Sunday, June 13, 2021

ಬಾರ್ ಬೆಂಡ್, ಪೈಂಟರ್ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಗೃಹ ಕಛೇರಿಯಲ್ಲಿ ಭಾನುವಾರ ಬಾರ್ ಬೆಂಡ್ ಮತ್ತು ಪೈಂಟರ್ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ವೃತಿ ಕೌಶಲ್ಯಗಳಿಗೆ ಅಗತ್ಯವಿರುವ ಪರಿಕರಗಳನ್ನೊಳಗೊಂಡ ಟೂಲ್ ಕಿಟ್‌ಗಳನ್ನು ವಿತರಿಸಿದರು.
      ಭದ್ರಾವತಿ, ಜೂ. ೧೩:  ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಗೃಹ ಕಛೇರಿಯಲ್ಲಿ ಭಾನುವಾರ ಬಾರ್ ಬೆಂಡ್ ಮತ್ತು ಪೈಂಟರ್ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ವೃತಿ ಕೌಶಲ್ಯಗಳಿಗೆ ಅಗತ್ಯವಿರುವ ಪರಿಕರಗಳನ್ನೊಳಗೊಂಡ ಟೂಲ್ ಕಿಟ್‌ಗಳನ್ನು ವಿತರಿಸಿದರು.
    ಅಸಂಘಟಿತ ಕಾರ್ಮಿಕರ ವಲಯದ ವ್ಯಾಪ್ತಿಯಲ್ಲಿ ಬರುವ ಬಾರ್ ಬೆಂಡ್ ಮತ್ತು ಪೈಂಟರ್ ಕಾರ್ಮಿಕರಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದು, ಇದೀಗ ವೃತ್ತಿ ಕೌಶಲ್ಯಗಳಿಗೆ ನೆರವಾಗುವಂತೆ ಅಗತ್ಯ ಪರಿಕರಗಳನ್ನು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ವಿತರಿಸುವ ಮೂಲಕ ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ಮೂಡಿಸಿದೆ.
   ಕಾರ್ಮಿಕ ನಿರೀಕ್ಷಕಿ ಮಮತಾಜ್ ಬೇಗಂ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ಜಿಲ್ಲಾ ಉಪಾಧ್ಯಕ್ಷ ಚಂದ್ರು, ತಾಲೂಕು ಕಾರ್ಯದರ್ಶಿ ಅಭಿಲಾಷ್, ಸಂಘಟನಾ ಕಾರ್ಯದರ್ಶಿ ಸುಬ್ಬಣ್ಣ, ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, June 12, 2021

ಎಲ್ಲರಿಗೂ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡಿ : ಎಚ್. ರವಿಕುಮಾರ್ ಆಗ್ರಹ


ಎಚ್. ರವಿಕುಮಾರ್
   ಭದ್ರಾವತಿ, ಜೂ. ೧೨: ರಾಜ್ಯ ಸರ್ಕಾರ ತಕ್ಷಣ ವಿದ್ಯುತ್ ಬೆಲೆ ಏರಿಕೆ ಹಿಂಪಡೆಯುವ ಮೂಲಕ ಎಲ್ಲರಿಗೂ ಪ್ರತಿ ತಿಂಗಳು ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವಂತೆ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆಗ್ರಹಿಸಿದ್ದಾರೆ.
    ಕೊರೋನಾ ಪರಿಣಾಮ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದಿಗ್ದ ಪರಿಸ್ಥಿತಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ಖಂಡನೀಯ. ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಬಂಡವಾಳ ಶಾಹಿಗಳ ಪರವಾಗಿದ್ದು, ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ದೆಹಲಿ ಸರ್ಕಾರ ಪ್ರತಿ ತಿಂಗಳು ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ಇದೆ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಉಚಿತ ವಿದ್ಯುತ್ ನೀಡಬೇಕು.
   ತಕ್ಷಣ ವಿದ್ಯುತ್ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ದರ ನಿಗದಿಯಲ್ಲಿ ಸೂಕ್ತ ನಿಲುವು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಬಂಡವಾಳಶಾಹಿಗಳ ಲಾಭಿಗೆ ಮಣಿಯಬಾರದು ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ರವಿಕುಮಾರ್ ಒತ್ತಾಯಿಸಿದ್ದಾರೆ.  

