ಸೇವಾ ಭದ್ರತೆ ನೀಡಿ, ಪುನಃ ಕಾರ್ಖಾನೆ ಆರಂಭಿಸಿ ಸಚಿವರಿಗೆ ಮನವಿ
ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಗೆ ಭೇಟಿ ನೀಡಿದ ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಿವಿಧ ಕಾರ್ಮಿಕ ಸಂಘಟನೆಗಳಿಂದ, ಪಕ್ಷದ ಮುಖಂಡರಿಂದ ಮನವಿ ಹಾಗೂ ದೂರುಗಳನ್ನು ಸಲ್ಲಿಸಲಾಯಿತು.
ಭದ್ರಾವತಿ, ಜು. ೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ಸರ್ಕಾರ ಜಾರಿಗೊಳಿಸಿದ ವಿಎಸ್‌ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿರುವ ಗುತ್ತಿಗೆ ಕಾರ್ಮಿಕರಿಗೆ ಕಾರ್ಖಾನೆ ಆಡಳಿತ ಮಂಡಳಿ ತಾರತಮ್ಯ ವೆಸಗಿದೆ ಎಂದು ಆರೋಪಿಸಿ ಮೈಸೂರು ಕಾಗದ ಕಾರ್ಖಾನೆ ಮಜ್ದೂರು ಸಂಘ ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್‌ಶೆಟ್ಟರ್‌ಗೆ ದೂರು ಸಲ್ಲಿಸಿದೆ.
ಬುಧವಾರ ಕಾರ್ಖಾನೆಗೆ ಭೇಟಿ ನೀಡಿದ ಸಚಿವರಿಗೆ ಸಲ್ಲಿಸಿರುವ ದೂರಿನಲ್ಲಿ ವಿಎಸ್‌ಎಸ್ ಯೋಜನೆ ಜಾರಿಗೊಳಿಸಿ ಸರ್ಕಾರ ತೀರ್ಮಾನಿಸಿರುವ ಆದೇಶಕ್ಕೆ ಅನುಗುಣವಾಗಿ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಕಾಯಂ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ನಡುವೆ ತಾರತಮ್ಯ ವೆಸಗಿದೆ. ಸರ್ಕಾರ ನ.೩೦, ೨೦೧೭ರಂತೆ ೧೦೩೪ ಗುತ್ತಿಗೆ ಕಾರ್ಮಿಕರನ್ನು ವಿಎಸ್‌ಎಸ್ ಯೋಜನೆಗೆ ಒಳಪಡಿಸುವಂತೆ ಸೂಚಿಸಿದೆ ಆದರೆ ಆಡಳಿತ ಮಂಡಳಿ ಯಾರನ್ನು ಸಹ ಪರಿಗಣಿಸಿರುವುದಿಲ್ಲ. ೧೦೩೪ ಮಂದಿಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ಮೃತ ನಿಧಿ ಅಥವಾ ವಿಎಸ್‌ಎಸ್ ಸೌಲಭ್ಯ ಯಾವುದನ್ನು ಸಹ ಕೊಟ್ಟಿರುವುದಿಲ್ಲ.
ಸರ್ಕಾರ ನ.೩೦, ೨೦೧೭ರಂತೆ ಅಂತಿಮ ಸೇವಾ ಅವಧಿ ನಿಗದಿಗೊಳಿಸಿದೆ. ಆದರೆ ಆಡಳಿತ ಮಂಡಳಿ ೨೦೧೫/೨೦೧೬/೨೦೧೭ರ ಸೇವಾ ಅವಧಿ ಮೊಟಕುಗೊಳಿಸಿದೆ. ೧೬೩/೬೬ರಂತೆ ಕನಿಷ್ಠ ವೇತನದ ತುಟ್ಟಿಭತ್ಯೆ ನೀಡುವ ಬದಲು ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡಲಾಗಿದೆ. ೪೫ ದಿನಗಳ ವೇತನ ಬದಲಾಗಿ ಕೆಲವು ಕಾರ್ಮಿಕರಿಗೆ ೨೨ ೧/೨ ದಿನ ವೇತನ ನೀಡಲಾಗಿದೆ. ೨೦೧೧ ರಿಂದ ೨೦೧೫ರ ಉತ್ಪಾದನೆ ಅವಧಿಯ ಹೆಚ್ಚುವರಿ ಕೆಲಸದ ವ್ಯತ್ಯಾಸ ಹಣ ಕೊಟ್ಟಿರುವುದಿಲ್ಲ. ನ.೩೦, ೨೦೧೭ರಂತೆ ಸೇವಾ ಅವಧಿ ಪರಿಗಣಿಸಿ ಗ್ರಾಚ್ಯುಟಿ ನೀಡುವಂತೆ ಸರ್ಕಾರ ಸೂಚಿಸಿದೆ. ಆದರೆ ಆಡಳಿತ ೨೦೧೫, ೨೦೧೬ ಮತ್ತು ೨೦೧೭ರಂತೆ ಮೊಟಕುಗೊಳಿಸಿದೆ ಎಂದು ಆರೋಪಿಸಲಾಗಿದೆ.
