
ಪ್ರತಿ ವರ್ಷದಂತೆ ಈ ಬಾರಿ ಸಹ ವೀರಶೈವ ಸೇವಾ ಸಮಿತಿವತಿಯಿಂದ ಧಾರ್ಮಿಕ ಆಚರಣೆಗಳು ಜರುಗಿದವು. ಸೋಮವಾರ ಸಂಜೆ ಗಣಹೋಮ, ರುದ್ರಹೋಮ, ನವಗ್ರಹ ಪೂಜೆ ಜರುಗಿದವು. ಮಂಗಳವಾರ ಬೆಳಿಗ್ಗೆ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ, ಶ್ರೀ ಸಂಗಮೇಶ್ವರಸ್ವಾಮಿ, ನಂದಿ, ನಾಗದೇವತೆ ದೇವರುಗಳಿಗೆ ರುದ್ರಾಭಿಷೇಕ ನೆರವೇರಿತು.
ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ವೇದಬ್ರಹ್ಮ ಸಿ.ಎಂ ಮಹೇಶ್ವರಮೂರ್ತಿ ಶಾಸ್ತ್ರಿಗಳು, ಚಿನ್ನಯ್ಯ ಶಾಸ್ತ್ರಿ, ಎಸ್.ಆರ್ ವಿಶ್ವನಾಥಯ್ಯ, ವಾಗೀಶಯ್ಯ, ರುದ್ರಸ್ವಾಮಿ ಶಾಸ್ತ್ರಿ, ಎಂ.ಬಿ ಕಿರಣ್ ಶಾಸ್ತ್ರಿ ಮತ್ತು ಶಂಕರಯ್ಯ ಹಿರೇಮಠ್ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಟ್ಟರು. ವೀರಶೈವ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಿವರಾತ್ರಿ ಆಚರಣಾ ಉಸ್ತುವಾರಿ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಸ್ವಾಮಿಯ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿರುವ ಭಕ್ತರು.
ದೇವಸ್ಥಾನದ ಸಮೀಪ ಸೇವಾಕರ್ತರಿಂದ ಭಕ್ತರಿಗೆ ಕಲ್ಲಂಗಡಿ ಹಣ್ಣು, ಕೋಸಂಬರಿ, ಪಾನಕ ವಿತರಣೆ ನೆರವೇರಿತು. ಸ್ಥಳೀಯ ಸಂಘ-ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ಚಿನ್ನಬೆಳ್ಳಿ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.
No comments:
Post a Comment