ಲಾಂಛನ ಬಿಡುಗಡೆಗೊಳಿಸಿದ ಪ್ರಭಾರ ಅಧ್ಯಕ್ಷ ಚನ್ನಪ್ಪ
ಭದ್ರಾವತಿ ನಗರಸಭೆ ವತಿಯಿಂದ ಈ ಬಾರಿ ೧೦ ದಿನಗಳ ಕಾಲ ನಾಡಹಬ್ಬ ದಸರಾ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಸೋಮವಾರ ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಲಾಂಛನ ಬಿಡುಗಡೆಗೊಳಿಸಿದರು.
ಭದ್ರಾವತಿ, ಸೆ. ೧೯: ನಗರಸಭೆ ವತಿಯಿಂದ ಈ ಬಾರಿ ನಾಡಹಬ್ಬ ದಸರಾ ೧೦ ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ತಿಳಿಸಿದರು.
ಅವರು ಸೋಮವಾರ ನಗರಸಭೆ ಸಭಾಂಗಣದಲ್ಲಿ ನಾಡಹಬ್ಬ ದಸರಾ-೨೦೨೨ರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ನಗರಸಭೆ ವತಿಯಿಂದ ನಾಡಹಬ್ಬ ದಸರಾ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಸೆ.೨೬ರಂದು ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಿರಿಯ ಕಾರ್ಮಿಕ ಹೋರಾಟ ಡಿ.ಸಿ ಮಾಯಣ್ಣ ದಸರಾ ಉತ್ಸವಕ್ಕೆ ಚಾಲನೆ ನೀಡುವರು ಎಂದರು.
ಸೆ.೨೭ರಂದು ಯುವ ದಸರಾ, ೨೮ರಂದು ಜಾನಪದ ದಸರಾ, ೨೯ರಂದು ಪರಿಸರ ದಸರಾ, ೩೦ರಂದು ಯೋಗ ದಸರಾ, ಅ.೧ರಂದು ಮಹಿಳಾ ದಸರಾ, ೨ರಂದು ರಂಗದಸರಾ, ೩ರಂದು ಮಕ್ಕಳ ದಸರಾ ಹಾಗು ೪ರಂದು ಹಾಸ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ಹಳೇನಗರದ ಕನಕಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಅ.೫ರಂದು ಕೊನೆಯ ದಿನ ಲೋಯರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ವಿವಿಧ ಕಲಾ ತಂಡಗಳು, ಸುಮಾರು ೫೦ಕ್ಕೂ ಹೆಚ್ಚು ಅಲಂಕೃತಗೊಂಡ ದೇವಾನುದೇವತೆಗಳ ಮೆರವಣಿಗೆ ನಡೆಯಲಿದೆ. ಸಂಜೆ ೬.೩೦ಕ್ಕೆ ಕನಕಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ(ಶಮಿ ಪೂಜೆ) ಕಾರ್ಯಕ್ರಮದ ಮೂಲಕ ರಾವಣನ ಸಂಹಾರದೊಂದಿಗೆ ಅಂತ್ಯಗೊಳ್ಳಲಿದೆ ಎಂದರು.
ನಾಡಹಬ್ಬ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಗರಸಭಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ಉಸ್ತುವಾರಿ ಸಮಿತಿ, ಸ್ವಾಗತ ಸಮಿತಿ, ಸಾಂಸ್ಕೃತಿಕ ಮತ್ತು ಮೆರವಣಿಗೆ ಸಮಿತಿ, ಪ್ರಚಾರ ಮತ್ತು ಅಲಂಕಾರ ಸಮಿತಿ, ಮನರಂಜನಾ ಸಮಿತಿ, ದೇವರುಗಳ ಉತ್ಸವ ಸಮಿತಿ ಮತ್ತು ಆಯುಧ ಪೂಜೆ ಉಸ್ತುವಾರಿ ಸಮಿತಿಗಳು ಕಾರ್ಯ ನಿರ್ವಹಿಸಲಿವೆ.
ಈಗಾಗಲೇ ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ ಸಿದ್ದಪಡಿಸಲಾಗಿದ್ದು, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ನಾಡಹಬ್ಬ ದಸರಾ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಪೌರಾಯುಕ್ತ ಮನುಕುಮಾರ್, ವಿವಿಧ ಸಮಿತಿ ಅಧ್ಯಕ್ಷರುಗಳಾದ ವಿ. ಕದಿರೇಶ್, ಲತಾ ಚಂದ್ರಶೇಖರ್, ಆರ್. ಶ್ರೇಯಸ್(ಚಿಟ್ಟೆ), ಜಾರ್ಜ್, ಕಾಂತರಾಜು, ಮಾಜಿ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ನಗರಸಭೆ ಅಧಿಕಾರಿಗಳಾದ ರಾಜ್‌ಕುಮಾರ್, ಪ್ರಭಾಕರ್, ಸುವಾಸಿನಿ, ಪವನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.