ಪ್ರಧಾನಿಯಿಂದ ೨ ಕೋಟಿ ಉದ್ಯೋಗ ಸೃಷ್ಟಿಸುವ ಸುಳ್ಳು ಭರವಸೆ : ಆಕ್ರೋಶ
![](https://blogger.googleusercontent.com/img/b/R29vZ2xl/AVvXsEhy7S8B8kmsWuVLPSc2DSydbw6l1sWGH4WBIr8qE7ID5LYL9nYLRkN9wiPXlzJLEkmPDCW9bva4sNlHKewnNloZ_SgLXcnjiEZJNSFsXvr8UY9DoGgAN3BWc8vB6Bx7hGS4F1EG2piIJP9G/w400-h279-rw/D17-BDVT4-717678.jpg)
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ನಿರುದ್ಯೋಗ ದಿನವಾಗಿ ಭದ್ರಾವತಿಯಲ್ಲಿ ಯುವ ಕಾಂಗ್ರೆಸ್ ನಗರ ಘಟಕದ ವತಿಯಿಂದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಆಚರಿಸುವ ಮೂಲಕ ವಿಶಿಷ್ಟವಾಗಿ ಹೋರಾಟ ನಡೆಸಲಾಯಿತು.
ಭದ್ರಾವತಿ, ಸೆ. ೧೭: ದೇಶದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗ ನೀಡದೆ ವಂಚಿಸಿದ್ದು, ಜೊತೆಗೆ ಯುವಕರಲ್ಲಿ ಕೋಮು ದ್ವೇಷ ಭಾವನೆ ಮೂಡಿಸುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆಂದು ಯುವ ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಯುವ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು ಭರವಸೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ನರೇಂದ್ರ ಮೋದಿಯವರು ದೇಶದಲ್ಲಿ ಅಧಿಕಾರಕ್ಕೆ ಬರುವ ಮೊದಲು ಯುವಕರಿಗೆ ವರ್ಷಕ್ಕೆ ೨ ಕೋಟಿ ಉದ್ಯೋಗ ಕಲ್ಪಿಸಿಕೊಡುವ ಜೊತೆಗೆ ನಿರುದ್ಯೋಗ ನಿರ್ಮೂಲನೆ ಮಾಡುವ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಈಗಾಗಲೇ ೭ ವರ್ಷಗಳು ಕಳೆದಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟಿಲ್ಲ. ಸುಳ್ಳು ಭರವಸೆಯಿಂದ ಉದ್ಯೋಗವಿಲ್ಲದೆ ಯುವಕರು ವಂಚಿತರಾಗಿದ್ದು, ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ದೂರಿದರು.
ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವುದನ್ನು ಬಿಟ್ಟು ಕೋಮುಭಾವನೆಗಳ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಶೇ.೧೦ರಷ್ಟು ಏರಿಕೆಯಾಗಿದ್ದು, ಜೊತೆಗೆ ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಿರುವ ಯಾವುದೇ ಯೋಜನೆಗಳನ್ನು ಸಹ ರೂಪಿಸಿಲ್ಲ. ದೇಶದಲ್ಲಿ ಇದರ ವಿರುದ್ಧ ಯಾರು ಸಹ ಪ್ರಶ್ನಿಸುವಂತಿಲ್ಲ. ಹೋರಾಟ ನಡೆಸುವ ಹಾಗು ಪ್ರಶ್ನಿಸುವವರ ಧ್ವನಿ ಅಡಗಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.
ಯುವ ಕಾಂಗ್ರೆಸ್ ನಗರ ಘಟಕದ ವತಿಯಿಂದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಹೋರಾಟ ನಡೆಸಲಾಯಿತು. ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಜಿ. ವಿನೋದ್‌ಕುಮಾರ್ ಹೋರಾಟದ ನೇತೃತ್ವ ವಹಿಸಿದ್ದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ಚಂದ್ರೇಗೌಡ, ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ಸಂಚಾಲಕ ಬಿ.ಪಿ ರಾಘವೇಂದ್ರ ಸರಾಟೆ, ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷ ತೇಜಸ್‌ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಭರತ್, ನವೀನ್, ಮಧು ಸೂದನ್, ನಂದನ್, ಚೇತನ್, ಕ್ರಿಸ್ಟಿ, ಸಂಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದವತಿಯಿಂದ ರಂಗಪ್ಪ ವೃತ್ತದಲ್ಲಿ ಹೋರಾಟ ನಡೆಸಲಾಯಿತು. ಯುವ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಆಫ್ತಾಬ್ ಅಹ್ಮದ್ ಹೋರಾಟದ ನೇತೃತ್ವ ವಹಿಸಿದ್ದರು. ಕಾಂಗ್ರೆಸ್ ಒಬಿಸಿ ವಿಭಾಗದ ನಗರ ಘಟಕದ ಅಧ್ಯಕ್ಷ ಗಂಗಾಧರ್, ಯುವ ಕಾಂಗ್ರೆಸ್ ಗ್ರಾಮಾಂತರ ಉಪಾಧ್ಯಕ್ಷರಾದ ತಬ್ರೇಶ್ ಖಾನ್, ಅಭಿಷೇಕ್, ಪ್ರಧಾನ ಕಾರ್ಯದರ್ಶಿಗಳಾದ ಆನಂದ, ಅಮೋಸ್, ಲಿಯಾಂಡರ್, ಸಜ್ಜಾದ್, ವರುಣ್, ಶಂಕರ್, ವಸೀಮ, ಹರೀಶ ಮತ್ತು ಜೀಷನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ನಿರುದ್ಯೋಗ ದಿನವಾಗಿ ಭದ್ರಾವತಿಯಲ್ಲಿ ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದ ವತಿಯಿಂದ ಸಿ.ಎನ್ ರಸ್ತೆ ರಂಗಪ್ಪ ವೃತ್ತದಲ್ಲಿ ಆಚರಿಸುವ ಮೂಲಕ ವಿಶಿಷ್ಟವಾಗಿ ಹೋರಾಟ ನಡೆಸಲಾಯಿತು.