Tuesday, August 23, 2022

ಶಿಕ್ಷಣ ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಬಾಲಕಿಗೆ ಜನಪರ ವೇದಿಕೆ ಆಸರೆ

ಪ್ರವೇಶ ಮುಕ್ತಾಯಗೊಂಡರೂ ವಿಶೇಷ ದಾಖಲಾತಿಗೆ ಮನವಿ ಮಾಡಿದ ಜಿಲ್ಲಾಧಿಕಾರಿ

ಭದ್ರಾವತಿಯಲ್ಲಿ ವೈಯಕ್ತಿಕ ಕೌಟುಂಬಿಕ ಕಾರಣದಿಂದ ಓದು ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಬಾಲಕಿಗೆ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ನೆರವಾಗುವ ಮೂಲಕ ಆಕೆಯ ಮುಂದಿನ ಶಿಕ್ಷಣಕ್ಕೆ ನೆರವಾಯಿತು.
    ಭದ್ರಾವತಿ, ಆ. ೨೩: ವೈಯಕ್ತಿಕ ಕೌಟುಂಬಿಕ ಕಾರಣದಿಂದ ಓದು ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಬಾಲಕಿಗೆ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ನೆರವಾಗುವ ಮೂಲಕ ಆಕೆಯ ಮುಂದಿನ ಶಿಕ್ಷಣಕ್ಕೆ ನಾಂದಿ ಹಾಡಿದೆ.
    ತಾಲೂಕಿನ ಹುಣಸೇಕಟ್ಟೆ ಗ್ರಾಮದ ಬಡಕುಟುಂಬದ ಕೀರ್ತನಾ ಎಂಬ ಬಾಲಕಿಯೋರ್ವಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದು, ಆದರೂ ಸಹ ಓದು ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾಳೆ.
    ಈಕೆಯ ತಾಯಿ ಒಬ್ಬಳೇ ಕೂಲಿ ಕೆಲಸ ಮಾಡಿಕೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದು, ಇದರಿಂದಾಗಿ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಈ ನಡುವೆ ಮುಂದಿನ ವಿದ್ಯಾಭ್ಯಾಸಕ್ಕೆ ಕುಟುಂಬದಿಂದಲೂ ಅಸಹಾಯಕತೆ ವ್ಯಕ್ತವಾಗಿದೆ.


    ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಂಡರೂ ಸಹ ಈಕೆಯ ಮುಂದಿನ ಓದಿನ ಕನಸು ನನಸಾಗಿರಲಿಲ್ಲ. ಈ ನಡುವೆ ಈಕೆಯ ನೆರವಿಗೆ ಹುಣಸೆಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ಸಮಾಜ ಸೇವಕಿ ಅನಿತಾ ಮೇರಿ ಅವರು ಧಾವಿಸಿದ್ದು, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರ ಬಳಿ ಈಕೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರವೇಶ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದು ವಿಶೇಷ ದಾಖಲಾತಿಯಡಿ ಪ್ರಥಮ ವರ್ಷದ ಪ್ರವೇಶಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಕೋರಿ ಪತ್ರ ಬರೆದಿದ್ದರು. ಇದಕ್ಕೆ ಇಲಾಖೆ ಉಪನಿರ್ದೇಶಕರು ಪೂರಕವಾಗಿ ಸ್ಪಂದಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿನಿಯ ಮುಂದಿನ ಶಿಕ್ಷಣಕ್ಕೆ ನೆರವಾಗಬೇಕೆಂಬ ಉದ್ದೇಶದಿಂದ ವೇದಿಕೆಯ  ಕಾರ್ಯಕರ್ತರೆಲ್ಲರೂ ಸೇರಿ ನಮ್ಮ ಬಳಿ ಇರುವ ಹಣ ಸಂಗ್ರಹಿಸಿ ಪಾವತಿಸಲಾಗಿದೆ. ವೇದಿಕೆ ಸಾಮಾಜಿಕ ಕಾಳಜಿಯಿಂದ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ.
- ಪ್ರಾನ್ಸಿಸ್, ಮಾಜಿ ಸದಸ್ಯರು, ನಗರಸಭೆ ಹಾಗು ವೇದಿಕೆ ಮುಖಂಡರು, ಭದ್ರಾವತಿ.

    ಈಕೆಗೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ(ಗರ್ಲ್ಸ್ ಕಾಲೇಜು)ನಲ್ಲಿ ಪ್ರವೇಶ ಪಡೆಯಲು ಅವಕಾಶ ಲಭಿಸಿದರೂ ಸಹ ಪ್ರವೇಶ ಶುಲ್ಕ ಹಾಗು ಸಮವಸ್ತ್ರ, ನೋಟ್ ಬುಕ್ ಮತ್ತು  ಪಠ್ಯ ಪುಸ್ತಕಗಳಿಗಾಗಿ ಎದುರು ನೋಡುವಂತಾಯಿತು. ಈ ನಡುವೆ ಈಕೆಯ ಸಂಕಷ್ಟ ಅರಿತ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ಕಾಲೇಜಿಗೆ ತೆರಳಿ ಈಕೆಯ ಪ್ರವೇಶ ಶುಲ್ಕ ಹಾಗು ಸಮವಸ್ತ್ರ, ನೋಟ್ ಬುಕ್ ಮತ್ತು  ಪಠ್ಯ ಪುಸ್ತಕಗಳಿಗಾಗಿ ಒಟ್ಟು ೫,೭೦೦ ರು. ಪಾವತಿಸುವ ಮೂಲಕ ಮುಂದಿನ ಶಿಕ್ಷಣಕ್ಕೆ ನೆರವಾಯಿತು.

ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಕುಟುಂಬಸ್ಥರು ಈಕೆಯ ಶಿಕ್ಷಣವನ್ನು ಮೊಟಕುಗೊಳಿಸಲು ಮುಂದಾಗಿದ್ದರು. ಇದನ್ನು ಅರಿತು ಆಕೆ ಶಿಕ್ಷಣ ಮುಂದುವರೆಸಲು ನೆರವಿಗೆ ಧಾವಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿಕೊಡಲಾಯಿತು. ಈಕೆಗೆ ಹೆಚ್ಚಿನ ನೆರವಿನ ಅಗತ್ಯವಿದ್ದು, ಸಂಘ-ಸಂಸ್ಥೆಗಳು, ದಾನಿಗಳನ್ನು ಕೋರಲಾಗಿತ್ತು. ಇದೀಗ ಆಕೆಯ ಕನಸು ನನಸಾಗಿರುವುದು ತುಂಬಾ ಸಂತೋಷದ ವಿಚಾರವಾಗಿದೆ.
                                                                                   - ಅನಿತಾ ಮೇರಿ, ಶಿಕ್ಷಕಿ ಹಾಗು ಸಮಾಜ ಸೇವಕಿ, ಭದ್ರಾವತಿ.

    ಈ ಸಂದರ್ಭದಲ್ಲಿ ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ್, ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುದೀಪ್‌ಕುಮಾರ್, ನಗರಸಭೆ ಮಾಜಿ ಸದಸ್ಯ ಪ್ರಾನ್ಸಿಸ್, ಮುಖಂಡರಾದ ಶರವಣ, ಪ್ರಮೋದ್, ಲಾರೆನ್ಸ್, ಪುರುಷೋತ್ತಮ್, ಮದನ್‌ಕುಮಾರ್, ವಿನಯ್ ಮತ್ತು ಅಂತೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



Monday, August 22, 2022

ಶಾರದಮ್ಮ ಚಂದ್ರಗುಂಡಯ್ಯ ನಿಧನ

ಶಾರದಮ್ಮ ಚಂದ್ರಗುಂಡಯ್ಯ
    ಭದ್ರಾವತಿ, ಆ. ೨೨: ನಗರಸಭೆ ವಾರ್ಡ್ ನಂ.೨೦ರ  ಸುರಗಿತೋಪು ನಿವಾಸಿ ಶಾರದಮ್ಮ ಚಂದ್ರಗುಂಡಯ್ಯ(೭೮) ಸೋಮವಾರ ನಿಧನ ಹೊಂದಿದರು.
  ನಾಲ್ಕು ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಸಂಸ್ಕಾರ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಮಂಗಳವಾರ ಮಧ್ಯಾಹ್ನ ೧೧ ನೆರವೇರಲಿದೆ. ಶಾರದಮ್ಮನವರು ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
    ಶಾಸಕ ಬಿ.ಕೆ.ಸಂಗಮೇಶ್ವರ್, ಪ್ರಮುಖರಾದ ಸಿದ್ದಲಿಂಗಯ್ಯ, ಸುವರ್ಣಮ್ಮ ಹೀರೇಮಠ್, ಟಿ.ಜಿ.ಬಸವರಾಜಯ್ಯ ಸೇರಿದಂತೆ ಇತರರು ಸಂತಾಪ ಸೂಚಿಸಿದ್ದಾರೆ.

