ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಕೆ ಸಂಗಮೇಶ್ವರ್‌ಗೆ ಬೆಂಬಲ ನೀಡಲಿದೆ ಎಂದು ಸಮಿತಿ ರಾಜ್ಯ ಖಜಾಂಚಿ ಸತ್ಯ ಹೇಳಿದರು.
ಭದ್ರಾವತಿ, ಮೇ. ೧ : ಸಂವಿಧಾನ ವಿರೋಧಿ ನಿಲುವುಗಳನ್ನು ಕೈಗೊಳ್ಳುವ ಜೊತೆಗೆ ಅಭಿವೃದ್ಧಿಗೆ ಮಾರಕವಾಗಿರುವ ರಾಜ್ಯದ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಕಿತ್ತೊಗೆಯಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಕೆ ಸಂಗಮೇಶ್ವರನ್ನು ಬೆಂಬಲಿಸಲಿದೆ ಎಂದು ಸಮಿತಿ ರಾಜ್ಯ ಖಜಾಂಚಿ ಸತ್ಯ ಹೇಳಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೨೦ರಲ್ಲಿ ಅಂದಿನ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರಕ್ಕೆ ಬಂದ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯನ್ನು ಕೈಗೊಂಡಿಲ್ಲ. ಅಲ್ಲದೆ ಶೋಷಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ರಾಜ್ಯದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಚಾರದಲ್ಲಿ ಸುಳ್ಳು ಹೇಳಿ ಮೋಸ ಮಾಡಿದೆ. ಅಲ್ಲದೆ ಸಂವಿಧಾನ ವಿರೋಧಿ ನೀತಿಗಳನ್ನು ಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬೆಂಬಲಿಸದಿರುವ ನಿರ್ಧಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಕೆ ಸಂಗಮೇಶ್ವರನ್ನು ಬೆಂಬಲಿಸಲಾಗುವುದು. ದಲಿತರ, ಶೋಷಿತರ ಪರವಾದ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಯಾವುದೇ ಕಾರಣಕ್ಕೂ ಹೋರಾಟದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಸಂಚಾಲಕ ಚಿನ್ನಯ್ಯ, ಪ್ರಮುಖರಾದ ಸಿ. ಜಯಪ್ಪ, ಈಶ್ವರಪ್ಪ, ಕಾಣಿಕ್‌ರಾಜ್, ಮಣಿ ಜಿಂಕ್‌ಲೈನ್, ದಾಸ್, ಲಕ್ಷ್ಮಣ್, ಕೆ. ಯೋಗೇಶ್ವರನಾಯ್ಕ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
No comments:
Post a Comment