Monday, August 10, 2020

ಮಳೆಗೆ ಮನೆ ಗೋಡೆ ಕುಸಿತ : ದುರಸ್ತಿಗೆ ಮನವಿ


ಭದ್ರಾವತಿ ತಾಲೂಕಿನ ತಾವರೆಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳೇನಹಳ್ಳಿ ಗ್ರಾಮದ ಕೃಷ್ಣನಾಯ್ಕ ಎಂಬುವರ ಮನೆಯ ಗೋಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದು ಬಿದ್ದಿರುವುದು.
ಭದ್ರಾವತಿ, ಆ. ೧೦: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ೪ ದಿನಗಳ ಹಿಂದೆ ತಾಲೂಕಿನ ತಾವರೆಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳೇನಹಳ್ಳಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿರುವ  ಘಟನೆ ನಡೆದಿದೆ.
ಕೃಷ್ಣನಾಯ್ಕ ಎಂಬುವರಿಗೆ ಸೇರಿದ ಮನೆ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಮನೆಯ ಇತರೆ ಗೋಡೆಗಳು ಸಹ ಬೀಳುವ ಹಂತದಲ್ಲಿವೆ. ಮನೆ ಗೋಡೆ ಕುಸಿದಿರುವ ಬಗ್ಗೆ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಗಮನಕ್ಕೆ ತರಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಡ ಕುಟುಂಬದವರು ಅಳಲು ವ್ಯಕ್ತಪಡಿಸಿದ್ದಾರೆ.
ತಕ್ಷಣ ಬಡ ಕುಟುಂಬದವರ ನೆರವಿಗೆ ಧಾವಿಸಿ ಮನೆ ಗೋಡೆ ದುರಸ್ತಿಪಡಿಸುವ ಜೊತೆಗೆ ವಾಸಿಸಲು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.

ರ‍್ಯಾಮ್ಕೋಸ್ ಅರಹತೊಳಲು ಶಾಖೆ ವತಿಯಿಂದ ಕೊರೋನಾ ವಾರಿರ್ಯಸ್‌ಗೆ ಸನ್ಮಾನ

ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ(ರ‍್ಯಾಮ್ಕೋಸ್)ದ ಭದ್ರಾವತಿ ತಾಲೂಕಿನ ಅರಹತೊಳಲು ಕೈಮರ ಶಾಖೆ ವತಿಯಿಂದ ಕೊರೋನಾ ವಾರಿರ್ಯಸ್‌ಗಳಾದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಪ್ರಶಂಸಿ ಪ್ರೋತ್ಸಾಹ ಧನ ಸಹಾಯದೊಂದಿಗೆ ಅಭಿನಂದಿಸಲಾಯಿತು.
ಭದ್ರಾವತಿ, ಆ. ೧೦: ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ(ರ‍್ಯಾಮ್ಕೋಸ್)ದ ತಾಲೂಕಿನ ಅರಹತೊಳಲು ಕೈಮರ ಶಾಖೆ ವತಿಯಿಂದ ಕೊರೋನಾ ವೈರಸ್ ನಿರ್ಮೂಲನೆಗೆ ಶ್ರಮಿಸುತ್ತಿರುವ ಕೊರೋನಾ ವಾರಿರ್ಯಸ್‌ಗಳಾದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಪ್ರಶಂಸಿ ಪ್ರೋತ್ಸಾಹ ಧನ ಸಹಾಯದೊಂದಿಗೆ ಅಭಿನಂದಿಸಲಾಯಿತು.
ಆಶಾ ಕಾರ್ಯಕರ್ತೆಯರಾದ ಎಂ. ಭಾರತಮ್ಮ. ಸುಕನ್ಯ ಮತ್ತು ವಿಜಯಕುಮಾರಿ ಅವರಿಗೆ ತಲಾ ೩ ಸಾವಿರ ರು. ಪ್ರೋತ್ಸಾಹ ಧನ ನೀಡುವ ಮೂಲಕ ಸನ್ಮಾನಿಸಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಎಂ.ಪರಮೇಶ್ವರಪ್ಪ, ಆಡಳಿತಾಧಿಕಾರಿ ಎಂ. ವಿರುಪಾಕ್ಷಪ್ಪ,  ಶಾಖಾ ವ್ಯವಸ್ಥಾಪಕ ಡಿ. ಶಂಕರಮೂರ್ತಿ, ಸಿಬ್ಬಂದಿ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ವಮಂಗಳಮ್ಮ ನಿಧನ

ಸರ್ವಮಂಗಳಮ್ಮ
ಭದ್ರಾವತಿ, ಆ. ೧೦: ಹಳೇನಗರದ ಹನುಮಂತನಗರದ ನಿವಾಸಿ ಸರ್ವಮಂಗಳಮ್ಮ ಭಾನುವಾರ ನಿಧನ ಹೊಂದಿದರು.
ಹಳೇನಗರದ ವೀರಶೈವ ಸಭಾಭವವನದ ವ್ಯವಸ್ಥಾಪಕ ಅಶೋಕ್ ಹಾಗು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ವಾಹನ ಚಾಲಕ ಗಿರೀಶ್ ಇಬ್ಬರು ಪುತ್ರರು ಸೇರಿದಂತೆ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಬಾಳೆಹೊನ್ನೂರು ಜಗದ್ಗುರುಗಳು ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.  


Sunday, August 9, 2020

ಭದ್ರಾವತಿಯಲ್ಲಿ ೨೪ ಮಂದಿಗೆ ಸೋಂಕು : ವ್ಯಕ್ತಿ ಮೃತಪಟ್ಟ ನಂತರ ಸೋಂಕು ಪತ್ತೆ

ಕೋವಿಡ್ ಮಾದರಿಯಲ್ಲಿ ನಗರಸಭೆವತಿಯಿಂದ ಅಂತ್ಯ ಸಂಸ್ಕಾರ

ಭದ್ರಾವತಿ, ಆ. ೯: ನಗರಸಭೆ ವ್ಯಾಪ್ತಿಯ ಜನ್ನಾಪುರದ ಎನ್‌ಟಿಬಿ ಲೇ ಔಟ್‌ನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ.
       ಸುಮಾರು ೬೯ ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದು, ತಕ್ಷಣ ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಿದ್ದರು. ಅಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದು, ತಪಾಸಣೆ ನಡೆಸಿದ ಆಸ್ಪತ್ರೆ ಸಿಬ್ಬಂದಿಗಳು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಕುಟುಂಬ ಸದಸ್ಯರು ಮೃತ ದೇಹವನ್ನು ವಾಪಾಸ್ಸು ನಗರಕ್ಕೆ ತಂದಿದ್ದು, ಈ ನಡುವೆ ಮೃತಪಟ್ಟ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ ಎನ್ನಲಾಗಿದೆ.
      ಮಾಹಿತಿ ತಿಳಿದ ತಕ್ಷಣ ನಗರಸಭೆ ಪೌರಾಯುಕ್ತ ಮನೋಹರ್ ಹಾಗೂ ಸಿಬ್ಬಂದಿಗಳು, ಮೃತ ದೇಹವನ್ನು ಮನೆಗೆ ಕೊಂಡೊಯ್ಯಲು ಅವಕಾಶ ನೀಡದೆ ಮಿಲ್ಟ್ರಿಕ್ಯಾಂಪ್ ಸಮೀಪ ಬೈಪಾಸ್ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಕೋವಿಡ್ ಮಾದರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಪತ್ರಿಕೆಗೆ ಮಾಹಿತಿ ನೀಡಿದ ಪೌರಾಯುಕ್ತರು, ಮೃತಪಟ್ಟ ವ್ಯಕ್ತಿಯಲ್ಲಿ ಸೋಂಕು ಇರುವುದು ಕುಟುಂಬ ಸದಸ್ಯರಿಗೆ ತಿಳಿದು ಬಂದಿಲ್ಲ. ಮೃತಪಟ್ಟ ನಂತರ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಕುಟುಂಬ ಸದಸ್ಯರನ್ನು ನಿಗಾದಲ್ಲಿರಸಲಾಗಿದ್ದು, ಮನೆಯ ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯವನ್ನಾಗಿಸಲಾಗಿದೆ ಎಂದರು.
ಭದ್ರಾವತಿಯಲ್ಲಿ ೨೪ ಸೋಂಕು ಪತ್ತೆ:
ತಾಲೂಕಿನಲ್ಲಿ ಪುನಃ ಸೋಂಕು ಸ್ಪೋಟಗೊಳ್ಳುತ್ತಿದ್ದು, ಭಾನುವಾರ ಒಂದೇ ದಿನ ೨೪ ಪ್ರಕರಣಗಳು ಪತ್ತೆಯಾಗಿವೆ. ಹೊಸಮನೆಯಲ್ಲಿ ೫೪ ವರ್ಷದ ವ್ಯಕ್ತಿ, ಜೇಡಿಕಟ್ಟೆ ಹೊಸೂರಿನಲ್ಲಿ ೩೭ ವರ್ಷದ ವ್ಯಕ್ತಿ, ೩೦ ವರ್ಷದ ಮಹಿಳೆ, ಹೊಸಮನೆ ಕುವೆಂಪು ನಗರದಲ್ಲಿ ೩೦ ವರ್ಷದ ಮಹಿಳೆ, ಕೇಶವಪುರ ಬಡಾವಣೆಯಲ್ಲಿ ೩೩, ೩೫, ೨೭ ಮತ್ತು ೪೨ ವರ್ಷದ ಪುರುಷರು, ಭಂಡಾರಹಳ್ಳಿಯಲ್ಲಿ ೫೬ ವರ್ಷದ ವ್ಯಕ್ತಿ, ಲೋಯರ್ ಹುತ್ತಾದಲ್ಲಿ ೩೭ ವರ್ಷದ ಮಹಿಳೆ, ೪೭ ವರ್ಷದ ವ್ಯಕ್ತಿ, ಹನುಮಂತನಗರದಲ್ಲಿ ೧೯ ವರ್ಷದ ಯುವತಿ, ಹೊಸಮನೆ ಮೊದಲ ಕ್ರಾಸ್‌ನಲ್ಲಿ ೩೯ ವರ್ಷದ ಮಹಿಳೆ, ಮಾವಿನಕೆರೆಯಲ್ಲಿ ೪೩ ವರ್ಷದ ವ್ಯಕ್ತಿ, ಎರೇಹಳ್ಳಿಯಲ್ಲಿ ೨೯ ಮತ್ತು ೬೯ ವರ್ಷದ ಪುರುಷರು, ಮೈದೊಳಲು ೪೩ ವರ್ಷದ ವ್ಯಕ್ತಿ, ಹೊಳೆಹೊನ್ನೂರು ೫೦ ವರ್ಷದ ವ್ಯಕ್ತಿ, ಹೊಸಮನೆ ಗಣಪತಿ ದೇವಸ್ಥಾನದ ಬಳಿ ೬೩ ವರ್ಷದ ಮಹಿಳೆ, ಸಿದ್ದಾರೂಢ ನಗರದಲ್ಲಿ ೭೯ ವರ್ಷ ವೃದ್ಧ, ಸಂಜಯ ಕಾಲೋನಿಯಲ್ಲಿ ೨೯ ವರ್ಷದ ವ್ಯಕ್ತಿ  ಹಾಗೂ ನಗರದ ಇತರೆಡೆ ೬೪ ವರ್ಷದ ವ್ಯಕ್ತಿ ಮತ್ತು ೪ ವರ್ಷದ ಹೆಣ್ಣು ಮಗು ಸೇರಿದಂತೆ ಒಟ್ಟು ೨೪ ಮಂದಿ ಸೋಂಕಿಗೆ ಒಳಗಾಗಿದ್ದಾರೆ.  