ಕುಂದುಕೊರತೆ, ಇನ್ನಿತರ ಸಭೆಗಳಿಗೆ ಮಾಹಿತಿ ನೀಡಿ

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಕುಂದುಕೊರತೆ ಸಭೆ ಹಾಗು ಇನ್ನಿತರ ಸಭೆಗಳಿಗೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೨೨: ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಕುಂದುಕೊರತೆ ಸಭೆ ಹಾಗು ಇನ್ನಿತರ ಸಭೆಗಳಿಗೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಲಾಯಿತು.
    ಈ ವ್ಯಾಪ್ತಿಯ ಕೆಲವೇ ಕೆಲವು ಮುಖಂಡರುಗಳಿಗೆ ಮಾತ್ರ ಸಭೆಯ ಮಾಹಿತಿ ನೀಡಲಾಗುತ್ತಿದೆ. ಉಳಿದಂತೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡದಿರುವುದು ಖಂಡನೀಯ. ಈ ಸಂಬಂಧ ಠಾಣೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸುವ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
    ಮನವಿಯನ್ನು ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್ ಮತ್ತು ಸಂಯುಕ್ತ ಕರ್ನಾಟಕ ಜನಾತದಳ(ಜೆಡಿಯು) ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಸಲ್ಲಿಸಿದರು.

ಆ.೨೩ರಂದು ಅನುದಾನ, ಅನುದಾನರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ


    ಭದ್ರಾವತಿ, ಆ. ೨೨: ಅನುದಾನ ಮತ್ತು ಅನುದಾನರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಆ.೨೩ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ನಡೆಯಲಿದೆ.
    ಹೊಸಮನೆ ನೃಪತುಂಗ ಬಡಾವಣೆಯಲ್ಲಿರುವ ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಕ್ರೀಡಾಕೂಟ ನಡೆಯುತ್ತಿದ್ದು, ಬೆಳಿಗ್ಗೆ ೯ ಗಂಟೆಗೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಕ್ರೀಡಾಕೂಟ ಯಶಸ್ವಿಗೊಳಿಸುವಂತೆ ಶಾಲೆಯ ಮುಖ್ಯಶಿಕ್ಷಕರು ಕೋರಿದ್ದಾರೆ.  

ಗಣೇಶೋತ್ಸವ ಆಚರಣೆ : ಆ.೨೪ರಂದು ಸಭೆ

ಭದ್ರಾವತಿ, ಆ. ೨೨ : ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ವಿನಾಯಕ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರು ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಲು ಆ.೨೪ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.
    ಈ ಬಾರಿ ಎಲ್ಲೆಡೆ ಗಣೇಶೋತ್ಸವ ಅದ್ದೂರಿಯಾಗಿ ಆಚರಿಸಲು ಸಿದ್ದತೆಗಳು ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ಗಣೇಶೋತ್ಸವ ಆಚರಿಸುವ ಸಮಿತಿಯವರು ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅನುಸರಿಸಬೇಕಾದ ಕ್ರಮಗಳ ಕುರಿತು ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಚರ್ಚಿಸಲಾಗುವುದು. ಈ ಹಿನ್ನಲೆಯಲ್ಲಿ ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.

