Tuesday, May 2, 2023

ಎಎಪಿ ಅಭ್ಯರ್ಥಿ ಆನಂದ್ ಪರವಾಗಿ ಮೂವರು ಪದವಿಧರ ಮಕ್ಕಳಿಂದ ಮತಯಾಚನೆ

ಭದ್ರಾವತಿಯಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಸಮಾಜ ಸೇವಕ ಆನಂದ್ ಮೆಡಿಕಲ್‌ರವರ ಪರವಾಗಿ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ನಡೆಯುತ್ತಿದ್ದು,  ಈ ನಡುವೆ ಅವರ ಮೂವರು ಮಕ್ಕಳು ತಂದೆಯ ಪರವಾಗಿ ಮತಯಾಚನೆ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
    ಭದ್ರಾವತಿ, ಮೇ. ೨ : ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಸಮಾಜ ಸೇವಕ ಆನಂದ್ ಮೆಡಿಕಲ್‌ರವರ ಪರವಾಗಿ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ನಡೆಯುತ್ತಿದ್ದು,  ಈ ನಡುವೆ ಅವರ ಮೂವರು ಮಕ್ಕಳು ತಂದೆಯ ಪರವಾಗಿ ಮತಯಾಚನೆ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
    ಆನಂದ್‌ರವರ ಇಬ್ಬರು ಪುತ್ರಿಯರಾದ ಸೌಮ್ಯ ಮತ್ತು ನಮ್ರತಾ ವೈದ್ಯರಾಗಿದ್ದು, ಪುತ್ರ ಶಿವ ನೀಲ್ ಸಹ ಪದವಿಧರರಾಗಿದ್ದಾರೆ. ಮೂವರು ಮಕ್ಕಳು ತಂದೆಯ ಪರವಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಮತಯಾಚನೆ ನಡೆಸುತ್ತಿದ್ದು, ಈ ಬಾರಿ ಆಮ್ ಆದ್ಮಿ ಪಾರ್ಟಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.


    ಕಾರ್ಯಕರ್ತರೊಂದಿಗೆ ಕಳೆದ ಸುಮಾರು ೧ ವರ್ಷದಿಂದ ಕ್ಷೇತ್ರದಾದ್ಯಂತ ನಿರಂತರ ಪ್ರಚಾರ ಕಾರ್ಯದಲ್ಲಿ ಆನಂದ್‌ರವರು ತೊಡಗಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಕ್ಷೇತ್ರದ ಪ್ರತಿಯೊಬ್ಬ ಮತದಾರರನ್ನು ತಲುಪಿ ಪಕ್ಷದ ಜನಪರ ಯೋಜನೆಗಳು ಹಾಗು ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಈಡೇರಿಸಬಹುದಾದ ಭರವಸೆಗಳನ್ನು ಮನವರಿಕೆ ಮಾಡಿಕೊಟ್ಟಿರುವ ವಿಶ್ವಾಸ ಆನಂದ್ ಹಾಗು ಕಾರ್ಯಕರ್ತರು ಹೊಂದಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಉತ್ತಮ ಆಡಳಿತ ನೀಡುವ ಗುರಿ : ಆನಂದ್

    ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಜೊತೆಗೆ ಉತ್ತಮ ಆಡಳಿತ ನೀಡುವುದು ಪಕ್ಷದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸುವಂತೆ ಆನಂದ್ ಮನವಿ ಮಾಡಿದ್ದಾರೆ.


   ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಆನಂದ್ ಮೆಡಿಕಲ್
 ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಮುಖ್ಯ ಗುರಿಯಾಗಿದ್ದು, ಅಭಿವೃದ್ಧಿ ಕಾರ್ಯಗಳ ಜೊತೆಗೆ ನಿರುದ್ಯೋಗ ನಿರ್ಮೂಲನೆ ಮಾಡುವುದು. ಎಲ್ಲಾ ವರ್ಗದ ಜನರ ಹಿತ ಕಾಪಾಡುವುದು ಪಕ್ಷದ ಉದ್ದೇಶಗಳಾಗಿವೆ ಎಂದರು.
    ಕ್ಷೇತ್ರದಲ್ಲಿ ನಾನು ಹಲವಾರು ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಯಾವುದೇ ಆರೋಪಗಳಿಗೆ ಗುರಿಯಾಗದ ವ್ಯಕ್ತಿಯಾಗಿದ್ದೇನೆ. ವೈಯಕ್ತಿಕ ಬದುಕಿನಲ್ಲೂ ಉತ್ತಮ ವ್ಯಕ್ತಿತ್ವ ರೂಢಿಸಿಕೊಂಡಿದ್ದೇನೆ. ಮತದಾರರು ನನ್ನನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವ ವಿಶ್ವಾಸ ಹೊಂದಿದ್ದೇನೆ ಎಂದರು.  

ಬಿ.ಎಸ್ ಅನ್ನಪೂರ್ಣಮ್ಮ ನಿಧನ : ನೇತ್ರ, ದೇಹದಾನ

ಬಿ.ಎಸ್ ಅನ್ನಪೂರ್ಣಮ್ಮ
    ಭದ್ರಾವತಿ, ಏ. ೨ : ಹಳೇನಗರದ ನಿವಾಸಿ ಬಿ.ಎಸ್ ಅನ್ನಪೂರ್ಣಮ್ಮ(೮೮) ಸೋಮವಾರ ರಾತ್ರಿ ನಿಧನ ಹೊಂದಿದರು. ಕುಟುಂಬಸ್ಥರು ಇವರ ಮೃತ ದೇಹ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
    ನಗರದ ಆದಿತ್ಯ ಎಂಟರ್‌ಪ್ರೈಸಸ್ ಮಾಲೀಕ, ಪುತ್ರ ಗಿರೀಶ್ ಹಾಗು ೪ ಹೆಣ್ಣು ಮಕ್ಕಳು ಇದ್ದರು. ಅನ್ನಪೂರ್ಣಮ್ಮ ಶ್ರೀ ಅಕ್ಕಮಹಾದೇವಿ ಬಳಗದ ಸದಸ್ಯರಾಗಿದ್ದು, ಇವರ ನೇತ್ರಗಳನ್ನು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ಹಾಗು ಮೃತದೇಹ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಯಿತು. ಅನ್ನಪೂರ್ಣಮ್ಮನವರ ನಿಧನಕ್ಕೆ ಶ್ರೀ ಅಕ್ಕಮಹಾದೇವಿ ಬಳಗ ಸಂತಾಪ ಸೂಚಿಸಿದೆ.

