Thursday, September 15, 2022

ಡೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರೌಢಶಾಲೆಗಾಗಿ ಪಾದಯಾತ್ರೆ

ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಕ್ಷಣ ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ ಗುರುವಾರ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಿಂದ ತಾಲೂಕು ಕಛೇರಿವರೆಗೂ ಪಾದಯಾತ್ರೆ ನಡೆಸಲಾಯಿತು.
    ಭದ್ರಾವತಿ, ಸೆ. ೧೫ : ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಕ್ಷಣ ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಮಾಡಬೇಕೆಂದು ಪ್ರೌಢಶಾಲೆ ಹೋರಾಟ ಸಮಿತಿ ಹಾಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು ಸಿ. ಲೇಪಾಕ್ಷಿ ಆಗ್ರಹಿಸಿದ್ದಾರೆ.
    ಅವರು ಗುರುವಾರ ಹೋರಾಟ ಸಮಿತಿ ವತಿಯಿಂದ ತರೀಕೆರೆ ರಸ್ತೆಯ ಮಾಧವಚಾರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆ  ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
    ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧ ರಿಂದ ೮ನೇ ತರಗತಿವರೆಗೆ ಸರ್ಕಾರಿ ಶಾಲೆಗಳಿದ್ದು, ಒಟ್ಟು ೯ ಸರ್ಕಾರಿ ಶಾಲೆಗಳ ಪೈಕಿ ೪ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಪಂಚಾಯಿತಿ ವ್ಯಾಪ್ತಿಯ ಎಲ್ಲಿಯೂ ಸಹ ಸರ್ಕಾರಿ ಪ್ರೌಢಶಾಲೆ ಇರುವುದಿಲ್ಲ. ೯ ಮತ್ತು ೧೦ನೇ ತರಗತಿ ಹೊಂದಿರುವ ಪ್ರೌಢಶಾಲೆ ೨೦೨೨-೨೩ನೇ ಶೈಕ್ಷಣಿಕ ಸಾಲಿನಿಂದ ಆರಂಭಿಸಲು ಈಗಾಗಲೇ ಶಿಕ್ಷಣ ಇಲಾಖೆ ಮೂಲಕ ಶಾಸಕರ ನೇತೃತ್ವದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ಭಾಗದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹಾಗು ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದು, ಮಕ್ಕಳು ಪ್ರೌಢಶಾಲೆಗಾಗಿ ೭-೮ ಕಿ.ಮೀ ದೂರ ಸಂಚರಿಸಬೇಕಾಗಿದೆ. ಅದರಲ್ಲೂ ಹೆಚ್ಚಿನ ಬಸ್ ಸೌಲಭ್ಯವಿಲ್ಲದ ಕಾರಣಕ್ಕಾಗಿ ಮಕ್ಕಳು ಪ್ರತಿದಿನ ಬಸ್‌ನಲ್ಲಿ ಜೋತುಬಿದ್ದು ಸಂಚರಿಸುವಂತಾಗಿದೆ. ಈ ಎಲ್ಲಾ ಕಾರಣಗಳ ಹಿನ್ನಲೆಯಲ್ಲಿ ತಕ್ಷಣ ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಮಾಡುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಪಾದಯಾತ್ರೆ ಹೋರಾಟ ಬೆಂಗಳೂರಿನವರೆಗೂ ನಡೆಯಲಿದೆ ಎಂದು ಎಚ್ಚರಿಸಿದರು.


    ಪಾದಯಾತ್ರೆಯಲ್ಲಿ ಪ್ರೌಢಶಾಲೆ ನೀಡಿ ಬಾಲಾಪರಾಧಿಗಳಾಗುವುದನ್ನು ತಪ್ಪಿಸಿ, ಪ್ರೌಢಶಾಲೆ ನೀಡಿ ಬಾಲ್ಯ ವಿವಾಹ ತಪ್ಪಿಸಿ ಇತ್ಯಾದಿಗಳ ಫಲಕಗಳನ್ನು ಹಿಡಿದು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಸಾಗಿದರು.
    ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿಲುಮನೆ, ಸಿಕಂದರ್‌ಕ್ಯಾಂಪ್, ಬಾಳೆಕಟ್ಟೆ, ದೊಡ್ಡೇರಿ, ಎಮ್ಮೆದೊಡ್ಡಿ, ನೆಟ್‌ಕಲ್ಲುಹಟ್ಟಿ, ಗಂಗೂರು, ಬೆಳ್ಳಿಗೆರೆ, ಸಾಬರಹಟ್ಟಿ, ಬೈರು ಕ್ಯಾಂಪ್ ಮತ್ತು ಗುಂಡು ಕ್ಯಾಂಪ್ ಗ್ರಾಮಸ್ಥರು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಮಕ್ಕಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
    ಪಾದಯಾತ್ರೆ ಮಹಾತ್ಮಗಾಂಧಿ ವೃತ್ತದಿಂದ ಮಾಧವಚಾರ್ ವೃತ್ತ, ಸಿ.ಎನ್ ರಸ್ತೆ ಮೂಲಕ ರಂಗಪ್ಪ ವೃತ್ತ ನಂತರ ತಾಲೂಕು ಕಛೇರಿ ತಲುಪಿಸಿತು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.