ಡಿಜೆ ಬಳಸಲು ನಮಗೂ ಇಷ್ಟ, ಆದರೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದು ನಮ್ಮ ಕರ್ತವ್ಯ

ಎಲ್ಲಾ ಧರ್ಮಗುರು, ಹಿರಿಯರಿಂದ ಯುವಕರ ನಿಯಂತ್ರಣ ಸಾಧ್ಯ-ಶಾಂತಿಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ

ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಶಾಂತಿಸಭೆ ನೇತೃತ್ವ ವಹಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿದರು.
    ಭದ್ರಾವತಿ, ಆ.೨೧: ಡಿಜೆ ಬಳಸಲು ನಮಗೂ ಇಷ್ಟವಿದೆ ಆದರೆ ಸುಪ್ರೀಂ ಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕಾಗಿದೆ. ಹಿನ್ನೆಲೆಯಲ್ಲಿ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮನವಿ ಮಾಡಿದರು.
    ಅವರು ಸೋಮವಾರ ನಗರದ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಡಿಜೆ ಅಂದರೆ ಎಲ್ಲರಿಗೂ ಇಷ್ಟ. ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಅವಧಿಯಲ್ಲಿ ಸಂಭ್ರಮಿಸಿದ್ದೇನೆ. ಆದರೆ ಸುಪ್ರೀಂ ಕೋರ್ಟ್ ಆದೇಶಕ್ಕೆ ನಾವೆಲ್ಲರೂ ತಲೆಬಾಗಬೇಕಾಗಿದೆ. ಈ ಬಾರಿ ಗಣೇಶೋತ್ಸವಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.


