Monday, August 3, 2020

ಪತ್ರಕರ್ತರಿಂದ ಸಮಾಜದಲ್ಲಿ ಎಚ್ಚರಿಸುವ ಕಾರ್ಯ ಶ್ಲಾಘನೀಯ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಳೇನಗರದ ಪತ್ರಿಕಾಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈದ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಭದ್ರಾವತಿ, ಆ. ೩: ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರ ಶ್ರಮ ಅಪಾರವಾಗಿದ್ದು, ಪತ್ರಕರ್ತರು ಸಮಾಜದಲ್ಲಿ ಎಲ್ಲರನ್ನು ಎಚ್ಚರಿಸುವಂತಹ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
ಅವರು ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಳೇನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಪತ್ರಕರ್ತರು ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳಲು ಸಹಕಾರಿಯಾಗಿದ್ದಾರೆ ಎಂದರು. 
ಪತ್ರಕರ್ತರ ಸಂಘಟನೆಯ ಫಲವಾಗಿ ನಗರದಲ್ಲಿ ಸುಸಜ್ಜಿತವಾದ ಪತ್ರಿಕಾಭವನ ನಿರ್ಮಾಣಗೊಂಡಿದ್ದು, ಇದನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಮೂಲಕ ಸಮಾಜಕ್ಕೆ ಇದರ ಸೇವೆ ಇನ್ನಷ್ಟು ಲಭಿಸುವಂತಾಗುವ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು. 
ಕರ್ನಾಟಕ ರಾಜ್ಯ ಕಾರ್ಯನಿರತಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್ ಮಾತನಾಡಿ, ಪತ್ರಕರ್ತರ ಕಾರ್ಯ ವೈಖರಿ ಹಾಗೂ ಪತ್ರಕರ್ತರ ಮಹತ್ವ ಮತ್ತು ಸಮಾಜಕ್ಕೆ ಅವರ ಕೊಡುಗೆ ವಿವರಿಸುವ ಜೊತೆಗೆ ಪ್ರಸ್ತುತ ಸಂಘಟನೆ ಎದುರಿಸುವ ಸವಾಲುಗಳನ್ನು ಮನವರಿಕೆ ಮಾಡಿದರು. 
ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಮಾತನಾಡಿ,  ಪತ್ರಿಕಾ ಭವನ ನಿರ್ಮಾಣ ಹಾಗೂ ಎದುರಾಗಿರುವ ಸಮಸ್ಯೆಗಳನ್ನು ವಿವರಿಸಿ ಸದಸ್ಯರು ಇನ್ನೂ ಹೆಚ್ಚಿನ ಸಹಕಾರ ನೀಡುವ ಜೊತೆಗೆ ಕಾಮಗಾರಿ ಪೂರ್ಣಗೊಳ್ಳಲು ಶಾಸಕರು ನೆರವಾಗಬೇಕೆಂದು ಮನವಿ ಮಾಡಿದರು. 
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈದ್ಯ ಹಾಗೂ ಎನ್. ರವಿಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಸಿದ್ದರು. 
ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿದರು. ಸಹಕಾರ್ಯದರ್ಶಿ ಫಿಲೋಮಿನಾ ನಿರೂಪಿಸಿದರು. ಖಜಾಂಚಿ ಅನಂತಕುಮಾರ್ ವಂದಿಸಿದರು. 
ಹಿರಿಯ ಪತ್ರಕರ್ತರಾದ ಗಣೇಶ್‌ರಾವ್ ಸಿಂಧ್ಯಾ, ಶಿವಶಂಕರ್, ಟಿ.ಎಸ್ ಆನಂದಕುಮಾರ್, ನಾರಾಯಣ, ರವೀಂದ್ರನಾಥ್(ಬ್ರದರ್), ಸುದರ್ಶನ್, ಶೈಲೇಶ್ ಕೋಠಿ, ಮೋಹನ್‌ಕುಮಾರ್, ವ್ಯವಸ್ಥಾಪಕ ಸುಬ್ರಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment