Tuesday, August 4, 2020

ಸೂಕ್ತ ಅಧಿಕಾರಿ ಇಲ್ಲದೆ ಮಾಜಿ ಸೈನಿಕರಿಗೆ ಸಂಕಷ್ಟ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸೈನಿಕರ ಸಂಘ ಆರೋಪ 

ಭದ್ರಾವತಿಯಲ್ಲಿ ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ವಿನೋದ್‌ಪೂಜಾರಿ, ಗಿರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭದ್ರಾವತಿ, ಆ. ೪: ಮಾಜಿ ಸೈನಿಕರ ಪುನರ್ ವಸತಿ ಇಲಾಖೆಗೆ ಸಂಬಂಧಪಟ್ಟ ಮಾಹಿತಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸರಿಯಾದ ಮಾಹಿತಿ ಲಭ್ಯವಾಗದೆ ಇರುವುದರಿಂದ ಮಾಜಿ ಸೈನಿಕರು ಹಾಗೂ ಸೈನಿಕರ ವಿಧವಾ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ತಾಲೂಕು ಮಾಜಿ ಸೈನಿಕರ ಸಂಘ ಆರೋಪಿಸಿದೆ. 
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸೈನಿಕರು, ಸಂಘದ ಅಡಿಯಲ್ಲಿ ತಾಲೂಕಿನಲ್ಲಿ ಸುಮಾರು ೪೦೦ ಮಂದಿ ಸೇರಿದಂತೆ ಜಿಲ್ಲೆಯಲ್ಲಿ(ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಒಳಗೊಂಡು) ಒಟ್ಟು ೨೩೨೩ ಮಂದಿ ಮಾಜಿ ಸೈನಿಕರು ಹಾಗೂ ಸೈನಿಕರ ವಿಧವಾ ಕುಟುಂಬಗಳಿವೆ. ರಾಜ್ಯದಲ್ಲಿ ಸುಮಾರು ೧ ಲಕ್ಷವಿದ್ದು, ಇವರ ಕುಂದು-ಕೊರತೆಗಳಿಗೆ ಸ್ಪಂದಿಸಲು ಯಾರು ಸಹ ಇಲ್ಲದಂತಾಗಿದೆ. ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಮಂಡಳಿಯಿಂದ ಯಾವುದೇ ಸೌಲಭ್ಯಗಳು ಲಭಿಸುತ್ತಿಲ್ಲ. ಉಪನಿರ್ದೇಶಕರ ಹುದ್ದೆಗೆ ಸೈನಿಕ ಇಲಾಖೆಗೆ ಸಂಬಂಧಪಡದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಿಂದಾಗಿ ಸಮಸ್ಯೆಗಳು ಸರಿಯಾಗಿ ಇತ್ಯರ್ಥವಾಗುತ್ತಿಲ್ಲ ಎಂದು ದೂರಿದರು. 
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಾರ್ಷಿಕ ಸುಮಾರು ೧೦ ರಿಂದ ೧೫ ಕೋ. ರು. ಅನುದಾನ ಬಿಡುಗಡೆಯಾಗುತ್ತಿದ್ದು, ಆದರೆ ಮಂಡಳಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗದೆ ಸರ್ಕಾರಕ್ಕೆ ಹಿಂದಿರುಗಿಸಲಾಗುತ್ತಿದೆ. ಅಲ್ಲದೆ ಸೈನಿಕರ ಶಿಷ್ಯ ವೇತನ ಸುಮಾರು ೨ ಕೋ. ರು. ಬಿಡುಗಡೆಯಾಗಿದ್ದು, ಈ ಅನುದಾನ ಸಹ ಹಿಂದಿರುಗಿಸಲಾಗಿದೆ. ಇದುವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಯಾರಿಗೂ ಬಂದಿಲ್ಲ. ಈ ಕುರಿತು ಸಂಬಂಧಪಡದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸೂಕ್ತ ಉತ್ತರ ನೀಡುತ್ತಿಲ್ಲ. ಇದರಿಂದಾಗಿ ಮಾಜಿ ಸೈನಿಕರು, ಸೈನಿಕರ ವಿಧವಾ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದರು. 
ಸೈನಿಕ ಮಂಡಳಿಗೆ ಅನುಭವ ಹೊಂದಿರುವ ಮಾಜಿ ಸೈನಿಕ ಅಧಿಕಾರಿಯನ್ನು ನೇಮಿಸಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಆದರೂ ಸಹ ಯಾವುದೇ ಕ್ರಮ ಇದುವರೆಗೂ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು. 
ಸಂಘದ ಅಧ್ಯಕ್ಷ ಅಶೋಕ್, ನಿರ್ದೇಶಕ ಗಿರಿ, ಕಲಾವತಿ, ಆಶಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment