Sunday, September 5, 2021

ಅಂತರಂಗದ ಶುದ್ದಿಯಿಂದ ಒಳ್ಳೆಯ ಸಮಾಜ : ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ

ಭದ್ರಾವತಿ ತಾಲೂಕಿನ ಸುಕ್ಷೇತ್ರ ಶೀ ಶೀಲಸಂಪಾದನಾಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಹಾ ತಪಸ್ವಿ ಶ್ರೀ ಸಿದ್ದಲಿಂಗಮಹಾಸ್ವಾಮೀಜಿಯವರ ೨೩ ತಿಂಗಳ ತಪೋನುಷ್ಠಾನ ಸಮಾರೋಪ ಹಾಗು ದಾಸೋಹ ಮಂದಿರದ ಉದ್ಘಾಟನಾ ವೇದಿಕೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ನೆರವೇರಿಸಿದರು.
    ಭದ್ರಾವತಿ, ಸೆ. ೫: ಲೋಕಾ ಕಲ್ಯಾಣಾರ್ಥವಾಗಿ ಸ್ವಾಮೀಜಿಗಳು ಕೈಗೊಳ್ಳುವ ತಪಸ್ಸಿನಲ್ಲಿ ಅದ್ಭುತವಾದ ಶಕ್ತಿ ಅಡಗಿದ್ದು, ಇದನ್ನು ಭಕ್ತರು ಮನಗಾಣಬೇಕು. ಪ್ರತಿಯೊಬ್ಬರಲ್ಲೂ ಅಂತರಂಗದ ಶುದ್ದಿಯಾಗಬೇಕಾಗಿದೆ. ಆಗ ಮಾತ್ರ ಒಳ್ಳೆಯ ಕುಟುಂಬದೊಂದಿಗೆ ಒಳ್ಳೆಯ ಸಮಾಜ ರೂಪುಗೊಳ್ಳಲು ಸಾಧ್ಯ ಎಂದು ತುಮಕೂರು ಸುಕ್ಷೇತ್ರ ಶ್ರೀ ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
    ಶ್ರೀಗಳು ಭಾನುವಾರ ತಾಲೂಕಿನ ಸುಕ್ಷೇತ್ರ ಶೀ ಶೀಲಸಂಪಾದನಾಮಠದಲ್ಲಿ ಮಹಾ ತಪಸ್ವಿ ಶ್ರೀ ಸಿದ್ದಲಿಂಗಮಹಾಸ್ವಾಮೀಜಿಯವರ ೨೩ ತಿಂಗಳ ತಪೋನುಷ್ಠಾನ ಸಮಾರೋಪ ಹಾಗು ದಾಸೋಹ ಮಂದಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ನಮ್ಮಲ್ಲಿನ ಅಂತರಂಗ ಹಾಗು ಬಹಿರಂಗ ಎರಡರಲ್ಲೂ ಶುದ್ಧತೆ ಕಾಣಬೇಕು. ಆದರೆ ಅಂತರಂಗದ ಶುದ್ಧತೆಯಲ್ಲಿ ನಾವು ಹಿನ್ನಡೆಯನ್ನು ಕಾಣುತ್ತಿದ್ದೇವೆ. ಅಂತರಂಗದ ಶುದ್ದತೆಗೆ ಉತ್ತಮ ಪರಿಸರ ಅಗತ್ಯವಾಗಿದೆ. ಇಂತಹ ಪರಿಸರ ನಾಡಿನ ಮಠ ಮಂದಿರಗಳು ಹೊಂದಿವೆ ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ದೇಶದಲ್ಲಿ ಮಠ-ಮಂದಿರಗಳ ಕೊಡುಗೆ ಬಹುದೊಡ್ಡಾಗಿದೆ. ಮಠ-ಮಂದಿರಗಳ ಪರಂಪರೆ ದೇಶದ ಭದ್ರಾ ಬುನಾದಿಗೆ ನಾಂದಿಯಾಗಿದೆ. ಭಾರತ ಪ್ರಪಂಚದ ಇತರೆ ರಾಷ್ಟ್ರಗಳೊಂದಿಗೆ ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಈ ಪರಂಪರೆ ಕಾರಣವಾಗಿದೆ ಎಂಬುದನ್ನು ಯಾರು ಮರೆಯಬಾರದು. ಜಗಜ್ಯೋತಿ ಬಸವಣ್ಣನವರ ಆದರ್ಶಗಳಂತೆ ಅಕ್ಕ ನಾಗಮ್ಮನವರು ನೆಲೆಸಿರುವ ಶ್ರೀ ಕ್ಷೇತ್ರದಲ್ಲಿ ಶೀಲ ಸಂಪಾದನೆ ಮಹತ್ವ ಸಾರುತ್ತಿರುವ ೧೯ನೇ ಪೀಠಾಧಿಪತಿಗಳಾದ ಸಿದ್ದಲಿಂಗ ಸ್ವಾಮೀಜಿಯವರು ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಗುಣಗಳನ್ನು ಮೈಗೂಡಿಸಿಕೊಂಡು ನಾಡಿನ ಮಹಾನ್ ತಪ್ಪಸ್ವಿಗಳ ಅನುಗ್ರಹದೊಂದಿಗೆ ಲೋಕ ಕಲ್ಯಾಣಾರ್ಥವಾಗಿ ಹಲವು ಬಾರಿ ತಪೋನುಷ್ಠಾನ ಕೈಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಇಂತಹ ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದರು.
    ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಮಠ-ಮಂದಿರಗಳ ಮಹತ್ವವನ್ನು ಅಂದಿನ ಕಾಲದಲ್ಲಿಯೇ ಸ್ವಾಮಿ ವಿವೇಕಾನಂದರು ಜಗತ್ತಿಗೆ ತಿಳಿಸಿಕೊಟ್ಟಿದ್ದರು. ಎಲ್ಲಿಯವರೆಗೆ ಮಠ-ಮಂದಿರಗಳು ಇರುತ್ತವೆಯೋ ಅಲ್ಲಿಯವರೆಗೂ ಈ ದೇಶ ಸುಭದ್ರವಾಗಿರುತ್ತದೆ. ಸಮಾಜಕ್ಕೆ ಮಠ-ಮಂದಿಗಳ ಕೊಡುಗೆ ಅನನ್ಯವಾಗಿದೆ. ಇಂತಹ ಮಠ-ಮಂದಿರಗಳ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸಬೇಕು. ಶ್ರೀ ಕ್ಷೇತ್ರದ ಸಿದ್ದಲಿಂಗಸ್ವಾಮೀಜಿಯವರು ಮಠದ ಬೆಳವಣಿಗೆಗೆ ಹೆಚ್ಚಿನ ಶ್ರಮ ವಹಿಸಿದ್ದು, ಅಲ್ಲದೆ ಶಿಕಾರಿಪುರದ ಮಠದ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಾರೆ. ಶ್ರೀಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
    ತಾವರೆಕೆರೆ ಶಿಲಾಮಠ ಹಾಗು ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಶ್ರೀ ಗುರು ಹಾಲಸ್ವಾಮಿ ಮಠದ ಶ್ರೀ ಗುರು ಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗ ಶ್ರೀ ಬಸವ ಕೇಂದ್ರ ಹಾಗು ಚಿಕ್ಕಮಗಳೂರು ಬಸವ ಮಂದಿರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ. ಶ್ರೀ ಬಸವ ಜಯಚಂದ್ರ ಸ್ವಾಮೀಜಿ, ತಾವರೆಕೆರೆ ಶ್ರೀ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಮತ್ತು ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ಕೈಗಾರಿಕೋದ್ಯಮಿ ಬಿ.ಕೆ ನಂಜುಂಡಶೆಟ್ಟರ್, ನಿವೃತ್ತ ಐಎಎಸ್ ಅಧಿಕಾರಿ ಎಸ್. ದಯಾಶಂಕರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ. ಶ್ರೀಕಾಂತ್, ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ ವೀರಭದ್ರಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ ಯೋಗೇಶ್ ಉಪಸ್ಥಿತರಿದ್ದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಸಮಾರಂಭ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಡೈರಿ ಆಯುವೇರ್ದಿಕ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಹಿರೇಮಠ್ ಸ್ವಾಗತಿಸಿದರು. ಸಮನ್ವಯ ಕಾಶಿ ನಿರೂಪಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಮಂಗೋಟೆ ರುದ್ರೇಶ್, ಜಯಕರ್ನಾಟಕ ಸಂಘಟನೆಯ ತ್ಯಾಗರಾಜ್, ಗ್ರಾ.ಪಂ. ಮಾಜಿ ಸದಸ್ಯ ಡಿ.ಟಿ ಶಶಿಕುಮಾರ್, ತಾವರಘಟ್ಟ, ಸಿಂಗನಮನೆ ಸೇರಿದಂತೆ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗು ಗ್ರಾಮಸ್ಥರು, ರಾಜ್ಯದ ವಿವಿಧೆಡೆಗಳಿಂದ ನೂರಾರು ಭಾಗವಹಿಸಿದ್ದರು.  


ಭದ್ರಾವತಿ ತಾಲೂಕಿನ ಸುಕ್ಷೇತ್ರ ಶೀ ಶೀಲಸಂಪಾದನಾಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಹಾ ತಪಸ್ವಿ ಶ್ರೀ ಸಿದ್ದಲಿಂಗಮಹಾಸ್ವಾಮೀಜಿಯವರ ೨೩ ತಿಂಗಳ ತಪೋನುಷ್ಠಾನ ಸಮಾರೋಪದಲ್ಲಿ ತುಮಕೂರು ಸುಕ್ಷೇತ್ರ ಶ್ರೀ ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ಶ್ರೀಗಳಿಗೆ ಗೌರವ ಸಮರ್ಪನೆ ಸಲ್ಲಿಸಿದರು.

No comments:

Post a Comment