ಪ್ರಕಟಣೆ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಸಂಸದ ಬಿ.ವೈ ರಾಘವೇಂದ್ರ ಕೃತಜ್ಞತೆ
ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.
ಭದ್ರಾವತಿ, ಆ. ೧ : ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವುದು, ಅಗತ್ಯವಿರುವ ಬಂಡವಾಳ ತೊಡಗಿಸುವುದು ಹಾಗು ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಸುಮಾರು ೭ ತಿಂಗಳಿನಿಂದ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಇದೀಗ ಒಂದು ಹಂತದಲ್ಲಿ ಫಲ ಲಭಿಸಿದೆ. ಉದ್ಯೋಗ ಕಡಿತದಿಂದ ಸಂಕಷ್ಟಕ್ಕೆ ಒಳಗಾಗಿರುವ ಗುತ್ತಿಗೆ ಕಾರ್ಮಿಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರ ನೀತಿ ಆಯೋಗದ ನಿರ್ದೇಶನದ ಮೇರೆಗೆ ವಿಐಎಸ್‌ಎಲ್ ಕಾರ್ಖಾನೆಯನ್ನು ಬಂಡವಾಳ ಹಿಂಪಡೆಯುವ ಕಾರ್ಖಾನೆಗಳ ಸಾಲಿನಲ್ಲಿ ಸೇರ್ಪಡೆಗೊಳಿಸಿ ಖಾಸಗೀಕರಣಗೊಳಿಸಲು ಮುಂದಾಗಿತ್ತು. ಆದರೆ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಬಂಡವಾಳಶಾಹಿಗಳು ಮುಂದೆಬಾರದ ಹಿನ್ನಲೆಯಲ್ಲಿ ಕಳೆದ ಸುಮಾರು ೭ ತಿಂಗಳ ಹಿಂದೆ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ತೀರ್ಮಾನ ಕೈಗೊಳ್ಳಲಾಗಿತ್ತು. ಇದರ ವಿರುದ್ಧ ಗುತ್ತಿಗೆ ಕಾರ್ಮಿಕ ಸಂಘಟನೆಗಳು ಕಾರ್ಖಾನೆ ಮುಂಭಾಗ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಇಂದಿಗೂ ಮುಂದುವರೆದಿದೆ.
ಎದೆಗುಂದದೆ ಒಗ್ಗಟ್ಟಿನ ಹೋರಾಟ :
ಸುಮಾರು ೭ ತಿಂಗಳು ಕಳೆದರೂ ಸಹ ಗುತ್ತಿಗೆ ಕಾರ್ಮಿಕರು ಧೈರ್ಯ ಕಳೆದುಕೊಳ್ಳದೆ ಒಗ್ಗಟ್ಟಿನಿಂದ ಹೋರಾಟ ಮುನ್ನಡೆಸುತ್ತಿದ್ದು, ಬೆಂಗಳೂರು ವಿಧಾನಸೌಧ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿವರೆಗೂ ಪಾದಯಾತ್ರೆ, ಬೈಕ್ ರ‍್ಯಾಲಿ, ದೆಹಲಿಯಲ್ಲಿ ಹೋರಾಟ, ಮೈಸೂರು ಮಹಾರಾಜರ ವಂಶಸ್ಥರ ಗಮನ ಸೆಳೆಯಲು ಮೈಸೂರಿನಲ್ಲಿ ಹೋರಾಟ, ಭದ್ರಾವತಿ ಬಂದ್, ಬೃಹತ್ ಜಾಥಾ, ರಸ್ತೆ ತಡೆ, ಸಹಿ ಅಭಿಯಾನ, ಪತ್ರ ಚಳುವಳಿ ಸೇರಿದಂತೆ ಹಲವು ಬಗೆಯ ಹೋರಾಟಗಳನ್ನು ಕೈಗೊಳ್ಳಲಾಗಿದೆ.
ಹೋರಾಟದ ನಡುವೆ ರಾಜ್ಯದ ಪ್ರಮುಖ ಮಠಗಳಿಗೆ ತೆರಳಿ ಮಠಾಧೀಶರುಗಳಿಗೆ, ಮಾಜಿ ಪ್ರಧಾನಿ, ಕೇಂದ್ರ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳಿಗೆ ಮನವಿ ಸಲ್ಲಿಸಿ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಲಾಗಿದೆ.