ಸೇವಾ ಭದ್ರತೆ ನೀಡಿ :
ಕಾರ್ಖಾನೆಯಲ್ಲಿ ಕನಿಷ್ಠ ೧೦ ವರ್ಷ ಸೇವೆ ಸಲ್ಲಿಸದ ಮತ್ತು ೧೦ ವರ್ಷಕ್ಕಿಂತ ಹೆಚ್ಚಿನ ಸೇವಾವಧಿ ಹೊಂದಿರುವ ಉದ್ಯೋಗಿಗಳಿಗೆ ಸೇವಾ ಭದ್ರತೆ ಅಥವಾ ಎರವಲು ಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ದಿ ಮೈಸೂರು ಪೇಪರ್ ಮಿಲ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ಸಚಿವ ಜಗದೀಶ್‌ಶೆಟ್ಟರ್‌ಗೆ ಒತ್ತಾಯಿಸಿದೆ.
ಪ್ರಸ್ತುತ ಕಾರ್ಖಾನೆಯಲ್ಲಿರುವ ೨೨೦ ಉದ್ಯೋಗಿಗಳ ಪೈಕಿ ಸುಮಾರು ೧೦ ರಿಂದ ೨೦ ವರ್ಷಗಳ ಸೇವಾವಧಿ ಬಾಕಿ ಇರುವ ಎಸ್.ಸಿ/ಎಸ್.ಟಿ ಬ್ಯಾಕ್‌ಲಾಗ್ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅತ್ಯಂತ ಕನಿಷ್ಠ ವೇತನವನ್ನು ಪಡೆಯುತ್ತಿದ್ದಾರೆ. ವಿಆರ್‌ಎಸ್ ಯೋಜನೆಯ ಸೌಲಭ್ಯದಿಂದಲೂ ವಂಚಿತರಾಗಿದ್ದು, ಅಲ್ಲದೆ ಕ್ಲೋಸರ್ ಯೋಜನೆಗೆ ಒಳಪಟ್ಟಲ್ಲಿ ಅತ್ಯಂತ ಕಡಿಮೆ ಅಂದರೆ ಸುಮಾರು ೬೦ ರಿಂದ ೭೦ ಸಾವಿರಗಳು ಮಾತ್ರ ಸಿಗಲಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಸ್ತುತ ೧೧೭ ಮಂದಿಯನ್ನು ವಿವಿಧ ನಿಗಮ/ಮಂಡಳಿಗಳಿಗೆ ಎರವಲು ಸೇವೆ ಮೇಲೆ ಕಳುಹಿಸಿದೆ. ಉಳಿದ ೧೦೩ ಮಂದಿಯನ್ನು ನಿಯೋಜನೆಗೆ ಕಳುಹಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾ ೨೨೦ ಉದ್ಯೋಗಿಗಳನ್ನು ವಿವಿಧ ನಿಗಮ/ಮಂಡಳಿಗಳಲ್ಲಿ ನಿಯೋಜಿಸಿ ಅವರ ಸೇವೆ ಪೂರ್ಣಗೊಳ್ಳುವವರೆಗೆ ಸೇವಾ ಭದ್ರತೆ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದೆ.
ಪುನಃ ಕಾರ್ಖಾನೆ ಆರಂಭಿಸಿ:
೨೦೧೫ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಸಿರು ಪೀಠ ನ್ಯಾಯಾಲಯದ ಆದೇಶವನ್ನು ನೆಪವಾಗಿಟ್ಟುಕೊಂಡು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ ವಿಶ್ವೇಶ್ವರಾಯನವರ ಕನಸಿನ ಕೂಸಾದ ಎಂಪಿಎಂ ಕಾರ್ಖಾನೆಯನ್ನು ಸ್ಥಗಿತಗೊಳಿಸಿ ನಗರದ ಆರ್ಥಿಕ ಸ್ಥಿತಿಯನ್ನು ಕುಗ್ಗಿಸಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ತಕ್ಷಣ ಪುನಃ ಕಾರ್ಖಾನೆ ಆರಂಭಿಸುವಂತೆ ಆಮ್ ಆದ್ಮಿ ಪಾರ್ಟಿ ಸಚಿವರಿಗೆ ಆಗ್ರಹಿಸಿದೆ.
ಪುನಃ ಕಾರ್ಖಾನೆಯನ್ನು ಆರಂಭಿಸುವ ಜೊತೆಗೆ ನಗರದಲ್ಲಿ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿಕೊಡಬೇಕು. ನಗರದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬೇಕೆಂದು ಒತ್ತಾಯಿಸಿದೆ.
No comments:
Post a Comment