ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಕ್ಷಣ ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ ಗುರುವಾರ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಿಂದ ತಾಲೂಕು ಕಛೇರಿವರೆಗೂ ಪಾದಯಾತ್ರೆ ನಡೆಸಲಾಯಿತು.
ಭದ್ರಾವತಿ, ಸೆ. ೧೫ : ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಕ್ಷಣ ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಮಾಡಬೇಕೆಂದು ಪ್ರೌಢಶಾಲೆ ಹೋರಾಟ ಸಮಿತಿ ಹಾಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು ಸಿ. ಲೇಪಾಕ್ಷಿ ಆಗ್ರಹಿಸಿದ್ದಾರೆ.
ಅವರು ಗುರುವಾರ ಹೋರಾಟ ಸಮಿತಿ ವತಿಯಿಂದ ತರೀಕೆರೆ ರಸ್ತೆಯ ಮಾಧವಚಾರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧ ರಿಂದ ೮ನೇ ತರಗತಿವರೆಗೆ ಸರ್ಕಾರಿ ಶಾಲೆಗಳಿದ್ದು, ಒಟ್ಟು ೯ ಸರ್ಕಾರಿ ಶಾಲೆಗಳ ಪೈಕಿ ೪ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಪಂಚಾಯಿತಿ ವ್ಯಾಪ್ತಿಯ ಎಲ್ಲಿಯೂ ಸಹ ಸರ್ಕಾರಿ ಪ್ರೌಢಶಾಲೆ ಇರುವುದಿಲ್ಲ. ೯ ಮತ್ತು ೧೦ನೇ ತರಗತಿ ಹೊಂದಿರುವ ಪ್ರೌಢಶಾಲೆ ೨೦೨೨-೨೩ನೇ ಶೈಕ್ಷಣಿಕ ಸಾಲಿನಿಂದ ಆರಂಭಿಸಲು ಈಗಾಗಲೇ ಶಿಕ್ಷಣ ಇಲಾಖೆ ಮೂಲಕ ಶಾಸಕರ ನೇತೃತ್ವದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ಭಾಗದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹಾಗು ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದು, ಮಕ್ಕಳು ಪ್ರೌಢಶಾಲೆಗಾಗಿ ೭-೮ ಕಿ.ಮೀ ದೂರ ಸಂಚರಿಸಬೇಕಾಗಿದೆ. ಅದರಲ್ಲೂ ಹೆಚ್ಚಿನ ಬಸ್ ಸೌಲಭ್ಯವಿಲ್ಲದ ಕಾರಣಕ್ಕಾಗಿ ಮಕ್ಕಳು ಪ್ರತಿದಿನ ಬಸ್‌ನಲ್ಲಿ ಜೋತುಬಿದ್ದು ಸಂಚರಿಸುವಂತಾಗಿದೆ. ಈ ಎಲ್ಲಾ ಕಾರಣಗಳ ಹಿನ್ನಲೆಯಲ್ಲಿ ತಕ್ಷಣ ಸರ್ಕಾರಿ ಪ್ರೌಢಶಾಲೆ ಮಂಜೂರಾತಿ ಮಾಡುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಪಾದಯಾತ್ರೆ ಹೋರಾಟ ಬೆಂಗಳೂರಿನವರೆಗೂ ನಡೆಯಲಿದೆ ಎಂದು ಎಚ್ಚರಿಸಿದರು.
ಪಾದಯಾತ್ರೆಯಲ್ಲಿ ಪ್ರೌಢಶಾಲೆ ನೀಡಿ ಬಾಲಾಪರಾಧಿಗಳಾಗುವುದನ್ನು ತಪ್ಪಿಸಿ, ಪ್ರೌಢಶಾಲೆ ನೀಡಿ ಬಾಲ್ಯ ವಿವಾಹ ತಪ್ಪಿಸಿ ಇತ್ಯಾದಿಗಳ ಫಲಕಗಳನ್ನು ಹಿಡಿದು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಸಾಗಿದರು.
ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿಲುಮನೆ, ಸಿಕಂದರ್‌ಕ್ಯಾಂಪ್, ಬಾಳೆಕಟ್ಟೆ, ದೊಡ್ಡೇರಿ, ಎಮ್ಮೆದೊಡ್ಡಿ, ನೆಟ್‌ಕಲ್ಲುಹಟ್ಟಿ, ಗಂಗೂರು, ಬೆಳ್ಳಿಗೆರೆ, ಸಾಬರಹಟ್ಟಿ, ಬೈರು ಕ್ಯಾಂಪ್ ಮತ್ತು ಗುಂಡು ಕ್ಯಾಂಪ್ ಗ್ರಾಮಸ್ಥರು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಮಕ್ಕಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಪಾದಯಾತ್ರೆ ಮಹಾತ್ಮಗಾಂಧಿ ವೃತ್ತದಿಂದ ಮಾಧವಚಾರ್ ವೃತ್ತ, ಸಿ.ಎನ್ ರಸ್ತೆ ಮೂಲಕ ರಂಗಪ್ಪ ವೃತ್ತ ನಂತರ ತಾಲೂಕು ಕಛೇರಿ ತಲುಪಿಸಿತು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
No comments:
Post a Comment