ಭದ್ರಾವತಿಯಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ಜಯ ಕರ್ನಾಟಕ ಸಂಘಟನೆ ವತಿಯಿಂದ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ತಕ್ಷಣ ಮರಾಠ ಅಭಿವೃದ್ಧಿ ಪ್ರಾಧಿಕಾರ ಕೈಬಿಡುವಂತೆ ಆಗ್ರಹಿಸಲಾಯಿತು.
ಭದ್ರಾವತಿ: ಕರ್ನಾಟಕ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳಿಂದ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ತಕ್ಷಣ ಮರಾಠ ಅಭಿವೃದ್ಧಿ ಪ್ರಾಧಿಕಾರ ಕೈಬಿಡುವಂತೆ ಆಗ್ರಹಿಸಲಾಯಿತು.
ಜಯಕರ್ನಾಟಕ ಸಂಘಟನೆ ಬೆಂಬಲ:
ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಮನವಿ ಸಲ್ಲಿಸಿದ ಸಂಘಟನೆ ಮುಖಂಡರು, ರಾಜ್ಯದಲ್ಲಿ ಇಂದಿಗೂ ಗಡಿ ಭಾಗದಲ್ಲಿ ನೆಲ, ಜಲ, ಭಾಷೆ ವಿಚಾರದಲ್ಲಿ ಮರಾಠಿಗರು ಕನ್ನಡಿಗರ ಮೇಲೆ ದೌರ್ಜನ್ಯ ವೆಸಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅಲ್ಲದೆ ವಿನಾಕಾರಣ ಕನ್ನಡಿಗರ ಸಾರ್ವಭೌಮತ್ವ ಕೆಣಕುವ ಕೆಲಸ ನಡೆಯುತ್ತಿದ್ದು, ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಲಾಗುತ್ತಿದೆ. ಪರಿಸ್ಥಿತಿ ಈ ರೀತಿ ಇರುವಾಗ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ ೫೦ ಕೋ. ರು. ಮೀಸಲಿಟ್ಟಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಪ್ರತಿಯೊಂದು ಜಾತಿಗೂ ಸಹ ನಿಗಮ, ಮಂಡಳಿ ರಚನೆ ಮಾಡುತ್ತಾ ಹೋದರೆ ಜಾತಿ ಜಾತಿಗಳ ನಡುವೆ ವೈಷಮ್ಯ ಹೆಚ್ಚಾಗುವ ಜೊತೆಗೆ ರಾಷ್ಟ್ರಕವಿ ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ನಾಡಗೀತೆ ಸಾಲಿನ ಅರ್ಥಕ್ಕೆ ಚ್ಯುತಿ ಬರಲಿದೆ. ಈ ಹಿನ್ನಲೆಯಲ್ಲಿ ತಕ್ಷಣ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಕೈಬಿಡಬೇಕೆಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ತ್ಯಾಗರಾಜ್, ಜಿಲ್ಲಾ ಸಂಚಾಲಕ ಎಂ. ಮುಕುಂದನ್, ನಾಗರತ್ನ, ಕಾಂತರಾಜ್ ಸೇರಿದಂತೆ ಇನ್ನಿತರರು ತಹಸೀಲ್ದಾರ್ ಗ್ರೇಡ್-೨ ರಂಗಮ್ಮರವರಿಗೆ ಮನವಿ ಸಲ್ಲಿದರು.
ಭದ್ರಾವತಿಯಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ತಾಲೂಕು ವಕೀಲರ ಸಂಘದ ವತಿಯಿಂದ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ತಕ್ಷಣ ಮರಾಠ ಅಭಿವೃದ್ಧಿ ಪ್ರಾಧಿಕಾರ ಕೈಬಿಡುವಂತೆ ಆಗ್ರಹಿಸಲಾಯಿತು.
ತಾಲೂಕು ವಕೀಲರ ಸಂಘ ಬೆಂಬಲ:
ತಾಲೂಕು ವಕೀಲರ ಸಂಘದ ವತಿಯಿಂದ ಕರ್ನಾಟಕ ಬಂದ್ ಬೆಂಬಲಿಸಿ ಇಂದು ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಾತನಾಡಿದ ಸಂಘದ ಪ್ರಮುಖರು, ಎಂದಿಗೂ ವಕೀಲರ ಸಂಘ ಕನ್ನಡ ನಾಡು, ನೆಲ, ಜಲ, ಭಾಷೆ ಪರವಾಗಿ ಇದ್ದು, ಕನ್ನಡ ಭಾಷೆ ಪ್ರಾಬಲ್ಯ ಹೆಚ್ಚಿಸಿಕೊಳ್ಳಬೇಕು. ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುನ್ನಡೆಯಬೇಕೆಂದರು.
ಸಂಘದ ಅಧ್ಯಕ್ಷ ಟಿ ವೆಂಕಟೇಶ್ ಉಪಾಧ್ಯಕ್ಷ ವೈ. ಜಯರಾಮ, ಕಾರ್ಯದರ್ಶಿ ಟಿ.ಎಸ್ ರಾಜು, ಖಜಾಂಚಿ ಎನ್. ರಂಗಪ್ಪ, ಹಿರಿಯ ವಕೀಲರಾದ ಮಂಜಪ್ಪ, ಕೆಎನ್ ಶ್ರೀಹರ್ಷ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.