ಸಹಿ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ವಸತಿ ಗೃಹಗಳನ್ನು ಶಾಶ್ವತವಾಗಿ ನಿವೃತ್ತ ಕಾರ್ಮಿಕರಿಗೆ ವಹಿಸಿಕೊಡಲು ಪತ್ರದ ಮೂಲಕ ಸಹಿ ಅಭಿಯಾನ ನಡೆಸಲಾಗುತ್ತಿದೆ.
ಭದ್ರಾವತಿ, ನ. ೨೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಃ ಖಾಸಗಿಕರಣಗೊಳ್ಳುವ ಭೀತಿ ಎದುರಾಗಿದ್ದು, ಮುಂದಿನ ಹೋರಾಟಗಳ ಬಗ್ಗೆ ರೂಪುರೇಷೆಗಳು ಸಿದ್ದಗೊಳ್ಳುತ್ತಿರುವ ನಡುವೆ ನಿವೃತ್ತ ಕಾರ್ಮಿಕರು ತಮ್ಮ ಭವಿಷ್ಯದ ಬದುಕಿನ ಸೂರಿಗಾಗಿ ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಶದ ಬೃಹತ್ ಕೈಗಾರಿಕೆಗಳಲ್ಲಿ ಒಂದಾಗಿರುವ ವಿಐಎಸ್‌ಎಲ್ ಕಾರ್ಖಾನೆ ಇದೀಗ ಖಾಸಗಿಯವರಿಗೆ ವಹಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಕಾರ್ಮಿಕ ವಲಯವನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟಿವೆ. ಈ ಹಿಂದೆ ಸಹ ಖಾಸಗಿಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಕಾರ್ಮಿಕ ಸಂಘಟನೆಗಳು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳು, ಮಠಮಂದಿರಗಳು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಮಸ್ತ ನಾಗರೀಕರು ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಖಾಸಗಿಕರಣ ಕೈಬಿಡಲಾಗಿತ್ತು. ಇದೀಗ ಪುನಃ ಹೋರಾಟದ ಲಕ್ಷಣಗಳು ಎದ್ದು ಕಾಣುತ್ತಿವೆ.
ಕಾರ್ಖಾನೆಯಲ್ಲಿ ಸುಮಾರು ೩೦-೪೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕಾರ್ಮಿಕರು ತಮಗೆ ಬಂದ ನಿವೃತ್ತಿ ಹಣದಲ್ಲಿ ಬದುಕು ಕಟ್ಟಿಕೊಂಡಿದ್ದು, ಯಾವುದೇ ಸ್ವಂತ ಸೂರಿಲ್ಲದ ಬಹುತೇಕ ನಿವೃತ್ತ ಕಾರ್ಮಿಕರು ಲಕ್ಷಾಂತರ ರು. ವೆಚ್ಚದಲ್ಲಿ ಕಾರ್ಖಾನೆಯ ಹಾಳಾದ ವಸತಿ ಗೃಹಗಳನ್ನು ವಾಸಿಸಲು ಯೋಗ್ಯವಾದ ರೀತಿಯಲ್ಲಿ ದುರಸ್ತಿಪಡಿಸಿಕೊಂಡು ವಾಸಿಸುತ್ತಿದ್ದಾರೆ. ಇದೀಗ ಈ ಮನೆಗಳನ್ನು ಸಹ ಖಾಸಗಿಯವರಿಗೆ ವಹಿಸಿಕೊಡುವ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರು ವಾಸದ ಗೃಹಗಳನ್ನು ಶಾಶ್ವತವಾಗಿ ತಮಗೆ ವಹಿಸಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಮುಂದಾಗಿದ್ದಾರೆ.
ನಿವೃತ್ತ ಕಾರ್ಮಿಕರು ಪತ್ರದ ಮೂಲಕ ಸಹಿ ಅಭಿಯಾನ ಕೈಗೊಂಡು ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕಳೆದ ಸುಮಾರು ಒಂದು ವಾರದಿಂದ ಪ್ರತಿಯೊಂದು ಮನೆಗೆ ತೆರಳಿ ಸಹಿ ಸಂಗ್ರಹಿಸುತ್ತಿದ್ದು, ಈ ಕಾರ್ಯದಲ್ಲಿ ನಿವೃತ್ತ ಕಾರ್ಮಿಕರಾದ ನರಸಿಂಹಚಾರ್, ರಾಜಪ್ಪ, ಜಗದೀಶ್, ನಂಜಪ್ಪ, ಸುಬ್ರಮಣ್ಯ, ಕೆಂಪಯ್ಯ, ನಾಗರಾಜ್, ವಿ ಪ್ರಸಾದ್ ಸೇರಿದಂತೆ ಇನ್ನಿತರರು ತೊಡಿಗಿಸಿಕೊಂಡಿದ್ದಾರೆ.