Tuesday, August 4, 2020

ಬಂಗಾರದ ಸರ ಕಿತ್ತುಕೊಂಡು ಪರಾರಿ

ಭದ್ರಾವತಿ, ಆ. ೪: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನೌಕರನೊಬ್ಬನ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. 
ಸುಮಾರು ೨೩ ವರ್ಷದ ಶಿವಮೊಗ್ಗ ವಿನೋಬನಗರ ನಿವಾಸಿ ಕೆ.ಪಿ ಪ್ರತೀಕ್ ಮಾಚೇನಹಳ್ಳಿಯಲ್ಲಿರುವ ಶಾಂತಲ ಸ್ಟೀರೋ ಕಾಸ್ಟಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮಿಷನ್ ಆಪರೇಟರ್ ಕೆಲಸ ಮಾಡುತ್ತಿದ್ದು, ಆ.೧ರ ರಾತ್ರಿ ಎರಡನೇ ಪಾಳಿ ಅಂದರೆ ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೧೧ ಗಂಟೆ ವರೆಗೆ ಕೆಲಸ ನಿರ್ವಹಿಸಿ ಮನೆಗೆ ತೆರಳುತ್ತಿದ್ದಾಗ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯಲ್ಲಿರುವ ಕೆಇಬಿ ಕಛೇರಿ ಬಳಿ ೪ ಮಂದಿ ಅಪರಿಚಿತ ವ್ಯಕ್ತಿಗಳು ಈತನ ಕುತ್ತಿಗೆಯಲ್ಲಿದ್ದ ಸುಮಾರು ೧೬ ಗ್ರಾಂ ತೂಕದ ಸುಮಾರು ೩೩ ಸಾವಿರ ರು. ಮೌಲ್ಯದ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. 
ಈ ಸಂಬಂಧ ನ್ಯೂಟೌನ್ ಪೊಲೀಸ್  ಠಾಣೆಯಲ್ಲಿ ಆ.೩ರ ಸೋಮವಾರ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಸೂಕ್ತ ಅಧಿಕಾರಿ ಇಲ್ಲದೆ ಮಾಜಿ ಸೈನಿಕರಿಗೆ ಸಂಕಷ್ಟ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸೈನಿಕರ ಸಂಘ ಆರೋಪ 

ಭದ್ರಾವತಿಯಲ್ಲಿ ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ವಿನೋದ್‌ಪೂಜಾರಿ, ಗಿರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭದ್ರಾವತಿ, ಆ. ೪: ಮಾಜಿ ಸೈನಿಕರ ಪುನರ್ ವಸತಿ ಇಲಾಖೆಗೆ ಸಂಬಂಧಪಟ್ಟ ಮಾಹಿತಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸರಿಯಾದ ಮಾಹಿತಿ ಲಭ್ಯವಾಗದೆ ಇರುವುದರಿಂದ ಮಾಜಿ ಸೈನಿಕರು ಹಾಗೂ ಸೈನಿಕರ ವಿಧವಾ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ತಾಲೂಕು ಮಾಜಿ ಸೈನಿಕರ ಸಂಘ ಆರೋಪಿಸಿದೆ. 
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸೈನಿಕರು, ಸಂಘದ ಅಡಿಯಲ್ಲಿ ತಾಲೂಕಿನಲ್ಲಿ ಸುಮಾರು ೪೦೦ ಮಂದಿ ಸೇರಿದಂತೆ ಜಿಲ್ಲೆಯಲ್ಲಿ(ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಒಳಗೊಂಡು) ಒಟ್ಟು ೨೩೨೩ ಮಂದಿ ಮಾಜಿ ಸೈನಿಕರು ಹಾಗೂ ಸೈನಿಕರ ವಿಧವಾ ಕುಟುಂಬಗಳಿವೆ. ರಾಜ್ಯದಲ್ಲಿ ಸುಮಾರು ೧ ಲಕ್ಷವಿದ್ದು, ಇವರ ಕುಂದು-ಕೊರತೆಗಳಿಗೆ ಸ್ಪಂದಿಸಲು ಯಾರು ಸಹ ಇಲ್ಲದಂತಾಗಿದೆ. ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಮಂಡಳಿಯಿಂದ ಯಾವುದೇ ಸೌಲಭ್ಯಗಳು ಲಭಿಸುತ್ತಿಲ್ಲ. ಉಪನಿರ್ದೇಶಕರ ಹುದ್ದೆಗೆ ಸೈನಿಕ ಇಲಾಖೆಗೆ ಸಂಬಂಧಪಡದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಿಂದಾಗಿ ಸಮಸ್ಯೆಗಳು ಸರಿಯಾಗಿ ಇತ್ಯರ್ಥವಾಗುತ್ತಿಲ್ಲ ಎಂದು ದೂರಿದರು. 
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಾರ್ಷಿಕ ಸುಮಾರು ೧೦ ರಿಂದ ೧೫ ಕೋ. ರು. ಅನುದಾನ ಬಿಡುಗಡೆಯಾಗುತ್ತಿದ್ದು, ಆದರೆ ಮಂಡಳಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗದೆ ಸರ್ಕಾರಕ್ಕೆ ಹಿಂದಿರುಗಿಸಲಾಗುತ್ತಿದೆ. ಅಲ್ಲದೆ ಸೈನಿಕರ ಶಿಷ್ಯ ವೇತನ ಸುಮಾರು ೨ ಕೋ. ರು. ಬಿಡುಗಡೆಯಾಗಿದ್ದು, ಈ ಅನುದಾನ ಸಹ ಹಿಂದಿರುಗಿಸಲಾಗಿದೆ. ಇದುವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಯಾರಿಗೂ ಬಂದಿಲ್ಲ. ಈ ಕುರಿತು ಸಂಬಂಧಪಡದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸೂಕ್ತ ಉತ್ತರ ನೀಡುತ್ತಿಲ್ಲ. ಇದರಿಂದಾಗಿ ಮಾಜಿ ಸೈನಿಕರು, ಸೈನಿಕರ ವಿಧವಾ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದರು. 
ಸೈನಿಕ ಮಂಡಳಿಗೆ ಅನುಭವ ಹೊಂದಿರುವ ಮಾಜಿ ಸೈನಿಕ ಅಧಿಕಾರಿಯನ್ನು ನೇಮಿಸಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಆದರೂ ಸಹ ಯಾವುದೇ ಕ್ರಮ ಇದುವರೆಗೂ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು. 
ಸಂಘದ ಅಧ್ಯಕ್ಷ ಅಶೋಕ್, ನಿರ್ದೇಶಕ ಗಿರಿ, ಕಲಾವತಿ, ಆಶಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಆಯೋಧ್ಯೆ ರಾಮಮಂದಿರ ನಿರ್ಮಾಣ ಭೂಮಿ ಪೂಜೆಗೆ ನಗರದಲ್ಲಿ ಸಂಭ್ರಮಾಚರಣೆಗೆ ಸಿದ್ದತೆ

ಭದ್ರಾವತಿ, ಆ. ೫: ದೇಶದ ಬಹುಸಂಖ್ಯಾತರ ಬಹಳ ವರ್ಷಗಳ ಕನಸು ಶ್ರೀರಾಮ ಜನ್ಮಭೂಮಿ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ನನಸಾಗುತ್ತಿರುವ ಹಿನ್ನಲೆಯಲ್ಲಿ ನಗರದ ವಿವಿಧ ಹಿಂದೂಪರ ಸಂಘಟನೆಗಳಿಂದ ಆ.೫ರಂದು ಸಂಭ್ರಮಾಚರಣೆಗೆ ಸಿದ್ದತೆಗಳು ನಡೆದಿವೆ. 
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುತ್ತಿರುವುದು ದೇಶದ ಇತಿಹಾಸದ ಸಂಭ್ರಮದ ದಿನವಾಗಿದ್ದು, ಈ ಹಿನ್ನಲೆಯಲ್ಲಿ ನಗರದ ಹೊಸ ಸೇತುವೆ ಬಳಿ ಸಿಹಿ ಹಂಚಿಕೆ ಕಾರ್ಯಕ್ರಮ ಬಿಜೆಪಿ ಪಕ್ಷದ ತಾಲೂಕು ಎಸ್.ಸಿ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದೆ. 
ಕರ ಸೇವಕರಿಗೆ ಸನ್ಮಾನ : 
೧೯೯೨ರಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಹಾ. ರಾಮಪ್ಪ ನೇತೃತ್ವದಲ್ಲಿ ಸುಮಾರು ೮೮ ಕರಸೇವಕರು ಆಯೋಧ್ಯೆಗೆ ತೆರಳಿ ಕರ ಸೇವೆಯಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನಲೆಯಲ್ಲಿ ಕರಸೇವಕರ ತಂಡದ ಶ್ರಮ ಸಾರ್ಥಕತೆ ಮಿಲನ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ತಾಲೂಕು ಶಾಖೆ ವತಿಯಿಂದ ಬೆಳಿಗ್ಗೆ ೧೦ ಗಂಟೆಗೆ ಸಿದ್ದರೂಢನಗರದ ಧರ್ಮಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
ಬಜರಂಗದಳದಿಂದ ೩ ಸಾವಿರ ಲಾಡು ವಿತರಣೆ: 
ರಾಮಮಂದಿರ ನಿರ್ಮಾಣ ಭೂಮಿ ಪೂಜೆ ಹಿನ್ನಲೆಯಲ್ಲಿ ನಗರದಲ್ಲಿ ಬಜರಂಗದಳ ವತಿಯಿಂದ ಸಾರ್ವಜನಿಕರಿಗೆ ೩ ಸಾವಿರ ಲಾಡು ವಿತರಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ. 

Monday, August 3, 2020

ಪುನಃ ೨೯ ಸೋಂಕು ಪತ್ತೆ : ಉಕ್ಕಿನ ನಗರದಲ್ಲಿ ಹೆಚ್ಚಿದ ಆತಂಕ

ಭದ್ರಾವತಿ, ಆ. ೩: ತಾಲೂಕಿನಲ್ಲಿ ಕೊರೋನಾ ಸೋಂಕು ಪುನಃ ಹೆಚ್ಚಳವಾಗಿದ್ದು, ಸೋಮವಾರ ೨೯ ಪ್ರಕರಣಗಳು ಪತ್ತೆಯಾಗಿವೆ. 
ಭಾನುವಾರ ಒಂದೇ ಒಂದು ಪ್ರಕರಣ ಪತ್ತೆಯಾಗಿತ್ತು. ಇದೀಗ ನಗರಸಭೆ ವ್ಯಾಪ್ತಿಯಲ್ಲಿ ೧೯ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ೧೦ ಪ್ರಕರಣಗಳು ಪತ್ತೆಯಾಗಿವೆ.
ನಗರಸಭೆ ವ್ಯಾಪ್ತಿಯ ಗಣೇಶ್ ಕಾಲೋನಿಯ ಒಂದೇ ಕುಟುಂಬದ ೪೦ ಹಾಗೂ ೬೬ ವರ್ಷದ ಇಬ್ಬರು ಪುರುಷರು ಮತ್ತು ೬೦ ವರ್ಷದ ಮಹಿಳೆ ಸೇರಿ ೩ ಮಂದಿಗೆ, ಗಾಂಧಿನಗರದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರಿಗೆ, ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯೊಬ್ಬರಿಗೆ ಹಾಗೂ ಹೊಸಮನೆ ಶಿವಾಜಿ ಸರ್ಕಲ್ ಬಳಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ, ಸಿದ್ಧರೂಢ ನಗರದಲ್ಲಿ ಒಬ್ಬ ವ್ಯಕ್ತಿಗೆ, ಶಂಕರ ಮಠ ಬಳಿ ವ್ಯಕ್ತಿಯೊಬ್ಬರಿಗೆ,  ಬಿ.ಎಚ್ ರಸ್ತೆ ೭ನೇ ಕ್ರಾಸ್‌ನಲ್ಲಿ ವ್ಯಕ್ತಿಯೊಬ್ಬರಿಗೆ, ಹೊಸಮನೆ ಭಾಗದಲ್ಲಿ ಸೇಂಟ್ ಮೇರಿಸ್ ಶಾಲೆ ಬಳಿ ೭೪ ವರ್ಷದ ವೃದ್ಧನಿಗೆ, ಹೊಸಮನೆ ಚಾನಲ್ ಬಳಿ ಯುವಕನೊಬ್ಬನಿಗೆ ಹಾಗೂ ವಿಜಯನಗರದಲ್ಲಿ ೨೬ ವರ್ಷದ ಯುವಕನಿಗೆ, ಹುತ್ತಾಕಾಲೋನಿ ಒಕ್ಕಲಿಗರ ಸಮುದಾಯ ಭವನದ ಬಳಿ ೩೩ ವರ್ಷದ ವ್ಯಕ್ತಿಗೆ, ವೇಲೂರು ಶೆಡ್‌ನಲ್ಲಿ ೫೫ ವರ್ಷದ ಮಹಿಳೆ ಹಾಗೂ ೨೩ ವರ್ಷದ ಯುವತಿಗೆ, ವಿಶ್ವೇಶ್ವರಾಯ ನಗರದಲ್ಲಿ ೨೯ ವರ್ಷದ ಪುರುಷನಿಗೆ, ಎಂಎಂ ಕಾಂಪೌಂಡ್‌ನಲ್ಲಿ ೪೨ ವರ್ಷದ ವ್ಯಕ್ತಿಗೆ ಹಾಗೂ ಕಬಳಿಕಟ್ಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಹಾಗೂ ಹಳೇನಗರದ ಬ್ರಾಹ್ಮಣರ ಬೀದಿಯಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ.   
ಉಳಿದಂತೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಅರಳಿಹಳ್ಳಿ ಗ್ರಾಮದಲ್ಲಿ ೬೬ ವರ್ಷದ ವ್ಯಕ್ತಿಗೆ, ಆನವೇರಿ ಶ್ರೀನಿವಾಸಪುರದಲ್ಲಿ ೩೦ ವರ್ಷದ ಪುರುಷನಿಗೆ, ಆಗರದಹಳ್ಳಿಯಲ್ಲಿ ೨೩, ೨೪ ಮತ್ತು ೪೭ ವರ್ಷದ ೩ ಮಂದಿ ಪುರುಷರಿಗೆ, ಬಂಡಿಗುಡ್ಡ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಮತ್ತು ದೇವರನರಸೀಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. 
ಬ್ಯಾಂಕ್ ಸಿಬ್ಬಂದಿಗೆ ಸೋಂಕು : ೨ ದಿನ ಬಂದ್ 
ನಗರದ ಬಿ.ಎಚ್ ರಸ್ತೆ ಸೌತ್ ಇಂಡಿಯನ್ ಬ್ಯಾಂಕ್ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಹಿನ್ನಲೆಯಲ್ಲಿ ೨ ದಿನ ಮಂಗಳವಾರ ಮತ್ತು ಬುಧವಾರ ಬ್ಯಾಂಕ್ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಮುನ್ನಚ್ಚರಿಕೆ ಕ್ರಮವಾಗಿ ಬ್ಯಾಂಕ್‌ನಲ್ಲಿ ಸ್ಯಾನಿಟೈಜರ್ ಕೈಗೊಳ್ಳಲಾಗಿದೆ.   
ಸೋಂಕಿತ ತಿರುಗಾಟ : ಸ್ಥಳೀಯರಲ್ಲಿ ಆತಂಕ 
ಹೊಸಮನೆ ವ್ಯಾಪ್ತಿಯ ೪ನೇ ಕ್ರಾಸ್‌ನಲ್ಲಿ ಕೊರೋನಾ ಸೋಂಕಿಗೆ ಒಳಗಾಗಿರುವ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಎಲ್ಲಿಬೇಕೆಂದರಲ್ಲಿ ತಿರುಗಾಡುತ್ತಿದ್ದಾನೆಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಅಲ್ಲದೆ ಸೋಂಕಿತ ವ್ಯಕ್ತಿಯಿಂದ ಸಮುದಾಯಕ್ಕೆ ಸೋಂಕು ಹರಡುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 
    ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ನಗರಸಭೆ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.


