Tuesday, April 18, 2023

ಅಪ್ಪಾಜಿಯವರ ಅಭಿವೃದ್ಧಿ ಕಾರ್ಯಗಳ ಮುಂದುವರೆದ ಭಾಗ ನಾನು : ಶಾರದ ಅಪ್ಪಾಜಿ

ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದು, ಗೆಲುವು ಖಚಿತ

ಭದ್ರಾವತಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ ನಂತರ ಶಾರದ ಅಪ್ಪಾಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಏ. ೧೮ : ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿರುವ ಎಂ.ಜೆ ಅಪ್ಪಾಜಿಯವರ ದಾರಿಯಲ್ಲಿ ನಾನು ಸಹ ಮುನ್ನಡೆಯುತ್ತೇನೆ. ಅವರ ಅಭಿವೃದ್ಧಿ ಕಾರ್ಯಗಳ ಮುಂದುವರೆದ ಭಾಗವಾಗಿದ್ದೇನೆಂದು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಹೇಳಿದರು.
    ಅವರು ಮಂಗಳವಾರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಕ್ಷೇತ್ರದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಜಾರಿಗೆ ತಂದಿರುವ ಜನಪರ ಯೋಜನೆಗಳು ಹಾಗು ಕ್ಷೇತ್ರದಲ್ಲಿ ಎಂ.ಜೆ ಅಪ್ಪಾಜಿಯವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತಯಾಚನೆ ನಡೆಸಲಾಗುತ್ತಿದೆ. ಅಪ್ಪಾಜಿಯವರು ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿರದೆ ಎಲ್ಲರ ಪರವಾಗಿದ್ದರು. ಅವರ ದಾರಿಯಲ್ಲಿ ನಾನು ಸಹ ಸಾಗುತ್ತಿದ್ದೇನೆ ಎಂದರು.
    ಮುಂದಿನ ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ಜೊತೆಗೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತ್ಯೇಕವಾಗಿ ಪ್ರಣಾಳಿಕೆ ಸಹ ಬಿಡುಗಡೆಗೊಳಿಸಲಾಗುವುದು. ಕ್ಷೇತ್ರದಲ್ಲಿ ಮುಖ್ಯವಾಗಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಉನ್ನತಮಟ್ಟದ ಚಿಕಿತ್ಸೆಗೆ ಅನುಕೂಲವಾಗುವಂತೆ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು. ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವುದು ಸೇರಿದಂತೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಭರವಸೆ ಹೊಂದಿದ್ದೇನೆ. ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದು, ನಾನು ಗೆಲ್ಲುವ ವಿಶ್ವಾಸ ಹೊಂದಿದ್ದೇನೆ ಎಂದರು.  
    ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಕ್ಷೇತ್ರದ ಮತದಾರರು ಅಪ್ಪಾಜಿಯವರನ್ನು ೩ ಬಾರಿ ಆಯ್ಕೆ ಮಾಡಿದ್ದಾರೆ. ಇದೀಗ ಶಾರದ ಅಪ್ಪಾಜಿಯವರನ್ನು ಸಹ ಬೆಂಬಲಿಸುವಂತೆ ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್, ಪ್ರಮುಖರಾದ ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಕರಿಯಪ್ಪ, ಡಿ.ಟಿ ಶ್ರೀಧರ್, ಮೈಲಾರಪ್ಪ, ನಂಜುಂಡೇಗೌಡ, ತಿಮ್ಮೇಗೌಡ, ಅಮೋಸ್, ಮಧುಸೂದನ್, ಮುರ್ತುಜಾಖಾನ್, ಲೋಕೇಶ್ವರ್‌ರಾವ್, ಎನ್. ರಾಮಕೃಷ್ಣ, ಧರ್ಮರಾಜ್, ಎನ್. ಕೃಷ್ಣಪ್ಪ, ನಗರಸಭಾ ಸದಸ್ಯರು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
    ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ :
    ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ನಿರ್ದೇಶಕ, ತರಳಬಾಳು ಯುವ ವೇದಿಕೆ ಅಧ್ಯಕ್ಷ ಎಚ್.ಎಸ್ ಸಂಜೀವಕುಮಾರ್, ಗ್ರಾಮಾಂತರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಝಡ್.ಪಿ ತಬ್ರೇಸ್ ಖಾನ್ ಶಾರದ ಅಪ್ಪಾಜಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

No comments:

Post a Comment