Monday, June 15, 2020

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ೪೫೫೮ ವಿದ್ಯಾರ್ಥಿಗಳು, ೧೫ ಪರೀಕ್ಷಾ ಕೇಂದ್ರಗಳು

ಪೂರ್ವ ಸಿದ್ದತೆ ಕಾರ್ಯಾಗಾರದಲ್ಲಿ ಶಿಕ್ಷಣ ಇಲಾಖೆ ಮಾಹಿತಿ 

ಭದ್ರಾವತಿಯಲ್ಲಿ ತಹಸೀಲ್ದಾರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂಬಂಧ ಮಾಹಿತಿ ಕಾರ್ಯಾಗಾರ ನಡೆಯಿತು. 
ಭದ್ರಾವತಿ, ಜೂ. ೧೫: ತಾಲೂಕಿನಲ್ಲಿ ಈ ಬಾರಿ ಒಟ್ಟು ೧೫  ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು ೪೫೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಸೋಮವಾರ ಪರೀಕ್ಷೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು. 
ಆರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂಬಂಧ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪರೀಕ್ಷೆಗೆ ಹಾಜರಾಜುವ ವಿದ್ಯಾರ್ಥಿಗಳು ಆರೋಗ್ಯ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಆನ್‌ಲೈನ್ ಮೂಲಕ ಮಾಹಿತಿ ನೀಡಿದರು. 
ನಂತರ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್,  ತಾಲೂಕಿನಲ್ಲಿ ನ್ಯೂಟೌನ್ ಸರ್ಕಾರಿ ರಜತ ಮಹೋತ್ಸವ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕಾಗದನಗರದ ಪೇಪರ್‌ಟೌನ್ ಪ್ರೌಢಶಾಲೆ, ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಳೆಹೊನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ, ಹಳೇನಗರದ ಜವಹರಲಾಲ್ ನೆಹರು ಆಂಗ್ಲ ಮಾದ್ಯಮ ಪ್ರೌಢ ಶಾಲೆ, ಆನವೇರಿ ಸರ್ಕಾರಿ ಪ್ರೌಢಶಾಲೆ, ಕಲ್ಲಿಹಾಳ್ ಸರ್ಕಾರಿ ಪದವಿಪೂರ್ವ ಕಾಲೇಜು, ಬಿ.ಆರ್ ಪ್ರಾಜೆಕ್ಟ್ ನ್ಯಾಷನಲ್ ಕಾಂಪೋಸಿಟ್ ಜ್ಯೂನಿಯರ್ ಕಾಲೇಜು, ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಅಂತರಗಂಗೆ ಕರ್ನಾಟಕ ಪಬ್ಲಿಕ್ ಸ್ಕೂಲ್, ಹೊಳೆಹೊನ್ನೂರು ಸೇಂಟ್ ಮೇರಿಸ್ ಆಂಗ್ಲ ಮಾದ್ಯಮ ಪ್ರೌಢಶಾಲೆ ಮತ್ತು ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು ೧೫ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಹೆಚ್ಚುವರಿಯಾಗಿ ಹಳೇನಗರ ಹೊಸಸೇತುವೆ ರಸ್ತೆಯ ವಿಶ್ವೇಶ್ವರಾಯ ಶಿಕ್ಷಣ ಸಂಸ್ಥೆ, ನ್ಯೂಟೌನ್ ಪ್ರಶಾಂತಿ ವಿದ್ಯಾ ಸಂಸ್ಥೆ ಮತ್ತು ಬಿ.ಎಚ್ ರಸ್ತೆ ಲೋಯರ್ ಹುತ್ತಾ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದರು. 
ತಾಲೂಕಿನಲ್ಲಿ ಈ ಬಾರಿ ಒಟ್ಟು ೪೫೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಈ ಪೈಕಿ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ೩೭೭೮, ವಲಸೆ ವಿದ್ಯಾರ್ಥಿಗಳು ೭೭ ಹಾಗೂ ಉಳಿದಂತೆ ೭೦೩ ಹಳೇ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ೧೫ ಪರೀಕ್ಷಾ ಕೇಂದ್ರಗಳಲ್ಲಿ ೧೫ ಮಂದಿ ಅಧೀಕ್ಷಕರು, ೪ ಮಂದಿ ಹೆಚ್ಚುವರಿ ಅಧೀಕ್ಷಕರು, ೧೫ ಮಂದಿ ಕಸ್ಟೋಡಿಯನ್‌ಗಳು, ಹೆಚ್ಚುವರಿ ೪ ಮಂದಿ ಕಸ್ಟೋಡಿಯನ್‌ಗಳು, ೧೫ ಮಂದಿ ಮೊಬೈಲ್ ಸ್ವಾಧೀನಾಧಿಕಾರಿಗಳು, ೪ ಮಂದಿ ಹೆಚ್ಚುವರಿ ಸ್ವಾಧೀನಾಧಿಕಾರಿಗಳು ಹಾಗೂ ೧೫ ಮಂದಿ ಪರೀಕ್ಷಾ ಕೇಂದ್ರಗಳ ಉಸ್ತುವಾರಿ ಅಧಿಕಾರಿಗಳು ಸೇರಿದಂತೆ ಒಟ್ಟು ೭೨ಯನ್ನು ನಿಯೋಜಿಸಲಾಗಿದೆ ಎಂದರು. 
ಉಳಿದಂತೆ ಪರೀಕ್ಷಾ ಸಮಯದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಆರೋಗ್ಯ ರಕ್ಷಣೆಗೆ ಸಂಬಂಧ ಎಚ್ಚರವಹಿಸಬೇಕಾದ ಕ್ರಮಗಳು, ಪೂರ್ವ ಸಿದ್ದತೆಗಳ ಕುರಿತು ವಿವರಿಸಿದರು. 
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಪೊಲೀಸ್ ಉಪಾಧೀಕ್ಷಕ ಸುಧಾಕರನಾಯ್ಕ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್, ಶಿರಸ್ತೆದಾರ್ ಮಂಜಾನಾಯ್ಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಚಿದಾನಂದ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ಶಿಕ್ಷಣ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿರರು ಉಪಸ್ಥಿತರಿದ್ದರು. 