ಪತ್ರಕರ್ತರಿಂದ ಸಮಾಜದಲ್ಲಿ ಎಚ್ಚರಿಸುವ ಕಾರ್ಯ ಶ್ಲಾಘನೀಯ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಳೇನಗರದ ಪತ್ರಿಕಾಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈದ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಭದ್ರಾವತಿ, ಆ. ೩: ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರ ಶ್ರಮ ಅಪಾರವಾಗಿದ್ದು, ಪತ್ರಕರ್ತರು ಸಮಾಜದಲ್ಲಿ ಎಲ್ಲರನ್ನು ಎಚ್ಚರಿಸುವಂತಹ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
ಅವರು ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಳೇನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಪತ್ರಕರ್ತರು ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳಲು ಸಹಕಾರಿಯಾಗಿದ್ದಾರೆ ಎಂದರು. 
ಪತ್ರಕರ್ತರ ಸಂಘಟನೆಯ ಫಲವಾಗಿ ನಗರದಲ್ಲಿ ಸುಸಜ್ಜಿತವಾದ ಪತ್ರಿಕಾಭವನ ನಿರ್ಮಾಣಗೊಂಡಿದ್ದು, ಇದನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಮೂಲಕ ಸಮಾಜಕ್ಕೆ ಇದರ ಸೇವೆ ಇನ್ನಷ್ಟು ಲಭಿಸುವಂತಾಗುವ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು. 
ಕರ್ನಾಟಕ ರಾಜ್ಯ ಕಾರ್ಯನಿರತಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್ ಮಾತನಾಡಿ, ಪತ್ರಕರ್ತರ ಕಾರ್ಯ ವೈಖರಿ ಹಾಗೂ ಪತ್ರಕರ್ತರ ಮಹತ್ವ ಮತ್ತು ಸಮಾಜಕ್ಕೆ ಅವರ ಕೊಡುಗೆ ವಿವರಿಸುವ ಜೊತೆಗೆ ಪ್ರಸ್ತುತ ಸಂಘಟನೆ ಎದುರಿಸುವ ಸವಾಲುಗಳನ್ನು ಮನವರಿಕೆ ಮಾಡಿದರು. 
ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಮಾತನಾಡಿ,  ಪತ್ರಿಕಾ ಭವನ ನಿರ್ಮಾಣ ಹಾಗೂ ಎದುರಾಗಿರುವ ಸಮಸ್ಯೆಗಳನ್ನು ವಿವರಿಸಿ ಸದಸ್ಯರು ಇನ್ನೂ ಹೆಚ್ಚಿನ ಸಹಕಾರ ನೀಡುವ ಜೊತೆಗೆ ಕಾಮಗಾರಿ ಪೂರ್ಣಗೊಳ್ಳಲು ಶಾಸಕರು ನೆರವಾಗಬೇಕೆಂದು ಮನವಿ ಮಾಡಿದರು. 
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈದ್ಯ ಹಾಗೂ ಎನ್. ರವಿಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಸಿದ್ದರು. 
ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿದರು. ಸಹಕಾರ್ಯದರ್ಶಿ ಫಿಲೋಮಿನಾ ನಿರೂಪಿಸಿದರು. ಖಜಾಂಚಿ ಅನಂತಕುಮಾರ್ ವಂದಿಸಿದರು. 
ಹಿರಿಯ ಪತ್ರಕರ್ತರಾದ ಗಣೇಶ್‌ರಾವ್ ಸಿಂಧ್ಯಾ, ಶಿವಶಂಕರ್, ಟಿ.ಎಸ್ ಆನಂದಕುಮಾರ್, ನಾರಾಯಣ, ರವೀಂದ್ರನಾಥ್(ಬ್ರದರ್), ಸುದರ್ಶನ್, ಶೈಲೇಶ್ ಕೋಠಿ, ಮೋಹನ್‌ಕುಮಾರ್, ವ್ಯವಸ್ಥಾಪಕ ಸುಬ್ರಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, August 2, 2020