ವಿವಿಧ ಧರ್ಮಗಳ ಧರ್ಮಗುರುಗಳು, ಮಠಾಧೀಶರು, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಆಗ್ರಹಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಕೈಜೋಡಿಸಿವೆ. ಆದರೂ ಸಹ ಕೇಂದ್ರ ಸರ್ಕಾರವಾಗಲಿ, ಉಕ್ಕು ಪ್ರಾಧಿಕಾರವಾಗಲಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸಿರಲಿಲ್ಲ. ಈ ನಡುವೆ ಕಾರ್ಖಾನೆಯಲ್ಲಿರುವ ಘಟಕಗಳು ಒಂದಾದ ನಂತರ ಒಂದರಂತೆ ಉತ್ಪಾದನೆ ಸ್ಥಗಿತಗೊಳಿಸುವ ಮೂಲಕ ಕಾರ್ಖಾನೆ ಸಂಪೂರ್ಣವಾಗಿ ಮುಚ್ಚುವ ಭೀತಿ ಎದುರಾಗಿತ್ತು.
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಬಾರ್ ಮಿಲ್ ಘಟಕ ಆ.೧೦ರಿಂದ ಪುನಃ ಕಾರ್ಯಾರಂಭಗೊಳಿಸುವ ಸಂಬಂಧ ಘಟಕದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಪ್ರತಿ ವ್ಯಾಪಕವಾಗಿ ಹರಿದಾಡುತ್ತಿದೆ.
ಆ.೧೦ರಿಂದ ಬಾರ್‌ಮಿಲ್ ಘಟಕ ಆರಂಭ:
ಇದೀಗ ಮುಚ್ಚಲ್ಪಟ್ಟರುವ ಬಾರ್‌ಮಿಲ್ ಘಟಕ ಆರಂಭಗೊಳ್ಳುತ್ತಿದೆ. ಆ.೧೦ರಿಂದ ಪುನಃ ಕಾರ್ಯಾರಂಭಗೊಳಿಸುವ ಸಂಬಂಧ ಘಟಕದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಪ್ರತಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದರಿಂದಾಗಿ ಗುತ್ತಿಗೆ ಕಾರ್ಮಿಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಕೆಲವು ವರ್ಷಗಳಿಂದ ಗುತ್ತಿಗೆ ಕಾರ್ಮಿಕರಿಗೆ ತಿಂಗಳು ಪೂರ್ತಿ ಕೆಲಸ ಲಭಿಸುತ್ತಿಲ್ಲ. ಇತ್ತೀಚೆಗೆ ಕೇವಲ ೧೩ ದಿನ ಮಾತ್ರ ಕೆಲಸ ಲಭಿಸುತ್ತಿದ್ದು, ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಸಂಸದ ಬಿ.ವೈ ರಾಘವೇಂದ್ರ ಕೃತಜ್ಞತೆ :
ಈ ಕುರಿತು ಸಂಸದ ಬಿ.ವೈ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಮತ್ತೆ ಶುರುವಾಗುತ್ತಿದೆ ಭದ್ರಾವತಿಯ ಸುವರ್ಣಯುಗ!, ಮತ್ತೆ ಫಳಫಳಿಸಲಿದೆ ಕಪ್ಪು ಚಿನ್ನ!, ವಿಐಎಸ್‌ಎಲ್ ಮೈಕೊಡವಿ ಮೇಲೇಳುತ್ತಿದೆ!' ಎಂಬ ತಲೆ ಬರಹದೊಂದಿಗೆ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಉತ್ಪಾದನೆ ಶುರುಮಾಡಲು ಸೈಲ್ ಮ್ಯಾನೇಜ್ಮೆಂಟ್ ಒಪ್ಪಿಕೊಂಡಿದೆ. ಇದೇ ತಿಂಗಳ ೧೦ಕ್ಕೆ ಬಾರ್ ಮಿಲ್ ಶುರುವಾಗಿ, ಅದಾದ ಕೆಲದಿನದಲ್ಲೇ ಪೂರ್ಣ ಪುನರಾರಂಭ!. ಸವಾಲುಗಳನ್ನೆಲ್ಲಾ ಎದುರಿಸಿ ಗೆದ್ದ ಹೆಮ್ಮೆ ಶಿವಮೊಗ್ಗ ಜಿಲ್ಲೆ ಹಾಗೂ ಭದ್ರಾವತಿ ನಗರದ ಜನರದ್ದು, ಭರವಸೆ ಕಳೆದುಕೊಳ್ಳದ ನೌಕರ ಸಮುದಾಯದ್ದು. ಇದಕ್ಕೆ ಕಾರಣರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
No comments:
Post a Comment