Sunday, June 14, 2020

ರೈಲ್ವೆ ಮೇಲ್ಸೇತುವೆ ಮೇಲೆ ವೀರ ಸಾವರ್ಕರ್ ಹೆಸರು : ಬಜರಂಗ ದಳ ಕಾರ್ಯಕರ್ತರ ಒತ್ತಾಯ

ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಮೇಲೆ ಬಜರಂಗದಳ ಕಾರ್ಯಕರ್ತರು ವೀರಸಾವರ್ಕರ್ ಹೆಸರು ಬರೆಯುವ ಮೂಲಕ ಸೇತುವೆಗೆ ನಾಮಕರಣಗೊಳಿಸಲು ಒತ್ತಾಯಿಸಿರುವುದು. 
ಭದ್ರಾವತಿ, ಜೂ. ೧೪: ನಗರದ ತರೀಕೆರೆ ರಸ್ತೆಯಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆಗೆ ಇದೀಗ ವೀರ ಸಾವರ್ಕರ್ ಹೆಸರಿಡಬೇಕೆಂದು ಸೇತುವೆ ಮೇಲೆ ಹೆಸರು ಬರೆಯಲಾಗಿದ್ದು, ಬಜರಂಗ ದಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹಂಚಿ ಕೊಂಡಿದ್ದಾರೆ. 
ಈಗಾಗಲೇ ರಾಜ್ಯದೆಲ್ಲೆಡೆ ವೀರ ಸಾವರ್ಕರ್ ಹೆಸರಿಡುವ ಸಂಬಂಧ ವಿವಾದಗಳು ತಲೆ ತೋರುತ್ತಿದ್ದು, ಈ ನಡುವೆ ಇಲ್ಲಿನ ರೈಲ್ವೆ ಮೇಲ್ಸೇತುವೆ ಮೇಲೆ ವೀರ ಸಾವರ್ಕರ್ ಹೆಸರು ಬರೆಯುವ ಮೂಲಕ ಮತ್ತಷ್ಟು ವಿವಾದ ಸೃಷ್ಟಿಯಾಗಿದೆ. ಈ ಸೇತುವೆ ಇದುವರೆಗೂ ಉದ್ಘಾಟಣೆಗೊಂಡಿಲ್ಲ. ಯಾವುದೇ ಹೆಸರನ್ನು ಸಹ ನಾಮಕರಣ ಮಾಡಿಲ್ಲ. 
ಮಹಾತ್ಮಗಾಂಧಿ ವೃತ್ತದಿಂದ ಶಿವಾನಿ ವೃತ್ತದವರೆಗೂ ತರೀಕೆರೆ ರಸ್ತೆ ಬದಲಾಗಿ ಮಹಾತ್ಮ ಗಾಂಧಿ ರಸ್ತೆ ಎಂದು ನಾಮಕರಣ ಮಾಡಬೇಕೆಂದು ನಗರಸಭೆಗೆ ಒತ್ತಾಯಿಸಲಾಗಿತ್ತು. ಆದರೆ ಈ ಹೆಸರು ಇಂದಿಗೂ ಚಾಲ್ತಿಗೆ ಬಂದಿಲ್ಲ. ಇದೀಗ ಸೇತುವೆಗೆ ವೀರ ಸಾವರ್ಕರ್ ಹೆಸರಿಡಬೇಕೆಂದು ಬಜರಂಗದಳ ಕಾರ್ಯಕರ್ತರು ಒತ್ತಾಯಿಸುತ್ತಿರುವುದು ನಗರದಲ್ಲಿ ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ. 

ಪುನಃ ಹೆಚ್ಚಾದ ಬೀದಿ ನಾಯಿಗಳ ಹಾವಳಿ : ೭ ಕುರಿ ಬಲಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ೩೩ನೇ ವಾರ್ಡಿನ ಹುತ್ತಾಕಾಲೋನಿ ಮನೆಯೊಂದಕ್ಕೆ ೫-೬ ನಾಯಿಗಳು ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿದ್ದು, ೭ ಕುರಿಗಳು ಮೃತಪಟ್ಟಿದ್ದು, ೪ ಗಾಯಗೊಂಡಿವೆ. 
ಭದ್ರಾವತಿ, ಜೂ. ೧೪: ಕೆಲವು ತಿಂಗಳುಗಳಿಂದ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಮಕ್ಕಳು, ಮಹಿಳೆಯರು ಒಬ್ಬಂಟಿಯಾಗಿ ತಿರುಗಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. 
ನಗರಸಭಾ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಸುಮಾರು ೧೦-೧೫ ಬೀದಿ ನಾಯಿಗಳು ಒಂದೆಡೆ ಸೇರಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಬೆಳಗಿನ ಜಾವ, ರಾತ್ರಿ ವೇಳೆ ರಸ್ತೆ ಮಧ್ಯ ಭಾಗದಲ್ಲಿಯೇ ಗುಂಪು ಗುಂಪಾಗಿ ಚಲಿಸುತ್ತಿವೆ. ಇದರಿಂದ ಮಕ್ಕಳು, ಮಹಿಳೆಯರು ತಿರುಗಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಭಾನುವಾರ ಬೆಳಗಿನ ಸುಮಾರು ೫-೬ ಬೀದಿ ನಾಯಿಗಳು ನಗರಸಭೆ ವ್ಯಾಪ್ತಿಯ ೩೩ನೇ ವಾರ್ಡಿನ ಹುತ್ತಾಕಾಲೋನಿ ಮನೆಯೊಂದಕ್ಕೆ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿವೆ. ಇದರಿಂದಾಗಿ ೭ ಕುರಿಗಳು ಮೃತಪಟ್ಟಿವೆ. ೪ ಗಾಯಗೊಂಡಿವೆ. ಮೃತಪಟ್ಟ ಕುರಿಗಳನ್ನು ಜೆಸಿಬಿ ಮೂಲಕ ವಿಲೇವಾರಿ ಮಾಡಲಾಯಿತು. 
ಈ ಹಿಂದೆ ಸಹ ಇದೆ ರೀತಿಯ ಪ್ರಕರಣಗಳು ನಡೆದಿದ್ದು, ಅಲ್ಲದೆ ರಸ್ತೆಗಳಲ್ಲಿ ಒಬ್ಬಂಟಿಯಾಗಿ ಸಂಚರಿಸುವ ಮಹಿಳೆಯರು, ಮಕ್ಕಳ ಮೇಲೂ ದಾಳಿ ನಡೆಸಿರುವ ಘಟನೆಗಳು ನಡೆದಿವೆ. ಈ ಹಿಂದೆ ನಗರಸಭೆ ಆಡಳಿತ ನಾಯಿಗಳನ್ನು ಹಿಡಿದು ನಿರ್ಜನ ಪ್ರದೇಶಗಳಿಗೆ ಬಿಡುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಸಹ ಕೈಗೊಂಡಿತ್ತು. ಇದರಿಂದಾಗಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಪುನಃ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ತಕ್ಷಣ ನಗರಸಭೆ ಆಡಳಿತ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ. 

ಅಧಿಕಾರಕ್ಕಾಗಿ ಅರಳಿಕೊಪ್ಪ ಅಧ್ಯಕ್ಷೆಯಿಂದ ದ್ರೋಹ : ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಆರೋಪ

ಮಾಜಿ ಶಾಸಕ ಎಂ.ಜೆ ಅಪ್ಪಾಜಿ 
ಭದ್ರಾವತಿ, ಜೂ. ೧೪: ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಎಂಬುವರು ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರಲಿಲ್ಲ. ಕಳೆದ ಒಂದು ವರ್ಷದ ಹಿಂದೆ ನಮ್ಮ ಬೆಂಬಲ ಕೋರಿ ಬಂದಿದ್ದು, ನಂತರ ಅಧಿಕಾರಕ್ಕಾಗಿ ದ್ರೋಹವೆಸಗಿದ್ದಾರೆಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಆರೋಪಿಸಿದ್ದಾರೆ. 
ಅವರು ಪತ್ರಿಕೆಯೊಂದಿಗೆ ಮಾತನಾಡಿ, ಈಕೆ ಇದೀಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವುದಾಗಿ ತಿಳಿದು ಬಂದಿದೆ. ಹಣ ಬಲದ ಮೇಲೆ ಈಕೆ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಎಂದಿಗೂ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರಲಿಲ್ಲ. ಈಕೆಯ ಅಕ್ರಮಗಳಿಗೆ ನಾನು ಬೆಂಬಲ ನೀಡದ ಕಾರಣ ಇದೀಗ ಜೆಡಿಎಸ್ ಪಕ್ಷ ಬಿಟ್ಟಿರುವುದಾಗಿ ಸುಳ್ಳು ಹೇಳಿಕೊಳ್ಳುತ್ತಿದ್ದು, ಈಕೆ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಇದೀಗ ಪುನಃ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವುದು ಹೊಸದೇನಲ್ಲ. ಈ ಹಿನ್ನಲೆಯಲ್ಲಿ ಹೆಚ್ಚಿನ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದರು. 

Saturday, June 13, 2020

ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ೨ ಮೃತದೇಹ ಪತ್ತೆ

ಭದ್ರಾವತಿ  ಹಳೇನಗರದ ಶಂಕರ ಮಠದ ಬಳಿ ಭದ್ರಾ ನದಿ ಸಮೀಪದಲ್ಲಿ ಶನಿವಾರ ಸಂಜೆ ಎರಡು ಅಪರಿಚಿತ ಮೃತದೇಹಗಳು ಪತ್ತೆಯಾಗಿವೆ. 
ಭದ್ರಾವತಿ, ಜೂ. ೧೩: ಹಳೇನಗರದ ಶಂಕರ ಮಠದ ಬಳಿ ಭದ್ರಾ ನದಿ ಸಮೀಪದಲ್ಲಿ ಶನಿವಾರ ಸಂಜೆ ಎರಡು ಅಪರಿಚಿತ ಮೃತದೇಹಗಳು ಪತ್ತೆಯಾಗಿವೆ. 
ನದಿ ದಡದಲ್ಲಿ ನಿರ್ಮಿಸಲಾಗಿರುವ ಕೊಳಚೆ ನೀರು ಶುದ್ಧೀಕರಣ ಘಟಕದ ಒಳಭಾಗದಲ್ಲಿ ಸುಮಾರು ೩೫ ರಿಂದ ೪೦ ವರ್ಷ ವಯಸ್ಸಿನ ಓರ್ವ ಪುರುಷ, ಓರ್ವ ಮಹಿಳೆ ಮೃತದೇಹ ಪತ್ತೆಯಾಗಿದೆ. ನದಿ ದಡದ ದನ, ಕುರಿಗಾಯಿಗಳಿಗೆ ಕೊಳೆತ ಮೃತದೇಹಗಳ ವಾಸನೆ ಬಂದಿದ್ದು, ಈ ಹಿನ್ನಲೆಯಲ್ಲಿ ಒಳಭಾಗ ಪ್ರವೇಶಿಸಿ ಪರಿಶೀಲನೆ ನಡೆಸಿದಾಗ ೨ ಮೃತದೇಹಗಳು ಪತ್ತೆಯಾಗಿವೆ. 
ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರಗೆ ತೆಗೆದಿದ್ದು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಹಳೇನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದು, ಮೃತದೇಹಗಳ ಸುಳಿವು ಇನ್ನು ಪತ್ತೆಯಾಗಿಲ್ಲ. 

ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಜೆಡಿಎಸ್ ಪಕ್ಷ ತೊರೆದು ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಭದ್ರಾವತಿ, ಜೂ. ೧೩:  ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 
ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳ ಅವಧಿ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಇದೀಗ ಗ್ರಾಮೀಣ ಭಾಗದಲ್ಲಿ ಪುನಃ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಗ್ರಾಮೀಣ ಭಾಗದಲ್ಲೂ ಹಾಲಿ-ಮಾಜಿ ಶಾಸಕರ ಪ್ರತಿಷ್ಠೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕಂಡು ಬರುತ್ತಿದ್ದು, ಪ್ರಸ್ತುತ ರಾಜ್ಯ ಸರ್ಕಾರ ಇನ್ನೂ ಚುನಾವಣೆ ಘೋಷಿಸದಿದ್ದರೂ ಸಹ ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಳ್ಳುತ್ತಿವೆ. ಇದಕ್ಕೆ ಪೂರಕವೆಂಬಂತೆ ಪ್ರಮುಖ ರಾಜಕೀಯ ಪಕ್ಷಗಳಿಂದ ಬೇರೆ ಬೇರೆ ಪಕ್ಷಗಳಿಗೆ ವಲಸೆ ಆರಂಭಗೊಂಡಿದೆ.  
ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿರುವ ಮಮತ ಜೆಡಿಎಸ್ ಪಕ್ಷ ತೊರೆದು ಇದೀಗ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 
ಮುಖಂಡರಾದ ಬಿ.ಟಿ ನಾಗರಾಜ್, ಬಾಲಕೃಷ್ಣ, ರುದ್ರೇಶ್ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.  

ಬಿಳಕಿ ಮಠದಲ್ಲಿ ೫೦ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠ ಭದ್ರಾವತಿ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಬಿಡುಗಡೆಯಾದ ೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನಕ್ಕೆ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು. ಶ್ರೀ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. 
ಭದ್ರಾವತಿ, ಜೂ. ೧೩: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠ ತಾಲೂಕಿನ ಬಿಳಕಿ ಹಿರೇಮಠ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಬಿಡುಗಡೆಯಾದ ೫೦ ಲಕ್ಷ ರು. ವೆಚ್ಚದಲ್ಲಿ ಮಠದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದೆ. 
ಸಮುದಾಯ ಭವನ ನಿರ್ಮಾಣಕ್ಕೆ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು. ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. 
ಶಿವಮೊಗ್ಗ ಬಸವೇಶ್ವರ ಸಹಕಾರ ಸಂಘದ ನಿದೆ೯ಶಕ ಬಿ.ಪಿ ಮರುಳೇಶ್,  ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಜಿತೇಂದ್ರ, ಸಿವಿಲ್ ಇಂಜಿನಿಯರ್ ಮಂಜುನಾಥ್, ಮಠದ ವ್ಯವಸ್ಥಾಪಕ ಚಿದಾನಂದ ಸ್ವಾಮಿ, ಬಿ.ಪಿ ಚಂದ್ರಶೇಖರಪ್ಪ, ಜಿ.ಎಸ್ ಸುರೇಶಯ್ಯ, ಎಚ್. ಮಂಜುನಾಥ್, ಆನಂದ ಸ್ವಾಮಿ, ಕೆ.ಆರ್ ಆನಂದ್, ಬಿ.ಎಂ. ರಮೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.