Monday, May 1, 2023

ಮಹಿಳಾ ಪೊಲೀಸ್ ಠಾಣಾಧಿಕಾರಿ ದ್ವಿಚಕ್ರ ವಾಹನ ಅಪಘಾತ : ಪ್ರಕರಣ ದಾಖಲು

    ಭದ್ರಾವತಿ, ಮೇ. ೧: ಮಹಿಳಾ ಪೊಲೀಸ್ ಠಾಣಾಧಿಕಾರಿಯೊಬ್ಬರ ದ್ವಿಚಕ್ರವಾಹನಕ್ಕೆ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿರುವ ಘಟನೆ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ನಡೆದಿದೆ.
    ಪೇಪರ್‌ಟೌನ್ ಪೊಲೀಸ್ ಠಾಣಾಧಿಕಾರಿ ಶಿಲ್ಪ ನಾಯನೇಗಲಿಯವರು ಏ.೩೦ರ ಭಾನುವಾರ ಮಧ್ಯಾಹ್ನ ೧.೨೦ರ ಸಮಯದಲ್ಲಿ ಇಲಾಖೆಯ ಹಿರೋ ಮೆಸ್ಟ್ರೋ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಬೊಮ್ಮನಕಟ್ಟೆ ಕಡೆಯಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಶಿಲ್ಪ ನಾಯನೇಗಲಿಯವರು ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಸಂಬಂಧ ಪೇಪರ್‌ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧಾನಸಭಾ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಸಂಗಮೇಶ್ವರ್‌ಗೆ ಡಿಎಸ್‌ಎಸ್ ಬೆಂಬಲ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಕೆ ಸಂಗಮೇಶ್ವರ್‌ಗೆ ಬೆಂಬಲ ನೀಡಲಿದೆ ಎಂದು ಸಮಿತಿ ರಾಜ್ಯ ಖಜಾಂಚಿ ಸತ್ಯ ಹೇಳಿದರು.
    ಭದ್ರಾವತಿ, ಮೇ. ೧ : ಸಂವಿಧಾನ ವಿರೋಧಿ ನಿಲುವುಗಳನ್ನು ಕೈಗೊಳ್ಳುವ ಜೊತೆಗೆ ಅಭಿವೃದ್ಧಿಗೆ ಮಾರಕವಾಗಿರುವ ರಾಜ್ಯದ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಕಿತ್ತೊಗೆಯಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಕೆ ಸಂಗಮೇಶ್ವರನ್ನು ಬೆಂಬಲಿಸಲಿದೆ ಎಂದು ಸಮಿತಿ ರಾಜ್ಯ ಖಜಾಂಚಿ ಸತ್ಯ ಹೇಳಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೨೦ರಲ್ಲಿ ಅಂದಿನ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರಕ್ಕೆ ಬಂದ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯನ್ನು ಕೈಗೊಂಡಿಲ್ಲ. ಅಲ್ಲದೆ ಶೋಷಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
    ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ರಾಜ್ಯದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಚಾರದಲ್ಲಿ ಸುಳ್ಳು ಹೇಳಿ ಮೋಸ ಮಾಡಿದೆ. ಅಲ್ಲದೆ ಸಂವಿಧಾನ ವಿರೋಧಿ ನೀತಿಗಳನ್ನು ಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬೆಂಬಲಿಸದಿರುವ ನಿರ್ಧಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಕೆ ಸಂಗಮೇಶ್ವರನ್ನು ಬೆಂಬಲಿಸಲಾಗುವುದು. ದಲಿತರ, ಶೋಷಿತರ ಪರವಾದ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಯಾವುದೇ ಕಾರಣಕ್ಕೂ ಹೋರಾಟದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
    ಜಿಲ್ಲಾ ಸಂಚಾಲಕ ಚಿನ್ನಯ್ಯ, ಪ್ರಮುಖರಾದ ಸಿ. ಜಯಪ್ಪ, ಈಶ್ವರಪ್ಪ, ಕಾಣಿಕ್‌ರಾಜ್, ಮಣಿ ಜಿಂಕ್‌ಲೈನ್, ದಾಸ್, ಲಕ್ಷ್ಮಣ್, ಕೆ. ಯೋಗೇಶ್ವರನಾಯ್ಕ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಭದ್ರಾವತಿ ಸರ್ವತೋಮುಖ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ : ಎಸ್.ಕೆ ಸುಧೀಂದ್ರ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷೇತರ ಅಭ್ಯರ್ಥಿ ಎಸ್.ಕೆ ಸುಧೀಂದ್ರ ಮಾತನಾಡಿದರು.  
    ಭದ್ರಾವತಿ, ಮೇ. ೧ : ವಿಧಾನಸಭಾ ಚುನಾವಣೆಗೆ ೨ನೇ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನನ್ನನ್ನು ಬೆಂಬಲಿಸುವಂತೆ ಪಕ್ಷೇತರ ಅಭ್ಯರ್ಥಿ ಎಸ್.ಕೆ ಸುಧೀಂದ್ರ ಮನವಿ ಮಾಡಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕರಾದ ದಿವಂಗತ ಕೃಷ್ಣಮೂರ್ತಿ ಮತ್ತು ಸುಮತಿ ಪುತ್ರನಾಗಿದ್ದೇನೆ. ಇಲ್ಲಿಯೇ ಹುಟ್ಟಿ ಬೆಳೆದಿದ್ದು, ವಿದ್ಯಾರ್ಥಿ ದೆಸೆಯಿಂದಲೇ ನನ್ನ ರಾಜಕೀಯ ಜೀವನ ಆರಂಭಗೊಂಡಿದೆ. ಸುಮಾರು ೨೯ ವರ್ಷಗಳಿಂದ ತೆರೆಮರೆಯಲ್ಲಿ ಕೈಲಾದಷ್ಟು ಸಾಮಾಜಿಕ ಸೇವಾ ಕಾರ್ಯಗಳನ್ನು ಹಾಗು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ ಎಂದರು.
    ನಾನು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಗುರಿ ಹೊಂದಿದ್ದೇನೆ. ಈ ಹಿನ್ನಲೆಯಲ್ಲಿ ಮತದಾರರು ಈ ಬಾರಿ ಚುನಾವಣೆಯಲ್ಲಿ ಮತ ಖರೀದಿ ಮಾಡುವವರಿಗೆ ಮತ ನೀಡಲಾರೆ, ಅಭಿವೃದ್ಧಿ ಮಾಡುವವರಿಗಾಗಿ ಮಾತ್ರ ನನ್ನ ಮತ, ಆರ್ಥಿಕತೆ, ಸಾಮಾಜಿಕತೆಯ ಜ್ಞಾನ ಮತ್ತು ನ್ಯಾಯ ಪರತೆಯ ನೀತಿಯುಳ್ಳವರಿಗೆ ನನ್ನ ಮತ, ಸ್ವಜನ ಪಕ್ಷಪಾತಿಗಳನ್ನು ಧಿಕ್ಕರಿಸಿ ಸರ್ವರನ್ನೂ ಸಮಾನರೆಂದು ಕಾಣುವವರಿಗೆ ನನ್ನ ಮತ, ವಿಧಾನಸಭೆಯಲ್ಲಿ ಮೌನವಾಗಿದ್ದು ಮತಯಾಚನೆಗೆ ಮಾತ್ರ ಬಾಯಿ ಬಿಡುವವರಿಗೆ ನನ್ನ ಮತವಿಲ್ಲ ಹಾಗು ನನ್ನ ಒಂದು ಮತ ಕ್ಷೇತ್ರದ ಭವಿಷ್ಯ ಬದಲಾಯಿಸುತ್ತದೆ ಎಂಬ ತಿಳುವಳಿಕೆಯಿಂದ ನಾನು ಕಡ್ಡಾಯವಾಗಿ ಮತದಾನ ಮಾಡುತ್ತಿದ್ದೇನೆ ಎಂಬ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಬೆಂಬಿಸುವಂತೆ ಮನವಿ ಮಾಡಿದರು.

