ಅನುಸುಧಾ ಮೋಹನ್ ಪಳನಿ ಅಧ್ಯಕ್ಷೆ ಬಹುತೇಕ ಖಚಿತ
ಅನುಸುಧಾ ಮೋಹನ್
ಭದ್ರಾವತಿ, ಸೆ. ೨೦: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸೆ. ೨೩ರಂದು ಚುನಾವಣೆ ನಡೆಯಲಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾದ ಸ್ಥಾನಕ್ಕೆ ವಾರ್ಡ್ ನಂ.೧೩ರ ಸದಸ್ಯೆ ಅನುಸುಧಾ ಮೋಹನ್ ಪಳನಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಮೀಸಲಾತಿಯ ಮೊದಲ ೩೦ ತಿಂಗಳ ಅವಧಿಯನ್ನು ಆಂತರಿಕವಾಗಿ ಹಂಚಿಕೆ ಮಾಡಿಕೊಂಡಿದ್ದು, ಅದರಂತೆ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನದ ಮೊದಲ ೧೦ ತಿಂಗಳು ವಾರ್ಡ್ ನಂ.೨ರ ಗೀತಾರಾಜ್‌ಕುಮಾರ್ ಅಧಿಕಾರ ನಡೆಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ೧೦ ತಿಂಗಳ ೨ನೇ ಅವಧಿಗೆ ಸೆ.೨೩ರಂದು ಚುನಾವಣೆ ನಡೆಯಲಿದೆ.
ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.೧೩ರ ಸದಸ್ಯೆ ಅನುಸುಧಾ ಮೋಹನ್ ಪಳನಿ, ವಾರ್ಡ್ ನಂ. ೩೪ರ ಲತಾ ಚಂದ್ರಶೇಖರ್ ಹಾಗು ವಾರ್ಡ್ ನಂ.೩೫ರ ಶೃತಿ ವಸಂತ್ ಮೂರು ಮಂದಿ ಪೈಪೋಟಿಗೆ ಮುಂದಾಗಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ನಿರ್ಧಾರವೇ ಅಂತಿಮವಾಗಿದ್ದು, ಅನುಸುಧಾ ಮೋಹನ್ ಪಳನಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ನಗರಸಭೆಯಲ್ಲಿ ಕಾಂಗ್ರೆಸ್-೧೮, ಜೆಡಿಎಸ್-೧೨, ಬಿಜೆಪಿ-೦೪ ಮತ್ತು ಪಕ್ಷೇತರ-೦೧ ಸ್ಥಾನ ಹೊಂದಿದೆ. ಉಳಿದಂತೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಚನ್ನಪ್ಪ ಮುಂದುವರೆಯಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಜೀನಾಮೆ ಪತ್ರ:
ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ವಾರ್ಡ್ ನಂ.೩೫ರ ಸದಸ್ಯೆ ಶೃತಿ ವಸಂತ್ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶೃತಿ ವಸಂತ್ ಅವರು ಸೆ.೧೨ರಂದು ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿರುವ ಪತ್ರ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ವ್ಯಕ್ತವಾಗಿಲ್ಲ.
ಸೆ.೨೩ರಂದು ಚುನಾವಣೆ :
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸೆ.೨೩ರಂದು ಚುನಾವಣೆ ನಡೆಯಲಿದ್ದು, ಉಪವಿಭಾಗಾಧಿಕಾರಿ ಎಸ್.ಬಿ ದೊಡ್ಡಗೌಡರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ ೧ ಗಂಟೆಗೆ ಪರಿಶೀಲನೆ, ೧.೧೫ರ ವರೆಗೆ ನಾಮಪತ್ರ ಹಿಂಪಡೆಯಲು ಕಾಲಾವಕಾಶ, ಚುನಾವಣೆ ಅಗತ್ಯವಿದ್ದಲ್ಲಿ ೧.೩೦ಕ್ಕೆ ನಡೆಯಲಿದೆ.
No comments:
Post a Comment