ವಿಐಎಸ್‌ಎಲ್ ನಿವೃತ್ತ ಕಾರ್ಮಿಕರಿಗೆ ಖಾಲಿ ಉಳಿದಿರುವ ೫೦೦ ವಸತಿ ಗೃಹಗಳು : ಬಿ.ವೈ ರಾಘವೇಂದ್ರ

ಭದ್ರಾವತಿಯಲ್ಲಿ ಗುರುವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯ ಅವರ ೧೬೨ನೇ ಜನ್ಮ ದಿನಾಚರಣೆ ಹಾಗು ಸರ್ವ ಸದಸ್ಯರ ಸಭೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಸೆ. ೧೫: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿವೃತ್ತ ಕಾರ್ಮಿಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಲಾಗುತ್ತಿದ್ದು, ಖಾಲಿ ಉಳಿದಿರುವ ಸುಮಾರು ೫೦೦ ಕಾರ್ಖಾನೆಯ ವಸತಿ ಗೃಹಗಳನ್ನು ನಿವೃತ್ತ ಕಾರ್ಮಿಕರಿಗೆ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಭರವಸೆ ನೀಡಿದರು.
    ಅವರು ಗುರುವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯ ಅವರ ೧೬೨ನೇ ಜನ್ಮ ದಿನಾಚರಣೆ ಹಾಗು ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಈಗಾಗಲೇ ನಿವೃತ್ತ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಬಗೆಹರಿಸಿಕೊಡಲಾಗಿದೆ. ಮೆಡಿಕ್ಲೈಮ್ ಸೌಲಭ್ಯದಿಂದ ವಂಚಿತರಾದವರಿಗೆ ಪುನಃ ಮೆಡಿಕ್ಲೈಮ್ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ. ಖಾಲಿ ಉಳಿದಿರುವ ಸುಮಾರು ೫೦೦ ಕಾರ್ಖಾನೆಯ ವಸತಿ ಗೃಹಗಳನ್ನು ಲೀಸ್ ಆಧಾರದಲ್ಲಿ ವಸತಿ ಗೃಹಗಳಿಂದ ವಂಚಿತರಾಗಿರುವ ನಿವೃತ್ತ ಕಾರ್ಮಿಕರಿಗೆ ನೀಡುವ ನಿಟ್ಟಿನಲ್ಲೂ ಸಹ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆ ನಿವೃತ್ತ ಕಾರ್ಮಿಕರು ಯಾವುದೇ ರೀತಿ ಆತಂಕಕ್ಕೆ ಒಳಗಾಗಬಾರದು ಎಂದರು.


ಭದ್ರಾವತಿಯಲ್ಲಿ ಗುರುವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯ ಅವರ ೧೬೨ನೇ ಜನ್ಮ ದಿನಾಚರಣೆ ಹಾಗು ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ೧ ಲಕ್ಷ ರು. ದೇಣಿಗೆ ನೀಡಿದರು.

