Wednesday, December 22, 2021

ಡಿ.೨೪ರಂದು ಸರ್ವಸದಸ್ಯರ ವಾರ್ಷಿಕ ಮಹಾಸಭೆ

ಭದ್ರಾವತಿ, ಡಿ. ೨೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕರು ತಮ್ಮ ಮುಂದಿನ ಭವಿಷ್ಯಕ್ಕಾಗಿ ರೂಪಿಸಿಕೊಂಡಿರುವ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಇದೀಗ ಹಲವು ಸಮಸ್ಯೆಗಳು ಎದುರಾಗಿದ್ದು,  ಸಂಘ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಈ ನಡುವೆ ಡಿ.೨೪ರಂದು ಬೆಳಿಗ್ಗೆ ೧೦ ಗಂಟೆಗೆ ಕಾಗದನಗರದ ಸೀತಾರಾಮ ಸಮುದಾಯ ಭವನದಲ್ಲಿ ೩೨ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಮ್ಮಿಕೊಂಡಿದೆ.
    ಸರ್ಕಾರ ಪ್ರಸ್ತುತ ಖಾಲಿ ನಿವೇಶನಗಳಿಗೆ ಸುಮಾರು ೬ ರಿಂದ ೭ ಪಟ್ಟು ಕಂದಾಯ ಹೆಚ್ಚಳ ಮಾಡಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗು ನಗರಸಭೆ ಆಡಳಿತ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಸಂಘಕ್ಕೆ ಪ್ರಸ್ತುತ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಸದಸ್ಯರು ತಪ್ಪದೇ ಭಾಗವಹಿಸುವಂತೆ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ.

ಎಂ.ಇ.ಎಸ್ ಸಂಘಟನೆ ನಿಷೇಧಿಸಿ : ಬಂಧಿತ ೨೭ ಮಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ

ಜಯಕರ್ನಾಟಕ ಸಂಘಟನೆ ವತಿಯಿಂದ ತಹಸೀಲ್ದಾರ್‌ಗೆ ಮನವಿ


ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ಮಿತಿ ಮೀರಿದ್ದು, ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಉರುಳಿಸಿ ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಬಂಧಿತರಾಗಿರುವ ೨೭ ಮಂದಿ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗು ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೨೨: ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ಮಿತಿ ಮೀರಿದ್ದು, ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಉರುಳಿಸಿ ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಬಂಧಿತರಾಗಿರುವ ೨೭ ಮಂದಿ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗು ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಬುಧವಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಯುವ ಮುಖಂಡ ಬಿ.ಎಸ್ ಗಣೇಶ್ ಹಾಗು ಸಂಘಟನೆ ಜಿಲ್ಲಾಧ್ಯಕ್ಷ ಡಾ. ಜೆ.ಆರ್ ದೀಪಕ್ ಮತ್ತು ತಾಲೂಕು ಅಧ್ಯಕ್ಷ ಆರ್. ಅರುಣ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿದ ಕಾರ್ಯಕರ್ತರು ಎಂ.ಇ.ಎಸ್ ಪುಂಡರ ಪುಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೆಲ, ಜಲ, ಭಾಷೆಗಾಗಿ ಕನ್ನಡಿಗರು ಯಾವುದೇ ರೀತಿಯ ಹೋರಾಟಕ್ಕೂ ಸಿದ್ದರಿದ್ದು, ರಾಜ್ಯದಲ್ಲಿ ಎಂ.ಇ.ಎಸ್ ಪುಂಡರು ಪೊಲೀಸ್ ವಾಹನಗಳಿಗೆ ಬೆಂಕಿ ಇಡುವ ಜೊತೆಗೆ ಸರ್ಕಾರ ವಾಹನಗಳ ಮೇಲೆ ಮನಸೋ ಇಚ್ಛೆ ಕಲ್ಲು ತೂರಾಟ ನಡೆಸಿ ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಕನ್ನಡಿಗರಿಗೆ ಹಾಗು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಅಪಮಾನವಾಗಿದೆ. ಈ ಹಿನ್ನಲೆ ಸರ್ಕಾರ ತಕ್ಷಣ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ನಂತರ ತಾಲೂಕು ಕಛೇರಿ ಮಿನಿವಿಧಾನಸೌಧದವರೆಗೂ ಬೈಕ್ ರ್‍ಯಾಲಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ತಾಲೂಕು ಗೌರವಾಧ್ಯಕ್ಷ ಪಿ. ಶರವಣ, ತಾಲೂಕು ಉಸ್ತುವಾರಿ ದಿವ್ಯರಾಜ್, ಶಂಕರಘಟ್ಟ ಘಟಕದ ಅಧ್ಯಕ್ಷ ಡಿ.ಟಿ ಶಶಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಆರ್. ವರಲಕ್ಷ್ಮಿ, ಆಟೋ ಶಂಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಡಿ.೨೪ರಿಂದ ಅಂಧರ ಕ್ರಿಕೆಟ್ ತರಬೇತಿ, ರಾಜ್ಯಮಟ್ಟದ ಪಂದ್ಯಾವಳಿ

ಭದ್ರಾವತಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಮಾತನಾಡಿದರು.
    ಭದ್ರಾವತಿ, ಡಿ. ೨೨: ನಗರದ ನ್ಯೂಟೌನ್ ಸಿದ್ದಾರ್ಥ ಟ್ರಸ್ಟ್‌ನ ಸಿದ್ದಾರ್ಥ ಅಂಧರ ಕೇಂದ್ರ ವತಿಯಿಂದ ವತಿಯಿಂದ ಬೆಂಗಳೂರಿನ ಶೇಖರ್‌ನಾಯ್ಕ್ ಫೌಂಡೇಷನ್ ಸಹಯೋಗದೊಂದಿಗೆ ಕ್ರಿಕೆಟ್ ತರಬೇತಿ ಶಿಬಿರ ಹಾಗೂ ರಾಜ್ಯಮಟ್ಟದ ತ್ರಿಕೋನ ಅಂಧರ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಹೇಳಿದರು.
    ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಡಿ.೨೪ ಮತ್ತು ೨೫ರಂದು ಎರಡು ದಿನ ಕ್ರಿಕೆಟ್ ತರಬೇತಿ ಶಿಬಿರ ಹಾಗು ೨೬ರಂದು ರಾಜ್ಯಮಟ್ಟದ ತ್ರಿಕೋನ ಅಂಧರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
    ಶಿಬಿರವನ್ನು ಡಿ.೨೪ರ ಬೆಳಿಗ್ಗೆ ೯.೩೦ಕ್ಕೆ ಶಾಸಕ ಬಿ.ಕೆ ಸಂಗಮಮೇಶ್ವರ್ ಉದ್ಘಾಟಿಸಲಿದ್ದು, ರಾಷ್ಟ್ರೀಯ ಅಂಧರ ಕ್ರಿಕೆಟ್ ಭಾರತ ತಂಡದ ಮಾಜಿ ನಾಯಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶೇಖರ್‌ನಾಯ್ಕ್,  ಎಸ್‌ಎಲ್‌ಎನ್ ಡೇ ಕೇರ್ ಮತ್ತು ಡಯಗ್ನೋಸ್ಟಿಕ್ ಡಾ. ಸುಶಿತ್ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಮೇಶ್ ಮತ್ತು ಉದ್ಯಮಿ ಎ. ಮಾದಣ್ಣ, ಆರ್. ಬಾಲಾಜಿ, ಎಂ. ಶಿವಕುಮಾರ್, ಶ್ರೀನಿವಾಸ್ ಪೂಜಾರಿ ಮತ್ತು ಮೈಕೆಲ್ ಹಾಗು ಬಾಬು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು,  ಡಿ.೨೬ರಂದು ರಾಜ್ಯಮಟ್ಟದ ತ್ರಿಕೋನ ಅಂಧರ ಕ್ರಿಕೆಟ್ ಪಂದ್ಯಾವಳಿಯನ್ನು ಪೊಲೀಸ್ ಉಪಾಧೀಕ್ಷಕ ಜೀತೇಂದ್ರ ಕುಮಾರ್ ದಯಾಮ ಉದ್ಘಾಟಿಸಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್ ಮತ್ತು ಚಿಕ್ಕಮಗಳೂರು ನಗರ ಯೋಜನಾ ನಿರ್ದೇಶಕ ಮನೋಹರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
       ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರು.೧೦ ಸಾವಿರ ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ ರು.೮ ಸಾವಿರ ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ,  ತೃತೀಯ ಬಹುಮಾನ ರು.೬ ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ನೀಡಲಾಗುವುದು. ಬಹುಮಾನ ವಿತರಣೆ ಸಮಾರಂಭದಲ್ಲಿ ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ, ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಮತ್ತು ಸೂಡಾ ಸದಸ್ಯ ರಾಮಲಿಂಗಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
    ಸೃಷ್ಠಿ, ಭಾಗ್ಯಶ್ರೀ, ಮಾರುತಿ, ನಾಗರತ್ನ, ರಂಜನ್ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tuesday, December 21, 2021

