Friday, March 18, 2022

ಮಾ.೨೦ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಮಾ. ೧೮: ಮೆಸ್ಕಾಂ ಮಾಚೇನಹಳ್ಳಿ ೧೧೦/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾ.೨೦ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ  ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಜೇಡಿಕಟ್ಟೆ, ಹಳೇ ಜೇಡಿಕಟ್ಟೆ, ಡೈರಿ ಸರ್ಕಲ್, ನಿದಿಗೆ, ಕೈಗಾರಿಕಾ ಪ್ರದೇಶ, ಶಿವರಾಂನಗರ, ವಿಶ್ವೇಶ್ವರಯ್ಯನಗರ ಸೇರಿದಂತೆ ಇನ್ನಿತರೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿ ಮಾ.೨೧ರಂದು ಪ್ರತಿಭಟನೆ

    ಭದ್ರಾವತಿ, ಮಾ. ೧೮: ನಗರದ ಅಂಬೇಡ್ಕರ್ ವೃತ್ತದ ಬಿ.ಎಚ್ ರಸ್ತೆ ೧ನೇ ತಿರುವಿನಿಂದ ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಹಾಗು ಕಾಮಗಾರಿ ಬದಲಾಯಿಸಿರುವ ಕ್ರಮ ಖಂಡಿಸಿ ಮಾ.೨೧ರಂದು ಪ್ರಜಾ ರಾಜ್ಯ ದಲಿತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಬಿ.ಎಚ್ ರಸ್ತೆ ೧ನೇ ತಿರುವಿನಿಂದ ವಿಶ್ವ ಸ್ವರೂಪಿಣಿ ಮಾರಿಯಮ್ಮ ದೇವಸ್ಥಾನದವರೆಗೂ ದಲಿತರು ಹೆಚ್ಚಾಗಿ ವಾಸಿಸುತ್ತಿದ್ದು, ಮಳೆಗಾಲದಲ್ಲಿ ಭದ್ರಾ ನದಿಗೆ ಜಲಾಶಯದಿಂದ ನೀರು ಬಿಟ್ಟಾಗ ಮನೆಗಳು ಮುಳುಗಡೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ೯.೫ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಆದರೆ ಇದೀಗ ಬದಲಾಯಿಸಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ  ಕಾಮಗಾರಿ ಬದಲಾವಣೆಗೆ ಕಾರಣಕರ್ತರಾದವರ ವಿರುದ್ಧ ಕ್ರಮ ಕೈಗೊಂಡು ಬಿ.ಎಚ್ ರಸ್ತೆ ೧ನೇ ತಿರುವಿನಿಂದ ಕಾಮಗಾರಿ ಆರಂಭಿಸುವಂತೆ  ಆಗ್ರಹಿಸಿ ಮಾ.೨೧ರಂದು ಬೆಳಿಗ್ಗೆ ೧೧ ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