    ಸರ್.ಎಂ ವಿಶ್ವೇಶ್ವರಾಯ ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಶರಾವತಿ ವಿದ್ಯುತ್ ಯೋಜನೆ ಮೂಲಕ ರಾಜ್ಯದ ಶೇ.೫೦ರಷ್ಟು ಭಾಗಕ್ಕೆ ವಿದ್ಯುತ್ ಕಲ್ಪಿಸಿಕೊಡಲಾಗಿದೆ. ಭದ್ರಾವತಿ ತಾಲೂಕಿನಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟ ಮಹಾನ್ ವ್ಯಕ್ತಿ, ಆಧುನಿಕ ಕಾಲದ ಶಿಲ್ಪಿ ಸರ್.ಎಂ ವಿಶ್ವೇಶ್ವರಾಯನವರಾಗಿದ್ದಾರೆ. ಇವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಜನ್ಮದಿನ ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದಲ್ಲಿ ಸರ್.ಎಂ ವಿಶ್ವೇಶ್ವರಾಯನವರ ಕೊಡುಗೆ ಅಪಾರವಾಗಿದೆ. ಅವರನ್ನು ಯಾರು ಸಹ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಿವೃತ್ತ ಕಾರ್ಮಿಕರು ಎಂದಿಗೂ ಆತಂಕಪಡುವ ಅಗತ್ಯವಿಲ್ಲ. ಕಾರ್ಖಾನೆಯ ವಸತಿ ಗೃಹಗಳಿಂದ ಖಾಲಿ ಮಾಡಿಸಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.


ಭದ್ರಾವತಿಯಲ್ಲಿ ಗುರುವಾರ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್.ಎಂ ವಿಶ್ವೇಶ್ವರಾಯ ಅವರ ೧೬೨ನೇ ಜನ್ಮ ದಿನಾಚರಣೆ ಹಾಗು ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ನಿವೃತ್ತ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
    ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರಕ್ಕೆ ೧ ಲಕ್ಷ ರು. ದೇಣಿಗೆ ನೀಡಿದರು. ಹಿರಿಯ ನಿವೃತ್ತ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯತು. ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪಾಂಶುಪಾಲರಾದ ಡಾ. ಹರಿಣಾಕ್ಷಿ ಉಪನ್ಯಾಸ ನಡೆಸಿಕೊಟ್ಟರು.
    ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ, ಹಿರಿಯ ಕಾರ್ಮಿಕ ಮುಖಂಡ ಎಸ್.ಎನ್ ಬಾಲಕೃಷ್ಣ, ಪದಾಧಿಕಾರಿಗಳಾದ ಎಲ್. ಬಸವರಾಜಪ್ಪ, ಶಂಕರ್, ಹಾ. ರಾಮಪ್ಪ, ರವೀಂದ್ರರೆಡ್ಡಿ, ಹನುಮಂತರಾವ್, ಎಸ್.ಎಸ್ ಭೈರಪ್ಪ, ನರಸಿಂಹಚಾರ್, ಅಡವೀಶಯ್ಯ, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Wednesday, September 14, 2022

ವಿದ್ಯಾರ್ಥಿನಿ ಮಾಯಾವತಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

ಭದ್ರಾವತಿ :  ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಭೇತಿ  ಸಂಸ್ಥೆ(ಡಯಟ್)ಯಲ್ಲಿ ಜರುಗಿದ ಜಿಲ್ಲಾಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ಧೆಯಲ್ಲಿ ನಗರದ ನ್ಯೂಟೌನ್  ಸರ್ಕಾರಿ ಬಾಲಿಕಾ ಪ್ರೌಢ ಶಾಲೆಯ    ವಿದ್ಯಾರ್ಥಿನಿ ಮಾಯಾವತಿ  ಭಾಗವಹಿಸಿ  ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
      ಡಯಟ್ ಉಪನಿರ್ದೇಶಕ ಬಸವರಾಜಪ್ಪ  ಪ್ರಶಸ್ತಿ ಪತ್ರ ಪ್ರದಾನ ಮಾಡಿದರು. ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುವ ಮಾಯಾವತಿ ಹಾಗು ತರಬೇತಿ ನೀಡಿದ ವಿಜ್ಞಾನ ಶಿಕ್ಷಕಿ ಜಯಲಕ್ಷ್ಮಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ  ನಾಗೇಂದ್ರಪ್ಪ, ಉಪಪ್ರಾಚಾರ್ಯ  ಸುಮನಾ ಟಿ ಎಸ್, ಶಾಲಾಭಿವೃದ್ಧಿ  ಸಮಿತಿ, ಮತ್ತು  ಶಿಕ್ಷಕ, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.    