ಶ್ರೀ ಅಂತರಘಟ್ಟಮ್ಮ, ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ

ಭದ್ರಾವತಿ ತಾಲೂಕಿನ ಹಾತಿಕಟ್ಟೆ ಗ್ರಾಮದ ಶ್ರೀ ಅಂತರಘಟ್ಟಮ್ಮ ದೇವಿ ಹಾಗೂ ಶ್ರೀ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ ಹಾಗು ಗೋಪುರ ಕಳಸಾರೋಹಣ ಮಂಗಳವಾರ ವಿಜೃಂಭಣೆಯಿಂದ ಜರುಗಿತು.  ಈ ಸಂದರ್ಭದಲ್ಲಿ ಬಿಳಿಕಿ ಶ್ರೀಗಳಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೧:  ತಾಲೂಕಿನ ಹಾತಿಕಟ್ಟೆ ಗ್ರಾಮದ ಶ್ರೀ ಅಂತರಘಟ್ಟಮ್ಮ ದೇವಿ ಹಾಗೂ ಶ್ರೀ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ ಹಾಗು ಗೋಪುರ ಕಳಸಾರೋಹಣ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಉದ್ಯಮಿ ಬಿ.ಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಬಿಜೆಪಿ ಮುಖಂಡ ಸಂಜಯ್ ಹಾಗು ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮದ ಮುಖಂಡರು ಮತ್ತು ಹಾತಿಕಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಭಕ್ತಾಧಿಗಳು ಪಾಲ್ಗೊಂಡಿದ್ದರು.    