ಬಲಿಜ ಸಮಾಜ ಹೆಚ್ಚು ಸಂಘಟಿತಗೊಳ್ಳಲಿ : ಎಂ.ಆರ್ ಸೀತರಾಮ್

ಭದ್ರಾವತಿಯಲ್ಲಿ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೮೭ನೇ ಜಯಂತ್ಯೋತ್ಸವ ಕಾರ್ಯಕ್ರಮ ಮಾಜಿ ಸಚಿವ ಎಂ.ಆರ್ ಸೀತರಾಮ್ ಉದ್ಘಾಟಿಸಿದರು. 
    ಭದ್ರಾವತಿ, ಮಾ. ೧೮: ಬಲಿಜ ಸಮುದಾಯದವರು ಹೆಚ್ಚು ಸಂಘಟಿತರಾಗುವ ಜೊತೆಗೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ ಎಂದು ಮಾಜಿ ಸಚಿವ ಎಂ.ಆರ್ ಸೀತರಾಮ್ ಹೇಳಿದರು.
    ಅವರು ಶುಕ್ರವಾರ  ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೮೭ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಬಲಿಜ ಸಮುದಾಯ ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಈ ಹಿಂದೆ ಮೀಸಲಾತಿಯಿಂದ ವಂಚಿತರಾಗಿ ಪುನಃ ಹೋರಾಟದ ಮೂಲಕ ಮೀಸಲಾತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಹೋರಾಟ ಮುಂದುವರೆಯಬೇಕಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸಮುದಾಯ ಗುರುತಿಸಿಕೊಳ್ಳುವಂತಾಗಬೇಕು. ಮೊದಲು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಬೇಕು. ಶೈಕ್ಷಣಿಕವಾಗಿ, ರಾಜಕೀಯ ಹಾಗು ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸಹಕಾರದೊಂದಿಗೆ ನಮ್ಮ ಹೋರಾಟ ಮುಂದುವರೆಯಬೇಕೆಂದರು.
    ಸಮುದಾಯಕ್ಕೆ ದಾರಿದೀಪವಾಗಿರುವ ತಾತಯ್ಯನವರ ಸಂದೇಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕು. ಅಲ್ಲದೆ ಸಮುದಾಯದಲ್ಲಿ ಮುಂದೆ ಬಂದವರು ಹಿಂದುಳಿದವರ ನೆರವಿಗೆ ಮುಂದಾಗಬೇಕು. ಸರ್ಕಾರ ತಾತಯ್ಯನವರ ಜಯಂತಿಯನ್ನು ಆಚರಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಬಲಿಜ ಸಮುದಾಯದವರು ಅಲ್ಪ ಪ್ರಮಾಣದಲ್ಲಿದ್ದರೂ ಸಹ ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಿಷ್ಠವಾಗಿ ರೂಪಿಸಿಕೊಂಡಿದ್ದಾರೆ. ಸಮುದಾಯದ ಬೆಳವಣಿಗೆಗೆ ಇನ್ನೂ ಹೆಚ್ಚಿನ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ಸಮುದಾಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಕುಳ್ಳೂರು ಶ್ರೀ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಸದ್ಗುರು ಬಸವಾನಂದ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.  ಸಂಘದ ಅಧ್ಯಕ್ಷ ಜೆ.ಎಸ್ ಸಂಜೀವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
    ಸಂಘದ ಗೌರವಾಧ್ಯಕ್ಷ ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷ ಜಂಗಮಪ್ಪ, ಸಹಕಾರ್ಯದರ್ಶಿ ಟಿ. ರಮೇಶ್, ಖಜಾಂಚಿ ನರೇಂದ್ರಬಾಬು, ನಿರ್ದೇಶಕರಾದ ಡಿ.ಆರ್ ಶಿವಕುಮಾರ್, ಯು. ಪಂಪಣ್ಣ, ವೈ.ಎಸ್ ರಾಮಮೂರ್ತಿ, ಪದ್ಮಮ್ಮ ಹನುಮಂತಪ್ಪ, ಕೆ.ಜಿ ಕುಮಾರಸ್ವಾಮಿ, ಎಚ್. ನಾರಾಯಣಪ್ಪ, ಎಚ್.ಆರ್ ರಂಗನಾಥ್, ಬಿ. ಯಲ್ಲಪ್ಪ, ದಶರಥಕುಮಾರ, ಪಿ. ಸತೀಶ, ಟಿ.ಕೆ ಪ್ರಹ್ಲಾದ, ರಾಜೇಶ್, ವೆಂಕಟೇಶ್ ಮತ್ತು  ಉದಯಕುಮಾರ್ ಸೇರಿದಂತೆ ಸಮುದಾಯದ  ಪ್ರಮುಖರು ಉಪಸ್ಥಿತರಿದ್ದರು.
ವಿಶ್ವನಾಥ್ ಪ್ರಾರ್ಥಿಸಿದರು. ಪ್ರಧಾನ  ಕಾರ್ಯದರ್ಶಿ ಎಂ. ರಮೇಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಶಕುಂತಲ ನಿರೂಪಿಸಿದರು.
 