ರೈಸ್ ಮಿಲ್ ಮಾಲೀಕರ ಪತ್ನಿ ಕಲಾ ನಿಧನ

ಕಲಾ
    ಭದ್ರಾವತಿ, ಮೇ. ೧ : ತಾಲೂಕಿನ ಹಿರಿಯೂರು ಗ್ರಾಮದ ಶ್ರೀ ವೆಂಕಟೇಶ್ವರ ರೈಸ್ ಮಿಲ್ ಮಾಲೀಕ ಎಲ್.ಸಿ ಮಂಜುನಾಥ್‌ರವರ ಪತ್ನಿ ಕಲಾ(೫೬) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
    ಪತಿ ಎಲ್.ಸಿ ಮಂಜುನಾಥ್, ಇಬ್ಬರು ಗಂಡು ಮಕ್ಕಳಿದ್ದರು. ಇವರ ಅಂತ್ಯಕ್ರಿಯೆ ಸಂಜೆ ನಡೆಯಲಿದೆ. ಇವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕೆ.ಟಿ ಪ್ರಸನ್ನ ಹಾಗು ಗ್ರಾಮದ ಮುಖಂಡರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

Sunday, April 30, 2023

ಕಾರ್ಮಿಕ ದಿನಾಚರಣೆ : ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಂದ ಮುಂದುವರೆದ ಹೋರಾಟ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಸೋಮವಾರ ಕಾರ್ಮಿಕರ ದಿನಾಚರಣೆ ಮೂಲಕ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಭದ್ರಾವತಿ, ಮೇ. ೧ : ಕೇಂದ್ರ ಸರ್ಕಾರಿ ಸ್ವಾಮ್ಯದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೩ ತಿಂಗಳಿನಿಂದ ನಿರಂತರವಾಗಿ ಕಾರ್ಖಾನೆ ಮುಂಭಾಗ ಹೋರಾಟ ನಡೆಸುತ್ತಿದ್ದು, ಈ ನಡುವೆ ಸೋಮವಾರ ಕಾರ್ಮಿಕರ ದಿನಾಚರಣೆ ಮೂಲಕ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯಬೇಕು, ಅಗತ್ಯವಿರುವ ಬಂಡವಾಳ ತೊಡಗಿಸಬೇಕು ಹಾಗು ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಹಲವು ವಿಭಿನ್ನ ರೀತಿಯ ಹೋರಾಟಗಳನ್ನು ನಡೆಸಲಾಗಿದ್ದು,  ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
    ಚುನಾವಣೆ ಘೋಷಣೆಯಿಂದಾಗಿ ಹೋರಾಟಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದ್ದು, ಆದರೆ ಕಾರ್ಮಿಕರು ಎದೆಗುಂದದೆ ತಮ್ಮ ಹೋರಾಟ ಮುಂದುವರೆಸಿದ್ದಾರೆ.
    ಕಾರ್ಮಿಕ ದಿನಾಚರಣೆ ಮೂಲಕ ಪುನಃ ತಮ್ಮ ಅಳಲು ತೋರ್ಪಡಿಸಿಕೊಂಡಿದ್ದಾರೆ. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು, ನಿವೃತ್ತ ಕಾರ್ಮಿಕರು ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.