ಹೋರಾಟಗಾರನ ಹುಟ್ಟುಹಬ್ಬಕ್ಕೆ ಕೈಗಡಿಯಾರದ ಉಡುಗೊರೆ

೩ ದಶಕಗಳಿಗೂ ಹೆಚ್ಚು ಕಾಲ ಹೋರಾಟದಲ್ಲಿ ತೊಡಗಿರುವ ಆರ್. ವೇಣುಗೋಪಾಲ್


ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗು ರಾಮಕೃಷ್ಣ ಹೆಗಡೆಯವರ ಅಭಿಮಾನಿಯಾಗಿ ಕಳೆದ ೩ ದಶಕಗಳಿಗೂ ಹೆಚ್ಚು ಕಾಲ ಹೋರಾಟದಲ್ಲಿ ತಮ್ಮ ಜೀವನದ ಅರ್ಧ ಬದುಕು ಸಾಗಿಸಿರುವ ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರ ೬೪ನೇ ಹುಟ್ಟುಹಬ್ಬ ಮಂಗಳವಾರ ಹೋರಾಟದ ಮೂಲಕ ವಿಶಿಷ್ಟವಾಗಿ ಆಚರಿಸಿಕೊಳ್ಳಲಾಯಿತು. ಮಹಿಳೆಯರು ಹುಟ್ಟುಹಬ್ಬದ ಅಂಗವಾಗಿ ಕೈಗಡಿಯಾರ ಉಡುಗೊರೆಯಾಗಿ ನೀಡಿದರು. 
    ಭದ್ರಾವತಿ, ಡಿ. ೨೧: ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗು ರಾಮಕೃಷ್ಣ ಹೆಗಡೆಯವರ ಅಭಿಮಾನಿಯಾಗಿ ಕಳೆದ ೩ ದಶಕಗಳಿಗೂ ಹೆಚ್ಚು ಕಾಲ ಹೋರಾಟದಲ್ಲಿ ತಮ್ಮ ಜೀವನದ ಅರ್ಧ ಬದುಕು ಸಾಗಿಸಿರುವ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರ ೬೪ನೇ ಹುಟ್ಟುಹಬ್ಬ ಮಂಗಳವಾರ ಹೋರಾಟದ ಮೂಲಕ ವಿಶಿಷ್ಟವಾಗಿ ಆಚರಿಸಿಕೊಳ್ಳಲಾಯಿತು.
    ಜನ್ನಾಪುರ ನಿವಾಸಿಯಾಗಿರುವ ಆರ್. ವೇಣುಗೋಪಾಲ್‌ರವರು ಕೊಳಚೆ ಪ್ರದೇಶಗಳ ಅಭಿವೃದ್ಧಿಗಾಗಿ, ನಗರ ಹಾಗು ಗ್ರಾಮಾಂತರ ಭಾಗಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಗಾಗಿ ಹೋರಾಟ ನಡೆಸಿಕೊಂಡು ಬಂದವರು. ಇವುಗಳ ಜೊತೆಗೆ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿ, ಕೆರೆ ಹಾಗು ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಇನ್ನೂ ಹಲವಾರು ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದಾರೆ.
ಹೋರಾಟದ ಜೊತೆ ಜೊತೆಗೆ ಎರಡು ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ವಾರ್ಡ್ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಗಮನ ಸೆಳೆದಿದ್ದಾರೆ. ಇವರ ಹೋರಾಟಕ್ಕೆ ಸ್ಥಳೀಯ ಮಹಿಳೆಯರು ಹೆಚ್ಚಿನ ಸಹಕಾರ ನೀಡುತ್ತಿದ್ದು, ಈಗಲೂ ಸಹ ಮಹಿಳೆಯರು ಹೋರಾಟಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ.
    ಹೋರಾಟಗಾರನ ೬೪ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹಿಳೆಯರು ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ಇಲಾಖೆಯ ಬಿಆರ್‌ಎಲ್‌ಬಿಸಿ ಇಂಜಿನಿಯರ್‌ಗೆ ಮನವಿ ಸಲ್ಲಿಸಿ ನಂತರ ಆರ್. ವೇಣುಗೋಪಾಲ್‌ರವರಿಗೆ ಕೈಗಡಿಯಾರ(ವಾಚ್) ಉಡುಗೊರೆಯಾಗಿ ನೀಡುವ ಮೂಲಕ ಹೋರಾಟಕ್ಕೆ ಮತ್ತಷ್ಟು ಬಲ ತಂದುಕೊಡುವ ನಿಟ್ಟಿನಲ್ಲಿ ಮುನ್ನುಡಿ ಬರೆದರು.
    ಮಹಿಳಾ ಪ್ರಮುಖರಾದ ರಮಾ ವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾ ನಾಗರಾಜ್, ಶೈಲ, ಮುರುಗನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಮಸಿ : ಸೂಕ್ತ ಕ್ರಮಕ್ಕೆ ಮನವಿ

ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಸಮಾನ, ಸಮತೆಯ ಸಮಾಜ ನಿರ್ಮಾಣದ ಹರಿಕಾರ, ಮಹಾ ಮಾನವತಾವಾದಿ, ವಿಶ್ವ ಗುರು, ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳೆದು ಅವಮಾನಿಸಿರುವ ಘಟನೆಯನ್ನು ಖಂಡಿಸಿ ಮಂಗಳವಾರ ಭದ್ರಾವತಿಯಲ್ಲಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಅಖಿಲ ಭಾರತ ವೀರಶೈವ ಮಹಾಸಭಾ, ಯುವ ಘಟಕ ಹಾಗು ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೧: ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಸಮಾನ, ಸಮತೆಯ ಸಮಾಜ ನಿರ್ಮಾಣದ ಹರಿಕಾರ, ಮಹಾ ಮಾನವತಾವಾದಿ, ವಿಶ್ವ ಗುರು, ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳೆದು ಅವಮಾನಿಸಿರುವ ಘಟನೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಅಖಿಲ ಭಾರತ ವೀರಶೈವ ಮಹಾಸಭಾ, ಯುವ ಘಟಕ ಹಾಗು ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳೆದು ಅವಮಾನಿಸಿರುವುದು ಖಂಡನೀಯ. ತಕ್ಷಣ ಅವಮಾನಗೊಳಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ ನೇತೃತ್ವ ವಹಿಸಿದ್ದರು. ತಹಸೀಲ್ದಾರ್ ಆರ್. ಪ್ರದೀಪ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್, ಯುವಕ ಘಟಕದ ಅಧ್ಯಕ್ಷ ಮಂಜುನಾಥ್, ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್  ಅಧ್ಯಕ್ಷ ಸಿದ್ದಲಿಂಗಯ್ಯ, ಮಹಾಸಭಾ ಉಪಾಧ್ಯಕ್ಷ ವಾಗೀಶ್, ಪ್ರಧಾನ ಕಾರ್ಯದರ್ಶಿ ಬಿ.ಎಸ್ ಮಹೇಶ್‌ಕುಮಾರ್, ಸಹ ಕಾರ್ಯದರ್ಶಿ ಬಾರಂದೂರು ಮಂಜುನಾಥ್, ನಿರ್ದೇಶಕ ಜಗದೀಶ್ ಪಾಟೀಲ್, ಮಹಿಳಾ ಘಟಕದ ಉಪಾಧ್ಯಕ್ಷೆ ಶೋಭಾ ಪಾಟೀಲ್, ಕಾರ್ಯದರ್ಶಿ ಕವಿತಾ ಸುರೇಶ್, ಯುವ ಘಟಕದ ಉಪಾಧ್ಯಕ್ಷರಾದ ರುದ್ರೇಶ್, ಮಹಾದೇವ, ಕಾರ್ಯದರ್ಶಿ ಆನಂದ್, ಸಹ ಕಾರ್ಯದರ್ಶಿ ಚೇತನ್, ಖಜಾಂಚಿ ರಮೇಶ್, ಜಿಲ್ಲಾ ನಿರ್ದೇಶಕಿ ಎಸ್. ಪೂರ್ಣಿಮಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, December 20, 2021

ಡಿ.೨೨ರಂದು ಬಿ.ಆರ್ ಪ್ರಾಜೆಕ್ಟ್‌ನಲ್ಲಿ ಉಚಿತ ನೇತ್ರ ತಪಾಸಣಾ, ಶಸ್ತ್ರಚಿಕಿತ್ಸೆ ಶಿಬಿರ

    ಭದ್ರಾವತಿ, ಡಿ. ೨೦: ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ, ಬಿ.ಆರ್ ಪ್ರಾಜೆಕ್ಟ್, ಶಿವಮೊಗ್ಗ ಶಂಕರ ಕಣ್ಣಿ ಆಸ್ಪತ್ರೆ ವತಿಯಿಂದ  ಚಲನಚಿತ್ರ ನಟ, ಸಮಾಜ ಸೇವಕ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಉಚಿತ ನೇತ್ರ ತಪಾಸಣಾ, ನೇತ್ರ ಶಸ್ತ್ರ ಚಿಕಿತ್ಸೆ, ಮಸೂರ ಅಳವಡಿಕೆ ಮತ್ತು ನೇತ್ರದಾನ ಶಿಬಿರ ಡಿ.೨೨ರಂದು ಹಮ್ಮಿಕೊಳ್ಳಲಾಗಿದೆ.
    ಸಿಂಗನಮನೆ ಮತ್ತು ತಾವರಘಟ್ಟ ಗ್ರಾಮ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮತ್ತು ಸರ್ಕಾರಿ ಸಂಯುಕ್ತ ಆಸ್ಪತ್ರೆ, ಸಿಂಗನಮನೆ ಇವುಗಳ ಸಹಯೋಗದೊಂದಿಗೆ ಶಿಬಿರ ನಡೆಯುತ್ತಿದ್ದು, ಬೆಳಿಗ್ಗೆ ೯ ಗಂಟೆಗೆ ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಸಂಯುಕ್ತ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ. ಕೋವಿಡ್ ನಿಯಮ ಪಾಲನೆಗಳೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಳ್ಳುವ ಜೊತೆಗೆ ಯಶಸ್ವಿಗೊಳಿಸುವಂತೆ ಸ್ವರೂಪ್ ಜೈನ್ ಕೋರಿದ್ದಾರೆ.