ರಂಗು ರಂಗಿನ ಬಣ್ಣದಾಟದೊಡನೆ ಹೋಳಿ ಸಂಭ್ರಮ

ಮಕ್ಕಳು, ಪುರುಷರು ಮತ್ತು ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಭದ್ರಾವತಿ ಹಳೇನಗರದ ವಿವಿಧೆಡೆ ಶುಕ್ರವಾರ ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು.
    ಭದ್ರಾವತಿ, ಮಾ. ೧೮:  ಮಕ್ಕಳು, ಪುರುಷರು ಮತ್ತು ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಹಳೇನಗರದ ವಿವಿಧೆಡೆ ಶುಕ್ರವಾರ ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು.
    ಭೂತನಗುಡಿ, ಹಳೇನಗರದ ಕುಂಬಾರರ ಬೀದಿ, ಬ್ರಾಹ್ಮಣರ ಬೀದಿ, ಉಪ್ಪಾರರ  ಬೀದಿ ಸೇರಿದಂತೆ ಹಲವೆಡೆ ಬೆಳಿಗ್ಗೆಯಿಂದಲೇ ರಂಗು ರಂಗಿನ ಬಣ್ಣದಾಟದೊಡನೆ ಹೋಳಿ ಆಚರಣೆ ನಡೆಸಿದರು. ಮಕ್ಕಳು, ಪುರುಷರು ಮತ್ತು ಮಹಿಳೆಯರು ಒಂದೆಡೆ ಸೇರಿ ಸಂಭ್ರಮಿಸಿದರು. ಕೊನೆಯಲ್ಲಿ ರತಿ-ಮನ್ಮಥರ ದಹನದೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.
    ಪ್ರತಿ ವರ್ಷ ಈ ಭಾಗದಲ್ಲಿ ವಿಜೃಂಭಣೆಯಿಂದ ರತಿ-ಮನ್ಮಥರ ಪ್ರತಿಷ್ಠಾಪನೆಯೊಂದಿಗೆ ಹೋಳಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಕೊರೋನಾ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ಹಬ್ಬದ ಸಂಭ್ರಮ ಕ್ಷೀಣಿಸಿತ್ತು. ಈ ಬಾರಿ ಎಲ್ಲೆಡೆ ಅದ್ದೂರಿ ಆಚರಣೆ  ಕಂಡು ಬಂದಿತು. ಹೋಳಿ ಆಚರಣೆ ಸ್ಥಳದಲ್ಲಿ ಬಿಗಿ ಪೊಲೀಸ್  ಬಂದ್ ಬಸ್ತ್ ಕೈಗೊಳ್ಳಲಾಗಿತ್ತು.

Thursday, March 17, 2022

ಜೇಮ್ಸ್ ಚಿತ್ರ ಬಿಡುಗಡೆಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ : ಎರಡೂ ಚಿತ್ರಮಂದಿರಗಳಲ್ಲೂ ಎಲ್ಲಾ ಪ್ರದರ್ಶನಗಳು ಭರ್ತಿ

ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ-ವೆಂಕಟೇಶ್ವರ(ಸತ್ಯ) ಚಿತ್ರ ಮಂದಿರದಲ್ಲಿ ಗುರುವಾರ ಪುನೀತ್‌ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿಲನಚಿತ್ರ ವೀಕ್ಷಣೆಗೆ ಕಾದು ನಿಂತಿರುವ ಅಭಿಮಾನಿಗಳು.
    ಭದ್ರಾವತಿ, ಮಾ. ೧೭: ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಲನಚಿತ್ರ ಬಿಡುಗಡೆಗೆ ಗುರುವಾರ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು.
    ನಗರದ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ-ವೆಂಕಟೇಶ್ವರ(ಸತ್ಯ) ಚಿತ್ರ ಮಂದಿರದಲ್ಲಿ ಬೆಳಿಗ್ಗೆ ಬಿ.ಎಚ್ ರಸ್ತೆ ೩ನೇ ವಾರ್ಡ್ ವ್ಯಾಪ್ತಿಯ ಚಾಮೇಗೌಡ ಏರಿಯಾದ ಡಾ. ರಾಜ್‌ಕುಮಾರ್ ಅಭಿಮಾನಿಗಳು ಮತ್ತು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ೫೦ ಅಡಿ ಎತ್ತರ ಕಟೌಟ್‌ಗೆ ಹೂವಿನ ಅಲಂಕಾರ ಹಾಗು ಹಾಲಿನ ಅಭಿಷೇಕ ನಡೆಯಿತು. ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಲಾಯಿತು.
    ಎರಡೂ ಚಿತ್ರ ಮಂದಿರಗಳಲ್ಲಿ ಎಲ್ಲಾ ಪ್ರದರ್ಶನಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದವು. ಚಲನಚಿತ್ರ ವೀಕ್ಷಣೆಗೆ ಅಭಿಮಾನಿಗಳು ಗಂಟೆಗಟ್ಟಲೆ ಚಿತ್ರಮಂದಿರ ಮುಂದೆ ಕಾದು ಕುಳಿತುವಿರುವುದು ಕಂಡು ಬಂದಿತು. ಚಿತ್ರ ವೀಕ್ಷಿಸಿದ ಅಭಿಮಾನಿಗಳು ಉತ್ತಮ ಪ್ರಶಂಸೆ ವ್ಯಕ್ತಪಡಿಸಿದರು.
    ಚಿತ್ರ ಮಂದಿರದ ಬಳಿ ಜಾತ್ರಾ ಮಹೋತ್ಸವದ ಸಂಭ್ರಮದಂತೆ ಕಂಡು ಬಂದಿತು. ಬಿಗಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು.