ಅಕ್ರಮ ಪಡಿತರ ಆಹಾರ ಪದಾರ್ಥ ಸಾಗಾಣೆ ಅನುಮಾನ

ಲಾರಿ ವಶಕ್ಕೆ ಪಡೆದ ತಹಸೀಲ್ದಾರ ನೇತೃತ್ವದ ತಂಡ

ಭದ್ರಾವತಿಯಲ್ಲಿ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ನೇತೃತ್ವದ ತಂಡ ಪಡಿತರ ಆಹಾರ ಪದಾರ್ಥಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿರುವುದು.
ಭದ್ರಾವತಿ, ಆ. ೯: ಅಕ್ರಮವಾಗಿ ಪಡಿತರ ಆಹಾರ ಪದಾರ್ಥಗಳನ್ನು ಸಾಗಾಣೆ ಮಾಡಲಾಗುತ್ತಿದೆ ಎಂಬ ಅನುಮಾನದ ಮೇರೆಗೆ ಲಾರಿಯೊಂದನ್ನು ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ನೇತೃತ್ವದ ತಂಡ ವಶಕ್ಕೆ ಪಡೆದಿರುವ ಘಟನೆ ಭಾನುವಾರ ನಡೆದಿದೆ.
    ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಲಾರಿಯನ್ನು ನಗರದ ಬಿಳಿಕಿ ಕ್ರಾಸ್‌ನಲ್ಲಿ ತಪಾಸಣೆ ನಡೆಸಲಾಗಿದ್ದು, ಸುಮಾರು ೫೦೦ ಚೀಲ ಪಡಿತರ ಅಕ್ಕಿ ಪತ್ತೆಯಾಗಿದೆ. ವಶಕ್ಕೆ ಪಡೆದಿರುವ ಲಾರಿ ನಂಬರಿಗೂ, ಬಿಲ್‌ನಲ್ಲಿರುವ ಲಾರಿ ನಂಬರಿಗೂ ವ್ಯತ್ಯಾಸ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ನ್ಯೂಟೌನ್ ಪೊಲೀಸರಿಗೆ ವಿಚಾರಣೆ ನಡೆಸಲು ಸೂಚಿಸಲಾಗಿದೆ.

ಆಡಿ ಕೃತ್ತಿಕಾ ಕಾವಡಿ ಜಾತ್ರಾ ಮಹೋತ್ಸವ ರದ್ದು

ಭದ್ರಾವತಿ, ಆ. ೯: ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿಯಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಜರುಗುತ್ತಿದ್ದ ಆಡಿ ಕೃತ್ತಿಕಾ ಕಾವಡಿ ಜಾತ್ರಾ ಮಹೋತ್ಸವ ಈ ಬಾರಿ ರದ್ದುಗೊಳಿಸಲಾಗಿದೆ.

        ಈ ಕುರಿತು ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ಆಶ್ರಮದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಈ ಬಾರಿ ಕೊರೋನ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಆ.೧೧ ಮತ್ತು ೧೨ರಂದು ಎರಡು ದಿನಗಳ ಕಾಲ ಜರುಗಬೇಕಿದ್ದ ಜಾತ್ರಾ ಮಹೋತ್ಸವ ಈ ಬಾರಿ ನಡೆಸದಿರಲು ಆಡಳಿತ ಮಂಡಳಿ ನಿರ್ಧರಿಸಿದೆ.

   ಇದೆ ರೀತಿ ನ್ಯೂಟೌನ್ ಆಂಜನೇಯ ಆಗ್ರಹಾರದ ಕೂಲಿಬ್ಲಾಕ್ ಶೆಡ್‌ನಲ್ಲಿರುವ ಶ್ರೀ ಶಿವಸುಬ್ರಮಣ್ಯಸ್ವಾಮಿ ಕಾವಡಿ ಟ್ರಸ್ಟ್ ವತಿಯಿಂದ ಸಹ ಈ ಬಾರಿ ಆಡಿ ಕೃತ್ತಿಕಾ ಕಾವಡಿ ಜಾತ್ರಾ ಮಹೋತ್ಸವ ರದ್ದು ಪಡಿಸಲಾಗಿದ್ದು,  ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸದೆ ತಮ್ಮ ಮನೆಗಳಲ್ಲಿಯೇ ಶ್ರೀ ಸ್ವಾಮಿಯನ್ನು ಆರಾಧಿಸುವ ಮೂಲಕ ಸಹಕರಿಸಬೇಕೆಂದು ಕೋರಲಾಗಿದೆ.


ಬಿಜೆಪಿ ಮಹಿಳಾ ಮೋರ್ಚಾ ನೂತನ ಪದಾಧಿಕಾರಿಗಳು

ಭದ್ರಾವತಿ, ಆ. ೯: ಬಿಜೆಪಿ ಮಹಿಳಾ ಮೋರ್ಚಾ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಬಿ.ಎಸ್.ಕಲ್ಪನಾ, ಉಪಾಧ್ಯಕ್ಷರಾಗಿ ಜಯಲಕ್ಷ್ಮಿ,  ರೇಖಾ, ಪದ್ಮಾವತಿ, ಕಾರ್ಯದರ್ಶಿಯಾಗಿ ಕವಿತಾ, ವಿ.ಶ್ಯಾಮಲಾ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ.ಮಂಜುಳಾ, ಖಜಾಂಚಿಯಾಗಿ ಶಕುಂತಲಾ ಹಾಗು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಉಷಾ, ರುಕ್ಮಿಣಿ, ಉಮಾ, ಲಕ್ಷ್ಮಿ, ಉಜಾಲಾ ಬಾಯಿ, ವನಜಾಕ್ಷಿ, ಭಾಗ್ಯ, ಸುಶೀಲಾ, ಆರತಿ ಸಿಂಗ್, ರಾಜೇಶ್ವರಿ, ಸಿಂಧು ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳನ್ನು ಮಂಡಲ ಅಧ್ಯಕ್ಷರು ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಮುಖಂಡರು ಅಭಿನಂದಿಸಿದ್ದಾರೆ.