    ಸಂಭ್ರಮಾಚರಣೆ ಸಂದರ್ಭದಲ್ಲಿ ಊರಿನ ಎಲ್ಲಾ ಧರ್ಮಗುರುಗಳು ಹಾಗು ಹಿರಿಯರು ಜಿಲ್ಲಾಡಳಿತಕ್ಕೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ, ಯುವಕರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಸಣ್ಣಪುಟ್ಟ ಸಮಸ್ಯೆಗಳು ಸಹಜ. ಅವುಗಳನ್ನು ಅಲ್ಲಿಯೇ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಜಾಣ್ಮೆ ಪ್ರದರ್ಶಿಸಬೇಕು. ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇದನ್ನು ಯಾರು ಸಹ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಇಂತಹ ಸಂದರ್ಭದಲ್ಲಿ ನಮ್ಮ ಮನಸ್ಸಿಗೂ ತುಂಬಾ ನೋವಾಗುತ್ತದೆ. ಜನರು ಕಠಿಣ ಸಂದರ್ಭದಲ್ಲೂ ಹೆಚ್ಚಿನ ಸಹಕಾರ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ನಾನು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಎಲ್ಲರೂ ಶಾಂತಿ-ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸಿ ಕೊಡುವುದು ನನ್ನ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಎಲ್ಲರೂ ಹಬ್ಬವನ್ನು ಸಂಭ್ರಮದಿಂದ ಶಾಂತಿ-ಸೌಹಾರ್ದತೆಯಿಂದ ಆಚರಿಸುವಂತೆ ಮನವಿ ಮಾಡಿದರು.  
    ಉಳಿದಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸರ್ಕಾರ ರೂಪಿಸುವ ಮಾರ್ಗದರ್ಶಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರಿಸರಕ್ಕೆ ಧಕ್ಕೆಯಾಗದಂತೆ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು, ವಿದ್ಯುತ್ ಹಾಗು ಅಗ್ನಿ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸುವುದು. ಸ್ವಚ್ಛತೆ ಕಾಪಾಡುವುದು ಹಾಗು ಮೂರ್ತಿ ವಿಸರ್ಜನೆ ದಿನವನ್ನು ಮೊದಲೇ ತಿಳಿಸುವ ಮೂಲಕ ಸಹಕರಿಸುವಂತೆ ಕೋರಿದರು.
    ೫೦ ವರ್ಷಗಳಿಂದ ಶಾಂತಿಯುತವಾಗಿ ಆಚರಣೆ:
    ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಕಳೆದ ೫೦ ವರ್ಷಗಳಿಂದ ಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಭೆಯಲ್ಲಿ ಸಮಿತಿ ಅಧ್ಯಕ್ಷ, ಹಿರಿಯ ನಗರಸಭಾ ಸದಸ್ಯ ಕೆ. ಕದಿರೇಶ್ ಸ್ಪಷ್ಟಪಡಿಸಿದರು.
    ಕ್ಷೇತ್ರದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಮುಸ್ಲಿಂ ಸಮುದಾಯದವರಿಂದ ಇದುವರೆಗೂ ಯಾವುದೇ ರೀತಿ ತೊಂದರೆಯಾಗಿಲ್ಲ. ಹಬ್ಬದ ಸಂದರ್ಭದಲ್ಲಿ ವಿನಾಕಾರಣ ಗೊಂದಲ ಹಾಗು ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಕೆಲವು ಕಿಡಿಗೇಡಿಗಳಿಂದ ಸಣ್ಣ-ಪುಟ್ಟ ಗಲಾಟೆಗಳು ನಡೆಯುವುದು ಸಹಜ. ಇದಕ್ಕೆ ಯಾರು ಸಹ ಕಿವಿಗೊಡಬಾರದು ಎಂದು ಮನವಿ ಮಾಡಿದರು.
    ವಿನಾಕಾರಣ ವ್ಯಾಪಾರಸ್ಥರಿಗೆ ತೊಂದರೆ :
    ಪ್ರತಿಯೊಂದು ಘಟನೆ ಸಂದರ್ಭದಲ್ಲೂ ವಿನಾಕಾರಣ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸುವುದು ಸರಿಯಲ್ಲ. ಇದರಿಂದಾಗಿ ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಎಂ.ಎಸ್ ಜನಾರ್ಧನ ಅಯ್ಯಂಗಾರ್ ಅಳಲು ವ್ಯಕ್ತಪಡಿಸಿದರು.
    ವ್ಯಾಪಾರ ವಹಿವಾಟು ಇಲ್ಲದೆ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ವ್ಯಾಪಾರಸ್ಥರಿಂದ ಯಾರಿಗೂ ಯಾವುದೇ ರೀತಿ ತೊಂದರೆಯಾಗುವುದಿಲ್ಲ. ಬಲವಂತವಾಗಿ ಬಂದ್ ಮಾಡಿಸದೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
    ಕಿಡಿಗೇಡಿಗಳು ಯಾರೇ ಇರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಿ :
ಎಲ್ಲಾ ಹಬ್ಬಗಳನ್ನು ಇಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಗ್ಗಟ್ಟಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಕೆಲವು ಕಿಡಿಗೇಡಿಗಳಿಂದ ಸಣ್ಣ-ಪುಟ್ಟ ಗಲಾಟೆಗಳು ನಡೆಯುತ್ತಿದ್ದು, ಅಂತಹ ಕಿಡಿಗೇಡಿಗಳು ಯಾರೇ ಇರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರಾದ ಫೀರ್ ಷರೀಫ್, ಅಮೀರ್‌ಜಾನ್ ಸೇರಿದಂತೆ ಇನ್ನಿತರರು ಆಗ್ರಹಿಸಿದರು.
    ಕ್ಷೇತ್ರದಲ್ಲಿರುವ ಎಲ್ಲರೂ ಎಚ್ಚರವಹಿಸಬೇಕು. ಕಿಡಿಗೇಡಿಗಳು ಕಂಡು ಬಂದಲ್ಲಿ ಅವರನ್ನು ದೂರವಿಡುವ ಕೆಲಸ ಮಾಡಬೇಕು. ಎಲ್ಲರೂ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಗಮನ ನೀಡಬೇಕೆಂದರು.


