Saturday, October 28, 2023

ವಿಐಎಸ್‌ಎಲ್ ಶತಮಾನೋತ್ಸವ : ಸರ್ಕಾರದ ಹೆಸರು ದುರುಪಯೋಗ, ಹಣ ವಸೂಲಿ ಕಾರ್ಯಕ್ರಮ

ವಿಐಎಸ್‌ಎಲ್ ಉಳಿಸಿ ಭದ್ರಾವತಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಆರೋಪ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಶತಮಾನೋತ್ಸವ ಸಂಭ್ರಮಾಚರಣೆ ವಿರುದ್ಧ ವಿಐಎಸ್‌ಎಲ್ ಉಳಿಸಿ ಭದ್ರಾವತಿ ಉಳಿಸಿ ಹೋರಾಟ ಸಮಿತಿಯಿಂದ ಶನಿವಾರ ಪತ್ರಿಕಾಗೋಷ್ಠಿ ನಡೆಯಿತು.
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವ ಆಚರಣೆಯಲ್ಲಿ ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣರವರು ತಮ್ಮ ಹೆಸರು ಹಾಗು ರಾಜ್ಯ ಸರ್ಕಾರದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಕ್ಷೇತ್ರದ ಜನರು ಎಚ್ಚೆತ್ತುಕೊಳ್ಳಬೇಕೆಂದು ವಿಐಎಸ್‌ಎಲ್ ಉಳಿಸಿ ಭದ್ರಾವತಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಆರೋಪಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ಮಹಾರಾಜರಾದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ದೂರದೃಷ್ಟಿ ಹಾಗು ಪರಿಶ್ರಮದ ಫಲವಾಗಿ ಕ್ಷೇತ್ರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಸ್ಥಾಪನೆಗೊಂಡಿವೆ. ಇದರ ಪರಿಣಾಮ ಭದ್ರಾವತಿಗೆ ಉಕ್ಕಿನ ನಗರ, ಕಾಗದನಗರವೆಂಬ ಹೆಸರು ಬಂದಿತ್ತು.  ಕಾಲಕ್ರಮೇಣ ಎಂಪಿಎಂ ಕಾರ್ಖಾನೆ ಮುಚ್ಚಿ ಕಾರ್ಮಿಕರ ಈಗಾಗಲೇ ಬೀದಿ ಪಾಲಾಗಿದ್ದು, ವಿಐಎಸ್‌ಎಲ್ ಕಾರ್ಖಾನೆ ನಷ್ಟದಲ್ಲಿದ್ದು, ಗುತ್ತಿಗೆ ಕಾರ್ಮಿಕರು ತಿಂಗಳಿಗೆ ಕೇವಲ ೧೩ ದಿನ ಕೆಲಸ ಮಾಡುವಂತಾಗಿದೆ ಎಂದರು.
    ಕ್ಷೇತ್ರವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇಲ್ಲಿನ ವ್ಯಾಪಾರಸ್ಥರು ವ್ಯಾಪಾರವಿಲ್ಲದೇ ನಷ್ಟ ಅನುಭವಿಸುತ್ತಿದ್ದಾರೆ. ವಿಐಎಸ್‌ಎಲ್ ಕಾರ್ಮಿಕರು ನಿವೃತ್ತಿ ಹೊಂದಿ ಕಾರ್ಖಾನೆಯ ವಸತಿ ಗೃಹಗಳನ್ನು ಖಾಲಿ ಮಾಡಿರುವ ಪರಿಣಾಮ ಊರೇ ಸ್ಮಶಾನದಂತಾಗಿದೆ. ಕೆಲಸವಿಲ್ಲದೆ ಬೆಂಗಳೂರಿನತ್ತ ಗುಳೆ ಹೋಗುತ್ತಿದ್ದಾರೆ. ಈ ಬಾರಿ ಮಳೆ ಕೊರತೆಯಿಂದಾಗಿ ಕ್ಷೇತ್ರವು ಬರಪೀಡಿತವಾಗಿದ್ದು, ಭದ್ರಾ ಜಲಾಶಯದಲ್ಲಿ ನೀರು ಇಲ್ಲದ ಪರಿಣಾಮ ಭತ್ತ, ಅಡಕೆ ಹಾಗು ತರಕಾರಿ ಬೆಳೆಗಳಿಗೆ ನೀರು ನಿಲ್ಲಿಸಲಾಗಿದೆ. ಇಂತಹ ಸಂದರ್ಭದಲ್ಲಿ ವಿಐಎಸ್‌ಎಲ್‌ಗೆ ೧೦೦ ವರ್ಷ ತುಂಬಿದೆ ಎಂದು ಸಂಭ್ರಮಾಚರಣೆ ನಡೆಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
    ಚಲನಚಿತ್ರ ನಟ ಎಸ್. ದೊಡ್ಡಣ್ಣರವರು ಕ್ಷೇತ್ರದಲ್ಲಿರುವ ಪ್ರಗತಿಪರ ಸಂಘಟನೆಗಳು, ಕಾರ್ಮಿಕ, ದಲಿತ, ಧಾರ್ಮಿಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಹಾಗು ರೈತ ಸಂಘಟನೆಗಳನ್ನು ಹೊರಗಿಟ್ಟು ತಮ್ಮ ಮೂಗಿನ ನೇರಕ್ಕೆ ಶತಮಾನೋತ್ಸವ ಸಮಿತಿ ರಚಿಸಿಕೊಂಡು ತಾವೇ ಅಧ್ಯಕ್ಷರಾಗಿದ್ದು, ಎಂ.ವಿ ರೇವಣ್ಣಸಿದ್ದಯ್ಯ ಎಂಬುವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗು ಕೆಲವು ಸಚಿವರು ಹಾಗು ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಹಲವಾರು ಉದ್ಯಮಿದಾರರು, ಗುತ್ತಿಗೆದಾರರು, ಬಿಲ್ಡರ್‌ಗಳನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ ಅಪಾರ ಪ್ರಮಾಣದಲ್ಲಿ ದೇಣಿಗೆ ಪಡೆದಿದ್ದಾರೆಂಬ ಮಾಹಿತಿ ಜನರಿಂದ ಕೇಳಿ ಬರುತ್ತಿದೆ ಎಂದರು.
    ಈ ಶತಮಾನೋತ್ಸವ ಆಚರಣೆಯಿಂದ ನಮ್ಮ ಊರಿಗಾಗಲೀ, ವಿಐಎಸ್‌ಎಲ್ ಕಾರ್ಖಾನೆಗಾಗಲೀ ಯಾವುದೇ ಒಳ್ಳೆಯ ಹೆಸರು ಬರುವುದಿಲ್ಲ. ಇದು ಕೇವಲ ಹಣ ವಸೂಲಿ ಕಾರ್ಯಕ್ರಮವಲ್ಲದೇ ಬೇರೆನೂ ಅಲ್ಲ ಎಂದು ಆರೋಪಿಸಿ, ಈ ಹಿನ್ನಲೆಯಲ್ಲಿ ಈ ಸಂಭ್ರಮಾಚರಣೆಯನ್ನು ಜನರು ಎಚ್ಚರಿಕೆಯಿಂದ ಗಮನಿಸಬೇಕೆಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಮುಖಂಡರಾದ ನಗರಸಭೆ ಮಾಜಿ ಸದಸ್ಯ ಮಹೇಶ್, ಪ್ರೇಮ್ ಕುಮಾರ್, ವೆಂಕಟೇಶ್, ಚಂದ್ರಶೇಖರ್, ದೇವರಾಜ್, ಭಾಸ್ಕರ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment