ಭದ್ರಾವತಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಕಾನೂನು ಅರಿವು ಶಿಬಿರಕ್ಕೆ ಸಮಾಜ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ನ್ಯಾಯಾಧೀಶ ಚಂದ್ರಶೇಖರ ಬಣಕಾರ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಭದ್ರಾವತಿ, ಮಾ. ೧೩: ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಕಾನೂನು ರಕ್ಷಣೆ ನೀಡುವ ಜೊತೆಗೆ ಹಕ್ಕು ಮತ್ತು ಕರ್ತವ್ಯದ ವ್ಯಾಪ್ತಿ ವಿವರಿಸಿದೆ ಎಂದು ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹೇಳಿದರು.
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಏರ್ಪಡಿಸಿದ್ದ ಕಾನೂನು ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಚೌಕಟ್ಟಿನಲ್ಲಿ ನಮ್ಮನ್ನು ರಕ್ಷಿಸುವ ಕಾಯ್ದೆಗಳು ಇವೆ ಎಂಬುದನ್ನು ಅರಿತು ನಮ್ಮ ವ್ಯಾಪ್ತಿಯಲ್ಲಿ ನಾವು ಕೆಲಸ ಮಾಡಬೇಕಿದೆ. ಕಾನೂನು ಜ್ಞಾನದಿಂದ ಅಪರಾಧಿಕ ಮನೋಭಾವ ದೂರವಾಗುವ ಜತೆಗೆ ಮತ್ತಷ್ಟು ಜನರಿಗೆ ಜ್ಞಾನ ತುಂಬವ ತವಕ ಹೆಚ್ಚಲಿದೆ ಎಂದರು.
ಸರ್ಕಾರಿ ಅಭಿಯೋಜಕ ತ್ಯಾಗರಾಜ್ ಮಾತನಾಡಿ, ನಮಗೆ ಸಿಗುವ ಸೌಲಭ್ಯ ಪಡೆಯುವ ಜತೆಗೆ ರಾಜ್ಯಾಧಿಕಾರ ತತ್ವದಡಿ ಇರುವ ಕರ್ತವ್ಯವನ್ನು ಯಾರೊಬ್ಬರು ಮರೆಯಬಾರದು ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ವೈ.ಜಯರಾಂ ಮಾತನಾಡಿ, ಪ್ರತಿ ವ್ಯಕ್ತಿಯ ಜನನದಿಂದ, ಮರಣದ ತನಕ ಕಾಯ್ದೆ, ಕಾನೂನುಗಳು ಇವೆ. ಇವುಗಳನ್ನು ಅರಿತುಕೊಂಡಲ್ಲಿ ನಮ್ಮ ಬದುಕು ಸುಗಮಗೊಳ್ಳಲಿದೆ ಎಂದರು.
ಕಾರ್ಯದರ್ಶಿ ಟಿ.ಎಸ್.ರಾಜು ಮಾತನಾಡಿ, ಹೆಣ್ಣು ಮಕ್ಕಳಿಗೆ ಕಾಯ್ದೆ ಕಾನೂನು ಮೂಲಕ ರಕ್ಷಣೆಗಳಿದ್ದು ಅದನ್ನು ಸರಿಯಾಗಿ ಅರಿತುಕೊಂಡಲ್ಲಿ ಮಾತ್ರ ಉತ್ತಮ ಬದುಕು ನಡೆಸಲು ಸಾಧ್ಯ, ಕಾನೂನು ನಮಗೆ ಮಾರ್ಗದರ್ಶನ ನೀಡುತ್ತದೆ. ಆದರೆ ಅದನ್ನು ಸರಿಯಾಗಿ ಪ್ರತಿಪಾದಿಸಿ ತಮ್ಮ ಹಕ್ಕನ್ನು ಪಡೆಯುವುದು ಎಲ್ಲಾ ನಾಗರಿಕರ ಕರ್ತವ್ಯ ಎಂಬುದನ್ನು ಮರೆಯಬಾರದು ಎಂದರು.
ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ವಾರ್ಡನ್ ನಾಗರಾಜ, ರಮ್ಯ, ಕಾನೂನು ಪ್ರಾಧಿಕಾರದ ವಿಶ್ವನಾಥ ಉಪಸ್ಥಿತರಿದ್ದರು.
No comments:
Post a Comment