Saturday, November 14, 2020

ಕನ್ನಡ ಶಾಲೆ ಉಳಿವಿಗಾಗಿ ಗೋಕಾಕ್ ಮಾದರಿ ಚಳುವಳಿ ಅನಿವಾರ್ಯ : ಬಿ.ಕೆ ಮೋಹನ್

ಭದ್ರಾವತಿ ಅಂಡರ್‌ಬ್ರಿಡ್ಜ್ ಬಳಿ ನೆಹರು ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ನ. ೧೪: ಪ್ರಸ್ತುತ ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿದ್ದು, ಕನ್ನಡ ಶಾಲೆಗಳ ಉಳಿವಿಗಾಗಿ ಈ ಹಿಂದೆ ವರನಟ  ಡಾ. ರಾಜ್‌ಕುಮಾರ್ ನೇತೃತ್ವದಲ್ಲಿ ನಡೆಸಿದ ಗೋಕಾಕ್ ಚಳುವಳಿ ಮಾದರಿಯಂತೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
   ಅವರು ಶನಿವಾರ ಅಂಡರ್‌ಬ್ರಿಡ್ಜ್ ಬಳಿ ನೆಹರು ಆಟೋ ಚಾಲಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ಕರ್ನಾಟಕ ರಾಜ್ಯ ವಿಭಿನ್ನವಾಗಿದ್ದು, ಎಲ್ಲಾ ಭಾಷೆಯ, ಎಲ್ಲಾ ಧರ್ಮದ ಜನರು ಇಲ್ಲಿ ನೆಲೆನಿಂತಿದ್ದಾರೆ. ಎಲ್ಲರನ್ನು ಪೋಷಿಸಿ ಸಲಹುವ ಶಕ್ತಿ ಈ ನಾಡು ಹೊಂದಿದ್ದು, ಇಂತಹ ನಾಡಿನ ನೆಲ, ಜಲ, ಭಾಷೆ ಮೇಲಿನ ಅಭಿಮಾನ ಹೆಚ್ಚಾಗಬೇಕೆಂದರು.
ಪ್ರಸ್ತುತ ಕೊರೊನಾ ಪರಿಣಾಮದಿಂದಾಗಿ ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಆಟೋ ಚಾಲಕರು ಕನ್ನಡ ನಾಡಿನ ಮೇಲೆ ಅಭಿಮಾನ ಹೊಂದುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಸಂಘದ ಅಧ್ಯಕ್ಷ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕನ್ನಡ ಧ್ವಜದೊಂದಿಗೆ ಆಟೋ ಚಾಲಕರು ನಗರದ ವಿವಿಧೆಡೆ ಸಂಚರಿಸಿದರು.

No comments:

Post a Comment