    ಜಿಲ್ಲೆಯಲ್ಲಿರುವ ಪ್ರಮುಖ ರಾಜಕಾರಣಿಗಳ ಸಭೆ ನಡೆಸಿ :
    ಜಿಲ್ಲೆಯಲ್ಲಿರುವ ಕೆಲವು ರಾಜಕಾರಣಿಗಳು ಘಟನೆಗಳನ್ನು ದುರ್ಬಳಕೆ ಮಾಡಿಕೊಂಡು ವಿನಾಕಾರಣ ಹೇಳಿಕೆ ನೀಡುವ ಮೂಲಕ ಜನರನ್ನು ಪ್ರಚೋದನೆಗೊಳಿಸುತ್ತಿದ್ದಾರೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆರೋಪಿಸಿದರು.
    ಘಟನೆಯನ್ನು ನೋಡದಿದ್ದರೂ, ಘಟನಾ ಸ್ಥಳದಲ್ಲಿ ಇರದಿದ್ದರೂ ಸಹ ಬೇಕಾಬಿಟ್ಟಿಯಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ಗಲಭೆಗಳು ಹೆಚ್ಚಾಗುತ್ತಿವೆ. ರಾಜಕೀಯ ಲಾಭಕ್ಕಾಗಿ ಜನರ ಬದುಕನ್ನು ಸಂಕಷ್ಟಕ್ಕೆ ತಳ್ಳುವುದು ಸರಿಯಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರೂ ಬದ್ಧತೆಯಿಂದ ನಡೆದುಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ ಪ್ರಮುಖ ರಾಜಕಾರಣಿಗಳ ಸಭೆ ನಡೆಸಿ ಅವರಿಗೆ ಶಾಂತಿ ಸೌಹಾರ್ದತೆ ಕಾಪಾಡಲು ಮನವರಿಕೆ ಮಾಡಿಕೊಡಬೇಕೆಂದು ಕೋರಿದರು.
    ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ಬಿ.ಎಂ ಲಕ್ಷ್ಮೀಪ್ರಸಾದ್, ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಮ್ ಅಮಟೆ, ಪೊಲೀಸ್ ಉಪಾಧೀಕ್ಷಕ, ಐಪಿಎಸ್ ಅಧಿಕಾರಿ ಜಿತೇಂದ್ರಕುಮಾರ್ ದಯಾಮ, ಉಪವಿಭಾಗಾಧಿಕಾರಿ ದೊಡ್ಡೇಗೌಡರ್, ತಹಸೀಲ್ದಾರ್ ಆರ್. ಪ್ರದೀಪ್, ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಿವಿಧ ಧರ್ಮಗಳ ಪ್ರಮುಖರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರಮುಖರು, ಪೊಲೀಸ್ ವೃತ್ತ ನಿರೀಕ್ಷಕರು, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು,  ನಗರಸಭೆ, ಮೆಸ್ಕಾಂ, ಅರಣ್ಯ ಹಾಗು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು  ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Sunday, August 21, 2022

ಡಿಚ್ಚಿ ಮುಬಾರಕ್ ವಿರುದ್ಧ ಗಾಂಜಾ ಸೇವನೆ ಪ್ರಕರಣ ದಾಖಲು

ಡಿಚ್ಚಿ ಮುಬಾರಕ್
    ಭದ್ರಾವತಿ, ಆ. ೨೧ : ಇತ್ತಿಚೆಗೆ ನೆಹರು ನಗರದಲ್ಲಿ ವೈಯಕ್ತಿಕ ಕಾರಣಕ್ಕೆ ನಡೆದಿದ್ದ ಗಲಾಟೆ ಪ್ರಕರಣದ ಪ್ರಮುಖ ಆರೋಪಿ ಡಿಚ್ಚಿ ಮುಬಾರಕ್ ವಿರುದ್ಧ ಗಾಂಜಾ ಸೇವನೆ ಪ್ರಕರಣ ದಾಖಲಾಗಿದೆ.
    ನೆಹರೂ ನಗರದ ರಾಜೇಶ್ವರಿ ದೇವಾಲಯದ ಬಳಿ ನಡೆದುಕೊಂಡು ಹೋಗುತ್ತಿದ್ದ ಸುನಿಲ್ ಮೇಲೆ ಮುಬಾರಕ್ ವೈಯಕ್ತಿಕ ಕಾರಣಕ್ಕೆ ಹಲ್ಲೆ ನಡೆಸಿದ್ದನು.  ಈ ಸಂಬಂಧ ಪೊಲೀಸರು ಮುಬಾರಕ್‌ನನ್ನು ಬಂಧಿಸಿದ್ದರು.
    ವಿಚಾರಣೆ ಸಂದರ್ಭದಲ್ಲಿ ಗಾಂಜಾ ಸೇವನೆ ಅನುಮಾನದಲ್ಲಿ ಪೊಲೀಸರು ಮುಬಾರಕ್‌ನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದರು. ತಪಾಸಣಾ ವರದಿಯಲ್ಲಿ ಮುಬಾರಕ್ ಗಾಂಜಾ ಸೇವಿಸಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.