ನವ ಜೋಡಿಗಳ ಹೊಸ ಬದುಕಿಗೆ ಮುನ್ನುಡಿ ಬರೆದ ಶ್ರೀ ರಾಮರಾಜ್ಯ ಸಂಘದ ಪದಾಧಿಕಾರಿಗಳು
ಎರಡು ಕುಟುಂಬಗಳ ವಿರೋಧದ ನಡುವೆಯೂ ಪ್ರೀತಿಸುತ್ತಿದ್ದ ಅಂಧ ಜೋಡಿಗಳ ವಿವಾಹ ನೆರವೇರಿಸುವ ಮೂಲಕ ಭದ್ರಾವತಿ ಜನ್ನಾಪುರದ ಶ್ರೀ ರಾಮರಾಜ್ಯ ಸಂಘದ ಪದಾಧಿಕಾರಿಗಳು ನವ ಜೋಡಿಗಳ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.
ಭದ್ರಾವತಿ, ಜು. ೧೩: ಎರಡು ಕುಟುಂಬಗಳ ವಿರೋಧದ ನಡುವೆಯೂ ಪ್ರೀತಿಸುತ್ತಿದ್ದ ಅಂಧ ಜೋಡಿಗಳ ವಿವಾಹ ನೆರವೇರಿಸುವ ಮೂಲಕ ನಗರದ ಜನ್ನಾಪುರದ ಶ್ರೀ ರಾಮರಾಜ್ಯ ಸಂಘದ ಪದಾಧಿಕಾರಿಗಳು ನವ ಜೋಡಿಗಳ ಹೊಸ ಬದುಕಿಗೆ ಮುನ್ನುಡಿ ಬರೆದಿರುವ ಘಟನೆ ಬೆಳಕಿಗೆ ಬಂದಿದೆ.
ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಆಶ್ರಯ ಪಡೆದು ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ವ್ಯಾಸಂಗದಲ್ಲಿ ತೊಡಗಿದ್ದ ದಿವ್ಯಾ ಹಾಗು ಜನ್ನಾಪುರದ ಹಂಚಟೆ ಡೆಂಟಲ್ ಆಸ್ಪತ್ರೆಯಲ್ಲಿ ಸಹಾಯಕನಾಗಿ ದುಡಿಯುತ್ತಿರುವ ಮಲ್ಲೇಶ್ ಇಬ್ಬರು ಕಳೆದ ೨ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ದಿವ್ಯ ಪೂರ್ಣ ಪ್ರಮಾಣದಲ್ಲಿ ಅಂಧತ್ವ ಹೊಂದಿದ್ದು, ಮಲ್ಲೇಶ್ ಭಾಗಶಃ ಅಂಧತ್ವ ಹೊಂದಿದ್ದಾನೆ.
ದಿವ್ಯ ಪೋಷಕರಾದ ಚನ್ನಗಿರಿ ತಾಲೂಕಿನ ಸಂಗವಳ್ಳಿಯ ಚನ್ನಬಸಪ್ಪ ಮತ್ತು ಶಾರದ ದಂಪತಿ ಹಾಗು ಮಲ್ಲೇಶ್ ಪೋಷಕರಾದ ಜನ್ನಾಪುರದ ನಾಗರಾಜ ಮತ್ತು ಪುಷ್ಪ ದಂಪತಿ ಇಬ್ಬರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಎರಡು ಕುಟುಂಬಗಳ ವಿರೋಧದ ನಡುವೆ ಕಳೆದ ೬ ದಿನಗಳ ಹಿಂದೆ ನ್ಯೂಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪನವರ ಸಹಕಾರದೊಂದಿಗೆ ಶ್ರೀ ರಾಮರಾಜ್ಯ ಸಂಘದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಪಿ. ಶ್ರೀನಿವಾಸ್, ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷ ಶ್ರೀಕಾಂತ್, ರಾಜ್ಯ ಲೆಕ್ಕ ಪರಿಶೋಧನ ಮತ್ತು ಲೆಕ್ಕ ಪತ್ರ ಇಲಾಖೆ ಉದ್ಯೋಗಿ ಕೇಶವಮೂರ್ತಿ ಸೇರಿದಂತೆ ಇನ್ನಿತರರು ವಿವಾಹ ನೆರವೇರಿಸುವ ಮೂಲಕ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.