ಶ್ರೀ ಸತ್ಯಸಂದ ತೀರ್ಥ ಶ್ರೀ ಪಾದಂಗಳವರ ಆರಾಧನೆ


ಭದ್ರಾವತಿ ಜನ್ನಾಪುರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶನಿವಾರ ಶ್ರೀ ಸತ್ಯಸಂದ ತೀರ್ಥ ಶ್ರೀ ಪಾದಂಗಳವರ ಆರಾಧನೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೧೨: ನಗರದ ಜನ್ನಾಪುರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶನಿವಾರ ಶ್ರೀ ಸತ್ಯಸಂದ ತೀರ್ಥ ಶ್ರೀ ಪಾದಂಗಳವರ ಆರಾಧನೆ ಹಮ್ಮಿಕೊಳ್ಳಲಾಗಿತ್ತು.
     ಆರಾಧನೆ ಹಿನ್ನಲೆಯಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಭಕ್ತರಿಂದ ಪಾರಾಯಣ, ಪಂಡಿತರಾದ ಗಂಟೆ ನಾರಾಯಣಚಾರ್ ಅವರಿಂದ ಉಪನ್ಯಾಸ, ಪಲ್ಲಕ್ಕಿ ಉತ್ಸವ, ಅಲಂಕಾರ ಸೇವೆ ಹಾಗು ಅಷ್ಟಾವಧಾನ ಮತ್ತು ಹಸ್ತೋದಕ ಹಾಗು ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ಆನಂದತೀರ್ಥ ಕಲ್ಲಾಪುರ್, ರಾಮಚಂದ್ರ, ಶ್ರೀನಿವಾಸಚಾರ್, ರಘು ರಾಮಾಚಾರ್, ಪ್ರಧಾನ ಅರ್ಚಕ ಮುರುಳಿಧರ್, ರಮಾಕಾಂತ್, ಎಸ್.ಎನ್ ಬಾಲಕೃಷ್ಣ, ಹಳ್ಳಿಕಟ್ಟೆ ನಾಗರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಭಾರತಿ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.


ಅರುಣ್‌ಕುಮಾರ್ ನಿಧನ

ಅರುಣ್‌ಕುಮಾರ್

   ಭದ್ರಾವತಿ, ಜೂ. ೧೨: ಹಳೇನಗರ ಕುಂಬಾರರ ಬೀದಿ ನಿವಾಸಿ, ಪತ್ರ ಬರಹಗಾರ ಶಾಂತಯ್ಯನವರ ಅಳಿಯ ಅರುಣ್‌ಕುಮಾರ್(೪೫) ಅನಾರೋಗ್ಯದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
   ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಆಕ್ರೋಶ


ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಏರಿಕೆ ಖಂಡಿಸಿ ಶನಿವಾರ ಭದ್ರಾವತಿ ಬ್ಲಾಕ್ ಕಾಂಗ್ರೆಸ್ ನಗರ ಹಾಗು ಗ್ರಾಮಾಂತರ ಘಟಕಗಳ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
     ಭದ್ರಾವತಿ, ಜೂ. ೧೨: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಏರಿಕೆ ಖಂಡಿಸಿ ಶನಿವಾರ ಬ್ಲಾಕ್ ಕಾಂಗ್ರೆಸ್ ನಗರ ಹಾಗು ಗ್ರಾಮಾಂತರ ಘಟಕಗಳ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. 
ನಗರದ ವಿವಿಧೆಡೆ ಪೆಟ್ರೋಲ್ ಬಂಕ್‌ಗಳ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬರಬೇಕಾದ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಆರೋಪಿಸಿದರು. 
ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಕೋವಿಡ್ ಸಂಕಷ್ಟದಲ್ಲಿರುವ ಬಡ ಜನರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಬೇಕು. ಕಾರ್ಮಿಕ ಹಾಗು ರೈತ ವಿರೋಧಿ ಧೋರಣೆಗಳನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದರು. 
ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಯುವ ಘಟಕದ ಅಧ್ಯಕ್ಷ ಜಿ. ವಿನೋದ್‌ಕುಮಾರ್,  ನಗರಸಭಾ ಸದಸ್ಯರಾದ ಬಿ.ಕೆ ಮೋಹನ್,  ಜಾರ್ಜ್, ಲತಾ ಚಂದ್ರಶೇಖರ್, ಚನ್ನಪ್ಪ, ಬಿ.ಟಿ ನಾಗರಾಜ್, ಕಾಂತರಾಜ್, ಮೊಹಮದ್, ಮುಖಂಡರಾದ ವೆಂಕಟೇಶ್ ಸುಬ್ಬಣ್ಣ, ಗಂಗಾಧರ್, ರಾಘವೇಂದ್ರ ಸರಾಟೆ, ಎಂ. ಶಿವಕುಮಾರ್, ಎಸ್.ಎಸ್ ಭೈರಪ್ಪ, ಆಂಜನಪ್ಪ, ದೇವೇಂದ್ರ ಗಿರಿ, ಲಕ್ಷ್ಮೀದೇವಿ, ಸುಮಿತ್ರ ಅಂಬೋರೆ, ಯುವ ಘಟಕದ ಭರತ್, ಶಂಕರ್, ವರುಣ್, ಉದಯ್, ಸುನಿಲ್ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು. 

Friday, June 11, 2021

ಭದ್ರಾವತಿಯಲ್ಲಿ ೧೦೩ ಸೋಂಕು ಪತ್ತೆ

   ಭದ್ರಾವತಿ, ಜೂ. ೧೧:  ಸರ್ಕಾರ ಜಾರಿಗೊಳಿಸಿರುವ ೨ನೇ ಅವಧಿಯ ಸೆಮಿ ಲಾಕ್‌ಡೌನ್ ಮುಕ್ತಾಯಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಆದರೂ ಸಹ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಶುಕ್ರವಾರ ೧೦೩ ಸೋಂಕು ಪತ್ತೆಯಾಗಿದೆ.
     ಒಟ್ಟು ೭೦೯ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೦೩ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೇವಲ ೮೬ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಒಟ್ಟು ೬೧೯೪ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೫೨೧೫ ಮಂದಿ ಗುಣಮುಖರಾಗಿದ್ದಾರೆ. ೯೭೯ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ಒಂದೇ ದಿನ ೪ ಮಂದಿ ಬಲಿಯಾಗಿದ್ದು, ಇದುವರೆಗೂ ೧೭೦ ಮಂದಿ ಮೃತಪಟ್ಟಿದ್ದಾರೆ.
    ಒಟ್ಟು ೨೭೬ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ಪ್ರದೇಶದಲ್ಲಿ ಒಟ್ಟು ೪೦ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿವೆ.  ಒಟ್ಟು ೮೪ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು ೨೭ ಜೋನ್‌ಗಳು ಸಕ್ರಿಯಾಗಿದ್ದು, ೧೭ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಜೂ.೧೨, ೧೩ ಎರಡು ದಿನ ಸಂಪೂರ್ಣ ಲಾಕ್‌ಡೌನ್

ಭದ್ರಾವತಿ, ಜೂ. ೧೧: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ಜೂ.೧೨ ಮತ್ತು ೧೩ ಎರಡು ದಿನ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
     ಹಾಲು ಮತ್ತು ಔಷಧಿ ಅಂಗಡಿ(ಮೆಡಿಕಲ್ಸ್) ಹೊರತುಪಡಿಸಿ ಮತ್ತು ಪೆಟ್ರೋಲ್ ಬಂಕ್, ರಸಗೊಬ್ಬರ ಅಂಗಡಿಗಳನ್ನು ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆವರೆಗೆ ಮಾತ್ರ ತೆರೆಯಲು ಅವಕಾಶವಿದ್ದು, ಉಳಿದಂತೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ. ಅಲ್ಲದೆ ಅನಾವಶ್ಯಕ ಜನಸಂಚಾರ ಸಹ ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ತಿಳಿಸಿದ್ದಾರೆ.