ಸಿರಿಯೂರು ಸರ್ಕಾರಿ ಶಾಲೆಗೆ ಒಂದು ಕೊಠಡಿ ಮಂಜೂರಾತಿ : ಶೀಘ್ರದಲ್ಲಿಯೇ ಕಾಮಗಾರಿ ಆರಂಭ


ಎ.ಕೆ ನಾಗೇಂದ್ರಪ್ಪ

    ಭದ್ರಾವತಿ, ಸೆ. ೧೪: ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮ ಸರ್ಕಾರಿ ಶಾಲೆಯೊಂದರ ಗೋಡೆ ಕುಸಿದ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿ, ಶಾಲೆಯ ಗೋಡೆ ಕುಸಿದಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ಶಾಸಕರು ಸರ್ಕಾರಕ್ಕೆ ಒಂದು ಕೊಠಡಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದು ಮಂಜೂರಾತಿಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ನಡೆಯಲಿದೆ. ಉಳಿದಂತೆ ಇನ್ನೂ ಎರಡು ಕೊಠಡಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪೋಷಕರು, ವಿದ್ಯಾರ್ಥಿಗಳು ಈ ಸರ್ಕಾರಿ ಶಾಲೆ ಬಗ್ಗೆ ಆತಂಕಪಡದಿರುವಂತೆ ಮನವಿ ಮಾಡಿದ್ದಾರೆ.

ರಾಜೇಶ್ವರಿ ನಿಧನ

ರಾಜೇಶ್ವರಿ
    ಭದ್ರಾವತಿ, ಸೆ. ೧೪: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಅಧಿಕಾರಿ ಕಳಸೇಗೌಡ ಅವರ ಪತ್ನಿ ರಾಜೇಶ್ವರಿ(೫೯) ನಿಧನ ಹೊಂದಿದರು.
    ರಾಜೇಶ್ವರಿ ಕಾಗದನಗರ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ದಿವಂಗತ ಜಯಣ್ಣ ಅವರ ಪುತ್ರಿಯಾಗಿದ್ದು, ಶಿವಮೊಗ್ಗ ಎಂಆರ್‌ಎಸ್ ಸರ್ಕಲ್ ಬೈಪಾಸ್ ರಸ್ತೆ ಸಮೀಪ ವಾಸಿಸುತ್ತಿದ್ದರು. ಇವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನೆರವೇರಿತು. ಇವರ ನಿಧನಕ್ಕೆ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಎಸ್. ಚಂದ್ರಶೇಖರ್ ಸಂತಾಪ ಸೂಚಿಸಿದ್ದಾರೆ.

ಎರಡು ಲಾರಿಗಳ ನಡುವೆ ಅಪಘಾತ : ಟ್ಯಾಂಕರ್ ಜಖಂ

ಭದ್ರಾವತಿ ಡೈರಿ ಸಮೀಪದ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ೨೦೬ರಲ್ಲಿ ಎರಡು ಲಾರಿಗಳ ನಡುವೆ ಬುಧವಾರ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
    ಭದ್ರಾವತಿ, ಸೆ. ೧೪: ಡೈರಿ ಸಮೀಪದ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ೨೦೬ರಲ್ಲಿ ಎರಡು ಲಾರಿಗಳ ನಡುವೆ ಬುಧವಾರ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
    ಮಾಚೇನಹಳ್ಳಿ ಐಟಿ ಪಾರ್ಕ್ ಬಳಿ ಘಟನೆ ನಡೆದಿದ್ದು, ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿ ಹಾಗೂ ಭದ್ರಾವತಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದೆ.
    ಕ್ಯಾಂಟರನ್ನು ಹಿಮ್ಮುಖವಾಗಿ ಹಿಂದಕ್ಕೆ ತೆಗೆದುಕೊಳ್ಳುವ ವೇಳೆ, ಅದೇ ದಾರಿಯಲ್ಲಿ ಬಂದ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ ಮುಂಭಾಗ ಬಹುತೇಕ ಜಖಂಗೊಂಡಿದೆ. ಆದರೂ ಅದೃಷ್ಟವಶಾತ್ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದಾಗಿ ಕೆಲ ಸಮಯ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸರ್.ಎಂ ವಿಶ್ವೇಶ್ವರಾಯ ಜನ ಸಮುದಾಯಕ್ಕೆ ಸೇರಿದವರು : ಮನುಕುಮಾರ್

ಭದ್ರಾವತಿ ಜನ್ನಾಪುರ ಕೆರೆ ಸಮೀಪದ ಹೊಸ ಸಿದ್ದಾಪುರ ರಸ್ತೆಯಲ್ಲಿರುವ ನಾಗರಕಟ್ಟೆ ದೇವಸ್ಥಾನದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಹಾಗೂ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅಶ್ವತ್ ಕಟ್ಟೆ, ನಾಗರಕಟ್ಟೆ ಸೇವಾ ಸಮಿತಿ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಸೆ. ೧೪: ಭಾರತ ರತ್ನ ಸರ್.ಎಂ ವಿಶ್ವೇಶ್ವರಾಯ ಕೇವಲ ಒಂದು ಪ್ರದೇಶಕ್ಕೆ, ಒಂದು ದೇಶಕ್ಕೆ, ರಾಷ್ಟ್ರಕ್ಕೆ ಸೀಮಿತ ಅಲ್ಲ ಇಡೀ ಜನ ಸಮುದಾಯಕ್ಕೆ ಸೇರಿದ ಮಹಾನ್ ಆದರ್ಶ ವ್ಯಕ್ತಿ ಎಂದು ಪೌರಾಯುಕ್ತ ಮನುಕುಮಾರ್ ಹೇಳಿದರು.
    ಅವರು ಬುಧವಾರ ನಗರದ ಜನ್ನಾಪುರ ಕೆರೆ ಸಮೀಪದ ಹೊಸ ಸಿದ್ದಾಪುರ ರಸ್ತೆಯಲ್ಲಿರುವ ನಾಗರಕಟ್ಟೆ ದೇವಸ್ಥಾನದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಹಾಗೂ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅಶ್ವತ್ ಕಟ್ಟೆ, ನಾಗರಕಟ್ಟೆ ಸೇವಾ ಸಮಿತಿ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಇಲ್ಲಿನ ನಗರಸಭೆ ಪೌರಾಯುಕ್ತರಾಗಿ ಬಂದ ನಂತರ ಸರ್.ಎಂ ವಿಶ್ವೇಶ್ವರಾಯ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಾಗಿದೆ. ಇಲ್ಲಿನ ಜನರು ಅವರ ಮೇಲೆ ಹೊಂದಿರುವ ಗೌರವ, ಪ್ರೀತಿ, ವಿಶ್ವಾಸ ಹಾಗು ಅಭಿಮಾನ ಹೆಚ್ಚಿನದಾಗಿದೆ. ಇದನ್ನು ಗಮನಿಸಿದಾಗ ಅವರು ಕೇವಲ ಒಂದು ರಾಜ್ಯ, ದೇಶ, ರಾಷ್ಟ್ರಕ್ಕೆ ಸೀಮಿತವಲ್ಲ ಇಡೀ ಜನ ಸಮುದಾಯಕ್ಕೆ ಸೇರಿದವರು ಎಂಬ ಭಾವನೆ ಮೂಡುತ್ತಿದೆ. ವಿಐಎಸ್‌ಎಲ್ ಹಾಗೂ ಎಂಪಿಎಂ ಎರಡು ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಇಲ್ಲಿನ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ ಎಂದರು.
    ಕಾರ್ಖಾನೆಗಳು ಈ ದೇಶದ ಬೆನ್ನೆಲುಬು ಎಂಬ ಅವರ ನಿಲುವು ಹಾಗೂ ಆ ದಾರಿಯಲ್ಲಿ ಸಾಗಿಬಂದ ಅವರ ಬದುಕು. ಅವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಪ್ರಾಮಾಣಿಕತೆ, ಸಮಯ ಪಾಲನೆ, ಶಿಸ್ತು ಬದ್ಧತೆ ಇಂದಿಗೂ ಆದರ್ಶಪ್ರಾಯವಾಗಿದೆ ಎಂದರು.


    ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಕಾರ್ಯಾಧ್ಯಕ್ಷ ಸುಂದರ್ ಬಾಬು ಮಾತನಾಡಿ, ಸರ್ ಎಂ ವಿಶ್ವೇಶ್ವರಾಯ ಅವರು ನಾಡಿಗೆ, ರಾಷ್ಟ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಅದರಲ್ಲೂ ಈ ಕ್ಷೇತ್ರದ ಜನರು ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
    ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮನೋಹರ್, ಶಿವಣ್ಣ ಗೌಡ, ಅಭಿಲಾಶ್, ನಾಗಭೂಷಣ್, ನಗರಸಭಾ ಸದಸ್ಯರಾದ ರಿಯಾಜ್ ಅಹಮದ್, ಆರ್. ಶ್ರೇಯಸ್(ಚಿಟ್ಟೆ), ನಾಗರಕಟ್ಟೆ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ್,  ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ  ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.