ಭಾನುವಾರ ಒಂದು ಸೋಂಕು, ಒಂದು ಸಾವು


ಭದ್ರಾವತಿ, ಆ. ೧: ನಗರಸಭೆ ವ್ಯಾಪ್ತಿಯಲ್ಲಿ ಭಾನುವಾರ ಒಂದೇ ಒಂದು ಕೊರೊನಾ ಸೋಂಕು ಪತ್ತೆಯಾಗಿದ್ದು, ಅಲ್ಲದೆ ಓರ್ವ ಕೊರೋನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. 
ಜಟ್‌ಪಟ್ ನಗರದ ೩೧ ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ನಿಗದಿತ ಕೋವಿಡ್ ೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಸುಮಾರು ಒಂದು ವಾರದಿಂದ ೫ಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. 
ನಗರಸಭೆ ಪೌರಾಯುಕ್ತ ಮನೋಹರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ನೇತೃತ್ವದ ತಂಡ ಸೋಂಕು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ೧೦೦ ಹಾಗು ೨೦೦ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಸೀಲ್‌ಡೌನ್‌ಗೊಳಿಸಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. 
ಓರ್ವ ಸಾವು: 
ಕೆಲವು ದಿನಗಳ ಹಿಂದೆ ಸೋಂಕಿಗೆ ಒಳಗಾಗಿದ್ದ ನಗರದ ಬಿ.ಎಚ್ ರಸ್ತೆ ಸ್ವೀಟ್ ಅಂಗಡಿಯೊಂದರ ಸುಮಾರು ೪೩ ವರ್ಷದ ಮಾಲೀಕ ಮೃತಪಟ್ಟಿದ್ದಾರೆ. 

ಆ.೩ರಂದು ಪತ್ರಿಕಾ ದಿನಾಚರಣೆ

ಭದ್ರಾವತಿ, ಆ. ೨: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆ.೩ರಂದು ಪತ್ರಿಕಾ ದಿನಾಚರಣೆ ಹಳೇನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈದ್ಯ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.