ಆಟೋ ಚಾಲಕರಿಂದ ಪುನೀತ್ ರಾಜ್‌ಕುಮಾರ್ ಪತ್ರಿಮೆ ಅನಾವರಣ

ಭದ್ರಾವತಿ ತಾಲೂಕು ಕಚೇರಿ ರಸ್ತೆ ನಿರ್ಮಲ ಆಸ್ಪತ್ರೆ ಬಳಿ ಕನಕ ಆಟೋ ನಿಲ್ದಾಣದ ವತಿಯಿಂದ ಗುರುವಾರ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
    ಭದ್ರಾವತಿ, ಮಾ. ೧೭: ತಾಲೂಕು ಕಚೇರಿ ರಸ್ತೆ ನಿರ್ಮಲ ಆಸ್ಪತ್ರೆ ಬಳಿ ಕನಕ ಆಟೋ ನಿಲ್ದಾಣದ ವತಿಯಿಂದ ಗುರುವಾರ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ ವಿಜೃಂಭಣೆಯಿಂದ ಆಚರಿಸಲಾಯಿತು.
    ೩ ಅಡಿ ಎತ್ತರದ ಸಿಮೆಂಟ್‌ನಿಂದ ತಯಾರಿಸಲಾದ ಪುನೀತ್‌ರಾಜ್‌ಕುಮಾರ್‌ರವರ ಪತ್ರಿಮೆಯನ್ನು ಯುವ ಮುಖಂಡ ಬಿ.ಎಸ್ ಬಸವೇಶ್ ಅನಾವರಣಗೊಳಿಸಿದರು. ಅಭಿಮಾನಿಗಳು, ಆಟೋ ಚಾಲಕರು, ಸ್ಥಳೀಯರು ಸ್ವರ ಸಂಗೀತ ಕಾರ್ಯಕ್ರಮದೊಂದಿಗೆ ಸಂಭ್ರಮಿಸಿದರು.
    ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.  ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಆಟೋ ಚಾಲಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸೇವಾ ಕಾರ್ಯಗಳಿಂದಾಗಿ ಪುನೀತ್‌ರಾeಕುಮಾರ್ ನೆನಪು : ಲಕ್ಷಾಂತರ ಅಭಿಮಾನಿಗಳಿಗೆ ಪ್ರೇರಣೆ

ಸರ್ಕಾರವೇ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸುವಂತಾಗಲಿ : ಬಿ.ಕೆ ಮೋಹನ್


ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಭದ್ರಾವತಿ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ, ಮಾ. ೧೭: ಪುನೀತ್‌ರಾಜ್‌ಕುಮಾರ್‌ರವರು ನಮ್ಮೆಲ್ಲರ ಮುಂದೆ ಇಂದು ಉಳಿದುಕೊಂಡಿರುವುದು ಅವರ ಸೇವಾ ಕಾರ್ಯದಿಂದಾಗಿ ಎಂಬುದನ್ನು ಯಾರು ಮರೆಯುವಂತಿಲ್ಲ. ಇಂತಹ ವ್ಯಕ್ತಿಯ ಜನ್ಮದಿನವನ್ನು ಸರ್ಕಾರದಿಂದ ಆಚರಿಸುವಂತಾಗಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
    ಅವರು ಗುರುವಾರ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
    ಪುನೀತ್‌ರಾಜ್‌ಕುಮಾರ್‌ರವರು ಕೇವಲ ನಟರಾಗಿ ಉಳಿದುಕೊಳ್ಳದೆ ಬಡ ಮಕ್ಕಳ ಶಿಕ್ಷಣಕ್ಕೆ, ಗೋ ಶಾಲೆಗಳ ನಿರ್ಮಾಣಕ್ಕೆ ಹಾಗು ಅನಾಥಾಶ್ರಮಗಳಿಗೆ ನೆರವಾಗುವ ಜೊತೆಗೆ ಇನ್ನಿತರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ನಿಧನದ ನಂತರ ಅವರ ವಾಸ್ತವ ಬದುಕು ನಮ್ಮೆಲ್ಲರಿಗೂ ತಿಳಿಯುತ್ತಿದೆ. ಆ ಮೂಲಕ ಅವರು ಇಂದು ನಮ್ಮೆಲ್ಲರ ಮುಂದೆ ಉಳಿದುಕೊಂಡಿದ್ದಾರೆ. ಇವರ ಸೇವಾ ಕಾರ್ಯಗಳು ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಬದಲಿಸಿದೆ. ಈ ಮೂಲಕ ನಾವು ಸಹ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಮನೋಭಾವ ಬೆಳೆಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಪುನೀತ್‌ರಾಜ್‌ಕುಮಾರ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಜನ್ಮದಿನ ಕೇವಲ ಸಂಘ-ಸಂಸ್ಥೆಗಳಿಂದ, ಅಭಿಮಾನಿಗಳಿಂದ ಆಚರಣೆ ಮಾಡಿದರೆ ಸಾಲದು ಸರ್ಕಾರದ ವತಿಯಿಂದ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದಿನಗಳಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.
    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಟ್ರಸ್ಟ್ ಪ್ರಾಮಾಣಿಕವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ. ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯದೆ ಮುನ್ನಡೆಯುವ ಮೂಲಕ ಇತರರಿಗೆ ಟ್ರಸ್ಟ್ ಮಾದರಿಯಾಗಬೇಕೆಂದರು.
    ಸಂಘದ ಅಧ್ಯಕ್ಷ ಲಾಜರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಆರ್. ಪ್ರದೀಪ್, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಸುರಜಿತ್‌ಮಿಶ್ರಾ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯರಾದ ಲತಾ ಚಂದ್ರಶೇಕರ್, ಆರ್. ಮೋಹನ್‌ಕುಮಾರ್, ಸರ್ವಮಂಗಳ ಭೈರಪ್ಪ, ಸೈಯದ್ ರಿಯಾಜ್, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಸಮಾಜ ಸೇವಕ ಬಾಲಕೃಷ್ಣ, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಟ್ರಸ್ಟ್ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಎನ್.ಆರ್ ಜಯರಾಜ್, ಉಪಾಧ್ಯಕ್ಷರಾದ ರಾಮಪ್ಪ, ವಿ. ಮುನೇನಕೊಪ್ಪ, ಸಹಕಾರ್ಯದರ್ಶಿ ಎಚ್.ಪಿ ಶ್ರೀನಿವಾಸ್, ಕೋಶಾಧ್ಯಕ್ಷ ಮಹೇಶ್ವರಪ್ಪ, ನಿರ್ದೇಶಕರಾದ ವಿ.ಎಚ್ ಶಿವಣ್ಣ, ಎಸ್.ಎಚ್ ಹನುಮಂತರಾವ್, ಎಲ್. ಬಸವರಾಜಪ್ಪ, ಡಿ. ಸುಬ್ರಮಣಿ, ನಾಗರಾಜ್, ಆರ್. ಕಾಮಾಕ್ಷಿ, ಎನ್. ರೂಪ, ವಿಲ್ಸನ್‌ಬಾಬು ಮತ್ತು ಕೆ. ಆಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಗರಸಭಾ ಸದಸ್ಯ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಸ್ವಾಗತಿಸಿದರು. ಸಿದ್ದಾರ್ಥ ಅಂಧರ ಕೇಂದ್ರ ಕಲಾವಿದರು ಪ್ರಾರ್ಥಿಸಿ ಪುನೀತ್‌ರಾಜ್‌ಕುಮಾರ್‌ರವರ ಗೀತಾ ಗಾಯನ ನಡೆಸಿಕೊಟ್ಟರು. ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ರಕ್ತದಾನ, ನೇತ್ರದಾನ ಸಹ ನಡೆಯಿತು.


ಭದ್ರಾವತಿ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.